ಭಾನುವಾರ, ಜನವರಿ 19, 2020
27 °C

ಬೆಳೆ ಸಾಲುಗಳಲ್ಲಿ ಅಂತರವಿರಲಿ: ಪಾಳೇಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಬೆಳೆಗಳ ಸಾಲುಗಳಲ್ಲಿ ಹೆಚ್ಚಿನ ಅಂತರವಿದ್ದರೆ ದುಪ್ಪಟ್ಟು ಉತ್ಪನ್ನ ದೊರೆಯುತ್ತದೆ. ನೀರಿನ ಕೊರತೆ ಇರುವಲ್ಲಿ ಹೀಗೆ ಹೆಚ್ಚಿನ ಅಂತರದಲ್ಲಿ ಕಬ್ಬು ಬೆಳೆದರೆ ಕಡಿಮೆ ಪ್ರಮಾಣದ ನೀರಿನಿಂದ ಉತ್ತಮ ಬೆಳೆ ತೆಗೆಯಬಹುದು ಎಂದು ಕೃಷಿ ತಜ್ಞ ಸುಭಾಷ ಪಾಳೇಕರ್ ಹೇಳಿದರು.ತಾಲ್ಲೂಕಿನ ಹುಲಸೂರ ಗುರುಬಸವೇಶ್ವರ ಸಂಸ್ಥಾನ ಮಠದಲ್ಲಿ ಶುಕ್ರವಾರ ಲಿಂ.ಬಸವಕುಮಾರ ಶಿವಯೋಗಿಗಳ ಜನ್ಮ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡ ನೈಸರ್ಗಿಕ ಕೃಷಿ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.ಸಾಲುಗಳ ಮಧ್ಯೆ ಜಾಗ ಬಿಟ್ಟರೆ ಬಿದಿರಿನ ಬಂಬೂಗಳಂತಹ ಕಬ್ಬು ಬೆಳೆಯಬಹುದು. ಎಂಥ ದಟ್ಟ ಬಿತ್ತನೆ ಮಾಡಿದರೂ ಎಕರೆಯಲ್ಲಿ 40 ಸಾವಿರ ಕಬ್ಬುಗಳು ಮಾತ್ರ ಬೆಳೆಯಬಹುದು. ಅಂತರ ಬಿಟ್ಟರೂ ಇಷ್ಟೇ ಸಂಖ್ಯೆಯ ಕಬ್ಬುಗಳು ಬರುತ್ತವೆ. ಇದಲ್ಲದೆ ಮಧ್ಯದಲ್ಲಿನ ಜಾಗದಲ್ಲಿ ಬೇರೆ ಬೆಳೆಯನ್ನು ಬೆಳೆಯಬಹುದು. ಹೀಗೆ ಅಂತರ ಬೆಳೆ ಬೆಳೆದ ರೈತರು ಎಕರೆಗೆ 105 ಟನ್‌ವರೆಗೆ ಕಬ್ಬಿನ ಇಳುವರಿ ಪಡೆದುಕೊಂಡಿದ್ದಾರೆ.ಮೂರು ಅಡಿಗಳಷ್ಟು ಅಂತರವಿದ್ದರೆ ಒಳಗೆ ಹೋಗಲು ಬರುವುದಿಲ್ಲ. ಆದ್ದರಿಂದ 6-8 ಅಡಿ ಜಾಗ ಬಿಡುವುದು ಉತ್ತಮ. ಇಂಥ ಪದ್ಧತಿಯಿಂದ 100 ಲೀಟರ್ ನೀರು ಹತ್ತುವಲ್ಲಿ ಕೇವಲ 10 ಲೀಟರ್ ನೀರು ಬಳಕೆ ಮಾಡಿ ಕಬ್ಬು ಬೆಳೆಯಬಹುದು ಎಂದು ಹೇಳಿದರು.ಇದಲ್ಲದೆ ಕಬ್ಬು ಹಾಗೂ ಇತರೆ ಬೆಳೆಗಳನ್ನು ಸೂರ್ಯನ ಶಕ್ತಿ ಸರಿಯಾಗಿ ದೊರೆಯುವಂತೆ ಬಿತ್ತಬೇಕು. ಸೂರ್ಯ ವರ್ಷದ ಅರ್ಧದಷ್ಟು ದಿನ ಉತ್ತರಾಯಣ ಮತ್ತು ಇನ್ನರ್ಧದಷ್ಟು ದಿನ ದಕ್ಷಿಣಾಯನವಾಗಿ ಚಲಿಸುವುದರಿಂದ ಪೂರ್ವ ಪಶ್ಚಿಮವಾಗಿ ಬಿತ್ತನೆ ನಡೆಸಬಾರದು. ದಕ್ಷಿಣೋತ್ತರವಾಗಿ ಬಿತ್ತನೆ ಮಾಡುವುದರಿಂದ ಸೂರ್ಯನ ಬೆಳಕು ಸರಿಯಾಗಿ ದೊರಕುತ್ತದೆ. ಆದ್ದರಿಂದ ಕಬ್ಬು, ಮಾವು, ಬಾಳೆಹಣ್ಣು, ದ್ರಾಕ್ಷಿ ಹೀಗೆಯೇ ಬೆಳೆಯಬೇಕು ಎಂದು ಸಲಹೆ ಕೊಟ್ಟರು.

 

ಇದಲ್ಲದೆ ಬೀಜಕ್ಕಾಗಿ ಬೇರೆಯವರ ಮೇಲೆ ಅವಲಂಬಿಸದೆ ತಾವೇ ಸ್ವತಃ ಬೀಜವನ್ನು ಸಿದ್ಧಪಡಿಸಬೇಕು. 1 ಎಕರೆ ಕಬ್ಬು ಇದ್ದಾಗ 1 ಗುಂಟೆಯಲ್ಲಿ ಬೀಜದ ಪ್ಲಾಟ್ ಮಾಡಬೇಕು. ಹೀಗೆ ಮಾಡುವುದರಿಂದ ಬೀಜಕ್ಕಾಗಿ ಪರದಾಡುವುದು ನಿಲ್ಲುತ್ತದೆ. ಉತ್ಪನ್ನವೂ ಹೆಚ್ಚುತ್ತದೆ ಎಂದು ಪಾಳೇಕರ್ ತಿಳಿಸಿದರು.ಯಾವುದೇ ಬೆಳೆಗೆ ಕೀಟನಾಶಕಗಳ ಹಾವಳಿಯಾದರೆ ಬ್ರಹ್ಮಾಸ್ತ್ರ, ನೀಮಾಸ್ತ್ರ, ಅಗ್ನಿ ಅಸ್ತ್ರ ಉಪಯೋಗಿಸಬೇಕು. 10 ಲೀಟರ್ ಗೋಮೂತ್ರದಲ್ಲಿ 5 ಕೆಜಿ ಬೀವಿನ ಎಲೆ, 2 ಕೆಜಿ ಹೊಂಗೆ, 2 ಕೆಜಿ ಸೀತಾಫಲ, 2 ಕೆಜಿ ಬಿಲ್ವಪತ್ರೆ, ಮದಗುಣಕಿ ಎಲೆ ಹಾಕಿ ಕಲಿಸಿ ಉಕ್ಕುವವರೆಗೆ ಕುದಿಸಬೇಕು. ಅದು ತಣ್ಣದಾಗ 48 ಗಂಟೆ ನಂತರ 100 ಲೀಟರ್ ನೀರಿಗೆ 2 ಲೀಟರ್ ದ್ರಾವಣ ಹಾಕಿ ಸಿಂಪಡಣೆ ಮಾಡಬೇಕು.

ಕೀಟಗಳು ಮಾಯವಾಗುತ್ತವೆ. ಎಲ್ಲವೂ ನಿಸರ್ಗದಿಂದಲೇ ಪಡೆಯಬೇಕು. ಯಾವುದನ್ನೂ ಖರೀದಿಸುವ ಅಗತ್ಯವಿಲ್ಲ. ರಾಸಾಯನಿಕ ಮತ್ತು ಸಾವಯವ ಕೃಷಿ ಕೈಗೊಂಡರೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಬೆಳೆಯೂ ಸರಿಯಾಗಿ ಬರುವುದಿಲ್ಲ ಎಂಬುದು ಗಮನದಲ್ಲಿರಲಿ ಎಂದರು. ರೈತ ಮುಖಂಡ ಚಂದ್ರಶೇಖರ ಕಾಡಾದಿಯವರು ಪಾಳೇಕರ್ ಅವರ ಭಾಷಣವನ್ನು ಕನ್ನಡದಲ್ಲಿ ಅನುವಾದಿಸಿದರು. ವಿವಿಧೆಡೆಯ ರೈತರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)