ಸೋಮವಾರ, ಜೂನ್ 21, 2021
21 °C

ಬಿಜೆಪಿ ಹೈಕಮಾಂಡ್‌ನಿಂದ ಯಡಿಯೂರಪ್ಪ ಮನವೊಲಿಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪಕ್ಷ ತೊರೆಯದಂತೆ ಅಥವಾ ರಾಜಕೀಯದಿಂದ ನಿವೃತ್ತಿ ಹೊಂದದಂತೆ ಬಿಜೆಪಿ ಹೈಕಮಾಂಡ್ ಮನವೊಲಿಸುವ ಸಾಧ್ಯತೆಯಿದೆ.ಸೋಮವಾರ ದೆಹಲಿಗೆ ಆಗಮಿಸಿರುವ ಯಡಿಯೂರಪ್ಪ ಬಿಜೆಪಿ ಅದ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಲಿದ್ದು, ದುಡುಕಿನ ತೀರ್ಮಾನ ಕೈಗೊಳ್ಳದಂತೆ ಮನವೊಲಿಸಲಿದ್ದಾರೆಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.ಯಡಿಯೂರಪ್ಪ ಬಿಜೆಪಿಯ ದೊಡ್ಡ ನಾಯಕರು. ಪಕ್ಷಕ್ಕೆ ಅವರ ಅಗತ್ಯವಿದೆ. ಅವರಿಗೂ ಪಕ್ಷದ ಅಗತ್ಯವಿದೆ. ಅವರನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಮಾಜಿ ಮುಖ್ಯಮಂತ್ರಿಗೆ ಸೂಕ್ತ ವೇಳೆ ಸೂಕ್ತ ಸ್ಥಾನಮಾನ ನೀಡಲಾಗುವುದು. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯುವಂತೆ ಗಡ್ಕರಿ ಕಿವಿಮಾತು ಹೇಳಲಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.ರಾಜ್ಯದಲ್ಲಿ ಬಿಜೆಪಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿರುವುದರ ಹಿಂದೆ ಯಡಿಯೂರಪ್ಪ ಅವರ ಪರಿಶ್ರಮವಿದೆ. ಪಕ್ಷದ ಜತೆಗೆ ಅವರೂ ಬೆಳೆದಿದ್ದಾರೆ. ಅವರ ಬೆಳವಣಿಗೆಗೆ ಎಲ್ಲ ಸಮುದಾಯದ ಬೆಂಬಲವಿದೆ. ಯಾವುದೋ ಒಂದು ಸಮುದಾಯದ ನಾಯಕರಂತೆ ಅವರು ವರ್ತಿಸಬಾರದು. ಒಂದು ಸಮುದಾಯದಿಂದ ಬೆಳೆದಿರುವುದಾಗಿ ಮಾಜಿ ಮುಖ್ಯಮಂತ್ರಿ ಭಾವಿಸಿದ್ದರೆ ಅದು ಭ್ರಮೆ ಎಂದು ಮೂಲಗಳು ವಿವರಿಸಿವೆ.`ಯಡಿಯೂರಪ್ಪ ಅವರನ್ನು ಬಿಜೆಪಿ ದೊಡ್ಡ `ಕ್ಯಾನ್ವಾಸ್~ನಲ್ಲಿಟ್ಟು ನೋಡುತ್ತಿದೆ. ಅದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಅವರ ಮೇಲೆ ಆರೋಪಗಳಿರುವುದರಿಂದ ರಾಜೀನಾಮೆ ಪಡೆಯಲಾಗಿದೆ. ಆರೋಪ ಮುಕ್ತರಾಗಿ ಹೊರಬಂದ ತಕ್ಷಣ ಮತ್ತೆ ಅವರನ್ನು ಪಕ್ಷ ಅಧಿಕಾರದಲ್ಲಿ ಕೂರಿಸಲಿದೆ. ಈ ವಿಷಯದಲ್ಲಿ ಆತುರ ತೋರುವುದು ಸರಿಯಲ್ಲ~ ಎಂದು  ಮೂಲಗಳು ಸ್ಪಷ್ಟಪಡಿಸಿವೆ.ಕರ್ನಾಟಕದ ಬೆಳವಣಿಗೆಗಳನ್ನು ಕುರಿತು ಚರ್ಚಿಸಲು ಮಾರ್ಚ್ ಮೂರರಂದು ಪ್ರಮುಖರ ಸಮಿತಿ (ಕೋರ್ ಕಮಿಟಿ) ಸೇರಬೇಕಿತ್ತು. ಆದರೆ, ಪರಿಸ್ಥಿತಿ ಸ್ವಲ್ಪ ತಿಳಿಯಾಗಲಿ ಎಂಬ ಕಾರಣಕ್ಕೆ ಸೇರಲಿಲ್ಲ. ಉತ್ತರ ಪ್ರದೇಶ ಮತ್ತಿತರ ರಾಜ್ಯಗಳ ಚುನಾವಣೆ ಫಲಿತಾಂಶ ಮಂಗಳವಾರ ಹೊರಬಿದ್ದ ಬಳಿಕ ಹಿರಿಯ ಮುಖಂಡರಿಗೆ ಬಿಡುವು ಸಿಗಲಿದೆ. ಅನಂತರ ಸಮಿತಿ ನಡೆಯುವ ಸಂಭವ ಇದೆ ಎಂದು ಮೂಲಗಳು ಹೇಳಿವೆ.ರಾಜ್ಯ ಬಿಜೆಪಿ ಬೆಳವಣಿಗೆಯನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ  ಅಥವಾ ಪಕ್ಷದ ಅಧ್ಯಕ್ಷ ಸ್ಥಾನ ಕೊಡುವ ಆಲೋಚನೆ ಸದ್ಯಕ್ಕಿಲ್ಲ.

ಬದಲಾಗಿ ಪ್ರಚಾರ ಸಮಿತಿ ಮಾಡಿ ಅದರ ಅಧ್ಯಕ್ಷ ಸ್ಥಾನ ನೀಡುವ ಕುರಿತು ಚಿಂತಿಸಿದ್ದಾರೆ. ಯಡಿಯೂರಪ್ಪ ಸಮ್ಮತಿಸಿದರೆ ಸಮಸ್ಯೆ ಸುಲಭವಾಗಿ ಬಗೆಹರಿಯಲಿದೆ ಎಂದು ಮೂಲಗಳು ಖಚಿತಪಡಿಸಿವೆ.ಗಡ್ಕರಿ ಅಚ್ಚರಿ: ಮಂಗಳವಾರ ತಮ್ಮ ನಿವಾಸದಲ್ಲಿ ಪಕ್ಷದ ಸಹೊದ್ಯೋಗಿಗಳು ಮತ್ತು ಪತ್ರಿಕಾ ಪ್ರತಿನಿಧಿಗಳ ಜತೆಗೂಡಿ ಹೋಳಿ ಆಚರಿಸಿದ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು, `ರಾಜಕೀಯ ನಿವೃತ್ತಿ ಪಡೆಯುವುದಾಗಿ ಯಡಿಯೂರಪ್ಪ ಹೇಳಿದ್ದಾರೆ~ ಎಂದು ಕೇಳಿದಾಗ `ಹೌದಾ~ ಎಂದು ಅಚ್ಚರಿ ವ್ಯಕ್ತಪಡಿಸಿದರು. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಬಯಸಿದಾಗ `ನಾನೇನು ಹೇಳಲಿ ಅವರನ್ನೇ ಕೇಳಿ~ ಎಂದರು.ಮತ್ತೆ ಮತ್ತೆ ಪ್ರಶ್ನೆಗಳು ಎದುರಾದಾಗ ಸಿಡಿಮಿಡಿಗೊಂಡ ಗಡ್ಕರಿ, `ಕೇಳಿದ್ದನ್ನೇ ಎಷ್ಟು ಸಲ ಕೇಳುತ್ತೀರಿ ಎಂದರು. ಸ್ವಲ್ಪ ತಡೆದು ದುಡುಕಿನ ತೀರ್ಮಾನ ಕೈಗೊಳ್ಳದಂತೆ ಯಡಿಯೂರಪ್ಪ ಅವರ ಮನವೊಲಿಸುವುದಾಗಿ ನುಡಿದರು. ಬಿಜೆಪಿ ಮುಖಂಡರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಧರ್ಮೇಂದ್ರ ಪ್ರಧಾನ್ ಹಾಗೂ ರವಿಶಂಕರ ಪ್ರಸಾದ್ ಮೊದಲಾದವರು ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.