ಭಾನುವಾರ, ಜನವರಿ 19, 2020
24 °C

ಬೆಂದು ಬದುಕಿದ ಛಲಗಾತಿ

ಸುನಿತಾ ಪಾಟೀಲ Updated:

ಅಕ್ಷರ ಗಾತ್ರ : | |

ಅವಳ ಹೆಸರು ಮಾಧವಿ. ಕಾಲೇಜಿನಲ್ಲಿ ಎಲ್ಲದರಲ್ಲೂ ಮುಂದೆ. ಎಲ್ಲ ಸ್ಪರ್ಧೆಗಳಲ್ಲಿ ಪ್ರಶಸ್ತಿ ಅವಳ ಪಾಲಿಗೆ..

ಆದರೆ ಯಾಕೋ ಕೆಲವರು ಅವಳ ಬಗ್ಗೆ ಆಡಿಕೊಳ್ಳುತ್ತಿದ್ದರು. ನಾನೂ ಕೂಡ ಅವಳ ಜತೆ ಅಷ್ಟಕ್ಕಷ್ಟೇ. ಒಮ್ಮೆ ಅವಳನ್ನು `ಗಂಡ ಬಿಟ್ಟವಳು~ ಎಂದು ಕಾಲೇಜಿನ ಹುಡುಗಿಯರು ಕೀಳಾಗಿ ಮಾತನಾಡಿದ್ದರು.

ಒಂದು ದಿನ ಅವಳ ಆತ್ಮೀಯ ಗೆಳತಿ ಮತ್ತು ನಾನು ಅನಿರೀಕ್ಷಿತವಾಗಿ ಭೇಟಿಯಾಗಿ ಮಾತಿಗಿಳಿದಾಗ ಮಾಧವಿಯ ಜೀವನದ `ಕತ್ತಲ ಪುಟ~ಗಳು ಬಿಚ್ಚಿಕೊಂಡವು.

ಎಂಟನೇ ತರಗತಿಯಲ್ಲಿರುವಾಗಲೇ ಮಾಧವಿಗೆ ಅವಳ ಸೋದರ ಮಾವನ ಜೊತೆ ಮದುವೆಯಾಗಿತ್ತು. ಆದರೆ ಅವಳಿಗೆ ಓದುವ ಹಂಬಲ. ಅಕ್ಷರದ ಬೆಲೆ ಗೊತ್ತಿರದ ಗಂಡನಿಗೆ ಅವಳ ಹಂಬಲ ಕೆಟ್ಟದ್ದಾಗಿ ಕಾಣಿಸಿತ್ತು. ಬೀದಿ ತಿರುಗುವ ಹೆಣ್ಣು, ಬಜಾರಿ ಎನ್ನುವಂತಹ ಚುಚ್ಚು ಮಾತಿನ ಜೊತೆ ಹೊಡೆಯುವುದು ಸಾಮಾನ್ಯವಾಗಿತ್ತು. ಕೆನ್ನೆ ಊದುವ ಹಾಗೆ ಹೊಡೆದರೂ ಕಾಲೇಜಿನಲ್ಲಿ ಅವಳ ನಗು ಮತ್ತು ಛಲದ ಮನೋಭಾವಕ್ಕೆ ಅವಳ ಅಂತರಾಳದ ದುಃಖ ಯಾರಿಗೂ ಗೊತ್ತಾಗುತ್ತಿರಲಿಲ್ಲ.

ಬೆಳಿಗ್ಗೆ ಬೇಗ ಎದ್ದು ಮನೆಯಲ್ಲಿ ಅಡುಗೆ, ಇತರ ಕೆಲಸ ಮಾಡಿ ಮುಗಿಸಿ ಕಾಲೇಜಿಗೆ ಹೋದರೂ ಅತ್ತೆ, ಮಾವ ಮತ್ತು ಅವಳ ಅಮ್ಮ ಎಲ್ಲರಿಗೂ ಇವಳ ಬಗ್ಗೆ ಕೀಳು ಭಾವ. ದುಡಿಯದ ಗಂಡನನ್ನು ದೇವನೆಂದು ಪೂಜಿಸುವಂತಹ ಮನೋಭಾವಕ್ಕೆ ಒತ್ತಾಯ. ಗಂಡನ ಕಿರುಕುಳಕ್ಕೆ ಒಳಗಾಗಿ ಅಳುತ್ತಿದ್ದರೂ, ಅವಳನ್ನು ಸಂತೈಸುವ ಹೃದಯ ಅಲ್ಲಿ ಇರಲಿಲ್ಲ.

ಇದರಿಂದ ಬೇಸತ್ತು ಅಪ್ಪನ ಮನೆಗೆ ಬಂದು ಕೆಲವೊಂದು ದಿನ ಅವರ ಮನೆಯಲ್ಲಿ ಉಳಿದು ಪದವಿ ಅಂತಿಮ ವರ್ಷ ಮುಗಿಸಿಕೊಳ್ಳಲು ಬೇಡಿಕೊಂಡಳು. ಗಂಡ ಬಿಟ್ಟಿದ್ದ ಹೆಣ್ಣಿಗೆ ಮನೆಯಲ್ಲಿ ಜಾಗ ಇಲ್ಲ ಎಂಬ ಮಾತಿನೊಂದಿಗೆ ಹೆತ್ತ ತಾಯಿಯೇ ಮನೆಯಿಂದ ಹೊರಹಾಕಿದರು. ಆಕಾಂಕ್ಷೆಗಳನ್ನು ಪೋಷಿಸದ ಗಂಡ, ಆಶ್ರಯ ನೀಡದ ತಂದೆ-ತಾಯಿಯ ವರ್ತನೆಯಿಂದ ನೊಂದ ಹೆಣ್ಣಿಗೆ ಸ್ನೇಹಿತೆಯ `ಸ್ಟಡಿ ರೂಮ್~ ನೆರಳಾಯಿತು.

ಅಲ್ಪಸ್ವಲ್ಪ ಕಲಿತಿದ್ದ ಕಂಪ್ಯೂಟರ್ ಜ್ಞಾನವನ್ನು ಆಧಾರವಾಗಿಟ್ಟುಕೊಂಡು ಕೆಲಸಕ್ಕೆ ಸೇರಿದಳು. ಮುಂದೆ ಕೆಲದಿನಗಳ ನಂತರ ಪ್ರತ್ಯೇಕ ಮನೆ ಮಾಡಿ ಕೆಲಸದ ಜೊತೆ ಪದವಿ ಶಿಕ್ಷಣ ಮುಗಿಸಿದಳು.

ಎರಡು ವರ್ಷ ಕಳೆದ ನಂತರ ಮಗಳ ಸ್ವಾಭಿಮಾನದ ಜೀವನ, ಗುರಿ ಸಾಧಿಸುವ ಛಲ, ಹಣ ಗಳಿಕೆಯ ಹಾದಿ ಕಂಡು ಅಪ್ಪ-ಅಮ್ಮ, ಮಾಧವಿಯ ತಮ್ಮನ ಪಿಯುಸಿ ಶಿಕ್ಷಣದ ಜವಾಬ್ದಾರಿಯನ್ನೂ ಅವಳಿಗೆ ಒಪ್ಪಿಸಿ ಹೋದರು.

ಜನ್ಮ ನೀಡಿದ ತಂದೆ-ತಾಯಿ ಮಾತಿಗೆ ಬೆಲೆ ಕೊಟ್ಟು ತಮ್ಮನ ಶಿಕ್ಷಣಕ್ಕೆ ಆಧಾರವಾಗಿ ನಿಂತಳು. ಕಷ್ಟದ ಸಂದರ್ಭದಲ್ಲಿ ಅವಳಿಗೆ ರಕ್ತ ಸಂಬಂಧ ದೂರವಾಗಿ ಅವಳ ಧೈರ್ಯ, ಛಲವೇ ಅವಳ ತಾಯಿಯಾಗಿ, ಗುರುವಾಗಿ ಸಮಾಧಾನ ನೀಡಿತ್ತು. ಈಗ ಅವಳೆಲ್ಲಿರುವಳೋ ಗೊತ್ತಿಲ್ಲ. . ಆ ಛಲಗಾರ್ತಿಯ ಜೀವನ ರೀತಿ-ನೀತಿ ಇತರರಿಗೂ ಮಾದರಿ ಆದೀತೆಂಬ ಆಶಯ ನನ್ನ ಮನದಲ್ಲಿದೆ.

ಪ್ರತಿಕ್ರಿಯಿಸಿ (+)