ಭಾನುವಾರ, ಏಪ್ರಿಲ್ 18, 2021
23 °C

ಬಿಜೆಪಿಯತ್ತ ತಿರುಗಿದ ವಿಕಿಲೀಕ್ಸ್ ಅಸ್ತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ‘ವೋಟಿಗಾಗಿ ನೋಟು’ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ವಿಕಿಲೀಕ್ಸ್ ಮಾಹಿತಿ ಸೋರಿಕೆಯ ‘ಅಸ್ತ್ರ’ವನ್ನು ಮುಂದಿಟ್ಟು ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಹುಯಿಲೆಬ್ಬಿಸುತ್ತಿರುವ ಬಿಜೆಪಿಗೆ ಈಗ ಅದೇ ಆಯುಧ ತಿರುಗು    ಬಾಣವಾಗಿದೆ.‘ಯುಪಿಎ ವಿರುದ್ಧ ಸುಲಭ ರಾಜಕೀಯ ಪ್ರಚಾರ ಪಡೆಯುವ ಸಲುವಾಗಿ ತಮ್ಮ ಪಕ್ಷ ಬಹಿರಂಗವಾಗಿ ಅಮೆರಿಕದ ವಿರುದ್ಧ ಟೀಕೆ ಮಾಡುತ್ತದೆ; ಆದರೆ ಅಧಿಕಾರಕ್ಕೆ ಬಂದರೆ ಅದು ಅಮೆರಿಕದ ಜತೆಗಿನ ಪರಮಾಣು ಒಪ್ಪಂದಕ್ಕೆ ಏನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ’ ಎಂದು ಬಿಜೆಪಿ ಮುಖಂಡರು ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳಿಗೆ ಭರವಸೆ ನೀಡಿದ್ದರು ಎನ್ನಲಾದ ವಿಚಾರವನ್ನು ವಿಕಿಲೀಕ್ಸ್ ಬಹಿರಂಗಪಡಿಸಿರುವುದು ಈಗ ಪಕ್ಷವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.‘ದಿ ಹಿಂದೂ’ ಪತ್ರಿಕೆಯಲ್ಲಿ ಶನಿವಾರ ಈ ಸಂಗತಿ ಪ್ರಕಟವಾಗಿದ್ದೇ ತಡ ಕಾಂಗ್ರೆಸ್ ಮುಖಂಡರು ಬಿಜೆಪಿ ನಾಯಕರ ವಿರುದ್ಧ ಮುಗಿಬಿದ್ದಿದ್ದು ಪ್ರಧಾನಿ ರಾಜೀನಾಮೆಗೆ ಆಗ್ರಹಿಸುತ್ತಿದ್ದ ಬಿಜೆಪಿ ಮುಖಂಡರಿಗೆ ಮುಖಭಂಗವಾಗಿದೆ.ಅಣು ಒಪ್ಪಂದದ ವಿಚಾರದಲ್ಲಿ ಇಂತಹ ‘ದ್ವಂದ್ವ’ ನಿಲುವನ್ನು ನಿರಾಕರಿಸಿರುವ ಬಿಜೆಪಿ, ಪಕ್ಷ ಬಲವಾಗಿ ಒತ್ತಾಯಿಸಿದ್ದರಿಂದಲೇ ನಾಗರಿಕ ಪರಮಾಣು ಹೊಣೆಗಾರಿಕೆ ಮಸೂದೆಯ 16 ಕಲಂಗಳಿಗೆ ಸರ್ಕಾರ ತಿದ್ದುಪಡಿ ಮಾಡುವಂತಾಯಿತು ಎಂದು ಸಮರ್ಥಿಸಿಕೊಂಡಿದೆ.2005ರ ಡಿಸೆಂಬರ್‌ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ಆರ್‌ಎಸ್‌ಎಸ್ ವಕ್ತಾರ ಶೇಷಾದ್ರಿ ಚಾರಿ ಅವರು ಅಮೆರಿಕದ ರಾಜತಾಂತ್ರಿಕ ಅಧಿಕಾರಿ ರಾಬರ್ಟ್ ಬ್ಲೇಕ್ ಅವರ ಜೊತೆ ಮಾತನಾಡುತ್ತ ‘ಯುಪಿಎ ಸರ್ಕಾರದ ಅಮೆರಿಕದ ಜತೆಗಿನ ಧೋರಣೆಯ ಬಗ್ಗೆ ಬಿಜೆಪಿ ಮಾಡಿರುವ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಬಾರದು’ ಎಂದು ತಿಳಿಸಿದ್ದಾಗಿ ಭಾರತದಲ್ಲಿನ ಅಮೆರಿಕದ ರಾಯಭಾರ ಕಚೇರಿಯ ಅಧಿಕಾರಿಗಳು ತಮ್ಮ ದೇಶದ ವಿದೇಶಾಂಗ ಕಚೇರಿಗೆ ಸಂದೇಶ ರವಾನಿಸಿದ್ದಾಗಿ ವಿಕಿಲೀಕ್ಸ್ ಹೇಳಿದೆ.2009ರಲ್ಲಿ ಲೋಕಸಭೆಯ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಪೀಟರ್ ಬರ್ಲೀಗ್ ಅವರ ಜತೆ ಮಾತನಾಡಿದ ಎಲ್.ಕೆ.ಅಡ್ವಾಣಿ, ‘ಬಿಜೆಪಿ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಹಗುರವಾಗಿ ಭಾವಿಸುವುದಿಲ್ಲ’ಎಂದಿದ್ದರು ಎನ್ನಲಾದ ವಿಷಯವೂ ಸೋರಿಕೆಯಾಗಿದೆ.ನೆನಪಿಲ್ಲ:  ‘ನಾನು ಪತ್ರಿಕಾ ವರದಿಯನ್ನು ನೋಡಿಲ್ಲ ಮತ್ತು 2005ರಲ್ಲಿ ರಾಬರ್ಟ್ ಬ್ಲೇಕ್ ಅವರನ್ನು ಭೇಟಿಯಾಗಿದ್ದು ನೆನಪಿಲ್ಲ’ ಎಂದು ಚಾರಿ ಸುದ್ದಿಗಾರರಿಗೆ ಉತ್ತರಿಸಿದ್ದಾರೆ.ಆದರೆ ಕಾಂಗ್ರೆಸ್ ವಕ್ತಾರ ಮನಿಶ್ ತಿವಾರಿ, ಗಾಳಿಸುದ್ದಿಗಳು ನಂಬಿಕೆಗೆ ಅರ್ಹವಲ್ಲ ಎಂದು ನಾವು ಎಚ್ಚರಿಸುತ್ತಲೇ ಇದ್ದರೂ ಬಿಜೆಪಿ ರಾಜಕೀಯ ಕಾರಣಗಳಿಂದ ಅವುಗಳನ್ನು ಪರಮ ಪವಿತ್ರ ಎಂಬಂತೆ ಬಿಂಬಿಸಿತು. ಈಗ ಅಸ್ತ್ರ ಅದರ ಕಡೆಯೇ ತಿರುಗಿದೆ. ಕಳೆದ ಕೆಲ ದಿನಗಳಿಂದ ಸಂಸತ್ ಕಲಾಪಕ್ಕೆ ಅಡ್ಡಿ ಉಂಟು ಮಾಡುತ್ತಿರುವ ಆ ಪಕ್ಷದ ಮುಖಂಡರು ಅದೇ ನಿಲುವನ್ನು ಈಗ ತಮಗೂ ಅನ್ವಯಿಸಿಕೊಳ್ಳುವರೇ ಎಂಬುದನ್ನು ರಾಷ್ಟ್ರದ ಜನತೆಗೆ ತಿಳಿಸಬೇಕು ಎಂದು        ಆಗ್ರಹಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.