ಸೋಮವಾರ, ಜೂನ್ 21, 2021
27 °C

ಬೇವು ತಿಂದು ಅಂಗವಿಕಲರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇವು ತಿಂದು ಅಂಗವಿಕಲರ ಪ್ರತಿಭಟನೆ

ಮಂಡ್ಯ:  ರಾಜ್ಯ ಬಜೆಟ್‌ನಲ್ಲಿ ಅಂಗವಿಕಲರ ಹಿತಾಸಕ್ತಿಯನ್ನು ಪೂರ್ಣ ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ಅಂಗವಿಕಲರು ಮತ್ತು ಪಾಲಕರ ಒಕ್ಕೂಟದ ಕಾರ್ಯಕರ್ತರು ಗುರುವಾರ ಬೇವಿನ ಎಲೆ ತಿಂದು, ಗಂಜಿ ಕುಡಿಯುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೆಳಿಗ್ಗೆ ಪ್ರತಿಭಟನೆ ಆರಂಭಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಬಜೆಟ್‌ನಲ್ಲಿ ಅಂಗವಿಕಲರ ಹಿತಾಸಕ್ತಿಯನ್ನು ಕಡೆಗಣಿಸಿವೆ. ಈ ಮೂಲಕ ಯುಗಾದಿ ಹಬ್ಬದ ಸಂದರ್ಭದಲ್ಲಿಯೇ ಮಂಡಿಸಿದ ಬಜೆಟ್ ವರ್ಷ ಪೂರ್ತಿ ಕಹಿ ಉಣಿಸುವ ಸೂಚನೆ ನೀಡಿದೆ ಎಂದು ದೂರಿದರು.ಜನವಾದಿ ಮಹಿಳಾ ಸಂಘಟನೆಯ ಸಹ ಕಾರ್ಯದರ್ಶಿ ಸಿ.ಕುಮಾರಿ, ಯಶವಂತ್, ಕುಮಾರ, ರಾಮಕೃಷ್ಣ, ಭಾಷಾ, ರಾಜಣ್ಣ ಮತ್ತಿತರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಅಂಗವಿಕಲರು, ಪಾಲಕರು, ಸರ್ಕಾರ ಈಗಲಾದರೂ ಅಂಗವಿಕಲರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.ಅಂಗವಿಕಲರಿಗೆ ನೀಡುತ್ತಿರುವ ಮಾಸಾಶನವನ್ನು ಒಂದು ಸಾವಿರ ರೂಪಾಯಿಗೆ ಏರಿಸಬೇಕು, ಎಲ್ಲ ಅರ್ಹ ಅಂಗವಿಕಲರಿಗೂ ಬಸ್‌ಪಾಸ್‌ಗಳನ್ನು ಉಚಿತವಾಗಿ ನೀಡಬೇಕು. ಅಂಗವಿಕಲರಿಗೆ ಶಿಕ್ಷಣ, ಉದ್ಯೋಗ ನೀಡಲು ಕ್ರಿಯಾಯೋಜನೆ ರೂಪಿಸಬೇಕು. ಸರ್ಕಾರ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಉದ್ಯೋಗ ನೀಡಲು ಮೀಸಲು ಪ್ರಮಾಣ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.ಇವು ಸೇರಿದಂತೆ ಒಟ್ಟು 16 ಬೇಡಿಕೆಗಳನ್ನು ವಿಳಂಬ ಮಾಡದೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಮನವಿಯನ್ನು ಅವರು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.