ಶುಕ್ರವಾರ, ಮೇ 14, 2021
29 °C

ಬೆಳೆನಾಶ: ನಷ್ಟ ತುಂಬಿಕೊಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ: ಗಣಿ ದೂಳಿನಿಂದ ಆದ ಬೆಳೆಹಾನಿ ನಷ್ಟ ತುಂಬಿಕೊಡುವಂತೆ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಹಾಗೂ ಗಣಿಭಾಗದ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಸೊಂಡೇನಹಳ್ಳಿ ಹಾಗೂ ಗುಬ್ಬಿ ಸುತ್ತಮುತ್ತಲಿನ ನೂರಾರು ರೈತರು ಸೋಮವಾರ ಧರಣಿ ನಡೆಸಿದರು.ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಾಮಾಜಿಕ ಪರಿವರ್ತನ ಸಂಸ್ಥೆಯ ಗುಬ್ಬಿ ತಾಲ್ಲೂಕು ಘಟಕದ ಸದಸ್ಯೆ ನಾಗರತ್ನಮ್ಮ ಮಾತನಾಡಿ, ತಾಲ್ಲೂಕಿನಲ್ಲಿ ಗಣಿಯಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಸ್ಪಂದಿಸಿಲ್ಲ. ಗಣಿಯಿಂದ ಅಂತರ್ಜಲ ಕುಸಿಯುತ್ತಿದೆ. ಜನ ಸಾಮಾನ್ಯರಿಗೆ ಇದರಿಂದ ಬಹಳ ಸಮಸ್ಯೆ ಉಂಟಾಗುತ್ತಿದೆ ಎಂದು ನುಡಿದರು.ಗಣಿ ಭಾಗದ ಪ್ರದೇಶದ ಸುತ್ತಲೂ ಅಂತರ್ಜಲ ಕುಸಿದಿದೆ. ತೆಂಗು, ಅಡಿಕೆ, ಬಾಳೆ, ತೋಟಗಳು ಒಣಗಿದ್ದವು. ಈಗ ಮಳೆ ಬೀಳುತ್ತಿದ್ದರೂ ಗಣಿದೂಳಿನಿಂದಾಗಿ ಮಳೆಯಾಶ್ರಿತ ಬೆಳೆಗಳನ್ನೂ ಬೆಳೆಯದ ಅಸಹಾಯಕ ಸ್ಥಿತಿ ತಲುಪಿದ್ದಾರೆ. ಗಣಿಗಳಲ್ಲಿ ಕಬ್ಬಿಣದ ಅದಿರು ತೆಗೆಯಲು ಸ್ಫೋಟಕಗಳನ್ನು ಬಳಸಿದ ಕಾರಣ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ, ತುಂಬಾ ತೊಂದರೆಯಾಗಿದೆ. ಈ ಕುರಿತು ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ಈಗಾಗಲೆ ಅಕ್ರಮ ಗಣಿಗಾರಿಕೆ ತಡೆಯಲು ಕಾರ್ಯಪಡೆ ರಚಿಸಲಾಗಿದೆ. ಆದರೆ ಇದರ ನಡಾವಳಿಯನ್ನು ಅಧಿಕಾರಿಗಳು ಇಲ್ಲಿಯವರೆಗೆ ಜಾರಿಗೆ ತಂದಿಲ್ಲ. ಗಣಿ ಲಾರಿಗಳು ಗ್ರಾಮದ ಒಳಗೆ  ಹೋಗುವುದರಿಂದ ಗ್ರಾಮಗಳ ಮನೆಗಳ ಮೇಲೆಲ್ಲ ದೂಳು ಅಡರಿ ಉಬ್ಬಸದಂಥ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ.ಗಣಿ ಪ್ರದೇಶದಲ್ಲಿ ಕುಡಿಯುವ ನೀರು, ಆಸ್ಪತ್ರೆ, ಶಾಲೆ, ಕಾಂಕ್ರೀಟ್ ರಸ್ತೆ ನಿರ್ಮಿಸಲು ಹಣ ಬಿಡುಗಡೆಯಾಗಿದೆ. ಇಲ್ಲಿಯವರೆಗೆ ಸಮರ್ಪಕ ಕಾಮಗಾರಿಗಳು ನಡೆದಿಲ್ಲ ಎಂದು ಗಣಿಗಾರಿಕೆಗೆ ತುತ್ತಾಗಿರುವ ಗ್ರಾಮಗಳ ಜನ ಆರೋಪಿಸಿದರು. ಲಾರಿಗಳಲ್ಲಿ ಕಬ್ಬಿಣದ ಅದಿರು ಸಾಗಿಸುವಾಗ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಲಾರಿಗಳು ಚಲಿಸುವಾಗ ಹೆಚ್ಚನ ದೂಳು ಆವೃತವಾಗುವುದನ್ನು ತಡೆಗಟ್ಟಲು ನೀರು ಸಿಂಪಡಿಸುವಂತೆ ರೈತರು ಒತ್ತಾಯಿಸಿದ್ದಾರೆ.ಮೈನ್ಸ್ ಮಾಲೀಕರು ಮಧ್ಯವರ್ತಿಗಳಿಗೆ ಪ್ರತಿ ಲಾರಿಗೆ ರೂ 350 ಹಣ ನೀಡಿ ನ್ಯಾಯ ಕೇಳಲು ಹೋದವರ ಮೇಲೆ ಗೂಂಡಾಗಿರಿ ನಡೆಸುತ್ತಾರೆ. ಗಣಿ ವಿಷಯದ ಬಗ್ಗೆ ಚರ್ಚಿಸಿದರೆ ಗಣಿ ಮಾಲೀಕರು ಸುಳ್ಳು ಮೊಕದ್ದಮೆ ದಾಖಲಿಸಿ, ರೈತರಿಗೆ ಬೆದರಿಕೆ ಹಾಕುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದರು.ಗ್ರಾ.ಪಂ. ಸದಸ್ಯ ತಮ್ಮೇಗೌಡ ಮಾತನಾಡಿ, ಸುಪ್ರಿಂಕೋಟ್ ಆದೇಶದಂತೆ ಸ್ಥಳೀಯರಿಗೆ ಉದ್ಯೋಗ ಹಾಗೂ ನಾರ್ಸಿಹಳ್ಳಿ ಭಾಗದಲ್ಲಿ ಸಿಮೆಂಟ್ ರಸ್ತೆ ಮುಂತಾದ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಿಲ್ಲ. ಶೀಘ್ರ ಗ್ರಾಮಗಳಲ್ಲಿ ಸೇವಾ ರಸ್ತೆ ನಿರ್ಮಿಸಬೇಕು. ಜಮೀನು ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರುಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಕಾಮಾಕ್ಷಮ್ಮ, ರೈತರು ನೀಡಿದ ಮನವಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ತಿಳಿಸಿದರು. ಶೀಘ್ರ ಗಣಿ ಮಾಲೀಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಹಾಗೂ ಪರಿಸರ ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದರು.ಮುಖಂಡರಾದ ನಂಜುಂಡಪ್ಪ, ವಸಂತಕುಮಾರ್, ಯೋಗಿ, ಪ್ರಕಾಶ್, ಹನುಮಂತಯ್ಯ, ಲಕ್ಷಯ್ಯ ಗೋಡೆಕೆರೆ ಶಿವಲಿಂಗಮೂರ್ತಿ, ಸೊಂಡೇನಹಳ್ಳಿ ಪಾಲಣ್ಣ, ಧರ್ಮಪಾಲ್, ಬಸವರಾಜು, ನರಸಿಂಹಮೂರ್ತಿ, ಚಿದಾನಂದಮೂರ್ತಿ, ಚಿಕ್ಕಣ್ಣ, ಕುಮಾರ್, ಕೆಂಪಯ್ಯ, ತಿಮ್ಮೇಗೌಡ, ಎಸ್.ಎನ್.ಬಸವರಾಜು, ನರಸಿಂಹಯ್ಯ, ತಮ್ಮಯ್ಯ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.