ಶನಿವಾರ, ಮೇ 28, 2022
30 °C

ಬಿಜೆಪಿ ತನ್ನ ಆತ್ಮಹತ್ಯೆಗೆ ತಾನೇ ಸಜ್ಜಾಗುತ್ತಿದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ತನ್ನ ಆತ್ಮಹತ್ಯೆಗೆ ತಾನೇ ಸಜ್ಜಾಗುತ್ತಿದೆಯೇ?

ಸಮಾಜದೊಳಗೆ ಅಸಹನೆ, ಅನುಮಾನ, ದ್ವೇಷ ಬಿತ್ತಿ ಅದನ್ನೇ ಬಂಡವಾಳ ಮಾಡಿ­ಕೊಂಡು ಬೆಳೆದ ಒಂದು ರಾಜಕೀಯ ಪಕ್ಷಕ್ಕೆ  ಅದೇ ಸ್ವಭಾವ ಆಗಿಬಿಟ್ಟರೆ ಏನಾಗುತ್ತದೆ? ಅದನ್ನು ಇಂದು ಕಾಣುತ್ತಿದ್ದೇವೆ. ಆ ಪಕ್ಷ­ದೊಳಗೇ ಈಗ ಅಸಹನೆ, ಅನುಮಾನ, ದ್ವೇಷ ಹೆಡೆ­ಯಾಡುತ್ತಿದೆ.ಆ ಪಕ್ಷದೊಳಗಿನ ಅಭಿ­ಪ್ರಾಯ ಭೇದಗಳನ್ನು ಹಾಗೂ ಪ್ರತಿಸ್ಪರ್ಧಿಗಳನ್ನು ಕ್ರೂರವಾಗಿ ಅಮಾನವೀಯವಾಗಿ ಮೂಲೆ­ಗುಂಪು ಮಾಡಿ ಉಸಿರಾಡದಂತೆ ಮಾಡಲಾಗು­ತ್ತಿದೆ. ಇದಕ್ಕೆ ಮೊದಲ ಬಲಿ– - ಆ ಪಕ್ಷದ ಬಲಾಢ್ಯ ಅಡ್ವಾಣಿಯವರು. ನಂತರ ಸ್ವಂತಿಕೆ ವ್ಯಕ್ತಿತ್ವದ ಜಸ್ವಂತ್‌ಸಿಂಗ್. ಮುಂದೆ  ಅರುಣ್‌ ಜೇಟ್ಲಿ, ಸುಷ್ಮಾಸ್ವರಾಜ್, ಉಮಾಭಾರತಿ ಸರದಿ ಬರಬಹುದು.ವೆಂಕಯ್ಯನಾಯ್ಡು ಅಂಥವರಿಗೆ ಏನೂ ಆಗದಿರಬಹುದು. ಆದರೆ ಆ ಪಕ್ಷದೊಳಗೆ ಯಾರ್‌್್ಯಾರಿಗೆ ಸ್ವಂತ ಅಭಿಪ್ರಾಯ ಇರುತ್ತದೊ, ಯಾರ್‌್್ಯಾರಿಗೆ ಸ್ವಾಭಿಮಾನ ಇರುತ್ತದೊ, ಯಾರ್‌್್ಯಾರು ಸ್ಪರ್ಧೆ ಕೊಡುತ್ತಾರೊ, ಯಾರ್‌್್ಯಾ­ರಿಗೆ ಬೆನ್ನೆಲುಬು ಇರುತ್ತದೊ ಅವರನ್ನೆಲ್ಲಾ ಒಬ್ಬೊಬ್ಬರನ್ನಾಗಿ ಮುಗಿಸುವ ಲಕ್ಷಣಗಳು ಗೋಚರಿಸುತ್ತಿವೆ. ಮೋದಿಯ ಸಂಪುಟದಲ್ಲಿ ಕಂದಾಯ ಸಚಿವನಾಗಿ ನಾಯಕತ್ವಕ್ಕೇ ಸವಾಲಾ­ಗಿದ್ದ ಹಿರೇನ್ ಪಾಂಡ್ಯನ ನಿಗೂಢ ಕೊಲೆಯ ವಾಸನೆ ಬಿಜೆಪಿ ಮನೆಯಲ್ಲಿ ಸುತ್ತುತ್ತಿರಬಹುದು.ಅಡ್ವಾಣಿಯವರ ಆಪ್ತ ಸುಧೀಂದ್ರ ಕುಲಕರ್ಣಿ­ಯವರು  ‘ಸಮಾಜದಲ್ಲಿ ವಿಭಜನೆ ತಂದ ವ್ಯಕ್ತಿ ಈಗ ತನ್ನ ಪಕ್ಷವನ್ನೇ ವಿಭಜಿಸುತ್ತಿದ್ದಾನೆ’ ಎನ್ನು­ತ್ತಾರೆ. ಇದು ಯಾಕೋ ಸೂಕ್ಷ್ಮವಾಗಿ  ಮೊಘಲ್ ಸಾಮ್ರಾಜ್ಯದ ಪತನದ ಸಂದರ್ಭ­ದ­ಲ್ಲಿನ ಕೊನೆಯ ಚಕ್ರವರ್ತಿಯ ನಡಾವಳಿ­ಯಂತೆಯೇ ಕಾಣುತ್ತಿದೆ.ಅದಕ್ಕೆ ಇರಬೇಕು, ಜಸ್ವಂತ್‌ಸಿಂಗ್ ಕಣ್ಣೀರಿ­ಡುತ್ತಾ ಫ್ರಾನ್ಸ್ ನಾಯಕನೊಬ್ಬನ ಮಾತುಗ­ಳನ್ನು ನೆನಪಿಸಿಕೊಳ್ಳುತ್ತಾರೆ: ‘ದೇಶಕ್ಕೆ ತಾನು ಅನಿವಾರ್ಯ ಎಂದು ಬಿಂಬಿಸಿಕೊಂಡ ವ್ಯಕ್ತಿಗ­ಳಿಂದಲೇ ಭೂಮಿ ಮೇಲೆ ಸ್ಮಶಾನಗಳು ತುಂಬಿವೆ’ – ಈ ಮಾತುಗಳು ಭಾರತದ ರಾಜಕಾರಣಕ್ಕೆ ಇಂದು ಎಚ್ಚರಿಕೆ ಗಂಟೆಯ ಸದ್ದಿನಂತೆ ಕೇಳಿಸು­ತ್ತಿದೆ.ಹಾಗೆ ಮೋದಿಯವರ ನಡೆನುಡಿ ನೋಡಿ: ‘ಕಾಶ್ಮೀರದಲ್ಲಿ ಉಗ್ರರು ಜನರಷ್ಟನ್ನೇ ಕೊಲ್ಲಲಿಲ್ಲ. ಅದರ ಜೊತೆಗೆ ಕಾಶ್ಮೀರತ್ವ, ಪ್ರಜಾಪ್ರಭುತ್ವ, ಮಾನವತ್ವವನ್ನೂ ಕೊಂದರು’ ಅನ್ನುತ್ತಾರೆ. ಹಾಗಾದರೆ ಮೋದಿ? ಭಾರತತ್ವ, ಪ್ರಜಾ­ಪ್ರಭುತ್ವ, ಮಾನವತ್ವ ಕೊಲ್ಲಲಿಲ್ಲವೇ? ಕೊಲೆ­ಸುಲಿಗೆ ನಿಲ್ಲಿಸಬೇಕಾದವನೇ ರಾಗದ್ವೇಷಕ್ಕೆ ಒಳ­ಗಾಗಿ ತಾನೇ ಕೊಲೆಸುಲಿಗೆಗೆ ಕಾರಣನಾಗಬಲ್ಲವ­ನಾದರೆ? ಉಳಿಯುವುದೆಲ್ಲಿ ಬಂತು?   ಹಾಗೆಯೇ ಕೆಲವು ಗುಜರಾತ್ ಮಾದರಿ­ಗಳನ್ನು ನೋಡಿದರೂ ಸಾಕು, ಅಂಥವುಗಳನ್ನು ಸರ್ವಾಧಿಕಾರಿ ಮಾತ್ರ ಮಾಡಬಲ್ಲ ಅನ್ನಿಸು­ವಂತಿವೆ.ಉದಾಹರಣೆಗೆ ಒಂದು: ಗುಜರಾತ್ ಸರ್ಕಾರವು ಕೃಷಿವಿಶ್ವವಿದ್ಯಾಲಯಕ್ಕೆ ಮೀಸಲಿಟ್ಟಿದ್ದ ೧,೧೦೦ ಎಕರೆ ಭೂಮಿಯನ್ನು ಚದರ ಮೀಟ­ರ್‌ಗೆ ₨ ೯೦೦ ನಂತೆ ಟಾಟಾ ನ್ಯಾನೋ ಕಾರು ಕಂಪೆ­ನಿಗೆ ನೀಡಿದೆ. ಇದರ ಮಾರುಕಟ್ಟೆ ಬೆಲೆ ಚದರ ಮೀಟರ್‌ಗೆ ₨ ೧೦,೦೦೦! ಜೊತೆಗೆ ಪ್ರಾಜೆಕ್ಟ್ ಬೆಲೆಯ ನಾಲ್ಕುಪಟ್ಟು ಅಂದರೆ ₨ ೯,೫೭೦ ಕೋಟಿ ಸಾಲದ ವ್ಯವಸ್ಥೆ ಮಾಡಲೂ ಸರ್ಕಾರ ಸಮ್ಮತಿಸಿದೆ. ಬಡ್ಡಿ ಎಷ್ಟು ಗೊತ್ತೆ? ಶೇ ೦.೧೦. ಇದನ್ನು ಒಂದು ರೂಪಕವಾಗಿ ನೋಡಿ­ದರೆ, - ನಾಳಿನ ಭಾರತೀಯರು ಸರ್ವಾಧಿಕಾರಿ ಉಗ್ರ­ನೊಬ್ಬನ ಆಡಳಿತಕ್ಕೆ ಸಿಕ್ಕರೆ, ನ್ಯಾನೋ ಕಾರಲ್ಲಿ ಕೂತು ಆಹಾರಕ್ಕಾಗಿ ದಿಕ್ಕೆಟ್ಟು  ಅಲೆಯುವ ದೃಶ್ಯ ಕಾಣಬಹುದು.ಇನ್ನೊಂದು : ಗುಜರಾತ್ ಸರ್ಕಾರ ಅದಾನಿ ಗ್ರೂಪ್‌ಗೆ ೧೮ ಸಾವಿರ ಎಕರೆಗಳನ್ನು ಬಂಜರು ಭೂಮಿಯೆಂದು ಹೇಳಿ ಎಕರೆಗೆ ₨ ೪ಸಾವಿರ ದಿಂದ ₨ ೧ ಲಕ್ಷದ ೩೦ ಸಾವಿರದವರೆಗೆ ನಿಗದಿ ಮಾಡಿ ನೀಡಿದೆ. ಆದರೆ ಅದೇ ‘ಬಂಜರು ಭೂಮಿ’­ಯನ್ನು ಅದಾನಿ ಗ್ರೂಪ್‌ನವರು ಬೇರೆ ಬೇರೆ ಕಂಪೆನಿಗಳಿಗೆ ಎಕರೆಗೆ ₨ ೩೨ ಲಕ್ಷದಿಂದ ₨ ೪ಕೋಟಿವರೆಗೆ ಮಾರಾಟ ಮಾಡಿಕೊಂಡಿದ್ದಾರೆ.  ದುರಂತವೆಂದರೆ ಸರ್ಕಾರಿ ಸ್ವಾಮ್ಯದ ಸಾರ್ವಜ­ನಿಕ ಕಂಪೆನಿಗಳು ಕೂಡ ಅದಾನಿ ಗ್ರೂಪ್‌ನಿಂದಲೇ ಹೆಚ್ಚಿನ  ಬೆಲೆಗೆ ತಾವೂ ಕೊಂಡುಕೊಂಡಿವೆ. ಇದೇನು ವ್ಯವಹಾರ? ಸರ್ಕಾರ ಯಾರು?ಮತ್ತೊಂದು: ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಬಯೋಟರ್ ಇಂಡಸ್ಟ್ರೀಸ್‌ಗೆ ಜೈವಿಕ ಇಂಧನದ ಹೆಸರಲ್ಲಿ ₨ ೧,೫೦೦  ಕೋಟಿ  ಸಾಲ ನೀಡಲಾಗಿದೆ. ಕಚ್ಚಾವಸ್ತು ಖರೀದಿ, ಇಂಧನ ತಯಾ­ರಿಕೆ, ಇಂಧನ ವಿತರಣೆ–  ಈ ಎಲ್ಲವೂ ಕಾಗ­ದದ ಮೇಲೆ ಮಾತ್ರ. ಈ ಕಂಪೆನಿಗೆ ೩೦೦ ಎಕರೆ ಭೂಮಿಯನ್ನು ವಿಶೇಷ ಆರ್ಥಿಕವಲಯ ರಚಿ­ಸಲು ಗುಜರಾತ್ ಸರ್ಕಾರ ನೀಡಿದೆ. ಬಹುಶಃ ವಿದೇಶಿ ಬ್ರಿಟಿಷ್ ಕಂಪೆನಿ ಸರ್ಕಾರ ಇದ್ದಾಗಲೂ ಇಂಥವು ಆಗಿರಲಾರವು. ಈ ಸರ್ಕಾರ ಒಂದು ಸರ್ಕಾರವೆ?ಇಂಥವು ಇನ್ನೆಷ್ಟೊ. ಸರ್ಕಾರವೇ ಶಾಮೀಲಾ­ಗದೆ ಇಂಥವು ಆಗಲಾರದು, ಇರಲಿ. ಇಲ್ಲಿ ಪ್ರಶ್ನೆ ಇರುವುದು, ಮೇಲಿನಂತಹ ಹಗಲು ದರೋಡೆ­ಗಳನ್ನು ಒಂದು ಜನತಂತ್ರ ವ್ಯವಸ್ಥೆಯ ಸರ್ಕಾರ­ದಲ್ಲಾದರೆ ಕನಿಷ್ಠ ಪ್ರಶ್ನಿಸಬಹುದು, ಪ್ರತಿಭಟಿಸ­ಲೂ­ಬಹುದು. ಆದರೆ ಸರ್ವಾಧಿಕಾರಿ ಪ್ರವೃ­ತ್ತಿಯ ಆಡಳಿತದಲ್ಲಿ ಪ್ರತಿಭಟನೆಗಳಿಗೆ ಜನಾಂ­ದೋ­ಲನಗಳಿಗೆ ಉಸಿರು ಕಟ್ಟಿರುತ್ತದೆ.ಗುಜ­ರಾತ್ ಸರ್ಕಾರ ಭೂಮಾಫಿಯಾ ಹಗರಣಗಳ ವಿಚಾರಣೆಗೆ ನೇಮಿಸಿದ ನಿವೃತ್ತ ನ್ಯಾಯಾಧೀಶ ಎಂ.ಬಿ. ಷಾ ಆಯೋಗದ ಕಾರ್ಯವೈಖರಿ ನೋಡಿ­ದರೆ ಸಾಕು. ಸಾರ್ವಜನಿಕರು ಸಲ್ಲಿಸುವ ದಾಖಲಾತಿಗಳನ್ನು ಪರಿಶೀಲಿಸಬೇಕಾದರೆ ಆ ದಾಖಲಾತಿಗಳ ಪ್ರತಿಪುಟಕ್ಕೂ ನೋಟರಿ ಸಹಿ­ಯನ್ನು ಕಡ್ಡಾಯ ಮಾಡುತ್ತದೆ ಆ ಆಯೋಗ! ಹಗರಣಗಳಿಗೆ ಸಂಬಂಧಪಟ್ಟ ಎಲ್ಲ ದಾಖಲೆ­ಗಳನ್ನೂ ಸಂಗ್ರಹಿಸಿದ ಥಾಕರ್ ಎಂಬಾತ ನೋಟ­ರಿಯ ಸಹಿಗಾಗಿ ೪೪ ದಿನಗಳು ಅಲೆದೂ ಅಲೆದೂ ಕೊನೆದಿನ ಒಬ್ಬ ನೋಟರಿ ಧೈರ್ಯ­ಮಾಡಿ ಸಹಿ ಮಾಡುತ್ತಾನೆ.ಈ ದಾಖಲೆಗಳನ್ನು ಸ್ವೀಕರಿಸದೆ ಆಯೋಗದ ರಿಜಿಸ್ಟ್ರಾರ್, ‘ನೀನು ಯಾರು? ನಿನಗೇನು ಸಂಬಂಧ?’ ಇತ್ಯಾದಿಯಾಗಿ ಥಾಕರ್ ಅವರಿಗೆ ಪ್ರಶ್ನಿಸುತ್ತ ಆ ಕೊನೆಯ ದಿನ ಮುಗಿ­ಸಿಬಿಡಲು ನೋಡುತ್ತಾನೆ. ರಂಪವಾದ ಮೇಲೆ ಆ ದಾಖಲೆಗಳೇನೋ ಸ್ವೀಕೃತವಾಗುತ್ತವೆ. ಆದರೆ ನ್ಯಾಯಮೂರ್ತಿ ಷಾ ಹೇಳಿದ್ದೇನು? ಈ ಭೂ ಹಗರಣದಲ್ಲಿ ಭಾಗಿ ಎಂದು ಆರೋಪಿಸು­ತ್ತಿರುವ ಆ ಕಾರ್ಪೋರೇಟ್‌ಕುಳಗಳನ್ನು ಹಾಗೂ ಆರೋಪಿ ಅಧಿಕಾರಿಗಳನ್ನು ಖುದ್ದು ಅರ್ಜಿದಾ­ರರು ಹಾಜರುಪಡಿಸಬೇಕು ಅನ್ನುತ್ತಾರೆ –- ಸಮನ್ಸ್ ನೀಡುವ ಬದಲು! ಇನ್ನು ತೀರ್ಪು ಎಂತು? ಷಾ ಆಯೋಗ ನೀಡುವ ಮಧ್ಯಂತರ ವರದಿ­ಯನ್ನು  ೨೦೧೨ರ ಗಾಂಧಿ ಹುಟ್ಟಿದ ದಿನ­ವನ್ನೇ ನೋಡಿಕೊಂಡು  ಗುಜರಾತ್ ಸಚಿವ ಸಂಪುಟ ಒಪ್ಪಿಕೊಳ್ಳುತ್ತದೆ.ಮಾರನೆಯ ದಿನ ಯಥಾಪ್ರಕಾರ ಬಿಜೆಪಿ ವಕ್ತಾರ ಸರ್ಕಾರಕ್ಕೆ ‘ಕ್ಲೀನ್‌­ಚಿಟ್’ ಎಂದು ಘೋಷಿಸುತ್ತಾನೆ.

೧೨–-೧೨-­–೧೨ ಪ್ರಳಯ ಪ್ರಳಯ ಅಂತಾ ಚರ್ಚೆ ಆಗು­ತ್ತಿತ್ತು. ಆ ಚರ್ಚೆಯ ಗಲಾಟೆಯಲ್ಲಿ ಈ ಗುಜ­ರಾತ್ ಮಾದರಿ ಪ್ರಳಯ ಕಣ್ಣಿಗೆ ಬೀಳ­ಲಿಲ್ಲವೇನೊ!ಇರಲಿ, ಬಿಜೆಪಿಯವರಿಗೆ ಬೇರೆಯವರ ಲೂಟಿ ಭ್ರಷ್ಟಾಚಾರಗಳು ಮಾತ್ರ ಕಾಣಿಸುತ್ತವೆ. ಅವು ತಮ್ಮ ಲೂಟಿ, ಭ್ರಷ್ಟಾಚಾರಗಳನ್ನು ‘ದೇಶ­ಸೇವೆ’ಯೆಂದು ಅಂದು ಕೊಂಡುಬಿಟ್ಟಿರುತ್ತವೆ. ತಾನು ಮಾಡಿದರೆ ರಸಿಕತೆ ಬೇರೆಯವರು ಅದನ್ನೇ ಮಾಡಿದರೆ ಅದು ಅತ್ಯಾಚಾರ ಅಂತಾ­ರಲ್ಲ ಹಾಗೆ. ಇದು ಅವರ ಮೈಂಡ್ ಸೆಟ್. ಇರಲಿ. ಇವಕ್ಕೆಲ್ಲಾ ಮೋದಿಯವರ ಉತ್ತರಗ­ಳೇನು? ಮೋದಿಯವರು ತಮ್ಮ ಆಡಳಿತದ ೧೩ ವರ್ಷ­ಗಳಲ್ಲಿ ಒಬ್ಬ ಮುಖ್ಯಮಂತ್ರಿಯಾಗಿ ಯಾವುದೇ ಬಿಲ್‌ನ ಯಾವುದೇ ಚರ್ಚೆಯಲ್ಲಿ ಭಾಗ­ವಹಿಸಿಲ್ಲ! ಯಾವ ಶಾಸಕರ ಪ್ರಶ್ನೆಗೂ ಉತ್ತ­ರಿಸಿಯೂ ಇಲ್ಲ.ಹಗರಣಗಳ ವಿಚಾರ­ಕ್ಕಂತೂ ಮೌನವೇ ಉತ್ತರ. ಈ ಮೌನದೊಳಗೆ ಏನಿದೆ? ಆ ಮೌನದೊಳಗೊಬ್ಬ ಸರ್ವಾಧಿಕಾರಿ ಬಚ್ಚಿಟ್ಟು­ಕೊಂಡಿದ್ದಾನೆ. ತಾನೊಬ್ಬ ಜನತಂತ್ರ ವ್ಯವಸ್ಥೆ­ಯಲ್ಲಿ ಆಯ್ಕೆಯಾದವನು ಎಂಬ ಭಾವನೆ ಇದ್ದಿ­ದ್ದರೆ, ಜನಪ್ರತಿನಿಧಿಗಳ ಸಭೆಯನ್ನು ಕಾಲುಕಸ ದಂತೆ ಕಾಣಲು ಸಾಧ್ಯವಾಗುತ್ತಿರಲಿಲ್ಲ. ಈಗಲಾ­ದರೂ ಮೋದಿ ಮುಖವಾಡ ಹಾಕಿಕೊಳ್ಳುತ್ತಿ­ರು­ವವರು ಅದನ್ನು ಸುಟ್ಟು ಮೋದಿಯೊಳಗಿನ ಸರ್ವಾ­ಧಿಕಾರಿಯನ್ನು ಅವರ ಜೀವಕ್ಕೆ ಅಪಾಯ ಆಗದಂತೆ ಸುಡಬೇಕಾಗಿದೆ. ಇದು ಇಂದಿನ ತುರ್ತು ಅಗತ್ಯ. ಭಾರತಕ್ಕೆ ನಾಳೆಗಳು ಉಳಿ­ಯಲು ಇದಾಗಲೇಬೇಕಾಗಿದೆ.ಇಷ್ಟೆಲ್ಲಾ ಇದ್ದರೂ, ಅಭಿವೃದ್ಧಿ ಪದದ ಸುಳಿಗೆ ಸಿಕ್ಕಿಹಾಕಿಕೊಂಡಿರುವ ಜನರಿಗೆ ಯಾವುದು ತಾನೇ ಕಾಣಲು ಸಾಧ್ಯ? ಈ ‘ಅಭಿವೃದ್ಧಿ’ ಜೊತೆಗೆ ಪೈಪೋಟಿಗೆ ಬಿದ್ದಂತೆ ಹೆಚ್ಚಳವಾಗು­ತ್ತಿರುವ ಸ್ಲಂಗಳು ನಮಗೆ ಕಾಣಿಸುತ್ತಿಲ್ಲ. ಈ ಸುಳಿಗೆ ಸಿಲುಕಿ ಐರೋಪ್ಯ ರಾಷ್ಟ್ರಗಳು ಇಂದು ಪಾಪರ್ ಎದ್ದು ಎಂಜಲು ನುಂಗುತ್ತಿರುವುದು ಕಾಣುತ್ತಿಲ್ಲ. ಬಡವ-ಬಲ್ಲಿದರ ನಡುವಿನ ಅಂತರ ಭೂಮಿ ಆಕಾಶದಷ್ಟಾಗಿ ಅದರಿಂದಾಗಿ ನಮ್ಮ ಚುನಾವಣೆ ವ್ಯವಸ್ಥೆ ಪ್ರಜಾಪ್ರಭುತ್ವಗಳು ತತ್ತರಿ­ಸುತ್ತಿರುವುದೂ ಕಾಣಿಸುತ್ತಿಲ್ಲ.ಇಲ್ಲೆ ನಮ್ಮ ಕರ್ನಾ­ಟಕದಲ್ಲೇ ‘ನಮ್ಮನ್ನು ಒಂದ್ಸಲ ನೋಡಿ’ ಎಂದು ಅಧಿಕಾರಕ್ಕೆ ಬಂದವರು, ಈ ಭೂಮಿ ನಮ್ಮ ತಾಯಿ ಎಂದು ಹೇಳುತ್ತ ಇಲಿ-–-ಹೆಗ್ಗಣ­ಗ­ಳಂತೆ ಭೂಸಂಪತ್ತಿಗೆಲ್ಲಾ ಬಿಲ ಕೊರೆದು ಧ್ವಂಸ ಮಾಡಿ ಚುನಾವಣಾ ವ್ಯವಸ್ಥೆಯನ್ನೂ, ಜನಪ್ರತಿ­ನಿಧಿ­ಗಳನ್ನೂ ಮಾರಾಟದ ಸರಕಾಗಿಸಿದ ಘೋರಕ್ಕೂ  ನಾವು ಕಣ್ಣುಮುಚ್ಚಿಕೊಂಡಿದ್ದೇವೆ. ಯಾವುದನ್ನೂ ಕಾಣದಂತೆ ಮಾಡಿರುವುದು ಈ ‘ಅಭಿವೃದ್ಧಿ’ ಎಂಬ ಹುಚ್ಚುಕುದುರೆ.ಆದರೆ ಈಗಲಾದರೂ ನಾವು ಕಣ್ಣು ಬಿಡ­ಬೇಕಾ­ಗಿದೆ. ಯಾಕೆಂದರೆ, ಈಗ ಭಾರತದ ನೆತ್ತಿಯ ಮೇಲೆ ಸರ್ವಾಧಿಕಾರದ ಕತ್ತಿ

ತೂಗಾ­ಡು­ತ್ತಿದೆ. ೧೯92ರಲ್ಲೇ ಮೋದಿಯೊಳ­ಗೊಬ್ಬ ಸರ್ವಾಧಿಕಾರಿ ಬಚ್ಚಿಟ್ಟುಕೊಂಡಿರುವುದರ ವಾಸನೆಯನ್ನು ಮನಃಶಾಸ್ತ್ರದಲ್ಲಿ ತರಬೇತು ಪಡೆದ ಸಮಾಜಶಾಸ್ತ್ರಜ್ಞರಾದ ಆಶೀಶ್‌ನಂದಿ ಪತ್ತೆ ಹಚ್ಚುತ್ತಾರೆ. ಆಗ ಯುವಕ ಮೋದಿ ದೆಹಲಿ­ಯಲ್ಲಿ ಚಟುವಟಿಕೆ ನಡೆಸುತ್ತಿದ್ದಾಗ ಮೋದಿ ಸಂದರ್ಶನ ಮಾಡಿದ ನಂದಿಯವರು - ‘ಇದು (ಮೋದಿ) ಫ್ಯಾಸಿಸ್ಟ್ ಮನೋವೃತ್ತಿಯ ಒಂದು ಮಾದರಿ   ಎಂಬುದರ ಬಗ್ಗೆ ನನಗೆ ಯಾವ ಅನು­ಮಾನವೂ ಉಳಿಯಲಿಲ್ಲ’ ಎನ್ನುತ್ತಾರೆ.  

  

‘ಮನೋ­ವೈದ್ಯರು, ಮನೋವಿಶ್ಲೇಷಕರು ಮತ್ತು ಮನಃಶಾಸ್ತ್ರಜ್ಞರು ಹಲವಾರು ವರ್ಷಗಳ ಪ್ರಯೋ­ಗಗಳ ಮೂಲಕ ಸಿದ್ಧಪಡಿಸಲಾದ ಸರ್ವಾ­ಧಿಕಾರಿ ವ್ಯಕ್ತಿತ್ವದ ಮಾನದಂಡಗಳ ಪೈಕಿ ಹೆಚ್ಚುಕಮ್ಮಿ ಎಲ್ಲವೂ ಮೋದಿಗೆ ಅನ್ವಯವಾ­ಗು­ತ್ತವೆ ’ಎಂದು ಆಶೀಶ್‌ನಂದಿ ವ್ಯಥೆ ಪಡುತ್ತಾರೆ. ಆಮೇಲೆ,  ‘ನಾನು ತಲ್ಲಣಿಸಿ ಹೋಗಿದ್ದೆ. ಪುಸ್ತಕ­ಗಳಲ್ಲಿ ಮಾತ್ರ ಫ್ಯಾಸಿಸ್ಟ್‌ನ ಚಹರೆ ಲಕ್ಷಣಗಳನ್ನು ಅಧ್ಯಯನ ಮಾಡಿದ್ದೆ. ಆದರೆ ಆ ಚಹರೆಯ ಲಕ್ಷಣ­ಗಳಿರುವ ಜೀವಂತ ವ್ಯಕ್ತಿ– ಓರ್ವ ಫ್ಯಾಸಿ­ಸ್ಟ್‌ನೂ, ಭಾವಿ ಕೊಲೆಗಡುಕನೂ, ಅಷ್ಟೇ ಏಕೆ, ಭವಿಷ್ಯದಲ್ಲಿ ಪ್ರಾಯಶಃ ಸಾಮಾಜಿಕ ಹತ್ಯಾ­ಕಾಂಡ ನಡೆಸಬಲ್ಲಾತನೂ ಆದ ಇಂತಹ ವ್ಯಕ್ತಿ (ಮೋದಿ)ಯನ್ನು ನಾನು ಭೇಟಿಯಾದುದು ಇದೇ ಮೊದಲು’ ಎಂದು ಆಶೀಶ್‌ನಂದಿ ಭೀತಿ­ಗೊ­ಳ್ಳುತ್ತಾರೆ. ಅವರ ೧೯92ರ ಭೀತಿ ೨೦೦೨­ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿ ಭಾರತದ ಚರಿತ್ರೆಗೆ ಸೇರಿಯೂ ಆಯ್ತು. ಮುಂದೆ ಕಾದು ಕೂತಿರಲೂಬಹುದು.ಜೊತೆಗೆ, ಭಾರತದ ಸರ್ವಾಧಿಕಾರಿ ಮನಸ್ಸಿಗೆ ಭಯ, ಮಾಯಮಂತ್ರ ಮತ್ತು ಪುರಾಣ ಜೊತೆ­ಜೊತೆಗೆ ಕೂಡಿಕೊಂಡಿರುತ್ತದೇನೊ. ‘ಗುಜ­ರಾತ್‌­ನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕೇವಲ ಒಬ್ಬ ರೈತ ಮಾತ್ರ ಆತ್ಮಹತ್ಯೆ ಮಾಡಿ­ಕೊಂಡಿ­ದ್ದಾನೆ’ ಎಂದು ಮೋದಿಯವರು ಹೇಳುತ್ತಾರೆ. ಹಾಗಾದರೆ ಗುಜರಾತ್ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಸಾವಿರಾರು ಸಂಖ್ಯೆಯ ರೈತರ ಆತ್ಮಹತ್ಯೆ ಅಂಕಿ–ಅಂಶಗಳು ಸುಳ್ಳೆ? ಅಥವಾ ಒಬ್ಬ ರೈತನನ್ನು ಹೊರತುಪಡಿಸಿ ಉಳಿದ ಆತ್ಮಹತ್ಯೆ ಮಾಡಿಕೊಂಡ ರೈತರು ಮೋದಿ­ಯ­ವರ ಪಾಲಿಗೆ ಮನುಷ್ಯರೇ ಅಲ್ಲವೆ? ಇಂಥ ಕ್ರೂರ ಸುಳ್ಳಿಗರು ತಮ್ಮ ಪ್ರಣಾಳಿಕೆಯಲ್ಲಿ ಹಾಲು­ಜೇನಿನ ಹೊಳೆಯ ಆಶ್ವಾಸನೆ ಹರಿಸಿದರೂ  ಆ ಆಶ್ವಾಸನೆಗಳೂ ಅವರ ಪ್ರಮಾಣಗಳೂ ಆತ್ಮ­ಹತ್ಯೆ ಮಾಡಿಕೊಂಡುಬಿಡುತ್ತವೆ.ಹಾಗೇ ಉತ್ತ­ರಾ­ಖಂಡ ಪ್ರವಾಹದಲ್ಲಿ ಮೋದಿ ಪ್ರಾಯೋಜಿತ ಪ್ರಚಾರಕರು ಸುಳ್ಳು ಸೃಷ್ಟಿಸಿ ೧೬ ಸಾವಿರ ಗುಜ­ರಾತಿಗಳನ್ನು ಕಾಪಾಡಲಾಯಿತೆಂದು ರಂಜಕ­ವಾಗಿ ಪ್ರಚಾರ ಮಾಡಲಾಯ್ತು. ಪುರಾಣದಲ್ಲಿ ಕೃಷ್ಣ ಪರಮಾತ್ಮ ೧೬ ಸಾವಿರ ಗೋಪಿಕಾ­ಸ್ತ್ರೀ­ಯರನ್ನು ಕಾಪಾಡಿದ ಎಂದರೆ ಏನೋ ಪುರಾಣ ಅಂತ ನಂಬಬಹುದಿತ್ತು. ಸರ್ವಾಧಿಕಾರಿ ಚಹರೆಗೆ ಭ್ರಮೆ, ಪುರಾಣವೂ ಸೇರಿಬಿಟ್ಟರೆ ಅದು ಎಲ್ಲಿಗೆ ಕೊಂಡೊಯ್ಯುತ್ತದೆ? ಊಹಿಸಲು ಕಷ್ಟವಾ­ಗು­ತ್ತದೆ. ಕೋಮುವಾದಿ ಪಕ್ಷವಾಗಿದ್ದ ಬಿಜೆಪಿಯು ಒಬ್ಬ ಸರ್ವಾಧಿಕಾರಿ ಚಹರೆಯ ಉಗ್ರಗಾಮಿ ಕೈಗೆ ಈಗ ದೇಶ ಕೊಟ್ಟು ತಾನೇ ತನ್ನನ್ನು ಕೊಂದುಕೊಂಡು ದೇಶವನ್ನೂ ನಾಶ ಮಾಡಲು ಟೊಂಕಕಟ್ಟಿ ನಿಂತಂತಿದೆ.ಈ ವಾಸನೆಯನ್ನು ಪ್ರಜ್ಞಾ­ವಂತ ಮಾಧ್ಯಮಗಳಾದರೂ ಮುಂಗಾಣ­ಬೇಕಿತ್ತು. ಇತಿಹಾಸದ ಯಾವುದೇ ಸರ್ವಾಧಿಕಾ­ರಿಯ ಅಸಹನೆಗೆ ಮೊದಲ ಬಲಿ– - ಮಾಧ್ಯಮ ಸ್ವಾತಂತ್ರ್ಯ. ಈ ಮೊದಲ ಬಲಿಗಾದರೂ ತನ್ನ ಸಾವಿನ ಸುಳಿವು ತಿಳಿಯಬೇಕಿತ್ತು. ಇದನ್ನುಬರೆ­ಯುತ್ತಾ ಭಯಕ್ಕೆ ಬಿದ್ದೆ. ಈಗ ಉಳಿದಿ­ರು­ವುದು ಇಷ್ಟೆ: ಆಶೀಶ್‌ನಂದಿಯವರ ಭೀತಿ,  ನನ್ನಂತವರ ಆತಂಕಗಳು ಹುಸಿಯಾಗಲಿ ಹಾಗೂ ಭಾರತಕ್ಕೆ ಎಂದೆಂದೂ ಭಯೋತ್ಪಾದಕ ಆಡಳಿತ ಬಾರದಿ­ರಲಿ ಎಂದು ನನ್ನಾಳದಿಂದ ಆಶಿಸುವುದು  –ಅಷ್ಟೇ.(ಅನಿವಾರ್ಯ ಕಾರಣಗಳಿಂದ ನಾಗೇಶ  ಹೆಗಡೆ ಅವರ ‘ವಿಜ್ಞಾನ ವಿಶೇಷ’ ಅಂಕಣ ಪ್ರಕಟವಾಗಿಲ್ಲ)

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.