ದಾವಣಗೆರೆ: ನೋಡ ನೋಡುತ್ತಿದ್ದಂತೆಯೇ ಹೊತ್ತಿ ಉರಿದ ಗುಡಿಸಲುಗಳು, ಕಣ್ಮುಂದೆಯೇ ಅಕ್ಕಿ–ಬೇಳೆ, ಮಕ್ಕಳ ಪುಸ್ತಕ– ಅಂಕಪಟ್ಟಿ, ಪಾತ್ರೆ, ಬಟ್ಟೆ ಸುಟ್ಟು ಕರಕಲಾದರೂ ಏನೂ ಮಾಡದ ಅಸಹಾಯಕ ಸ್ಥಿತಿ, ದಟ್ಟ ಹೊಗೆ ಕಂಡ ಕೂಡಲೇ ಜಮಾವಣೆ ಕೊಂಡ ಸಾವಿರಾರು ಮಂದಿ...
– ಇದು ಪಾಲಿಕೆಯ ವ್ಯಾಪ್ತಿಯ ಆವರೆಗೆರೆಯ ದನವಿನ ಓಣಿಯಲ್ಲಿ ಶುಕ್ರವಾರ ಬೆಂಕಿ ಆಕಸ್ಮಿಕಕ್ಕೆ ಸುಮಾರು 40 ಗುಡಿಸಲುಗಳು ಭಸ್ಮವಾದ ವೇಳೆ ಕಂಡುಬಂದ ದೃಶ್ಯಾವಳಿಗಳು.
ದನವಿನ ಓಣಿಯಲ್ಲಿ 80ಕ್ಕೂ ಹೆಚ್ಚು ಕುಟುಂಬಗಳು ಗುಡಿಸಲಿನಲ್ಲೇ ವಾಸ ಮಾಡುತ್ತಿವೆ. ಹೆಚ್ಚಿನವರು ಕಾರ್ಮಿಕರು. ಎಲ್ಲರೂ ಬೆಳಿಗ್ಗೆ ಕೂಲಿ ಕೆಲಸಕ್ಕೆ ತೆರಳಿದ್ದರು. ಮಕ್ಕಳು ಶಾಲೆಯತ್ತ ಮುಖ ಮಾಡಿದ್ದರು. ವಯೋವೃದ್ಧರನ್ನು ಬಿಟ್ಟರೆ ಹೆಚ್ಚಿನವರ್‍ಯಾರೂ ಗುಡಿಸಲಲ್ಲಿ ಇರಲಿಲ್ಲ. ಅದೇ ವೇಳೆ ಗುಡಿಸಲೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬಹುತೇಕ ಗುಡಿಸಲು ಅಕ್ಕಪಕ್ಕವೇ ಇರುವ ಕಾರಣಕ್ಕೆ ಬೆಂಕಿ ಬಹುಬೇಗ ವ್ಯಾಪಿಸಿದೆ. ಕ್ಷಣಾರ್ಧದಲ್ಲಿ ಎಲ್ಲವೂ ಸುಟ್ಟು ಹೋಗಿವೆ.
ಮಧ್ಯಾಹ್ನ 12ರ ವೇಳೆಗೆ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ, ಬೃಹದಾಕಾರವಾಗಿ ವ್ಯಾಪಿಸಿತು. ಬಳಿಕ ಸ್ಥಳಕ್ಕೆ ಬಂದ ಅಗ್ನಿ ಶಾಮಕ ಹಾಗೂ ತುರ್ತು ಸೇವಾ ಸಿಬ್ಬಂದಿ ಬೆಂಕಿ ನಂದಿಸಲು ಯಶಸ್ವಿಯಾದರು. ಆದರೂ, ಬೆಲೆ ಬಾಳುವ ಸಾಮಗ್ರಿ, ಮಕ್ಕಳ ಅಂಕಪಟ್ಟಿ ಸುಟ್ಟು ಕರಕಲಾಗುತ್ತಿದ್ದ ದೃಶ್ಯ ಎಲ್ಲರ ಮನಕಲಕಿತು.
ಪ್ರತಿಭಟನೆ: ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಗುಡಿಸಲು ಮಾಲೀಕರು ಪ್ರತಿಭಟನೆಗೆ ಇಳಿದರು. ಪುಣೆ–ಬೆಂಗಳೂರು ರಾಜ್ಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ವೇಳೆ ಕೆಲವು ಮಹಿಳೆಯರು– ಮಕ್ಕಳು ಕೂಡಿಟ್ಟ ಹಣ, ಅಕ್ಕಿ ಕಳೆದುಕೊಂಡ ಬೀದಿಗ ಬಿದ್ದಿದ್ದೇವೆ ಎಂದು ಕಣ್ಣೀರು ಹಾಕಿದರು. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ನೀಡಬೇಕು. ಇಲ್ಲಿನವರು ಎಲ್ಲರೂ ಬಡವರು. ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿದ್ದೇವೆ. ಗಂಜಿ ಕೇಂದ್ರ ಆರಂಭಿಸಬೇಕು, ಪಾಲಿಕೆ ವತಿಯಿಂದ ನೆಲೆ ಕಳೆದುಕೊಂಡವರಿಗೆ ಶೆಡ್ ನಿರ್ಮಿಸಿಕೊಡಬೇಕು ಎಂದು ಪಟ್ಟು ಹಿಡಿದರು.
ಗಂಜಿ ಕೇಂದ್ರದ ಭರವಸೆ: ಬಳಿಕ ಸ್ಥಳಕ್ಕೆ ಬಂದ ತಹಶೀಲ್ದಾರ್ ಮಂಜುನಾಥ್ ಬಳ್ಳಾರಿ, ಗಂಜಿ ಕೇಂದ್ರ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಪಾಲಿಕೆ ಸಿಬ್ಬಂದಿಯೂ ಸ್ಥಳ ಪರಿಶೀಲನೆ ನಡೆಸಿದರು. ಪ್ರತಿಭಟನೆಯ ನೇತೃತ್ವವನ್ನು ಆಲೂರು ನಿಂಗರಾಜ್,
ಆವರೆಗೆರೆ ವಾಸು ಮೊದಲಾದವರು ವಹಿಸಿದ್ದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ನಗರಕ್ಕೆ ಬರಬೇಕಿದ್ದ ಪ್ರಯಾಣಿಕರು ತೊಂದರೆಗೆ ಒಳಗಾದರು. ಆವರಗೆರೆ ಸಮೀಪ ಕೆಲಕಾಲ ಸಂಚಾರ ಬಂದ್ ಮಾಡಿದ ಕಾರಣ ವಾಹನಗಳು ಬಳಸು ಮಾರ್ಗವಾಗಿ ಅಂದರೆ ಜಿಲ್ಲಾ ಪಂಚಾಯ್ತಿ ಕಚೇರಿಯ ಎದುರಿನಿಂದ ನಗರ ಪ್ರವೇಶಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.