ಭಾನುವಾರ, ಮೇ 22, 2022
25 °C

ಬಿಡುವು ಕೊಡದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡಿನ ವಿವಿಧೆಡೆ ಮಳೆ ಬಿಡುವು ನೀಡದೆ ಶನಿವಾರವೂ ಧಾರಾಕಾರವಾಗಿ ಸುರಿದಿದೆ. ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿರುವುದರಿಂದ ಕೃಷ್ಣಾ ಮತ್ತು ಅದರ ಉಪ ನದಿಗಳಲ್ಲಿ ಪ್ರವಾಹ ಹೆಚ್ಚಿದ್ದು ಬೆಳಗಾವಿ ಜಿಲ್ಲೆಯಲ್ಲಿನ ಏಳು ಸೇತುವೆಗಳು ಮುಳುಗಿವೆ.

ಮಳೆ ಸಂಬಂಧಿ ಅನಾಹುತಗಳಲ್ಲಿ ಶುಕ್ರವಾರ ತಡರಾತ್ರಿಯಿಂದೀಚೆಗೆ ದಾವಣಗೆರೆ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಕೆಲವೆಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಶನಿವಾರ ಒಳಹರಿವು 1,05,000 ಕ್ಯೂಸೆಕ್ ಇತ್ತು. ರಾತ್ರಿ ವೇಳೆಗೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.  123 ಟಿ.ಎಂ.ಸಿ. ಅಡಿ ಸಾಮರ್ಥ್ಯದ ಈ ಜಲಾಶಯದಲ್ಲಿ ಈಗ 103 ಟಿ.ಎಂ.ಸಿ. ಅಡಿ ನೀರು ಇದೆ. ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಶನಿವಾರ 11 ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಡಲಾಯಿತು.ನದಿಗೆ 39,000 ಕ್ಯೂಸೆಕ್, ವಿದ್ಯುತ್ ಘಟಕದ ಮೂಲಕ 42,000 ಕ್ಯೂಸೆಕ್ ಸೇರಿ 81,000 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಹಿನ್ನೀರಿನ ಕಾಲುವೆಗೆ 515 ಕ್ಯೂಸೆಕ್ ಹರಿಸಲಾಗುತ್ತಿದೆ ಎಂದು ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಸಿ. ಅನಂತರಾಮು ಹೇಳಿದರು.ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಶನಿವಾರ ಮಳೆ ಬಿರುಸುಗೊಂಡಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಹರಿಯುವ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟ ಏರಿ, ಕೆಳಮಟ್ಟದ ಏಳು ಸೇತುವೆಗಳು ಮುಳುಗಡೆಯಾಗಿವೆ.ವೇದಗಂಗಾ ನದಿಯ ಜತ್ರಾಟ- ಭೀವಶಿ, ಭೋಜವಾಡಿ- ಕುನ್ನೂರ, ಅಕ್ಕೋಳ- ಸಿದ್ನಾಳ, ದೂಧಗಂಗಾ ನದಿಯ ಕಾರದಗಾ- ಭೋಜ, ಸದಲಗಾ- ಬೋರಗಾಂವ, ಮಲಿಕವಾಡ- ದತ್ತವಾಡ ಮತ್ತು ಕೃಷ್ಣಾ ನದಿಯ ಕಲ್ಲೋಳ- ಯಡೂರ ಗ್ರಾಮಗಳ ಮಧ್ಯೆ ಇರುವ ಕೆಳಮಟ್ಟದ ಸೇತುವೆಗಳು ಮುಳುಗಿವೆ. ಆದರೆ, ಪರ್ಯಾಯ ರಸ್ತೆ ಸಂಪರ್ಕ ಇರುವುದರಿಂದ ಯಾವುದೇ ಗ್ರಾಮಗಳ ಸಂಚಾರ ಕಡಿತಗೊಂಡಿಲ್ಲ. ಬದಲಾಗಿ ಸುತ್ತು ಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ದೋಣಿ ವ್ಯವಸ್ಥೆ ಮಾಡುವಂತೆ ಈ ಪ್ರದೇಶಗಳ ಜನ ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.ನದಿಗಳ ನೀರಿನ ಹರಿವಿನಲ್ಲಿ ಕ್ರಮೇಣ ಏರಿಕೆಯಾಗುತ್ತಾ ನೀರು ಒಡಲು ತುಂಬಿ ಹರಿಯಲಾರಂಭಿಸಿವೆ. ಸದಲಗಾ ಬಳಿ ದೂಧಗಂಗಾ ನದಿ ನೀರು ಪಕ್ಕದ ಕಬ್ಬಿನ ಗದ್ದೆಗೆ ನುಗ್ಗತೊಡಗಿದೆ.ಬೆಳಗಾವಿ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಇಲ್ಲಿನ ರಕ್ಕಸಕೊಪ್ಪ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು ಜಲಾಶಯ ಭರ್ತಿಯಾಗಲು ಕೇವಲ 2 ಅಡಿ ಮಾತ್ರ ಬಾಕಿ ಉಳಿದಿದೆ. ಯಾವುದೇ ಕ್ಷಣದಲ್ಲೂ ಜಲಾಶಯದಿಂದ ಮಾರ್ಕಂಡೇಯ ನದಿಗೆ ನೀರು ಬಿಡಲಾಗುವುದು.ನದಿ ದಡದಲ್ಲಿರುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಚ್ಚರಿಕೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಮಳೆ ತಗ್ಗಿದ್ದು, ಕರಾವಳಿ, ಮಲೆನಾಡು ಹಾಗೂ ಅರೆಬಯಲುಸೀಮೆ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ಕರಾವಳಿ ಪ್ರದೇಶಗಳಾದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರದಲ್ಲಿ ಬೆಳಿಗ್ಗೆ ಹಾಗೂ ಮಧ್ಯಾಹ್ನ ಸ್ವಲ್ಪ ಸಮಯ ಮಳೆ ಸುರಿಯಿತು.ಕಳೆದ ಎರಡು ಮೂರು ದಿನಗಳಿಂದ ಸಿದ್ದಾಪುರ ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ಕುಮಟಾದಲ್ಲಿ ಅಘನಾಶಿನಿ ನದಿಯಲ್ಲಿ ಹರಿವು ಹೆಚ್ಚಳಗೊಂಡಿತ್ತು.ಹಾವೇರಿ, ಧಾರವಾಡ ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ ತಾಲ್ಲೂಕುಗಳಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಮೂಡುಬಿದಿರೆಯಲ್ಲೂ ಬಿರುಸಿನ ಮಳೆಯಾಗಿದೆ.ಸುಬ್ರಹ್ಮಣ್ಯ ಪ್ರದೇಶದಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಕುಮಾರಧಾರಾ ಸೇತುವೆಯಲ್ಲಿ ನಿರಂತರ 9 ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶುಕ್ರವಾರ ಮಧ್ಯರಾತ್ರಿ ವರೆಗೂ ನೀರಿನ ಮಟ್ಟ ಇಳಿದಿರಲಿಲ್ಲ. ಶನಿವಾರ ನೀರಿನ ಮಟ್ಟ ಇಳಿದ ಬಳಿಕ ವಾಹನಗಳು ಎಂದಿನಂತೆಯೇ ಸಂಚರಿಸಿದವು. ಮಂಗಳೂರಿನಲ್ಲಿ ದಿನವಿಡೀ ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲೂ ಮಳೆಯ ಅಬ್ಬರ ಮುಂದುವರಿದಿದೆ.ಜನಜೀವನ ಅಸ್ತವ್ಯಸ್ತ: ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿಯುವ ಪ್ರದೇಶಗಳಾದ ಮಡಿಕೇರಿ, ಭಾಗಮಂಡಲ, ಶಾಂತಳ್ಳಿ, ಸಂಪಾಜೆಯಲ್ಲಿ ಈ ಬಾರಿ ಪೈಪೋಟಿಗಳಿದಂತೆ ಮುಂಗಾರು ಮಳೆ ಸುರಿಯುತ್ತಿದೆ. ಶನಿವಾರ ಕೂಡ ಧಾರಾಕಾರವಾಗಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ಜೀವನದಿ ಕಾವೇರಿಯ ಉಗಮಸ್ಥಳವಾಗಿರುವ ತಲಕಾವೇರಿಯನ್ನು ಒಳಗೊಂಡಿರುವ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಭಾಗಮಂಡಲ ಜಲಾವೃತಗೊಂಡಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮಡಿಕೇರಿ ಸಮೀಪದ ಮುಕೋಡ್ಲು-ಹೊದಕಲ್ಲು ಬಳಿ ಭದ್ರಕಾಳಿ ದೇವಾಲಯ ಸಂಪೂರ್ಣ ಮುಳುಗಿದೆ.ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಹಾಗೆಯೇ ಮುಂದುವರಿದಿದ್ದು, ಇನ್ನಷ್ಟು ಪ್ರದೇಶಗಳು ಜಲಾವೃತಗೊಳ್ಳುವ ಭೀತಿ ಎದುರಾಗಿದೆ.  ಮುಕ್ಕೋಡ್ಲು- ಹಮ್ಮಿಯಾಲ ಮಾರ್ಗ ಮಧ್ಯೆ ಬೃಹತ್ ಭೂಕುಸಿತ ಉಂಟಾಗಿ, ಗ್ರಾಮೀಣ ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ. ಹಲವು ಕಡೆ ಮನೆಗಳ ಮೇಲೆ ಮರಗಳು ಉರುಳಿವೆ. ತಡೆಗೋಡೆಗಳು ಕುಸಿದು ಬಿದ್ದಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಜಿಲ್ಲೆಯ ಪ್ರಮುಖ ನದಿಗಳಾದ ಕಾವೇರಿ, ಲಕ್ಷ್ಮಣತೀರ್ಥ, ಚಿಕ್ಲಿಹೊಳೆ ಮೈದುಂಬಿ ಹರಿಯುತ್ತಿವೆ. ನದಿ ದಡದ ಗದ್ದೆ, ತೋಟಗಳಿಗೆ ನೀರು ನುಗ್ಗಿದೆ. ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೆಲವು ಪ್ರದೇಶಗಳಲ್ಲಿ 3- 4 ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಸ್ಥಳಾಂತರಕ್ಕೆ ಕ್ರಮ: ನದಿಗಳ ದಡದಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರಗೊಳಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಮಡಿಕೇರಿ, ಕರಡಿಗೋಡು ಸೇರಿದಂತೆ ಹಲವೆಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.ಹಾರಂಗಿ ಜಲಾನಯನ ಪ್ರದೇಶದಲ್ಲಿ ಶನಿವಾರ ಮಳೆ ಕೊಂಚ ಕಡಿಮೆಯಾಗಿದ್ದು, ಜಲಾಶಯಕ್ಕೆ ಒಳಹರಿವು ಕೂಡ ತಗ್ಗಿದೆ. ಶನಿವಾರ ಸಂಜೆವರೆಗೆ 20,880 ಕ್ಯೂಸೆಕ್ ಒಳಹರಿವು ಇತ್ತು. 14,300 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಸಂಜೆ 5ಗಂಟೆ ವರದಿಯಂತೆ 2,856.17 ಅಡಿ ನೀರು ಸಂಗ್ರಹವಾಗಿತ್ತು (ಗರಿಷ್ಠ ಮಟ್ಟ 2,859 ಅಡಿ).ತಗ್ಗದ ಪ್ರವಾಹ: ಶಿವಮೊಗ್ಗ ಜಿಲ್ಲೆಯಲ್ಲಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ತುಂಗಾ, ವರದಾ, ಮಾಲತಿ ನದಿಗಳಲ್ಲಿ ಪ್ರವಾಹ ಶನಿವಾರವೂ ತಗ್ಗಿಲ್ಲ. ಆದರೆ ಯಾವುದೇ ಹಾನಿ ಬಗ್ಗೆ ವರದಿಯಾಗಿಲ್ಲ.ಜಲಾಶಯಗಳಿಗೆ ಒಳಹರಿವು ದುಪ್ಪಟ್ಟಾಗಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ 55,031 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಒಂದೇ ದಿನದಲ್ಲಿ ಲಿಂಗನಮಕ್ಕಿ ಅಣೆಕಟ್ಟೆ ನೀರಿನ ಮಟ್ಟ 3 ಅಡಿ ಹೆಚ್ಚಿದೆ. ಜೋಗ-ಕಾರ್ಗಲ್ ಸುತ್ತಮುತ್ತ 100 ಮಿ.ಮೀ. ಮಳೆಯಾಗಿದ್ದು, ಜೋಗ ಜಲಪಾತ ಇನ್ನಷ್ಟು ಆಕರ್ಷಕವಾಗಿ ಕಂಗೊಳಿಸುತ್ತಿದೆ.ತುಂಗಾ ಜಲಾಶಯಕ್ಕೆ  ಶನಿವಾರ 57,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಭದ್ರಾ ಜಲಾಶಯಕ್ಕೂ ಒಳ ಹರಿವು ಜಾಸ್ತಿಯಾಗಿದ್ದು ನೀರಿನ ಮಟ್ಟ ಒಂದೇ ದಿನಕ್ಕೆ 2 ಅಡಿ ಏರಿದೆ.ಇಬ್ಬರ ಸಾವು: ದಾವಣಗೆರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಜಿಟಿಜಿಟಿ ಮಳೆ ಎರಡು ಬಲಿ ಪಡೆದಿದೆ. ರಾಜೀವ್ ಗಾಂಧಿ ಸಬ್‌ಮಿಷನ್ ಯೋಜನೆಯಡಿ ಪೈಪ್‌ಲೈನ್ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಹರಿಹರ ತಾಲ್ಲೂಕಿನ ಕೆ.ಬೇವಿನಹಳ್ಳಿಯಲ್ಲಿ ಶನಿವಾರ ನಡೆದಿದೆ.ಲಕ್ಷಶೆಟ್ಟಿಹಳ್ಳಿಯ ರಮೇಶ್ (30) ಮೃತಪಟ್ಟ ಕಾರ್ಮಿಕ. ಮಳೆಯಿಂದ ಭೂಮಿ ತೇವಗೊಂಡಿತ್ತು. ಸುಮಾರು ಹತ್ತು ಅಡಿ ಆಳದ ಗುಂಡಿಗೆ ಇಳಿದು ಪೈಪ್ ಅಳವಡಿಸುವ ವೇಳೆ ಮೇಲಿನ ಮಣ್ಣು ಕುಸಿದ ಪರಿಣಾಮ ಈ ಘಟನೆ ನಡೆದಿದೆ.

ಮತ್ತೊಂದು ಘಟನೆಯಲ್ಲಿ ಚನ್ನಗಿರಿ ತಾಲ್ಲೂಕಿನ ಕಣಿವೆಬಿಳಚಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಕರಿಯಮ್ಮ (45) ಮೃತಪಟ್ಟವರು.ದಾವಣಗೆರೆ ಜಿಲ್ಲೆಯಾದ್ಯಂತ ಶನಿವಾರ ದಿನವಿಡೀ ಜಿಟಿಜಿಟಿ ಮಳೆ ಸುರಿಯಿತು. ಬಿಟ್ಟುಬಿಟ್ಟು ಬರುತ್ತಿದ್ದ ಮಳೆಯಿಂದ ನಗರದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಚನ್ನಗಿರಿ, ಹೊನ್ನಾಳಿ ಹಾಗೂ ಹರಿಹರದಲ್ಲಿ ಉತ್ತಮ ಮಳೆಯಾಗಿ ವಾತಾವರಣ ತಂಪಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲೂ ದಿನದ ಹೆಚ್ಚಿನ ಅವಧಿಯಲ್ಲಿ ಸಣ್ಣ ಮಟ್ಟಿಗೆ ಮಳೆಯಾಗಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.