ಗುರುವಾರ , ಜನವರಿ 30, 2020
22 °C

ಬೇಡಿಕೆ ಈಡೇರಿಸಲು ರೇಷ್ಮೆಸೀರೆ ನೇಕಾರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಇಲ್ಲಿ ಕೆಎಚ್‌ಡಿಸಿ ರೇಷ್ಮೆಸೀರೆ ನೇಕಾರರ ಸಂಘದ ಆಶ್ರಯದಲ್ಲಿ ನೌಕರರು ಪ್ರತಿಭಟನೆ ನಡೆಸಿದರು. ರಾಯದುರ್ಗ ರಸ್ತೆಯ ಕೆಎಚ್‌ಡಿಸಿ ಕಾಲೊನಿಯಿಂದ ಪ್ರಮುಖ ಬೀದಿಯಲ್ಲಿ  ಮೆರವಣಿಗೆ ನಡೆಸಿದ ಪ್ರತಿಭಟನಾ ಕಾರರು ತಾಲ್ಲೂಕು ಕಚೇರಿ ಆವರಣಕ್ಕೆ ಆಗಮಿಸಿದರು.‘ಅಧಿಕಾರಿಗಳು ಸಕಾಲಕ್ಕೆ ಕಚ್ಛಾರೇಷ್ಮೆ ನೀಡದೆ ಸತಾಯಿಸುತ್ತಿದ್ದಾರೆ. 15 ದಿನಕ್ಕೊಮ್ಮೆ 5–6 ಕೆಜಿ ಕಚ್ಛಾರೇಷ್ಮೆ ಹಾಗೂ ಅಗತ್ಯ ಸಾಮಗ್ರಿ ನೀಡಲಾಗುತ್ತಿದೆ. ಇದರಲ್ಲಿ ಒಂದೆರಡು ದಿನ ಕೆಲಸ ಮಾಡಲು ಸಾಧ್ಯ. ನಂತರ ಸುಮ್ಮನೇ ಕೂರಬೇಕಾಗಿದೆ, ಅನೇಕ ಬಾರಿ ಹಸಿ ಕಚ್ಛಾರೇಷ್ಮೆ ವಿತರಣೆ ಮಾಡಲಾಗುತ್ತಿದ್ದು, ಪ್ರಶ್ನೆ ಮಾಡಿದರೆ ಇಲಾಖೆ ಅಧಿಕಾರಿಗಳು ನಿಮಗೆ ರೇಷ್ಮೆಯನ್ನು ನೀಡುವುದಿಲ್ಲ ಎಂದು ಬೆದರಿಕೆ ಹಾಕುತ್ತಾರೆ’ ಎಂದು ಪ್ರತಿಭಟನಾಕಾರರು ದೂರಿದರು.‘ಇಲಾಖೆ ಕಾರ್ಯ ವೈಖರಿಯಿಂದಾಗಿ ನಾವು ಜೀವನ ಮಾಡುವುದು ಕಷ್ಟವಾಗಿದೆ, ಮನೆ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಬ್ಯಾಂಕ್‌ ಸಾಲ ಕಟ್ಟುವುದು ಸಾಧ್ಯವಾಗದೇ ದಿಕ್ಕು ತೋಚದಂತಾಗಿದೆ. ವಾಸ ಮಾಡುತ್ತಿರುವ ಕಾಲೊನಿ ಮನೆಗಳ ಹಕ್ಕುಪತ್ರ ಸಹ ವಿತರಣೆ ಮಾಡದೇ ಸತಾಯಿಸಲಾಗುತ್ತಿದೆ. ಒಟ್ಟಿನಲ್ಲಿ ಅತಂತ್ರ ಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದೇವೆ’ ಎಂದು ನೌಕರರು ದೂರಿದರು.ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಸೂಕ್ತ ಕೈಗೊಳ್ಳದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷ ಕೆ.ಆರ್‌.ಮಲ್ಲಿಕಾರ್ಜುನ್‌, ಕಾರ್ಯದರ್ಶಿ ಪಾರ್ವತಮ್ಮ, ಪಟ್ಟನ ಪಂಚಾಯ್ತಿ ಸದಸ್ಯೆ ವದ್ದಿ ಸರೋಜಮ್ಮ, ಮಲ್ಲಿಕಾರ್ಜುನ, ಹಿಮಂತರಾಜು, ವೆಂಕಟೇಶ್‌, ವಿಜಯಭಾಸ್ಕರ್‌ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)