ಭಾನುವಾರ, ಮೇ 16, 2021
24 °C
ಮಲೆಮಹದೇಶ್ವರ, ಬಿಳಿಗಿರಿರಂಗನ ಸನ್ನಿಧಿಯಲ್ಲಿ ಸಾರ್ಥಕವಾದ ವಿಶ್ವ ಪರಿಸರ ದಿನಾಚರಣೆ

ಬೆಟ್ಟಗಳ `ಕಾವಲುಗಾರ'

ಪ್ರಜಾವಾಣಿ ವಿಶೇಷ ವರದಿ/ ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

ಯಳಂದೂರು: ಪರಿಸರ ದಿನಾಚರಣೆ ಎಂದಾಕ್ಷಣ ತಾಲ್ಲೂಕಿನ ಪರಿಸರ ಪ್ರಿಯರಿಗೆ ನೆನಪಾಗುವುದು ಬಿಳಿಗಿರಿರಂಗನ ಬೆಟ್ಟದ `ಏಟ್ರಿ (ಅಶೋಕ ಪರಿಸರ ಸಂಶೋಧನಾ ಹಾಗೂ ಸಂರಕ್ಷಣಾ ಸಂಸ್ಥೆ)' ಯಲ್ಲಿ ಸಹಾಯಕ ಸಂಶೋಧಕ ಪಿ. ನಾಗೇಂದ್ರ. ಪರಿಸರ ಸಂರಕ್ಷಣೆಯ ಬಗ್ಗೆ ಅಪಾರ ಶ್ರಮಪಟ್ಟ ಅವರು ಇಂದಿಗೂ ಅದನ್ನೇ ಮುಂದುವರಿಸಿದ್ದಾರೆ.ಪ್ಲಾಸ್ಟಿಕ್ ಮುಕ್ತ ಹಸಿರು ವನ ನಿರ್ಮಿಸಲು ಜಾಗೃತಿ, ಪ್ರವಾಸಿಗಳಿಗೆ ಮಾಲಿನ್ಯ ಮುಕ್ತ ವಾತಾವರಣ ನಿರ್ಮಾಣ, ಬಟ್ಟೆಯ ಬ್ಯಾಗ್ ಬಳಕೆಯಿಂದ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುವ ಬಗೆ, ಅನುಪಯುಕ್ತ ವಸ್ತುಗಳ ಮರು ಬಳಕೆ, ರಿಪೇರಿ ಮಾಡಿ ಬಳಸುವ ಮಹತ್ವ,  ಪ್ಲಾಸ್ಟಿಕ್ ಚೀಲಗಳ ಬಳಕೆ ತಪ್ಪಿಸುವುದು... ಹೀಗೆ ಒಂದಲ್ಲ ಒಂದು ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುವಲ್ಲಿ ಕ್ರಿಯಾಶೀಲ ರಾಗಿರುತ್ತಾರೆ ಜಾಗೇಂದ್ರ. ಇವರ ಪರಿಸರ ಪ್ರೇಮ ಗುರುತಿಸಿ ಸುತ್ತಲಿನ ನಾಲ್ಕು ಜಿಲ್ಲೆಗಳ ವಿವಿಧ ಸಂಘಟನೆಗಳು ಗೌರವಿಸಿವೆ.ಬಿಳಿಗಿರಿರಂಗನ ಬೆಟ್ಟದ ಚಿಕ್ಕ ಹೋಟೆಲ್ ಇಟ್ಟುಕೊಂಡಿರುವ ನಾಗೇಂದ್ರ ಉಳಿದ ಸಮಯವನ್ನು ಪರಿಸರ ಸಂರಕ್ಷಣೆಗಾಗಿ ಮೀಸಲಿಟ್ಟಿದ್ದಾರೆ. ಸಣ್ಣ ಆದಾಯದಲ್ಲೇ ಜೀವನೋಪಾಯ ಮಾಡುತ್ತಿರುವ ಅವರು, ತಾಲ್ಲೂಕಿನ ಪ್ರವಾಸಿ ತಾಣಗಳ ಸಂರಕ್ಷಣೆಗೆ ಸಜ್ಜಾಗಿ ನಿಂತಿದ್ದು ಇತರರಿಗೂ ಮಾದರಿಯಾಗಿದೆ.`ಏಟ್ರಿ' ಸಂಸ್ಥೆಯಲ್ಲಿ ಸಹಾಯಕ ಸಂಶೋಧಕ ರಾಗಿರುವ ಅವರು, ಬೆಟ್ಟಕ್ಕೆ ಬರುವ ವಿದೇಶಿ ಪ್ರವಾಸಿಗರಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ.ವೈವಿಧ್ಯಮಯ ಜಾಗೃತಿ

2005ರಿಂದಲೇ ಸಾರ್ವಜನಿಕರಿಗೆ ಪರಿಸರ ರಕ್ಷಣೆ ಕುರಿತ ಬೀದಿನಾಟಕಗಳು, ದೇಗುಲಕ್ಕೆ ಬರುವ ಭಕ್ತರಿಗೆ ವನಸುಮ, ಪ್ರಾಣಿ, ಪಕ್ಷಿಗಳ ಕುರಿತಾಗಿ ಮಾಹಿತಿ ನೀಡುವುದು. ಗಿರಿಜನ ಮಹಿಳೆಯರಿಗೆ ಕಾಡಿನ ಮಹತ್ವ ತಿಳಿಸಿ, ಪರಿಸರ ಸ್ನೇಹಿ ವಸ್ತುಗಳನ್ನು ತಯಾರಿಸಲು ತರಬೇತಿ ಆಯೋಜಿಸುವುದು. ಆ ಮೂಲಕ ಅವರ ಜೀವನಮಟ್ಟದ ಹೆಚ್ಚಳಕ್ಕೆ ನೆರವಾಗುತ್ತಿದ್ದಾರೆ. 6 ವರ್ಷಗಳಿಂದ ಬಿಆರ್‌ಟಿ ವನ್ಯಧಾಮದಲ್ಲಿ `ಪ್ಲಾಸ್ಟಿಕ್ ಬಳಕೆ ತಪ್ಪಿಸಿ, ಬಟ್ಟೆ ಬ್ಯಾಗ್ ಬಳಕೆ' ಬಗ್ಗೆ ಅರಿವು ಮೂಡಿಸಿ ಸಫಲರಾಗಿದ್ದಾರೆ.ಮಲೆಮಹದೇಶ್ವರ ಬೆಟ್ಟದಲ್ಲಿ 2, ಬಿಳಿಗಿರಿರಂಗನ ಬೆಟ್ಟದಲ್ಲಿ 2, ಕೋಣನಕೆರೆಯಲ್ಲಿ 1 ಮಳಿಗೆಗಳಲ್ಲಿ ಮಹಿಳೆಯರು ಬಟ್ಟೆ ಹಾಗೂ ಕಾಗದ ಚೀಲ ತಯಾರಿಸಿ ಮಾರಾಟ ಮಾಡುವ ಮಳಿಗೆ ತೆರೆದಿದ್ದಾರೆ.ಮಹಿಳೆಯರಿಗೆ ತರಬೇತಿ, ನೆರವುನಾಗೇಂದ್ರ

`ಏಟ್ರಿ' ನೆರವಿನೊಂದಿಗೆ ಮಹದೇಶ್ವರ ಬೆಟ್ಟದಲ್ಲಿ 100 ಮಹಿಳೆಯರು ಹಾಗೂ 300 ಮಕ್ಕಳ ಸಹಭಾಗಿತ್ವದಲ್ಲಿ ಪ್ಲಾಸ್ಟಿಕ್ ಮುಕ್ತ ವಲಯವಾಗಿಸಲು ನೆರವು ನೀಡಿದ್ದಾರೆ. ಈಗ ಮಹದೇಶ್ವರ ಬೆಟ್ಟದಲ್ಲಿಯೂ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಇದೆ. ಹಲವು ವರ್ಷಗಳಿಂದ ಮಹಿಳಾ ಸಂಘಗಳು ಬಟ್ಟೆ ಹಾಗೂ ಕಾಗದ ಚೀಲ ತಯಾರಿಸಿ ಮಾರಾಟ ಮಾಡಲೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಅವರ ತರಬೇತಿಗೂ ನಾಗೇಂದ್ರ ಸಹಾಯಕರಾಗಿದ್ದಾರೆ.`ಕಳೆದ ವರ್ಷ ಮಹದೇಶ್ವರ ಬೆಟ್ಟದಲ್ಲಿ ರಾಶಿ ಬಿದ್ದಿದ್ದ ಪ್ಲಾಸ್ಟಿಕ್ ಕಸ ವನ್ಯಪ್ರಾಣಿಗಳು ಹಾಗೂ ಜಾನುವಾರುಗಳ ಜೀವಕ್ಕೂ ಅಪಾಯ ತಂದಿತ್ತು. ಇದನ್ನು ಮನಗಂಡು ಸಂಘ-ಸಂಸ್ಥೆಗಳ ನೆರವಿನಿಂದ ಸ್ವಚ್ಛಗೊಳಿಸುವ ಯೋಜನೆ ರೂಪಿಸಿದೆವು. ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡು ಬೆಟ್ಟದ ಸುತ್ತಮುತ್ತಲ ಕಸಕಡ್ಡಿಯನ್ನು ಸಂಗ್ರಹಿಸಲಾಯಿತು.ಇದಕ್ಕಾಗಿ ಶಾಲೆ ಮಕ್ಕಳೂ ಕೈಜೋಡಿಸಿದರು. ಇದನ್ನು ಮನಗಂಡ ಅಂದಿನ ಜಿಲ್ಲಾಧಿಕಾರಿ ಕೆ. ಅಮರನಾರಾಯಣ ಅವರು ಹಲವು ಸಂಘ-ಸಂಸ್ಥೆಗಳ ಪ್ರಯೋಜಕರಿಂದ ನೆರವು ಪಡೆದು ಸಮರೋಪಾದಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡರು. ಇದರಿಂದ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ ನೆರವಾಯಿತು' ಎನ್ನುತ್ತಾರೆ ನಾಗೇಂದ್ರ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.