ಶುಕ್ರವಾರ, ಜೂನ್ 18, 2021
22 °C

ಬಿಗಿ ಆರ್ಥಿಕ ನೀತಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮುಂಬರುವ ದಿನಗಳಲ್ಲಿ ಸರ್ಕಾರ, ಇನ್ನಷ್ಟು ಕಠಿಣವಾದ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರುತ್ತಿರುವುದು ಗಂಭೀರ ಸಮಸ್ಯೆ.

 

ಸದ್ಯ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 125 ಡಾಲರ್ ದಾಟಿದೆ. ಇದರಿಂದ ದೇಶದ ವಿತ್ತೀಯ ಕೊರತೆ ಅಂತರ ಹೆಚ್ಚಲಿದೆ. ಸದ್ಯ ಪರಿಸ್ಥಿತಿಯಲ್ಲಿ ಹೂಡಿಕೆದಾರರ ಆತ್ಮವಿಶ್ವಾಸ ಮರಳುವಂತೆ ಮಾಡಲು ಸರ್ಕಾರ ಬಿಗಿ ಆರ್ಥಿಕ ನೀತಿಗಳನ್ನು ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಅವರು ಶನಿವಾರ ಇಲ್ಲಿ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಆಯೋಜಿಸಿದ್ದ ಬಜೆಟ್ ನಂತರದ ಸಭೆಯಲ್ಲಿ ಅಭಿಪ್ರಾಯಪಟ್ಟರು.ಆರ್ಥಿಕ ಪುನಶ್ಚೇತನಕ್ಕೆ ಬಜೆಟ್ ಒಂದೇ ಪರಿಹಾರವಲ್ಲ. ವಾಸ್ತವ ಪರಿಸ್ಥಿತಿಗೆ ಹತ್ತಿರವಾದ ಕೆಲವು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಒಟ್ಟಾರೆ ಹಣದುಬ್ಬರ ದರ ತಗ್ಗಿದರೂ, ಚಿಲ್ಲರೆ ಹಣದುಬ್ಬರ ಹೆಚ್ಚಿದೆ.   ಹೊಸ  ಹೂಡಿಕೆಗಳ ಕೊರತೆಯಿಂದಾಗಿ ಕೈಗಾರಿಕೆ ಮತ್ತು ತಯಾರಿಕೆ ವಲಯದ ಪ್ರಗತಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಆದರೂ, ಮುಂಬರುವ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಲ್ಪಾವಧಿ ಬಡ್ಡಿ ದರಗಳನ್ನು ತಗ್ಗಿಸುವ ವಿಶ್ವಾಸ ಇದೆ ಎಂದರು.ಕಳೆದ ಮೂರು ತಿಂಗಳಿಂದ ಸಗಟು ಹಣದುಬ್ಬರ ದರ ಇಳಿಯುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ `ಆರ್‌ಬಿಐ~ ಪ್ರಕಟಿಸಲಿರುವ ಮಧ್ಯಂತರ ಹಣಕಾಸು ಪರಾಮರ್ಶೆಯು ಹೂಡಿಕೆದಾರರ ಪರವಾಗಿ ಇರುತ್ತದೆ ಎನ್ನುವ ಭರವಸೆ ಇದೆ ಎಂದು ಪ್ರಣವ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.