ಭಾನುವಾರ, ಜೂನ್ 13, 2021
23 °C

ಬಿಎಸ್‌ವೈ ದೆಹಲಿಗೆ: ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸ್ಥಾನಮಾನ ಬಯಸಿ ದೆಹಲಿಯತ್ತ ತಿರುಗಿ ನೋಡುವುದಿಲ್ಲ~ ಎಂದು ಹೇಳಿದ್ದ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಶನಿವಾರ ದೆಹಲಿಯಲ್ಲಿ ನಡೆಯುವ `ಕೋರ್ ಕಮಿಟಿ~ ಸಭೆಯಲ್ಲಿ ಭಾಗವಹಿಸುವರೊ ಇಲ್ಲವೊ ಎನ್ನುವುದು ಪಕ್ಷದ ವಲಯದಲ್ಲಿ ಕುತೂಹಲ ಮೂಡಿಸಿದೆ.ಆಪ್ತ ಮೂಲಗಳ ಪ್ರಕಾರ ಅವರು ದೆಹಲಿಗೆ ಹೋಗುವುದು ಅನುಮಾನ. ಆದರೆ, ಯಡಿಯೂರಪ್ಪ ಅವರೇ ಗುರುವಾರ ಸುದ್ದಿಗಾರರ ಜತೆ ಮಾತನಾಡಿ, `ದೆಹಲಿ ಸಭೆ ಇನ್ನೂ ನಿಗದಿಯಾಗಿಲ್ಲ. ನಿಗದಿಯಾದ ನಂತರ ಆ ಬಗ್ಗೆ ನಿರ್ಧರಿಸುವೆ~ ಎಂದಿದ್ದಾರೆ.ಆದರೆ, ಪಕ್ಷದ ಪದಾಧಿಕಾರಿಗಳ ವಾದ ಬೇರೆಯೇ ಆಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲೇ ಯಡಿಯೂರಪ್ಪ ಸೇರಿದಂತೆ ಕೋರ್ ಕಮಿಟಿಯ ಇತರ ಎಲ್ಲ ಸದಸ್ಯರಿಗೂ ಆಹ್ವಾನ ನೀಡಿದ್ದಾರೆ ಎಂಬುದು ಅವರ ಅನಿಸಿಕೆ.ಗಡ್ಕರಿ ಅವರ ಆಹ್ವಾನದ ಮೇರೆಗೆ ಶುಕ್ರವಾರ ಸಂಜೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ದೆಹಲಿಗೆ ತೆರಳುವರು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಚಿವ ಜಗದೀಶ ಶೆಟ್ಟರ್, ಮುಖಂಡರಾದ ಎಂ.ಪಿ.ಕುಮಾರ್, ಸಂತೋಷ್ ಸೇರಿದಂತೆ ಇತರ ಕೆಲವರು ಶನಿವಾರ ಬೆಳಿಗ್ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸೂಕ್ತ ಸ್ಥಾನಮಾನ ಸಿಗುವುದು ಅನುಮಾನ ಎನ್ನುವ ಕಾರಣಕ್ಕೆ ಯಡಿಯೂರಪ್ಪ ಅವರು ಸಭೆಯಿಂದ ದೂರ ಉಳಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಆದರೆ, ವರಿಷ್ಠರಿಂದ ಒತ್ತಡ ಬಂದರೆ ಕೊನೆ ಕ್ಷಣದಲ್ಲಿ ನಿಲುವು ಸಡಿಲಿಸಿ ಸಭೆಗೆ ಹಾಜರಾಗಬಹುದು.ಈ ನಡುವೆ ಅವರ ಕೆಲ ಬೆಂಬಲಿಗರು ಸಭೆಗೆ ಹೋಗುವುದು ಬೇಡ ಎಂದು ಅಡ್ಡಗಾಲು ಹಾಕಿದ್ದಾರೆ. ಮತ್ತೆ ಕೆಲವರು ಹೋಗುವುದು ವಿಹಿತ ಎಂದು ಸೂಚಿಸಿದ್ದಾರೆ. ಇದರಿಂದ ಯಡಿಯೂರಪ್ಪ ಅವರು ಗೊಂದಲಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.ಅದ್ದೂರಿ ಕಾರ್ಯಕ್ರಮ: ಯಡಿಯೂರಪ್ಪ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮತ್ತೆ ಇದೇ 11ರಂದು ಹುಬ್ಬಳ್ಳಿಯಲ್ಲಿ ಸಮಾರಂಭ ಆಯೋಜಿಸಲು ನಿರ್ಧರಿಸಲಾಗಿದೆ. ಈ ಮೂಲಕ ಮತ್ತೊಮ್ಮೆ ಶಕ್ತಿ ಪ್ರದರ್ಶನ ನಡೆಸುವುದು ಉದ್ದೇಶವಾಗಿದೆ. ಫೆ.27ರಂದು ಅವರ ಹುಟ್ಟುಹಬ್ಬವನ್ನು ಬೆಂಗಳೂರಿನಲ್ಲಿ ಸರಳವಾಗಿ ಆಚರಿಸಲಾಗಿದೆ. ಆ ಭಾಗದ ಶಾಸಕರು ಹುಬ್ಬಳ್ಳಿಯಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಬೇಕು ಎಂಬ ಬೇಡಿಕೆ ಇಟ್ಟಿದ್ದು, ಅದರಂತೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರ ಆಪ್ತರೊಬ್ಬರು ತಿಳಿಸಿದರು.ಡಾಲರ್ಸ್‌ ಕಾಲೋನಿ ಮನೆಯಲ್ಲಿ ಸಚಿವರಾದ ಸಿ.ಎಂ.ಉದಾಸಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ, ಎಂ.ಪಿ.ರೇಣುಕಾಚಾರ್ಯ ಮತ್ತು ಶಾಸಕ ಬಿ.ಪಿ.ಹರೀಶ್ ಅವರು ಯಡಿಯೂರಪ್ಪ ಕರೆದಿದ್ದ ಸಭೆಯಲ್ಲಿ ಹಾಜರಿದ್ದು, ಸಭೆಯ ರೂಪುರೇಷೆಗಳ ಬಗ್ಗೆ ಚರ್ಚಿಸಿದ್ದಾರೆ.ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶಕ್ತಿಪ್ರದರ್ಶನ ಬೇಡ ಎಂದು ಯಡಿಯೂರಪ್ಪ ಸಲಹೆ ಮಾಡಿದ್ದು, ಅದನ್ನು ಅವರ ಬೆಂಬಲಿಗ ಸಚಿವರು ಮತ್ತು ಶಾಸಕರು ಒಪ್ಪುತ್ತಿಲ್ಲ ಎನ್ನಲಾಗಿದೆ. ಪಕ್ಷ ತಮ್ಮನ್ನು ಕಡೆಗಣಿಸುತ್ತಿದೆ. ಅದಕ್ಕೆ ತಕ್ಕಪಾಠ ಕಲಿಸಬೇಕಾದರೆ ಶಕ್ತಿ ಪ್ರದರ್ಶನವೊಂದೇ ಇರುವ ದಾರಿ. ಹೀಗಾಗಿ ಇದೇ 11ರಂದು ಅದ್ದೂರಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಗೊತ್ತಾಗಿದೆ. ಈ ಸಭೆ ಬಳಿಕ ಯಡಿಯೂರಪ್ಪ ರಾಜ್ಯದ ವಿವಿಧ ಕಡೆ ಪ್ರವಾಸ ಮಾಡಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.