ಶುಕ್ರವಾರ, ಮೇ 7, 2021
26 °C

ಬಿಬಿಎಂಪಿ ಆಸ್ತಿ ತೆರಿಗೆ ವಂಚನೆ: ವಾಣಿಜ್ಯ ಕಟ್ಟಡಗಳ ಮೇಲೆ ಹದ್ದಿನ ಕಣ್ಣು

ಶಿವರಾಂ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಾಮಾಣಿಕವಾಗಿ ಆಸ್ತಿ ತೆರಿಗೆ ಪಾವತಿಸದೆ ವಂಚಿಸುತ್ತಿರುವ ವಾಣಿಜ್ಯ ಕಟ್ಟಡಗಳ ಮೇಲೆ ಹದ್ದಿನ ಕಣ್ಣಿಡಲು ಬಿಬಿಎಂಪಿ ನಿರ್ಧರಿಸಿದ್ದು, ಆರಂಭಿಕ ಹಂತದಲ್ಲಿ ಇಂತಹ ಕೆಲ ವಾಣಿಜ್ಯ ಕಟ್ಟಡಗಳನ್ನು ಗುರುತಿಸಿ ದಂಡ ವಿಧಿಸಲು ಗಂಭೀರ ಚಿಂತನೆ ನಡೆಸಿದೆ.ಭೌಗೋಳಿಕ ಮಾಹಿತಿ ವ್ಯವಸ್ಥೆಯ ಮೂಲಕ ನಗರದ ಎಲ್ಲ ಆಸ್ತಿಗಳಿಗೆ ಪ್ರತ್ಯೇಕ ಗುರುತಿನ ಸಂಖ್ಯೆ (ಪಿಐಡಿ) ನೀಡುತ್ತಿರುವುದರಿಂದ ಇಂತಹ ಆಸ್ತಿ ತೆರಿಗೆ ವಂಚಿತ ಕಟ್ಟಡಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಪಾಲಿಕೆಗೆ ಅನುಕೂಲವಾಗಲಿದೆ.ಕೆಲವು ಪ್ರತಿಷ್ಠಿತ ಕಂಪೆನಿಗಳೇ ಪ್ರಾಮಾಣಿಕವಾಗಿ ಆಸ್ತಿ ತೆರಿಗೆ ಪಾವತಿಸದೆ ವಂಚಿಸುತ್ತಿರುವುದನ್ನು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಪತ್ತೆ ಮಾಡಿದೆ. ಬನ್ನೇರುಘಟ್ಟ ರಸ್ತೆಯ ಎರಡು, ಮಾರತ್‌ಹಳ್ಳಿಯ ಪ್ರತಿಷ್ಠಿತ ಟೆಕ್ ಪಾರ್ಕ್ ಸೇರಿದಂತೆ ಹಲವು ಕಂಪೆನಿಗಳು ಪಾಲಿಕೆಗೆ ಪ್ರಾಮಾಣಿಕವಾಗಿ ಆಸ್ತಿ ತೆರಿಗೆ ಪಾವತಿಸದಿರುವುದನ್ನು ಸಮಿತಿಯು ಬೆಳಕಿಗೆ ತಂದಿದೆ.`ಅನೇಕ ವಾಣಿಜ್ಯ ಕಟ್ಟಡಗಳು ಪ್ರಾಮಾಣಿಕವಾಗಿ ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ಘೋಷಣೆ ಮಾಡಿರುವ ಆಸ್ತಿ ತೆರಿಗೆಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಮೂರನೇ ವ್ಯಕ್ತಿಗಳಿಂದ ನಾವು ಪರಿಶೀಲನೆ ನಡೆಸಿದಾಗ ಇವು ಆಸ್ತಿ ತೆರಿಗೆಯನ್ನು ಪಾವತಿಸದೆ ವಂಚಿಸುತ್ತಿರುವುದು ದೃಢಪಟ್ಟಿದೆ~ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಮಂಜುನಾಥರಾಜು `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.`ಸದ್ಯಕ್ಕೆ ಈ ಕಂಪೆನಿಗಳು ತಪ್ಪಿಸಿಕೊಳ್ಳಬಹುದು. ಆದರೆ, ಪರಿಶೀಲನೆ ನಡೆಸಿದ ನಂತರ ಸಿಕ್ಕಿ ಬೀಳುವ ಕಟ್ಟಡ ಮಾಲೀಕರಿಗೆ ಆಸ್ತಿ ತೆರಿಗೆ ಪಾವತಿಸಿದ ದಿನದಿಂದಲೇ ಅನ್ವಯವಾಗುವಂತೆ ದಂಡ ವಿಧಿಸಲು ಪಾಲಿಕೆ ಮುಂದಾಗಲಿದೆ. ಹೀಗಾಗಿ, ಆಸ್ತಿ ಗುರುತಿನ ಸಂಖ್ಯೆಯಿಂದ ಯಾರೂ ತೆರಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ~ ಎಂದು ಅವರು ಹೇಳಿದರು.16.19 ಲಕ್ಷ ಆಸ್ತಿ ತೆರಿಗೆ ಜಾಲ ವ್ಯಾಪ್ತಿಗೆ: ನಗರದಲ್ಲಿ ಆಸ್ತಿ ತೆರಿಗೆ ಸಂಖ್ಯೆ ನೀಡುವ ಪದ್ಧತಿ ಜಾರಿಗೆ ತರುವ ಮುನ್ನ 11 ಲಕ್ಷ ಆಸ್ತಿಗಳು ತೆರಿಗೆ ಜಾಲ ವ್ಯಾಪ್ತಿಗೆ ಒಳಪಟ್ಟಿದ್ದವು. ಆದರೆ, ಜಿಐಎಸ್ ಮೂಲಕ ಆಸ್ತಿ ತೆರಿಗೆ ಸಂಖ್ಯೆ ನೀಡಿದ ನಂತರ ಪಾಲಿಕೆಯು 16.19 ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದಿದೆ. ಸುಮಾರು 5.20 ಲಕ್ಷ ಆಸ್ತಿಗಳು ಹೊಸದಾಗಿ ತೆರಿಗೆ ಜಾಲ ವ್ಯಾಪ್ತಿಗೆ ಸೇರ್ಪಡೆಯಾಗಿವೆ. ಇದರಿಂದ ಇದುವರೆಗೆ 1200 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹವಾಗುತ್ತಿದ್ದರೆ, ಇನ್ನು ಮುಂದೆ 2000 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ.ನಗರದಲ್ಲಿ ಸುಮಾರು 12 ಸಾವಿರ ಕಿ.ಮೀ.ನಷ್ಟು ರಸ್ತೆಗಳಿದ್ದು, ಈ ಪೈಕಿ 94,260 ರಸ್ತೆಗಳಿಗೆ ಪಿಐಡಿ ಸಂಖ್ಯೆ ನೀಡಲಾಗಿದೆ. ಜಿಐಎಸ್ ಮೂಲಕ ವಾರ್ಡ್, ಬೀದಿ ಹಾಗೂ ಕಟ್ಟಡಗಳನ್ನು ಗುರುತಿಸಿ ಪ್ರತಿ ಆಸ್ತಿಗೂ ನಿರ್ದಿಷ್ಟವಾದ ಗುರುತಿನ ಸಂಖ್ಯೆ ನೀಡಲಾಗುತ್ತಿದೆ. ಇದರಿಂದ ಯಾವುದೇ ಕಟ್ಟಡ ಆಸ್ತಿ ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.ಅಲ್ಲದೆ, ಇನ್ನು ಮುಂದೆ ಪಾಲಿಕೆ ಮೂಲಕ ಕೈಗೆತ್ತಿಕೊಳ್ಳಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೂ ಪಿಐಡಿ ಸಂಖ್ಯೆ ಬಳಸಿ `ಜಾಬ್ ಕೋಡ್~ ನೀಡಲಾಗುತ್ತದೆ. ಇದರಿಂದ ಒಂದೇ ರಸ್ತೆಯಲ್ಲಿ ಪದೇ ಪದೇ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವುದನ್ನು ತಪ್ಪಿಸುವ ಮೂಲಕ ಪಾಲಿಕೆ ಹಣ ನಷ್ಟವಾಗುವುದನ್ನು ತಪ್ಪಿಸಬಹುದಾಗಿದೆ. ಇನ್ನು, ಒಎಫ್‌ಸಿ ಕೇಬಲ್ ಅಳವಡಿಕೆಗೂ ಈ ಹೊಸ ವ್ಯವಸ್ಥೆ ಸಹಕಾರಿಯಾಗಲಿದೆ. ಓಎಫ್‌ಸಿ ಕೇಬಲ್ ಅಳವಡಿಸುವ ಕಂಪೆನಿಗಳು ಮುಚ್ಚಳಿಕೆ ಪತ್ರ ನೀಡಿದಲ್ಲಿ ಮಾತ್ರ ನಿರ್ದಿಷ್ಟ ಪ್ರದೇಶದಲ್ಲಿ ರಸ್ತೆ ಅಗೆಯಲು ಅವಕಾಶ ನೀಡಲಾಗುತ್ತದೆ ಎಂದು ಮಂಜುನಾಥರಾಜು ತಿಳಿಸಿದರು.ಜಾಹೀರಾತು ದರ ಪರಿಷ್ಕರಣೆ: ಈ ನಡುವೆ, ಹೊಸ ಜಾಹೀರಾತು ನೀತಿಗೆ ಪಾಲಿಕೆ ಸಮ್ಮತಿ ಸೂಚಿಸಿದೆ. ಇದಕ್ಕೆ ಅನುಮೋದನೆ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.ಹೊಸ ಜಾಹೀರಾತು ನೀತಿಯನ್ವಯ ದರವನ್ನು ಪಾಲಿಕೆ ಪರಿಷ್ಕರಿಸಿದೆ. ಇದುವರೆಗೆ ಒಂದು ಚದರ ಅಡಿಗೆ 129 ರೂಪಾಯಿಗಳಷ್ಟಿದ್ದ ದರವನ್ನು ಇದೀಗ 260 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಕಳೆದ ವರ್ಷ ಜಾಹೀರಾತಿನಿಂದ 42 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದ್ದರೆ, ಈ ವರ್ಷ 100ರಿಂದ 110 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗುವ ಗುರಿ ಹೊಂದಲಾಗಿದೆ.ಈ ವರ್ಷದಿಂದ ಪಾಲಿಕೆ ಸ್ವಂತ ಆಸ್ತಿಗಳಲ್ಲಿ ಜಾಹೀರಾತು ಅಳವಡಿಸಲು ಜಾಗವನ್ನು ಹರಾಜು ಮಾಡಲಾಗುತ್ತದೆ. ಅಧಿಕ ಬಾಡಿಗೆ ನೀಡುವಂತಹ ಸಂಸ್ಥೆಗಳಿಗೆ ಜಾಹೀರಾತು ಫಲಕ ಅಳವಡಿಸಲು ಅನುಮತಿ ನೀಡಲಾಗುತ್ತದೆ.ಉಳಿದಂತೆ, ಪಾಲಿಕೆ, ಖಾಸಗಿ ಅಥವಾ ಸ್ವಯಂ ಜಾಗಗಳಲ್ಲಿನ ಜಾಹೀರಾತು ದರದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.