ಶುಕ್ರವಾರ, ಮೇ 7, 2021
19 °C

ಬೆಳಕಿಲ್ಲದ ಬೆಂಕಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರ: ಹೇಟ್ ಸ್ಟೋರಿ

ನಾಯಕಿ ಪ್ರಧಾನ ಚಿತ್ರಗಳತ್ತ ಹಿಂದಿ ಚಿತ್ರರಂಗ ಇತ್ತೀಚೆಗೆ ಹೆಚ್ಚು ಒಲವು ತೋರುತ್ತಿದೆ. ನಾಯಕಿಯನ್ನೇ ಮುಖ್ಯ ಭೂಮಿಕೆಯಲ್ಲಿರಿಸಿಕೊಂಡ ಚಿತ್ರಗಳು ಗೆಲುವು ಕಂಡಿರುವುದು ಇದಕ್ಕೆ ಕಾರಣ. ವಿದ್ಯಾಬಾಲನ್‌ರ `ಕಹಾನಿ~ ಇದಕ್ಕೆ ಉತ್ತಮ ಉದಾಹರಣೆ. ಆದರೆ ನಾಯಕಿ ಪ್ರಧಾನ ಚಿತ್ರದಲ್ಲಿ ಕಥೆಯೂ ಮುಖ್ಯ ಎಂಬುದನ್ನು ಮರೆತಂತಿರುವ ಚಿತ್ರ `ಹೇಟ್ ಸ್ಟೋರಿ~.ಅಸಂಬದ್ಧ ಚಿತ್ರಕಥೆ ಮತ್ತು ಅಸಹಜ ಘಟನಾವಳಿಗಳ ನಡುವೆ ಸೇಡಿನ ಕಥೆಯೊಂದು ನೀರಸವಾಗಿ ತೆರೆದುಕೊಳ್ಳುತ್ತದೆ. ಪ್ರತೀಕಾರದ ಕಿಡಿಯ ಹಿನ್ನೆಲೆಯಲ್ಲಿ ರೋಮಾಂಚನಕಾರಿ ಕಥಾನಕವಿದೆ ಎಂದು ನಿರೀಕ್ಷಿಸಿದ್ದವರಿಗೆ ಎದುರಾಗುವುದು ನಾಯಕಿಯ ದೇಹ ಪ್ರದರ್ಶನ ಮತ್ತು ಸಂಬಂಧವೇ ಇಲ್ಲದ ದೃಶ್ಯಗಳ ಹೆಣಿಗೆ. 80ರ ದಶಕದ ಚಿತ್ರಗಳ ಎಳೆಯೊಂದನ್ನಿಟ್ಟುಕೊಂಡಂತಿರುವ ಮಹೇಶ್ ಭಟ್ ಅವರ ಚಿತ್ರಕಥೆಯಲ್ಲಾಗಲೀ, ಪೇಲವ ಸನ್ನಿವೇಶಗಳನ್ನು ಸೃಷ್ಟಿಸುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ನಿರ್ದೇಶನದಲ್ಲಾಗಲೀ ಚಿತ್ರವನ್ನು ಕುತೂಹಲಕಾರಿಯಾಗಿಸುವ ಪ್ರಯತ್ನವೇ ಕಾಣುವುದಿಲ್ಲ.ಬುದ್ಧಿವಂತ ಪತ್ರಕರ್ತೆ ಎಂದು ಹೆಸರು ಗಳಿಸುವ ನಾಯಕಿಯ ದಡ್ಡತನ ಕಥೆ ದಿಕ್ಕು ತಪ್ಪುವುದನ್ನು ಆರಂಭದಲ್ಲೇ ಸೂಚಿಸುತ್ತದೆ. ಸಿಮೆಂಟ್ ಕಂಪೆನಿಯೊಂದರ ಅವ್ಯವಹಾರದ ಕುರಿತು `ಸ್ಟಿಂಗ್ ಆಪರೇಷನ್~ ಮಾಡುವ ನಾಯಕಿ, ಮುಂದೆ ಅದೇ ಕಂಪೆನಿಯ ಆಹ್ವಾನವನ್ನು ಒಪ್ಪಿಕೊಂಡು ಅಲ್ಲಿ ಕೆಲಸಕ್ಕೆ ಸೇರಿಕೊಳ್ಳುವುದು ನಿರ್ದೇಶಕರ `ವಿವೇಕ~ದ ಬಗ್ಗೆ ಪ್ರಶ್ನೆ ಮೂಡಿಸುತ್ತದೆ. ಕಂಪೆನಿ ಮಾಲೀಕನಿಂದ ಅನ್ಯಾಯಕ್ಕೊಳಗಾಗಿ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಆಕೆ ವೇಶ್ಯಾವೃತ್ತಿ ಆಯ್ಕೆ ಮಾಡಿಕೊಳ್ಳುವುದು ತೀರಾ ಬಾಲಿಶವೆನಿಸುತ್ತದೆ. ಥ್ರಿಲ್ಲರ್ ಚಿತ್ರಕ್ಕೆ ಮಸಾಲೆಯಿರಬೇಕು ಎನ್ನುವ ಅಲಿಖಿತ ನಿಯಮವೂ ಈ ವೇಶ್ಯೆ ಪಾತ್ರದ ಸೃಷ್ಟಿಯ ಹಿಂದಿನ ಉದ್ದೇಶವಿರಬಹುದು. ಆದರೆ ಮಸಾಲೆಯ ಘಾಟು ತುಸು ಹೆಚ್ಚಾಗಿಯೇ ಇದೆ.ನಿರೂಪಣೆಯಲ್ಲಿನ ವೇಗ ಈ ಎಲ್ಲಾ ಕೊರತೆಗಳ ನಡುವೆಯಿರುವ ಸಮಾಧಾನದ ಸಂಗತಿ. ಸಂಭಾಷಣೆಯಲ್ಲೂ ಹಿಡಿತ ತಪ್ಪುವ ಪಾತ್ರಗಳನ್ನು ನಿಭಾಯಿಸುವಲ್ಲಿ ಕಲಾವಿದರ ಶ್ರಮ ಎದ್ದುಕಾಣುತ್ತದೆ. ಪ್ರಾರಂಭದಲ್ಲಿ ತಂಗಾಳಿಯಂತೆ ಕಾಣುವ ನಟಿ ಪವೊಲಿ ದಾಮ್ ಇದ್ದಕ್ಕಿದ್ದಂತೆ ಬಿಸಿಗಾಳಿಯಾಗುತ್ತಾರೆ. ಕಥೆಯಲ್ಲಿನ ಸೇಡಿನ ಕಿಡಿ ಅದರೊಟ್ಟಿಗೆ ಸೇರಿ ಬೆಂಕಿಯಾಗಿ ಹೊತ್ತಿ ಉರಿಯುವುದರಿಂದ ಅದರ `ಬಿಸಿ~ ಪ್ರೇಕ್ಷಕನಿಗೂ ಮುಟ್ಟುತ್ತದೆ.ಅಭಿನಯ ಮತ್ತು ದೇಹಸಿರಿ ಪ್ರದರ್ಶನ ಎರಡರಲ್ಲೂ ಪವೊಲಿ ತಮ್ಮ ಮೊದಲ ಚಿತ್ರದಲ್ಲೇ ನಾಲ್ಕು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಖಳನಾಯಕ ಗುಲ್ಷನ್ ದೇವಯ್ಯ ಭಾವನೆಗಳನ್ನು ವ್ಯಕ್ತಪಡಿಸಲು ತಿಣುಕಾಡುತ್ತಾರೆ. ನಿಖಿಲ್ ದ್ವಿವೇದಿ ನಟನೆಯಲ್ಲಿ ತಲ್ಲೆನತೆ ಇದೆ. ಈ ಮೂರು ಪಾತ್ರಗಳ ನಡುವೆ ಕೇಂದ್ರೀಕೃತವಾಗುವುದರಿಂದ ಉಳಿದ ಪಾತ್ರಗಳು ಅವಗಣನೆಗೆ ಒಳಗಾಗುತ್ತವೆ.ಹರ್ಷಿತ್ ಸಕ್ಸೇನಾ ಸಂಗೀತ ಮತ್ತು ಅತ್ತರ್ ಸಿಂಗ್ ಸೈನಿ ಛಾಯಾಗ್ರಹಣ ಮರುಭೂಮಿಯಲ್ಲಿನ ಓಯಸಿಸ್‌ನಂತೆ.ಕಥೆಯಲ್ಲಿನ ಕಾವು ಮತ್ತು ಆ ಕಾವನ್ನು ಹೆಚ್ಚಿಸುವ ನಾಯಕಿಯ ಕಾರಣದಿಂದಾಗಿ `ಹೇಟ್ ಸ್ಟೋರಿ~ ಸಿನಿಮಾ ಬೆಂಕಿಯಂತೆ ಕಾಣಿಸುತ್ತದೆ. ಆದರದು, ಅರಿವಿನ ಬೆಳಕನ್ನು ಹೊಮ್ಮಿಸಲಾಗದ ಬರೀ ಉರಿಯನ್ನಷ್ಟೇ ಹೊಂದಿರುವ ಬೆಂಕಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.