ಶುಕ್ರವಾರ, ಮೇ 20, 2022
20 °C

ಬಿಜೆಪಿ ಸಮಾವೇಶ: ಸಂಚಾರ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ಭಾನುವಾರ ಹಮ್ಮಿಕೊಂಡಿದ್ದ ಸಮಾವೇಶಕ್ಕೆ ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರಿಂದ ಹಲವೆಡೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.ಬಿಜೆಪಿ ಹಮ್ಮಿಕೊಂಡಿದ್ದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶಕ್ಕೆ ವಿವಿಧ ಜಿಲ್ಲೆಗಳಿಂದ ಮೂರು ಸಾವಿರಕ್ಕೂ ಹೆಚ್ಚು ವಾಹನಗಳಲ್ಲಿ ಕಾರ್ಯಕರ್ತರು ಬಂದಿದ್ದರಿಂದ ಇಡೀ ದಿನ ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.ಮೇಖ್ರಿ ವೃತ್ತದಿಂದ ಹೆಬ್ಬಾಳ ಮೇಲು ಸೇತುವೆವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಒಂದು ತಾಸಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ಜನರಿಗೆ ತೀವ್ರ ತೊಂದರೆಯಾಯಿತು. ತುಮಕೂರು ರಸ್ತೆಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಇತ್ತು. ಆಂಬುಲೆನ್ಸ್‌ಗಳ ಸಂಚಾರಕ್ಕೂ ಅಡಚಣೆಯಾಗಿತ್ತು.ಅರಮನೆ ರಸ್ತೆ, ಜಯಮಹಲ್ ರಸ್ತೆ, ಬಸವೇಶ್ವರ ವೃತ್ತ, ಮಲ್ಲೇಶ್ವರ, ಶಿವಾಜಿನಗರ, ವಸಂತನಗರ, ನ್ಯೂ ಬಿಇಎಲ್ ರಸ್ತೆ, ನಂದಿದುರ್ಗ ರಸ್ತೆ, ದೇವನಹಳ್ಳಿ ರಸ್ತೆ, ಶೇಷಾದ್ರಿ ರಸ್ತೆ, ಕೆ.ಆರ್.ಪುರ ರಸ್ತೆ, ಕನಕಪುರ ರಸ್ತೆ, ಜೆ.ಸಿ.ರಸ್ತೆ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳಲ್ಲೂ ವಾಹನ ದಟ್ಟಣೆ ಉಂಟಾಗಿತ್ತು.‘ರಾಜಕಾರಣಿಗಳು ನಗರದ ಮಧ್ಯ ಭಾಗದಲ್ಲೇ ಪದೇ ಪದೇ ಸಮಾವೇಶಗಳನ್ನು ನಡೆಸುವ ಮೂಲಕ ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಇಂತಹ ಸಮಾವೇಶಗಳನ್ನು ನಗರದ ಹೊರ ವಲಯದಲ್ಲಿ ನಡೆಸುವ ಬಗ್ಗೆ ಪಕ್ಷಗಳು ಚಿಂತಿಸಬೇಕು’ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಮುಖಂಡರ ಆಗಮನ ಮತ್ತು ನಿರ್ಗಮನದ ಸಂದರ್ಭದಲ್ಲಿ ಅರಮನೆ ಮೈದಾನದ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಯಿತು. ಒಂದೆಡೆ ಬಿಸಿಲಿನ ತಾಪ, ಮತ್ತೊಂದೆಡೆ ಟ್ರಾಫಿಕ್ ಜಾಮ್.ಇವೆರಡರ ನಡುವೆ ಸಿಲುಕಿದ್ದ ವಾಹನ ಸವಾರರು ಹೈರಾಣಾದರು. ಸಮಾವೇಶ ಮುಗಿದ ನಂತರ ಒಮ್ಮೆಲೇ ವಾಹನಗಳು ಮೈದಾನದಿಂದ ಹೊರ ಬಂದಿದ್ದರಿಂದ ಎಲ್ಲ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಗಂಟೆಗಟ್ಟಲೆ ಕಾಯುವಂತಾಯಿತು.ದ್ವೇಷ ಹಿನ್ನೆಲೆ: ಕೊಲೆ

ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಸೆಕ್ಯುರಿಟಿ ಗಾರ್ಡ್ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ವೈಟ್‌ಫೀಲ್ಡ್ ಮುಖ್ಯರಸ್ತೆಯ ಭುವನೇಶ್ವರಿ ನಗರದಲ್ಲಿ ಶನಿವಾರ ನಡೆದಿದೆ.ಭುವನೇಶ್ವರಿ ನಗರದ ಜಮೀನೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಲಿಂಗಶೆಟ್ಟಿ (60) ಕೊಲೆಯಾದವರು. ಕೊಲೆ ಆರೋಪಿ ಬಸವರಾಜು ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.ಲಿಂಗಶೆಟ್ಟಿ ಅವರು ಕೆಲಸ ಮಾಡುತ್ತಿದ್ದ ಜಮೀನಿನ ಪಕ್ಕದಲ್ಲೇ ಖಾಸಗಿ ಕಂಪೆನಿಯೊಂದಕ್ಕೆ ಸೇರಿದ ಅತಿಥಿ ಗೃಹವಿದ್ದು, ಬಸವರಾಜು ಅಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ. ಅವರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮೂರು ತಿಂಗಳ ಹಿಂದೆ ಜಗಳವಾಗಿ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಸಂಜೆ ಆರು ಗಂಟೆ ಸುಮಾರಿಗೆ ಲಿಂಗಶೆಟ್ಟಿ, ಬಸವರಾಜುವಿನ ಬಳಿ ತೆರಳಿ ಕುಡಿಯುವ ನೀರು ಕೇಳಿದರು. ಈ ವೇಳೆ ಆತ ಅವರ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವೈಟ್‌ಫೀಲ್ಡ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.