ಶುಕ್ರವಾರ, ಮೇ 20, 2022
26 °C

ಬೌದ್ಧ, ಜಾನಪದ ಪರಂಪರೆಗೆ ಅವಮಾನ: ಅನಂತಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಮಾಯಣ ಕುರಿತ ಎ.ಕೆ. ರಾಮಾನುಜನ್ ಅವರ ಪ್ರಬಂಧವನ್ನು ಪಠ್ಯಕ್ರಮದಿಂದ ಹಿಂತೆಗೆದುಕೊಳ್ಳುವ ದೆಹಲಿ ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ನಿರ್ಧಾರ ಭಾರತದ ಜೈನ, ಬೌದ್ಧ ಮತ್ತು ಅಸಂಖ್ಯ ಜಾನಪದ ಪರಂಪರೆಗಳಿಗೆ ಮಾಡಿದ ಅವಮಾನ ಎಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್. ಅನಂತಮೂರ್ತಿ ಟೀಕಿಸಿದ್ದಾರೆ.ಭಾನುವಾರ ನಡೆದ ದೆಹಲಿ ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸಭೆ ರಾಮಾನುಜನ್ ಅವರ ಪ್ರಬಂಧವನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಿರುವುದಕ್ಕೆ ಪತ್ರಿಕಾ ಹೇಳಿಕೆಯೊಂದರ ಮೂಲಕ ಪ್ರತಿಕ್ರಿಯಿಸಿರುವ ಅವರು `ಇದು ಅತ್ಯಂತ ಅವಮಾನಕರ ತೀರ್ಮಾನ~ ಎಂದು ಅಭಿಪ್ರಾಯಪಟ್ಟಿದ್ದಾರೆ.`ಅತ್ಯಂತ ಸಾಂಪ್ರದಾಯಿಕ ಆಲೋಚನೆಗಳಿರುವ ವಿದ್ವಾಂಸರು ಕೂಡಾ ವಾಲ್ಮೀಕಿ ರಾಮಾಯಣದ ಜೊತೆಯಲ್ಲೇ ಅದಕ್ಕಿಂತ ಭಿನ್ನವಾಗಿರುವ ರಾಮಾಯಣದ ಭಿನ್ನ ಪಠ್ಯಗಳಿರುವುದನ್ನು ಅರಿತಿರುತ್ತಾರೆ. ರಾಮಾಯಣದ ಹಲವು ಪಾತ್ರಗಳನ್ನು ವಾಲ್ಮೀಕಿಗಿಂತ ಭಿನ್ನವಾಗಿ ಸೃಷ್ಟಿಸಿರುವ ಅನೇಕ ರಾಮಾಯಣಗಳು ನಮ್ಮ ಸಂಸ್ಕೃತಿಯ ಭಾಗವಾಗಿವೆ. ಹಾಗೆಯೇ ವಾಲ್ಮೀಕಿ ರಾಮಾಯಣದ ಭಿನ್ನ ಓದುಗಳು ಇರುವ ದೇಶ ನಮ್ಮದು. ಕುವೆಂಪು ಅವರು ಸೃಜಿಸಿದ `ಶ್ರೀ ರಾಮಾಯಣ ದರ್ಶನಂ~ನಲ್ಲಿ ರಾವಣ, ಸೀತೆಯ ಮಗುವಾಗಿ ಜನ್ಮ ತಳೆಯುತ್ತಾನೆ~ ಎಂದು ಅವರು ಹೇಳಿದ್ದಾರೆ.`ಭಾರತೀಯ ಸಂಸ್ಕೃತಿ ಶ್ರುತಿ,ಸ್ಮೃತಿ ಮತ್ತು ಪುರಾಣಗಳ ನಡುವೆ ಭಿನ್ನತೆಯನ್ನು ಕಾಯ್ದುಕೊಂಡು ಬಂದಿದೆ. ವೇದ, ಕುರಾನ್, ಬೈಬಲ್‌ನಂಥ ಪಠ್ಯಗಳು ಶ್ರುತಿಗಳಾಗಿ ಒಂದು ಅಕ್ಷರವೂ ಬದಲಾಗದೆ ಉಳಿದುಕೊಂಡು ಬಂದಿರುವಂತೆಯೇ ಕಾಲ, ದೇಶ ಮತ್ತು ಸಂಸ್ಕೃತಿಗೆ ಅನುಗುಣವಾಗಿ ಭಿನ್ನವಾಗಿರುವ ಸ್ಮೃತಿಗಳಿವೆ.ಹಾಗೆಯೇ ಸೃಜನಶೀಲತೆಯ ಉತ್ತುಂಗದಂಥ ಪುರಾಣಗಳಿವೆ. ಈ ವೈವಿಧ್ಯದ ಪರಂಪರೆಯನ್ನು ಗೌರವಿಸಬೇಕಾದ ವಿಶ್ವವಿದ್ಯಾಲಯ ಅದಕ್ಕೆ ವಿರುದ್ಧವಾಗಿ ನಡೆದುಕೊಂಡು ನಮ್ಮ ಕಾಲದ ಶ್ರೇಷ್ಠ ಚಿಂತಕರೊಬ್ಬರ ಕೃತಿಗೆ ಅವಮಾನ ಮಾಡಿದೆ~ ಎಂದು ವಿವರಿಸಿದ್ದಾರೆ.`ಭಾಸನಂಥ ಕವಿ ಇಡೀ ಮಹಾಭಾರತದ ಸಮಸ್ಯೆಯನ್ನು ಯುದ್ಧವೇ ಇಲ್ಲದೆ ಪರಿಹರಿಸುವ ಸ್ವಾತಂತ್ರ್ಯವನ್ನು ತೋರಿಸಿದ್ದಾನೆ. ಹಾಗೆಯೇ ರಾಮಾಯಣದ ಜೈನ, ಬೌದ್ಧ, ಜಾನಪದ ಆಖ್ಯಾನಗಳೂ ಇವೆ. ಆಧುನಿಕ ಕಾಲಘಟ್ಟದಲ್ಲಿ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳನ್ನು ವ್ಯಾಪಾರೀಕರಣಕ್ಕೆ ಒಳಪಡಿಸಿ ಅಶ್ಲೀಲಗೊಳಿಸಲಾಗಿದೆ.ನಾವು ನಮ್ಮ ಪೂರ್ವಿಕರು ಅನುಸರಿಸಿದ ಬಹುತ್ವದ ಪರಂಪರೆಯನ್ನು ಗೌರವಿಸುವುದನ್ನೂ ಮರೆಯುತಿದ್ದೇವೆ~ ಎಂದು ಅವರು ವಿಷಾದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.