ಶನಿವಾರ, ಜುಲೈ 24, 2021
22 °C
ಮೈಮೇಲೆ ಕೆಸರು ಸಿಡಿಸಿ ಪರಾರಿಯಾಗಲು ಯತ್ನಿಸಿದ ಕಾರು ಚಾಲಕ

ಬೈಕ್‌ನಲ್ಲಿ ಬೆನ್ನಟ್ಟಿ ಕ್ಷಮೆ ಕೋರುವಂತೆ ಮಾಡಿದ ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈ ಮೇಲೆ ಕೆಸರು ಸಿಡಿಸಿ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಕಾರು ಚಾಲಕನನ್ನು ಬೈಕ್‌ನಲ್ಲಿ ಬೆನ್ನಟ್ಟಿದ ಮಹಿಳೆ ಆತನಿಗೆ ಸಾರ್ವಜನಿಕವಾಗಿ ಕ್ಷಮೆ ಕೋರುವಂತೆ ಮಾಡಿದ ಘಟನೆ ಎಂ.ಜಿ.ರಸ್ತೆಯಲ್ಲಿ ನಡೆದಿದೆ.ಕೆ.ಎಂ.ಸರ್ವೇಶ್ ಎಂಬುವರು ಸ್ನೇಹಿತರೊಂದಿಗೆ ಭಾನುವಾರ (ಜೂನ್ 23) ಸಂಜೆ ಕಾರಿನಲ್ಲಿ (ಕೆಎ-05, ಎಂಡಿ-9652) ಹೋಗುತ್ತಿದ್ದಾಗ ಇತರೆ ವಾಹನಗಳನ್ನು ಹಿಂದಿಕ್ಕುವ ಯತ್ನದಲ್ಲಿ ಅವರ ವಾಹನ ರಸ್ತೆ ಮಧ್ಯದ ಗುಂಡಿಗೆ ಇಳಿಯಿತು. ಆಗ ಆ ಗುಂಡಿಯಲ್ಲಿ ತುಂಬಿಕೊಂಡಿದ್ದ ಮಳೆ ನೀರು ಪಕ್ಕದಲ್ಲೇ ಬೈಕ್‌ನಲ್ಲಿ ಹೋಗುತ್ತಿದ್ದ ಜಯಲಕ್ಷ್ಮಿ ಮತ್ತು ಅವರ ತಮ್ಮ ಮೋಹನ್ ಮೇಲೆ ಸಿಡಿಯಿತು. ಇಷ್ಟಾದರೂ ಕಾರು ನಿಲ್ಲಿಸದ ಸರ್ವೇಶ್ ಅಲ್ಲಿಂದ ಪರಾರಿಯಾಗಲು ಯತ್ನಿಸಿದರು.ಇದರಿಂದ ಕೋಪಗೊಂಡ ಜಯಲಕ್ಷ್ಮಿ, ಅವರ ಕಾರನ್ನು ಬೆನ್ನಟ್ಟಿ ಎಂ.ಜಿ.ರಸ್ತೆಯ ಮೆಟ್ರೊ ರೈಲು ನಿಲ್ದಾಣದ ಬಳಿ ಅಡ್ಡಗಟ್ಟಿದರು. ನಂತರ ಅವರನ್ನು ವಾಹನದಿಂದ ಕೆಳಗಿಳಿಸಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದರು. ಆದರೆ, ಸರ್ವೇಶ್ ಕ್ಷಮೆ ಯಾಚಿಸಲು ನಿರಾಕರಿಸಿದ್ದರಿಂದ ಪರಸ್ಪರರ ನಡುವೆ ವಾಗ್ವಾದ ನಡೆಯಿತು. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಕಬ್ಬನ್‌ಪಾರ್ಕ್ ಸಂಚಾರ ಠಾಣೆ ಪೊಲೀಸರು ರಾಜಿ ಮಾಡಲು ಯತ್ನಿಸಿದರು. ರಾಜಿಗೆ ಒಪ್ಪದ ಜಯಲಕ್ಷ್ಮಿ ಅವರು ಕ್ಷಮೆ ಯಾಚಿಸಲೇಬೇಕೆಂದು ಪಟ್ಟು ಮುಂದುವರಿಸಿದರು.ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಸಹ ಜಯಲಕ್ಷ್ಮಿ ಅವರ ಬೆಂಬಲಕ್ಕೆ ನಿಂತರು. ಅಂತಿಮವಾಗಿ ಸರ್ವೇಶ್ ಕ್ಷಮೆ ಯಾಚಿಸುವ ಮೂಲಕ ಪ್ರಕರಣ ಅಂತ್ಯಗೊಂಡಿತು.ಹಲಸೂರು ನಿವಾಸಿಯಾದ ಜಯಲಕ್ಷ್ಮಿ ಅವರು ಖಾಸಗಿ ಕಂಪೆನಿಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದಾರೆ. ಸರ್ವೇಶ್, ಜೆ.ಪಿ.ನಗರ ನಾಲ್ಕನೇ ಹಂತದ 15ನೇ ಅಡ್ಡರಸ್ತೆ ನಿವಾಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಪಾನಮತ್ತರಾಗಿದ್ದರು

ಘಟನೆ ವೇಳೆ ಸರ್ವೇಶ್ ಅವರು ಪಾನಮತ್ತರಾಗಿ ವಾಹನ ಚಾಲನೆ ಮಾಡುತ್ತಿದ್ದರು. ಆಲ್ಕೋ ಮೀಟರ್‌ನಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಮದ್ಯ ಸೇವನೆ ಪ್ರಮಾಣ 171 ಮಿ.ಗ್ರಾಂನಷ್ಟಿತ್ತು. ಇದರಿಂದಾಗಿ ಅವರ ವಿರುದ್ಧ ಪಾನಮತ್ತ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮದ್ಯ ಸೇವನೆ ಪ್ರಮಾಣ 40 ಮಿ.ಗ್ರಾಂಗಿಂತ ಕಡಿಮೆ ಇದ್ದರೆ ಪ್ರಕರಣ ದಾಖಲಿಸುವುದಿಲ್ಲ. ಬದಲಿಗೆ ಪಾನಮತ್ತರಾಗಿ ವಾಹನ ಚಾಲನೆ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.