ಮಂಗಳವಾರ, ಮೇ 18, 2021
22 °C
ರಂಗ ಬಿನ್ನಹ

ಬೀಚಗಾನಹಳ್ಳಿಯ ನಾಟಕ ಹಬ್ಬ

-ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

`ನಮ್ಮೂರಲ್ಲಿ ನಾಟಕ ಶುರುವಾದ್ರೆ ಟೀವಿ ಆಫ್ ಮಾಡುತ್ತೇವೆ. ಕೇಬಲ್ ಟೀವಿಯವರು ಸಿನಿಮಾ ಹಾಕೋದಿಲ್ಲ. ಸಂಜೆ ಏಳೂವರೆಯಾದರೆ ಸಾಕು, ನಾಟಕ ನಡೆಯೋ ಜಾಗಕ್ಕೆ ಹೋಗಿ ಕೂತುಬಿಡ್ತೀವಿ. ರಾತ್ರಿ ಹನ್ನೊಂದು ಗಂಟೆಯವರೆಗೂ ಅಲ್ಲಿಂದ ಕದಲೋದಿಲ್ಲ. ಬೆಡ್‌ಶೀಟು, ದಿಂಬು, ಚಾಪೆ ತಗೊಂಡು ಹೋಗ್ತೀವಿ. ಬಯಲಲ್ಲಿ ಬೀಸೋ ಗಾಳಿಗೆ ಮಕ್ಕಳು ಅಲ್ಲೇ ನಿದ್ದೆ ಮಾಡಿದರೆ, ನಾಟಕದ ಖಯಾಲಿಯಲ್ಲಿ ನಾವಿರ‌್ತೇವೆ. ಸಮಾಪ್ತಿಯೆಂದು ನಾಟಕದವರು ಹೇಳಿದಾಗ, ನಾಟಕ ಇಷ್ಟು ಬೇಗ ಮುಗಿದುಬಿಡ್ತಾ ಅನ್ನಿಸಿಬಿಡುತ್ತೆ...'ಈ ಮಾತುಗಳು ಕೇಳಿ ಬಂದದ್ದು ಬೀಚಗಾನಹಳ್ಳಿ ಎಂಬ ಸಣ್ಣ ಊರಿನಲ್ಲಿ. ಇದು, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಒಂದು ಕುಗ್ರಾಮ. ಇತ್ತೀಚೆಗೆ ಅಲ್ಲಿ ರಾಷ್ಟ್ರೀಯ ನಾಟಕೋತ್ಸವ ನಡೆಯಿತು. ಆ ಸಂದರ್ಭದಲ್ಲಿ ಕೇಳಿಬಂದದ್ದು- `ನಾವು ಟೀವಿ ಬದಲು ನಾಟಕ ನೋಡ್ತೀವಿ' ಎಂಬ ಊರವರ ಮಾತುಗಳು.ಬೀಚಗಾನಹಳ್ಳಿಯ ಸರ್ಕಾರಿ ಶಾಲೆಯ ವಿಶಾಲ ಬಯಲು ಆವರಣದಲ್ಲಿ ಆರು ದಿನಗಳ ಕಾಲ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಕನ್ನಡ, ಹಿಂದಿ ಮತ್ತು ತೆಲುಗು ನಾಟಕ ಪ್ರದರ್ಶನಗೊಂಡವು. ಬಸ್ ಬಾರದ, ಮೂಲಸೌಕರ್ಯಗಳಿಲ್ಲದ ಈ ಗ್ರಾಮದಲ್ಲಿ ನಾಟಕ ನಡೆಯುತ್ತದೆ ಎಂದರೆ ಹಬ್ಬದ ಸಂಭ್ರಮವಿದ್ದಂತೆ. ಸಾಹಿತ್ಯ-ಸಂಸ್ಕೃತಿ ಗಂಧಗಾಳಿಯೂ ಬೀಸದ ಈ ಗ್ರಾಮದಲ್ಲಿ ನಾಟಕ ನೋಡಲಿಕ್ಕೆ ಮಾತ್ರ ಸಾವಿರಾರು ಜನ ಸೇರಿಬಿಡುತ್ತಾರೆ.`ಐಶ್ವರ್ಯ ಕಲಾ ನಿಕೇತನ' ಸಂಸ್ಥೆ ಕಳೆದ ಆರು ವರ್ಷಗಳಿಂದ ರಾಷ್ಟ್ರೀಯ ನಾಟಕೋತ್ಸವ ಆಯೋಜಿಸುತ್ತಿದೆ. 2007ರಿಂದ 2009ರವರೆಗೆ ಚಿಕ್ಕಬಳ್ಳಾಪುರದಲ್ಲಿ ಮತ್ತು 2010ರಿಂದ ಬೀಚಗಾನಹಳ್ಳಿಯಲ್ಲಿ ನಾಟಕೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. `ಮಹಾನಗರಗಳಲ್ಲಿ ಮತ್ತು ಬೇರೆ ಬೇರೆ ಊರುಗಳಲ್ಲಿ ನಾಟಕ ಪ್ರದರ್ಶನಕ್ಕೆಂದೇ ರಂಗಮಂದಿರಗಳೂ ತಂಡಗಳೂ ಇವೆ. ಕುಗ್ರಾಮದ ನಿವಾಸಿಗಳಿಗೆ ಅಂತಹ ನಾಟಕಗಳನ್ನು ನೋಡಲು ಸಾಧ್ಯವೇ? ಅದಕ್ಕೆಂದೇ ನಾವು ಇಲ್ಲಿ ಆಯೋಜಿಸುತ್ತೇವೆ' ಎನ್ನುತ್ತಾರೆ ನಾಟಕದ ಆಯೋಜಕರು.`ನಮ್ಮ ತಂದೆ ಬೀಚಗಾನಹಳ್ಳಿಯಲ್ಲಿ ಟೆಂಟ್ ಸಿನಿಮಾ ಇಟ್ಟಿದ್ದರು. ಈಗ ಟೆಂಟ್ ಸಿನಿಮಾ ಇಲ್ಲ. ರಂಗ ಚಟುವಟಿಕೆಗಳ ಮೂಲಕವಾದರೂ ಜನರಲ್ಲಿ ಕಲಾಸಕ್ತಿ ಮೂಡಿಸುವ ಉದ್ದೇಶದಿಂದ ಇಲ್ಲಿ ರಾಷ್ಟ್ರೀಯ ನಾಟಕೋತ್ಸವ ನಡೆಸುತ್ತೇನೆ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಾಟಕ ನೋಡಲು ಬರುತ್ತಾರೆ' ಎಂದು ಐಶ್ವರ್ಯಾ ಕಲಾನಿಕೇತನ ಸಂಸ್ಥೆಯ ವ್ಯವಸ್ಥಾಪಕ ಜಿ.ವಿ. ಪ್ರಸನ್ನಕುಮಾರ್ ಹೇಳುತ್ತಾರೆ. ಅಂದಹಾಗೆ, ನಾಟಕೋತ್ಸವದ ಸಂದರ್ಭದಲ್ಲಿ ಸಂಜೆ 7.30ರ ನಂತರ ಬೀಚಗಾನಹಳ್ಳಿ ಸೇರಿದಂತೆ ಆಸುಪಾಸಿನ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೇಬಲ್ ಟೀವಿ ವ್ಯವಸ್ಥಾಪಕರು ಸ್ವಯಂಪ್ರೇರಣೆಯಿಂದ ಕೇಬಲ್ ಟೀವಿ ಪ್ರಸಾರ ಸ್ಥಗಿತಗೊಳಿಸುತ್ತಾರೆ.

ನಾಟಕ ನೋಡಲಿಕ್ಕೆ ಪ್ರವೇಶ ಶುಲ್ಕ ಇಲ್ಲ. ವಿಶಾಲ ಬಯಲು ಆವರಣದಲ್ಲಿ ಕೂತು, ನಿಂತು, ಮಲಗಿ, ಚಪ್ಪಾಳೆ ಹೊಡೆಯುತ್ತ, ಶಿಳ್ಳೆಗಳನ್ನು ಹಾಕುತ್ತ ಜನ ನಾಟಕಗಳನ್ನು ಅನುಭವಿಸಿದರೆ ಸಾಕು ಎನ್ನುವುದು ಆಯೋಜಕರ ಬಯಕೆ. ನಾಟಕಗಳನ್ನು ಪ್ರದರ್ಶಿಸುವುದಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರತಿಭೆಗಳನ್ನು ರಂಗಭೂಮಿಗೆ ಕರೆತರುವ ಉದ್ದೇಶವೂ ಅವರಿಗಿದೆ. `ನೀನಾಸಂ' ಸ್ಫೂರ್ತಿಯಿಂದ ಕುಗ್ರಾಮದಲ್ಲಿ ಪುಟ್ಟದೊಂದು ರಂಗಶಾಲೆ ಆರಂಭಿಸುವ ಬಯಕೆಯೂ ಅವರಿಗಿದೆ.ಹುಬ್ಬಳ್ಳಿಯ ಗುರು ಸಂಸ್ಥೆಯ `ಆಲ್ ದಿ ಬೆಸ್ಟ್', ದಾಮೋದರ್ ಗಣಪತಿರಾವ್ ವಿರಚಿತ `ತೆಲಗು ರೆಲಾ...ರೆ....ರೆಲಾ', ಆಂಧ್ರಪ್ರದೇಶದ ವಾರಂಗಲ್‌ನ ತೆಲಂಗಾಣ ಡ್ರಾಮಾಟಿಕ್ ಅಸೋಸಿಯೇಷನ್‌ನ `ಶ್ರೀಕೃಷ್ಣ ರಾಯಭಾರಂ', ಬೀಚಗಾನನಹಳ್ಳಿ ನೇತಾಜಿ ಕನ್ನಡ ಯುವಕ ಸಂಘದ `ಸನ್ಮಾನ ಸುಖ', ಬೆಂಗಳೂರಿನ ಕಲಾಗಂಗೋತ್ರಿಯ `ಮಂಗ ಮಾಣಿಕ್ಯ ಪ್ರಹಸನ', ಆಂಧ್ರಪ್ರದೇಶದ ಪೊನ್ನೂರು ದತ್ತಸಾಯಿ ನಾಟ್ಯ ಮಂಡಳಿಯ `ಮೋಹಿನಿ ಭಸ್ಮಾಸುರ' ಹಾಗೂ ಏಲೂರಿನ ಹಲಾಪುರಿ ಕಲ್ಚರಲ್ ಅಸೋಸಿಯೇಷನ್‌ನ `ಮಹಾಸಾಧ್ವಿ ಶಕುಂತಲಾ' ನಾಟಕಗಳು ಈ ಸಲದ ಉತ್ಸವದಲ್ಲಿ ಪ್ರದರ್ಶನಗೊಂಡವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.