ಭಾನುವಾರ, ಜನವರಿ 19, 2020
28 °C
ರಾಜ್ಯದ ಪಾಲಿನಲ್ಲೇ ಹೊಂದಾಣಿಕೆ ಮಾಡುವ ಪ್ರಸ್ತಾವಕ್ಕೆ ಒಪ್ಪಿಗೆ

ಬೆಂಗಳೂರಿಗೆ 10 ಟಿಎಂಸಿ ಅಡಿ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾವೇರಿ ನದಿಯಲ್ಲಿ ರಾಜ್ಯಕ್ಕೆ ದೊರೆತಿ­ರುವ 270 ಟಿಎಂಸಿ ಅಡಿಯಲ್ಲಿ ಬೆಂಗಳೂರು ನಗರದ ಬಳಕೆಗೆ ಹೆಚ್ಚುವರಿಯಾಗಿ ಹತ್ತು ಟಿಎಂಸಿ ಅಡಿ ನೀರನ್ನು ನಿಗದಿ ಮಾಡುವ ಪ್ರಸ್ತಾವಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ‘ಬೆಂಗಳೂರಿನ ಬಳಕೆಗಾಗಿ 17.64 ಟಿಎಂಸಿ ಅಡಿ ನೀರನ್ನು ಕಾವೇರಿ ನ್ಯಾಯಮಂಡಳಿ ನಿಗದಿ ಮಾಡಿತ್ತು. ಆದರೆ, ಇನ್ನೂ ಹತ್ತು ಟಿಎಂಸಿ ಅಡಿ ನೀರು ಒದಗಿಸು­ವಂತೆ ಬೆಂಗಳೂರು ಜಲಮಂಡಳಿ ಪ್ರಸ್ತಾವ ಸಲ್ಲಿಸಿತ್ತು. ರಾಜ್ಯದ ಪಾಲಿನಲ್ಲಿ ಹತ್ತು ಟಿಎಂಸಿಯನ್ನು ರಾಜ­ಧಾನಿಯ ಬಳಕೆಗೆ ನಿಗದಿ ಮಾಡಲು ನಿರ್ಧರಿಸಲಾಗಿದೆ’ ಎಂದರು.ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ಪ್ರಕರಣ 2014ರ ಜನವರಿ 15ರಂದು ಸುಪ್ರೀಂ­ಕೋರ್ಟ್‌­ನಲ್ಲಿ ವಿಚಾರಣೆಗೆ ಬರಲಿದೆ. ಆಗ, ನಗರದ ನೀರಿನ ಬೇಡಿಕೆ ಕುರಿತು ನ್ಯಾಯಾಲಯದ ಗಮನಕ್ಕೆ ತರುವುದಕ್ಕೂ ತೀರ್ಮಾನಿಸಲಾಗಿದೆ ಎಂದು ಹೇಳಿದರು.ಪರ್ಯಾಯ ಮೂಲಗಳಿಂದ ಬೆಂಗಳೂರಿಗೆ ನೀರು ಪೂರೈಸುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಎತ್ತಿನಹೊಳೆ ಯೋಜನೆ, ಲಿಂಗನಮಕ್ಕಿ ಅಣೆಕಟ್ಟೆಯಿಂದ ನೀರು ಪೂರೈಕೆ ಹಾಗೂ ಕಾವೇರಿ ಕಣಿವೆಯಲ್ಲಿ ಇನ್ನೂ ಹಂಚಿಕೆಯಾಗದ ನೀರಿನ ಬಳಕೆ ಸಾಧ್ಯತೆ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)