ಶನಿವಾರ, ಫೆಬ್ರವರಿ 27, 2021
19 °C

ಬೆಳ್ಳಿಹಬ್ಬದ ಸಂಭ್ರಮದಲ್ಲಿ ‘ಮಾತೃಕಾ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳ್ಳಿಹಬ್ಬದ ಸಂಭ್ರಮದಲ್ಲಿ ‘ಮಾತೃಕಾ’

ಮೈಸೂರು ಶೈಲಿಯ ಭರತನಾಟ್ಯ ಗುರು ಪರಂಪರೆಗೆ ದೊಡ್ಡ ಮಟ್ಟದ ಕೊಡುಗೆ ನೀಡಿದವರು ನಾಟ್ಯ ಸರಸ್ವತಿ ಜಟ್ಟಿ ತಾಯಮ್ಮ. ಅವರ ಮಾರ್ಗದರ್ಶನದಲ್ಲಿ ಬೆಳಗಿದ ಡಾ. ಕೆ.ವೆಂಕಟಲಕ್ಷ್ಮಮ್ಮ ಅವರು ಆ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಬಂದರು. ಈಗ ಅವರ ನೇರ ಶಿಷ್ಯೆಯಾದ ವಿದುಷಿ ವಿದ್ಯಾ ರವಿಶಂಕರ್‌ ಅವರು ಮೈಸೂರು ಶೈಲಿಯ ಭರತನಾಟ್ಯ ಗುರು ಪರಂಪರೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಇವರು ತಮ್ಮ ಗುರುಗಳ ಆಸೆಯಂತೆ ಕಟ್ಟಿದ ಶ್ರೀ ಮಾತೃಕಾ ಕಲ್ಚರಲ್‌ ಟ್ರಸ್ಟ್‌ಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ.

ಸಂಸ್ಥೆ 25 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಆಗಸ್ಟ್‌ 6ರಂದು ದೊಡ್ಡಮಟ್ಟದ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಹತ್ತು ಹಲವು ವಿಶೇಷಗಳು ಅಡಗಿವೆ.‘ಸದ್ಯ ಗಿರಿನಗರದಲ್ಲಿರುವ ಶ್ರೀ ಮಾತೃಕಾ ಕಲ್ಚರಲ್‌ ಟ್ರಸ್ಟ್‌ 1991ರಲ್ಲಿ ಮೈಸೂರಿನಲ್ಲಿ ಆರಂಭಿಸಲಾಯಿತು. ನನ್ನ ಗುರುಗಳಿಗೆ ಅವರ ಗುರುಗಳಾದ ಜಟ್ಟಿ ತಾಯಮ್ಮ ಅವರ ನೆನಪಿನಲ್ಲಿ ಸಂಸ್ಥೆಯೊಂದನ್ನು ಕಟ್ಟಿಸಬೇಕು ಎಂಬ ಆಸೆ ಇತ್ತು. ಮೈಸೂರು ಶೈಲಿ ಭರತನಾಟ್ಯದ ಗುರುಗಳಾದ ಪದ್ಮಭೂಷಣ ಡಾ.ಕೆ.ವೆಂಕಟಲಕ್ಷ್ಮಮ್ಮ ಅವರ ಕಟ್ಟಕಡೆಯ ಶಿಷ್ಯೆ ನಾನು. ಅವರ ಆಸೆಯನ್ನು ಈಡೇರಿಸಬೇಕು ಎಂದು ಸಂಸ್ಥೆ ಆರಂಭಿಸಿದೆ’ ಎಂದು ಸಂಸ್ಥೆ ಆರಂಭವಾದ ಸಂದರ್ಭ ನೆನೆಯುತ್ತಾರೆ ವಿದ್ಯಾ ರವಿಶಂಕರ್‌.ಸಂಸ್ಥೆ ಆರಂಭಿಸಿದ ಮೇಲೆ ಮೈಸೂರು, ಶ್ರೀರಂಗಪಟ್ಟಣದಲ್ಲಿ ಭರತನಾಟ್ಯ ತರಗತಿಗಳನ್ನು ನಡೆಸಿ ಆಸಕ್ತ ಗ್ರಾಮೀಣ ಮಕ್ಕಳಿಗೆ ಉಚಿತವಾಗಿ ಹೇಳಿಕೊಡುತ್ತಿದ್ದರು. 1999ರಲ್ಲಿ ವಿದ್ಯಾ ಅವರಿಗೆ ಬಿ.ಎಸ್‌.ರವಿಶಂಕರ್‌ ಜತೆ ಮದುವೆ ಆಯಿತು. ನಂತರ ಅವರ ಸಾಂಸ್ಕೃತಿಕ ಚಟುವಟಿಕೆಗಳು ಕೂಡ ಬೆಂಗಳೂರಿಗೆ ವರ್ಗಾವಣೆಗೊಂಡವು.ಅಂಧ ಮಕ್ಕಳಿಗೆ ನೃತ್ಯಾಭ್ಯಾಸ

‘ಮದುವೆ ಆಗಿ ಬೆಂಗಳೂರಿಗೆ ಬಂದ ನಂತರ ಇಲ್ಲಿಯೇ ನೆಲೆನಿಂತೆ. ಹಾಗಾಗಿ, ನನ್ನ ಸಾಂಸ್ಕೃತಿಕ ಬೇರುಗಳೂ ಇಲ್ಲೇ ಭದ್ರವಾಗಿ ನೆಲೆ ನಿಂತವು. 2013ರಲ್ಲಿ ‘ನೂಪುರ ಸಂಗಮ’ ಎನ್ನುವ ಒಂದು ದೊಡ್ಡ ಮಟ್ಟದ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಇದು ಗಿನ್ನೆಸ್‌ ದಾಖಲೆಗೂ ಪಾತ್ರವಾಯಿತು.ಅದಕ್ಕಾಗಿ ರಮಣ ಮಹರ್ಷಿ ಅಕಾಡೆಮಿ ಫಾರ್‌ ಬ್ಲೈಂಡ್‌ನ ಅಂಧ ಮಕ್ಕಳಿಗೆ ‘ತರಂಗಂ’ ನೃತ್ಯ ಶಿಕ್ಷಣ ನೀಡಿದೆವು.  ಕೂಚಿಪುಡಿ ನೃತ್ಯ ಸಂಯೋಜನೆಯಲ್ಲಿ ಮೂಡಿದ್ದ ‘ತರಂಗಂ’ನಲ್ಲಿ ಸುಮಾರು 1200 ಮಕ್ಕಳು ಹಿತ್ತಾಳೆ ತಟ್ಟೆಯ ಮೇಲೆ ನಿಂತು ನೃತ್ಯ ಮಾಡಿದ್ದರು. ನೂಪುರ ಫೈನ್‌ ಆರ್ಟ್ಸ್‌ ಅಕಾಡೆಮಿ ಮತ್ತು ನಮ್ಮ ನೃತ್ಯ ಶಾಲೆ ಜೊತೆಯಾಗಿ ಆಯೋಜಿಸಿದ್ದ ಕಾರ್ಯಕ್ರಮವಿದು’ ಎನ್ನುತ್ತಾರೆ ವಿದ್ಯಾ ರವಿಶಂಕರ್‌.ಹಂಪಿ ಉತ್ಸವ, ಕದಂಬೋತ್ಸವ, ಮೈಸೂರು ದಸರಾ ಕಾರ್ಯಕ್ರಮ, ಕನ್ನಡ ಸಂಸ್ಕೃತಿ ಇಲಾಖೆಯ ಹಲವು ಕಾರ್ಯಕ್ರಮಗಳು, ಮೊದಲಾದವುಗಳಲ್ಲಿ ಭಾಗವಹಿಸಿರುವ ವಿದ್ಯಾ, ಹಲವಾರು ನೃತ್ಯ ರೂಪಕಗಳನ್ನು ಸಂಯೋಜಿಸಿ ನಿರ್ದೇಶಿಸಿದ್ದಾರೆ.ಬೆಳ್ಳಿಹಬ್ಬದ ವಿಶೇಷ

‘ಮೈಸೂರು ಶೈಲಿ ಭರತನಾಟ್ಯಕ್ಕೆ ದೊಡ್ಡ ಗುರು ಪರಂಪರೆ ಇದೆ. ಜಟ್ಟಿತಾಯಮ್ಮ ಈ ಪರಂಪರೆಯ ಪರಮಗುರು. ಗುರು ಕೆ.ವೆಂಕಟಲಕ್ಷ್ಮಮ್ಮ ಅವರ ಮೊಮ್ಮಗಳು ಪ್ರೊ. ಎಂ.ಶಕುಂತಲಾ ಅವರ ಬಳಿಯೂ ನಾನು ನೃತ್ಯಾಭ್ಯಾಸ ಮಾಡಿದ್ದೇನೆ.  ಆ ಶೈಲಿಯ ಮಾರ್ಗ– ಪದ್ಧತಿಯ (ಪುಷ್ಪಾಂಜಲಿಯಿಂದ ತಿಲ್ಲಾನದವರೆಗೆ) ಪ್ರಸ್ತುತಿ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಇರುತ್ತದೆ. ನಮ್ಮ ಸಂಸ್ಥೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ನನ್ನ ಗುರುಗಳಾದ ಡಾ. ಕೆ.ವೆಂಕಟಲಕ್ಷ್ಮಮ್ಮ ಅವರ ಹೆಸರಿನಲ್ಲಿ ಪ್ರೊ.ಶಕುಂತಲಾ ಅವರನ್ನು ಪುರಸ್ಕರಿಸಲಿದ್ದೇವೆ. ಈ ಶೈಲಿಯನ್ನು ಮುಂದುವರಿಸಿಕೊಂಡು ಹೋಗುವ ಶಿಷ್ಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಿರಿಯ ಶಿಷ್ಯೆ ಸಾಧ್ವಿ ಅವರಿಗೆ ‘ಶ್ರೀ ಮಾತೃಕಾ ಮಾಣಿಕ್ಯ’ ಪ್ರಶಸ್ತಿ ನೀಡುತ್ತಿದ್ದೇವೆ’ ಎನ್ನುತ್ತಾರೆ ವಿದ್ಯಾ.‘ಈ ಕಾರ್ಯಕ್ರಮದ ಜತೆಗೆ ನೇತ್ರದಾನ ಅಭಿಯಾನವೂ ಇರುತ್ತದೆ. ನಾನು ಅಂಧ ಮಕ್ಕಳ ಜತೆ ಕೆಲಸ ಮಾಡಿದ್ದೇನೆ. ಕಣ್ಣಿಲ್ಲದಿದ್ದರೂ ಸ್ಪರ್ಶ ಜ್ಞಾನದಿಂದಲೇ ಚೆನ್ನಾಗಿ ನೃತ್ಯ ಮಾಡುವ ಪ್ರತಿಭಾವಂತರು ಅವರು. ಈ ಸಮಾರಂಭದಲ್ಲಿ ಅವರದ್ದೂ ಒಂದು ಪ್ರದರ್ಶನ ಇರುತ್ತದೆ. ಸಭಾ ಕಾರ್ಯಕ್ರಮದಲ್ಲಿ ತೇಜಸ್ವಿನಿ ಅನಂತ ಕುಮಾರ್‌, ಚೂಡಾಮಣಿ ನಂದಗೋಪಾಲ್‌ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ’  ಎಂದು ಬೆಳ್ಳಿ ಹಬ್ಬದ ಕಾರ್ಯಕ್ರಮಗಳ ವಿವರ ನೀಡುತ್ತಾರೆ ವಿದ್ಯಾ ರವಿಶಂಕರ್‌.   ಮಾತೃಕಾ ಕಲ್ಚರಲ್ ಟ್ರಸ್ಟ್‌ ಬೆಳ್ಳಿ ಹಬ್ಬದ ಸಂಭ್ರಮ: ಆಗಸ್ಟ್‌ 6ರ ಸಂಜೆ 5ಕ್ಕೆ. ಸ್ಥಳ– ಡಾ. ಎಚ್ಚೆನ್‌ ಕಲಾಕ್ಷೇತ್ರ, ನ್ಯಾಷನಲ್‌ ಕಾಲೇಜು ಆವರಣ, ಜಯನಗರ 7ನೇ ಬ್ಲಾಕ್‌.  * ನಮ್ಮೂರು ಶ್ರೀರಂಗಪಟ್ಟಣ. ಇಪ್ಪತ್ತೆರಡು ವರ್ಷಗಳಿಂದ  ವಿದ್ಯಾ ರವಿಶಂಕರ್‌ ಅವರ ಬಳಿ ಭರತನಾಟ್ಯ ಕಲಿಯುತ್ತಿದ್ದೇನೆ. ದಸರಾ, ಬೇಸಿಗೆ ರಜೆಯಲ್ಲಿ ನೃತ್ಯ ಕಲಿಕೆಗೆ ಹೆಚ್ಚು ಆದ್ಯತೆ ನೀಡಿದ್ದೇನೆ. ನ್ಯತ್ಯಾಭ್ಯಾಸಕ್ಕೆ ಸಮಯದ ನಿರ್ವಹಣೆ ಸಮಸ್ಯೆ ಆಗಿಲ್ಲ

–ಸಾಧ್ವಿ ವಿ.ವಾದಿರಾಜ್‌ರಾವ್‌,

ಕತ್ರಿಗುಪ್ಪೆ.* ನಾನು ಕಳೆದ ವರ್ಷ ರಂಗಪ್ರವೇಶ ಮಾಡಿದ್ದೇನೆ. ಸೀನಿಯರ್‌ ಸಹ ಆಗಿದೆ. ಬಿ.ಎ.ಎಂ.ಎಸ್‌ (ಆಯುರ್ವೇದ) ಮಾಡುತ್ತಿದ್ದೇನೆ. ಕಾಲೇಜಿನಿಂದ ಬಂದ ಮೇಲೆ ಭರತನಾಟ್ಯಕ್ಕೆ ಸಮಯ ಮೀಸಲಿಡುತ್ತೇನೆ. ಇಲ್ಲಿ ಕಲಿಕೆಗೆ ಉತ್ತಮ ವಾತಾವರಣವಿದೆ

–ಅನಘಾ ಪಾಟಕ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.