ಮಂಗಳವಾರ, ಮೇ 24, 2022
26 °C

ಬೆಳ್ಳಿಹಬ್ಬಕ್ಕೆ `ಬಹುಪರಾಕ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ನಿರ್ದೇಶಕ ಸುನಿಲ್, ಶ್ರೀನಗರ ಕಿಟ್ಟಿಗೆ ಜೈಕಾರ ಹೇಳಿಸಲು ಹೊರಟಿದ್ದಾರೆ. ಆದರೆ ಜೈಕಾರ ಪ್ರೇಕಕರಿಂದಲೋ ಇಲ್ಲ ಚಿತ್ರತಂಡದಿಂದಲೋ ಎನ್ನುವ ಗುಟ್ಟನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ. ಚಿತ್ರದ ಕ್ಲೈಮ್ಯಾಕ್ಸ್ ನಂತರ ಯಾರಿಂದ ಯಾರಿಗೆ ಜಯಕಾರ ಎನ್ನುವುದು ಸ್ಪಷ್ಟವಾಗಲಿದೆ.`ಮೊದಲ ಚಿತ್ರವನ್ನು ಶ್ರೀನಗರ ಕಿಟ್ಟಿಗೆ ಮಾಡುವ ಆಸೆಯಿತ್ತು. ಆ ಆಸೆ ಈಗ ಈಡೇರುತ್ತಿದೆ' ಎಂದು `ಬಹುಪರಾಕ್'ನ ಪ್ರವರವನ್ನು ಬಿಚ್ಚಿಟ್ಟರು ಸುನಿಲ್. ಅಂದಹಾಗೆ, `ಬಹುಪರಾಕ್' ಕಿಟ್ಟಿ ಅವರ 25ನೇ ಚಿತ್ರ. ಹದವಾಗಿ ತಟ್ಟುವ ಡೈಲಾಗ್‌ಗಳ ಮೂಲಕ ಪಡ್ಡೆಗಳನ್ನು ಸೆಳೆಯುವ ಕಲೆ ಕರಗತ ಮಾಡಿಕೊಂಡಿರುವ ಸುನಿಗೆ `ಬಹುಪರಾಕ್'ನಲ್ಲೂ ಅದೇ ಬಂಡವಾಳ. ನಾಯಕನಿಂದ ಚಿನಕುರಳಿ ರೀತಿಯ ಡೈಲಾಗ್‌ಗಳನ್ನು ಅವರು ಸಿಡಿಸಿದ್ದಾರಂತೆ. ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಮೂರು ಆಯಾಮಗಳಿವೆ. ನಾಯಕಿಯ ಪಾತ್ರಕ್ಕೂ ಎರಡು ಛಾಯೆಗಳಿವೆ. ಉತ್ತರ ಕರ್ನಾಟಕ, ಮೈಸೂರು ಮತ್ತು ಉಡುಪಿಯಲ್ಲಿ ಚಿತ್ರೀಕರಣ ಸಾಗಲಿದೆ. ನಿರ್ಮಾಪಕರ ಮನೋಭಾವದಂತೆ ಚಿತ್ರ ಕಮರ್ಷಿಯಲ್ ಆಗಿದ್ದರೂ ಅದಕ್ಕೆ ಕಲಾತ್ಮಕ ಸ್ಪರ್ಶ ಇರಲಿದೆ ಎನ್ನುವುದು ನಿರ್ದೇಶಕರ ಮಾತು.`ತಾವು ನಿರ್ವಹಿಸಲಿರುವ ಪಾತ್ರದ ಮೂರು ಶೇಡ್‌ಗಳಿಗೂ ಅದರದ್ದೇ ಆದ ಆಳ, ಆಲೋಚನೆ ಇದೆ. ತಮ್ಮ ಚಿತ್ರ ಬದುಕಿನ ಹಲವು ಸಿನಿಮಾಗಳು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ಬಹುಪರಾಕ್' ಎಂದು ಕಿಟ್ಟಿ ಹೇಳಿಕೊಂಡರು.ಕಿಟ್ಟಿಗೆ ನಾಯಕಿಯಾಗಿ ಮೇಘನಾ ರಾಜ್ ನಟಿಸುತ್ತಿದ್ದಾರೆ. ನಿರ್ದೇಶಕರ ಕಥೆ ಕಟ್ಟುವ ಮತ್ತು ಹೇಳುವ ಕಲೆಯಿಂದ ಮೇಘನಾ ಪ್ರಭಾವಿತರಾಗಿದ್ದಾರಂತೆ.`ಚಿತ್ರದಲ್ಲಿ ಏಳು ಹಾಡುಗಳಿವೆ. ಶಿಶುನಾಳ ಷರೀಫರ ಗೀತೆಯೊಂದನ್ನು ತುಸು ಮಾರ್ಪಾಡಿನೊಂದಿಗೆ ಬಳಸಿಕೊಳ್ಳಲಾಗುತ್ತಿದೆ. `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ಗೌರವ ಪಾತ್ರಧಾರಿ. ಬಿ.ಜೆ. ಭರತ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದಾರೆ.ಮನೋಹರ್ ಜೋಷಿಯ ಕ್ಯಾಮೆರಾ ಕೈ ಚಳಕವಿದೆ' ಎಂದು ನಿರ್ಮಾಪಕ ಉಮೇಶ್ ಬಣಕಾರ್ `ಬಹುಪರಾಕ್'ನ ವಿವರಗಳನ್ನು ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.