ಗುರುವಾರ , ಮೇ 26, 2022
23 °C

ಬೆಳಗಾವಿಯಲ್ಲಿ ಅಧಿವೇಶನ ಅಸಾಧ್ಯ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿಯಲ್ಲಿ ಅಧಿವೇಶನ ಅಸಾಧ್ಯ: ಸಿಎಂ

ಬೆಳಗಾವಿ: ಸುವರ್ಣಸೌಧ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆದಿಲ್ಲ. ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಆದ್ದರಿಂದ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸ್ಪಷ್ಟಪಡಿಸಿದರು.`ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ವಿಧಾನಮಂಡಲ ಅಧಿವೇಶನ ನಡೆಸಬೇಕಾಗಿದೆ. ಅಷ್ಟರೊಳಗೆ ಕಟ್ಟಡ ಪೂರ್ಣಗೊಳ್ಳುವುದಿಲ್ಲ. ಮಾರ್ಚ್ 15 ರೊಳಗೆ ಕಟ್ಟಡ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ~ ಎಂದು ಅವರು ಸೊಮವಾರ ಸುದ್ದಿಗಾರರಿಗೆ ತಿಳಿಸಿದರು.`ಬೆಳಗಾವಿಯಲ್ಲಿ ಪರ್ಯಾಯ ಕಟ್ಟಡದಲ್ಲಿ ಅಧಿವೇಶನ ಮಾಡುವ ಸಾಧ್ಯತೆಗಳು ಕಡಿಮೆ. ಈ ಕುರಿತು ಅ.13 ರಂದು ನಡೆಯುವ ಸಚಿವ ಸಂಪುಟದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು~ ಎಂದು ಅವರು ಹೇಳಿದರು.`ಸುವರ್ಣಸೌಧ ಕಟ್ಟಡದ ಕಾಮಗಾರಿ ಗುಣಮಟ್ಟದ್ದಾಗಿದೆ. ನಿರೀಕ್ಷಿಸಿದ ವೇಗದಲ್ಲಿ ಆಗಿಲ್ಲ. ವಿದ್ಯುತ್, ಸ್ಕೇಪಿಂಗ್, ಪೀಠೋಪಕರಣ ಕಾಮಗಾರಿ ಕೈಗೆತ್ತಿಕೊಳ್ಳುವಲ್ಲಿ ಸರ್ಕಾರದಿಂದ ವಿಳಂಬವಾಗಿದೆ. ಕಾಮಗಾರಿ ವಿಳಂಬಕ್ಕೆ ಸರ್ಕಾರವೇ ಹೊಣೆಯಾಗಿದೆ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.`ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಈಗಾಗಲೇ 14 ಕೋಟಿ ರೂಪಾಯಿ ಪಾವತಿಸಲಾಗಿದೆ. ಆದರೆ ಕೆಲಸ ಪ್ರಾರಂಭವಾಗಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿ ಹತ್ತು ದಿನಕ್ಕೊಮ್ಮೆ ಸುವರ್ಣಸೌಧ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.`ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಿಗೆ ಎರಡು ಬಾರಿ ಆಯಾ ಜಿಲ್ಲೆಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಿದ್ದೇನೆ. ಕಡತಗಳನ್ನು 15 ದಿನಗಳಲ್ಲಿ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ~ ಎಂದು ಅವರು ತಿಳಿಸಿದರು.`ಲೋಕಾಯುಕ್ತರು ನೀಡಿದ್ದ ಗಣಿ ವರದಿ ಕುರಿತು ಅಧ್ಯಯನ ನಡೆಸಲು ರಚಿಸಲಾಗಿದ್ದ ಸಮಿತಿಯು ಈ ವಾರದಲ್ಲಿ ವರದಿ ನೀಡಲಿದೆ. ಆ ಬಗೆಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು~ ಎಂದರು.`ಕರ್ನಾಟಕದಲ್ಲಿ ಕನ್ನಡಕ್ಕೇ ಅಗ್ರಸ್ಥಾನ. ಹಾಗೆಂದು ನಾವು ಯಾವುದೇ ಭಾಷೆಯ ವಿರುದ್ಧ ಇಲ್ಲ. ಭಾಷಾ ವಿಷಯದಲ್ಲಿ ಸಹಕಾರ ನೀಡಬೇಕು ಎಂದು ಕೇರಳ ಹಾಗೂ ಮಹಾರಾಷ್ಟ್ರ ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ~ ಎಂದು ಅವರು ಹೇಳಿದರು.ಸಚಿವರಾದ ಸಿ.ಎಂ. ಉದಾಸಿ, ಉಮೇಶ ಕತ್ತಿ, ಲಕ್ಷ್ಮಣ ಸವದಿ, ಬಾಲಚಂದ್ರ ಜಾರಕಿಹೊಳಿ ಮತ್ತಿತರರು ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.