ಶುಕ್ರವಾರ, ಏಪ್ರಿಲ್ 23, 2021
27 °C

ಬಿಎಸ್‌ವೈ ಶಕ್ತಿ ಮತ್ತೆ ಸಾಬೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಸ್‌ವೈ ಶಕ್ತಿ ಮತ್ತೆ ಸಾಬೀತು

42 ಶಾಸಕರು ಸಭೆಗೆ ಹಾಜರು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಥಾಪಿಸಲಿರುವ ನೂತನ ಪ್ರಾದೇಶಿಕ ಪಕ್ಷದ ಜೊತೆ ಗುರುತಿಸಿಕೊಳ್ಳುವ ಸಂಬಂಧ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾದ ಬಳಿಕವೇ ತೀರ್ಮಾನಕ್ಕೆ ಬರುವುದಾಗಿ ಅವರ ಬೆಂಬಲಿಗ ಶಾಸಕರು ಮಂಗಳವಾರ ನಡೆದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವಧಿ ಪೂರ್ಣಗೊಳ್ಳುವವರೆಗೂ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರವನ್ನು ಬೆಂಬಲಿಸುವ ತೀರ್ಮಾನಕ್ಕೂ ಬರಲಾಗಿದೆ.ಮಂಗಳವಾರ ತಮ್ಮ ನಿವಾಸದಲ್ಲಿ ಬೆಂಬಲಿಗ ಸಚಿವರು, ಶಾಸಕರು ಮತ್ತು ಸಂಸದರ ಸಭೆ ನಡೆಸಿದ ಯಡಿಯೂರಪ್ಪ ಅವರು, ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆ, ಡಿಸೆಂಬರ್ 10ರಂದು ಹಾವೇರಿಯಲ್ಲಿ ನಡೆಯುವ ಬಹಿರಂಗ ಸಮಾವೇಶ ಮತ್ತಿತರ ವಿಷಯಗಳ ಕುರಿತು ದೀರ್ಘ ಸಮಾಲೋಚನೆ ನಡೆಸಿದರು.ತಮ್ಮ ಬೆಂಬಲದ ನೆರವಿನಿಂದಲೇ ಮುಖ್ಯಮಂತ್ರಿ ಸ್ಥಾನ ಪಡೆದ ಶೆಟ್ಟರ್ ಅವರು ಅಧಿಕಾರದ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಲೇಬೇಕು ಎಂಬ ಶಾಸಕರ ಅಭಿಪ್ರಾಯಕ್ಕೆ ಯಡಿಯೂರಪ್ಪ ಸಮ್ಮತಿಯ ಮುದ್ರೆ ಒತ್ತಿದ್ದಾರೆ. ಸಚಿವರಾದ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ರೇವುನಾಯಕ ಬೆಳಮಗಿ, ವಿ.ಸೋಮಣ್ಣ, ಬಿ.ಜೆ.ಪುಟ್ಟಸ್ವಾಮಿ, ಉಮೇಶ ವಿ.ಕತ್ತಿ, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ 42 ಶಾಸಕರು (ಯಡಿಯೂರಪ್ಪ ಹೊರತುಪಡಿಸಿ) ಪಾಲ್ಗೊಂಡಿದ್ದರು ಎಂಬ ಪಟ್ಟಿಯನ್ನು ಸಭೆಯ ನಡುವೆಯೇ ಬಿಡುಗಡೆ ಮಾಡಲಾಯಿತು. ಆದರೆ, ಸಭೆಯ ವಿವರಗಳನ್ನು ಮಾಧ್ಯಮಗಳಿಗೆ ಪ್ರಕಟಿಸುವಾಗ, `ಈ ಸಭೆಯ ನಿರ್ಧಾರಗಳಿಗೆ 60 ಶಾಸಕರ ಬೆಂಬಲವಿದೆ~ ಎಂದು ಎಲ್ಲರೂ ತಿಳಿಸಿದರು.ಮಂಗಳವಾರ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಸಭೆ ನಡೆಸಿದ ಯಡಿಯೂರಪ್ಪ, ಬೆಂಬಲಿಗ ಶಾಸಕರು, ಸಂಸದರ ಜೊತೆ ಎರಡು ಸುತ್ತಿನ ಸಮಾಲೋಚನೆ ನಡೆಸಿದ್ದಾರೆ. ಮೊದಲು ಎಲ್ಲರ ಜೊತೆ ಬಹಿರಂಗವಾಗಿ ಚರ್ಚಿಸಿದರು. ನಂತರ ವೈಯಕ್ತಿಕವಾಗಿ ಪ್ರತಿಯೊಬ್ಬರಿಂದ ಅಭಿಪ್ರಾಯ ಸಂಗ್ರಹಿಸಿದರು.ತಕ್ಷಣವೇ ಬಿಜೆಪಿಯಿಂದ ಹೊರಬಂದು ಉದ್ದೇಶಿತ ಕರ್ನಾಟಕ ಜನತಾ ಪಕ್ಷದ ಜೊತೆ ಗುರುತಿಸಿಕೊಳ್ಳಲು ಸಭೆಯಲ್ಲಿದ್ದ ಬಹುತೇಕರು ಒಲವು ವ್ಯಕ್ತಪಡಿಸಿಲ್ಲ. `ನಿಮ್ಮ ಎಲ್ಲ ನಿರ್ಧಾರಗಳಿಗೂ ನಮ್ಮ ಬೆಂಬಲ ಇದೆ~ ಎಂದಿರುವ ಕೆಲವರು, ಹೊಸ ಪಕ್ಷದ ಜೊತೆ ಗುರುತಿಸಿಕೊಳ್ಳುವ ಸಂದರ್ಭವನ್ನೂ ಯಡಿಯೂರಪ್ಪ ಅವರೇ ಸೂಚಿಸಿಬೇಕು ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ.`ಶೆಟ್ಟರ್ ಸರ್ಕಾರಕ್ಕೆ ಅಪಾಯವಿಲ್ಲ~:
ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, `ಈವರೆಗೆ ನಾನು ಹಲವು ಅಗ್ನಿಪರೀಕ್ಷೆಗಳನ್ನು ಎದುರಿಸಿದ್ದೇನೆ. ಎಲ್ಲ ಸಂದರ್ಭಗಳಲ್ಲೂ ನನ್ನ ಬೆಂಬಲಿಗರು ಜೊತೆಯಲ್ಲಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲೂ 70 ಶಾಸಕರು ಜೊತೆಗಿದ್ದರು. ಈಗ 60 ಶಾಸಕರು, 11 ಸಂಸದರು, ವಿಧಾನ ಪರಿಷತ್‌ನ 18 ಸದಸ್ಯರು ನನಗೆ ಬೆಂಬಲ ನೀಡಿದ್ದಾರೆ. ಇದರಿಂದ ನನಗೆ ಆನೆಯ ಬಲ ಬಂದಂತಾಗಿದೆ~ ಎಂದರು.`ಹೊಸ ಪಕ್ಷ ಸ್ಥಾಪನೆಯಿಂದ ಶೆಟ್ಟರ್ ಅವರ ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ. ಅವರು ಅಧಿಕಾರದ ಅವಧಿ ಪೂರ್ಣಗೊಳಿಸುವವರೆಗೂ ನಮ್ಮ ಬೆಂಬಲ ಇರುತ್ತದೆ. ನನ್ನ ಜೊತೆ ಇರುವ 11 ಸಚಿವರೂ ಸರ್ಕಾರದಲ್ಲಿ ಮುಂದುವರಿಯುತ್ತಾರೆ. ಸರ್ಕಾರ ಅವಧಿ ಪೂರ್ಣಗೊಳಿಸುವವರೆಗೂ ವ್ಯಾವಹಾರಿಕವಾಗಿ ಹೇಗೆ ಮುಂದುವರಿಯಬೇಕು ಎಂಬುದನ್ನು ನಿರ್ಧರಿಸುತ್ತೇವೆ. ಒಂದು ಗುಂಪು ಹೊರಗಡೆ ಇದ್ದು ಸರ್ಕಾರಕ್ಕೆ ಬೆಂಬಲ ನೀಡಿದ ಎಷ್ಟೋ ಉದಾಹರಣೆಗಳೂ ನಮ್ಮ ಕಣ್ಣ ಮುಂದಿವೆ~ ಎಂದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, `ಡಿ.10ರಂದು ಹೊಸ ಪಕ್ಷ ಘೋಷಿಸುತ್ತೇನೆ. ಅದೇ ದಿನ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. 60 ಜನ ಶಾಸಕರು ಈಗ ನನ್ನ ಜೊತೆಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರೆಲ್ಲರೂ ಹೊಸ ಪಕ್ಷದಿಂದ ಸ್ಪರ್ಧಿಸುತ್ತಾರೆ. ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಬಿಜೆಪಿ ಮುಖಂಡರು ನೀಡುವ ಯಾವುದೇ ಹೇಳಿಕೆಗಳಿಗೂ ಮುಂದಿನ ದಿನಗಳಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ~ ಎಂದರು.`ಮುಖ್ಯಮಂತ್ರಿಗೆ ವಿವರಣೆ~: ಬಸವರಾಜ ಬೊಮ್ಮಾಯಿ ಮಾತನಾಡಿ, `ಎರಡು ತಿಂಗಳಿನಿಂದ ಈಚೆಗೆ ಹಲವು ರಾಜಕೀಯ ಬೆಳವಣಿಗೆಗಳು ನಡೆದಿವೆ. ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಯಡಿಯೂರಪ್ಪ ಅವರು ಗಟ್ಟಿತನದ ನಿರ್ಧಾರ ಕೈಗೊಂಡಿದ್ದಾರೆ. ಅವರು ಕೈಗೊಳ್ಳುವ ತೀರ್ಮಾನವನ್ನು 60 ಶಾಸಕರೂ ಬೆಂಬಲಿಸುತ್ತೇವೆ~ ಎಂದರು.`ಈ ಸಭೆ ಕುರಿತು ಮುಖ್ಯಮಂತ್ರಿಯವರಿಗೆ ಪೂರ್ಣ ವಿವರ ನೀಡುತ್ತೇವೆ. ಈ ವಿಷಯವನ್ನು ಹೇಗೆ ಸ್ವೀಕರಿಸಬೇಕು  ಎಂಬುದು ಮುಖಂಡರಿಗೆ ಬಿಟ್ಟದ್ದು. ಪ್ರಸ್ತುತ  ವಿದ್ಯಮಾನಗಳ ಕುರಿತು ಸಭೆಯಲ್ಲಿ ಚರ್ಚಿಸಿದ್ದೇವೆ. ಇದು ಪಕ್ಷ ವಿರೋಧಿ ಚಟುವಟಿಕೆ ಅಲ್ಲ~ ಎಂದು ಹೇಳಿದರು.

 

`ಸಂಧಾನಕ್ಕೆ ಯತ್ನಿಸಬೇಡಿ~

ಹೊಸ ಪಕ್ಷ ಅಸ್ತಿತ್ವಕ್ಕೆ ತರಲು ಅಂತಿಮ ಹಂತದ ಸಿದ್ಧತೆ ನಡೆದಿರುವ ಈ ಸಂದರ್ಭದಲ್ಲಿ ಬಿಜೆಪಿ ವರಿಷ್ಠರ ಜೊತೆ ತಮ್ಮ ಪರವಾಗಿ ಸಂಧಾನಕ್ಕೆ ತೆರಳದಂತೆ ಯಡಿಯೂರಪ್ಪ ಅವರು ಬೆಂಬಲಿಗರಿಗೆ ತಾಕೀತು ಮಾಡಿದ್ದಾರೆ.ಬಿಜೆಪಿಯಲ್ಲೇ ಉಳಿಯುವಂತೆ ಒತ್ತಡ ಹೇರಿದಲ್ಲಿ ರಾಜಕೀಯ ನಿವೃತ್ತಿ ಕುರಿತು ಯೋಚಿಸುವುದಾಗಿಯೂ ಮಂಗಳವಾರ ನಡೆದ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.`ಮತ್ತೆ ಅವರ ಬಳಿ ಹೋಗುವ ಕಾಲ ಇದು ಅಲ್ಲ. ನೀವು ನನಗೆ ಸ್ಥಾನಮಾನ ನೀಡುವಂತೆ ಹೈಕಮಾಂಡ್ ಬಳಿ ಹೋದರೆ ನನ್ನ ಮರ್ಯಾದೆ ಮತ್ತಷ್ಟು ಕಡಿಮೆ ಆಗುತ್ತದೆ. ನನ್ನ ಗೌರವವನ್ನು ಕುಂದಿಸುವ ಪ್ರಯತ್ನವನ್ನು ಯಾರೂ ಮಾಡಬೇಡಿ~ ಎಂದು ಯಡಿಯೂರಪ್ಪ ಅವರು ಬೆಂಬಲಿಗ ಸಚಿವರು, ಶಾಸಕರಿಗೆ ತಾಕೀತು ಮಾಡಿದರು ಎಂದು ಮೂಲಗಳು ತಿಳಿಸಿವೆ.

ಪ್ರಧಾನ್ ಭೇಟಿ ರದ್ದು

ಬೆಂಗಳೂರು: ಬಿಜೆಪಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಉಂಟಾಗಿರುವ ಬೆಳವಣಿ ಗೆಗಳ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಬೆಂಗಳೂರು ಭೇಟಿಯನ್ನು ಮುಂದೂಡಿದ್ದಾರೆ.

ಅವರು ಮಂಗಳವಾರ ರಾತ್ರಿ ನಗರಕ್ಕೆ ಬಂದು, ಬುಧವಾರ ಇಡೀ ದಿನ ಸಚಿವರು, ಸಂಸದರು ಮತ್ತು ಪಕ್ಷದ ಪ್ರಭಾರಿಗಳ ಜತೆ ಸಮಾಲೋಚನೆ ನಡೆಸಬೇಕಿತ್ತು.ಪ್ರಧಾನ್ ತಮ್ಮ ಭೇಟಿ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಬುಧವಾರ ಯಾವ ಸಭೆಗಳೂ ನಡೆಯುವುದಿಲ್ಲ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.