ಗುರುವಾರ , ಜೂನ್ 17, 2021
23 °C

ಭದ್ರಕೋಟೆಯಲ್ಲೇ ಬಿರುಕು: ಎಚ್ಚರಿಕೆ ಗಂಟೆ

ಎನ್. ಉದಯಕುಮಾರ್ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣೋತ್ತರ ವಿಶ್ಲೇಷಣೆ

ಬೆಂಗಳೂರು: ಎದುರಾಳಿಯ `ಅಂಗಳ~ಕ್ಕೆ ಹೋಗಿ ಚಿತ್ತು ಮಾಡುವುದು ಇದೆಯಲ್ಲ ಅದರ ಗಮ್ಮತ್ತೇ ಬೇರೆ! ಅಂತಹ ಗೆಲುವಿನ ಸವಿಯನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್‌ಗೆ ಕರುಣಿಸಿದ್ದಾರೆ.ಏನೆಲ್ಲ ಅನುಕೂಲ. ಎಷ್ಟೆಲ್ಲ ಅವಕಾಶ! ಎಲ್ಲವನ್ನೂ ಆಡಳಿತಾರೂಢ ಬಿಜೆಪಿ ಗಾಳಿಗೆ ತೂರಿದೆ. ಗೆಲುವನ್ನು ತಟ್ಟೆಯಲ್ಲಿಟ್ಟು ಕಾಂಗ್ರೆಸ್ `ಕೈ~ಗೆ ನೀಡಿದೆ. ಯಾವುದೇ ನೆಲೆಯಲ್ಲಿ ಯೋಚಿಸಿದರೂ ಆ ಪಕ್ಷಕ್ಕೆ ಇದು `ದುಬಾರಿ~ ಎನಿಸುವ ಸೋಲು. ಮುಖ್ಯಮಂತ್ರಿ ತೆರವು ಮಾಡಿದ ಕ್ಷೇತ್ರ. ವಿಧಾನಸಭೆಯ ಮುಂಬರುವ ಚುನಾವಣೆಗೆ `ಅಭ್ಯಾಸ ಪಂದ್ಯ~ ಎಂದೇ ಪರಿಗಣಿಸಲಾಗಿತ್ತು. ಸರ್ಕಾರ, ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಕಾರ್ಯಕರ್ತರ ಪಡೆ ಎಲ್ಲವೂ ಮತ್ತು ಎಲ್ಲರೂ ಬೆನ್ನಿಗೆ ಇದ್ದರು. ಆದರೂ ಸೋಲು ತಪ್ಪಿಸಲಾಗಲಿಲ್ಲ.ವಿರೋಧ ಪಕ್ಷಗಳ ಮುಖಂಡರು ಉಡುಪಿ, ಚಿಕ್ಕಮಗಳೂರು ಭಾಗದಲ್ಲಿ ಮತದಾರರ ಮನೆ ಬಾಗಿಲಲ್ಲಿ ನಿಂತಿದ್ದರೆ, ಆಡಳಿತಾರೂಢ ಬಿಜೆಪಿ ಮುಖಂಡರು ಎಗ್ಗು-ಸಿಗ್ಗಿಲ್ಲದೆ ಕಚ್ಚಾಟದಲ್ಲಿ ನಿರತರಾಗಿದ್ದರು. ಮತದಾರರಿಗೆ ಅದು ಎಂತಹ ಸಂದೇಶ ರವಾನಿಸಿರಬಹುದು?ಸತತ ಸೋಲುಗಳಿಂದ ಕುಗ್ಗಿಹೋಗಿದ್ದ ಕಾಂಗ್ರೆಸ್ ಮುಖಂಡರು ಅಚ್ಚರಿಯ ರೀತಿಯಲ್ಲಿ ಒಗ್ಗಟ್ಟು ಪ್ರದರ್ಶಿಸಿದರು. ವ್ಯವಸ್ಥಿತವಾಗಿ ಚುನಾವಣೆ ಎದುರಿಸಿದರು. ಮುಖಂಡರ ಚಲನವಲನಗಳ ಮೇಲೆ ಹೈಕಮಾಂಡ್ ನಿಗಾ ಇಟ್ಟಿತ್ತು. ಮಿಸುಕಾಡಲು ಯಾರೊಬ್ಬರಿಗೂ ಅವಕಾಶವನ್ನೇ ನೀಡಲಿಲ್ಲ.

 

ಆ ಮಟ್ಟಿಗೆ ಇದು ಹೈಕಮಾಂಡ್ ಗೆಲುವು ಎನ್ನಲು ಅಡ್ಡಿ ಇಲ್ಲ.  ಉಪಚುನಾವಣೆಗಳಲ್ಲಿನ ಸತತ ಗೆಲುವುಗಳಿಂದ ಬೀಗುತ್ತಿದ್ದ ಬಿಜೆಪಿ, ರಕ್ಷಣಾತ್ಮಕ `ಆಟ~ಕ್ಕೆ ಇಳಿದಿತ್ತು. ಪಕ್ಷದಲ್ಲಿನ ಅಂತಃಕಲಹ, ಹಗರಣಗಳಿಂದ ಪಕ್ಷದ ಕಾರ್ಯಕರ್ತರೇ ರೋಸಿಹೋಗಿದ್ದರು. ಆಡಳಿತ ವಿರೋಧಿ ಅಲೆಗೆ ತಡೆಯೊಡ್ಡುವ ಪ್ರಯತ್ನಗಳು ಪರಿಣಾಮಕಾರಿ ಆಗಿರಲಿಲ್ಲ.ಮಾರ್ಗದರ್ಶನ ಮಾಡಲು ಡಾ.ವಿ.ಎಸ್.ಆಚಾರ್ಯ ಅವರೂ ಇರಲಿಲ್ಲ. ಉಡುಪಿ ಹೇಳಿಕೇಳಿ `ಬುದ್ಧಿವಂತರ ಜಿಲ್ಲೆ~. ಬಿಜೆಪಿ ಬಗೆಗಿನ ತಮ್ಮ ವಿಶ್ವಾಸಕ್ಕೆ ಭಂಗ ಉಂಟಾಗಿತ್ತು. ಮುಜುಗರಕ್ಕೆ ಒಳಗಾಗಿದ್ದ ಅಲ್ಲಿನ ಸುಶಿಕ್ಷಿತ ಮತದಾರರು ತಿರುಗಿಬಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ತಾವು ಪರ್ಯಾಯ ಎಂದು ಬಿಂಬಿಸುವ ಜೆಡಿಎಸ್ ಪ್ರಯತ್ನ ಕೈಗೂಡಲಿಲ್ಲ. ಪ್ರಮುಖ ಮುಖಂಡರು ಅಲ್ಲೇ ಬೀಡು ಬಿಟ್ಟಿದ್ದರು. ಪ್ರತಿ ಮಸೀದಿಗೂ ಎಡತಾಕಿದರು. ಆದರೆ ಎಚ್ಚೆತ್ತ ಮತದಾರರು ನಾಯಕರ ಮಾತಿಗೆ ಮರುಳಾಗದೆ, ವಿವೇಚನೆ ಬಳಸಿದರು. `ಗುರಿ~ ಸಾಧಿಸುವಲ್ಲಿ ಯಶಸ್ವಿಯಾದರು.  ಕಾಂಗ್ರೆಸ್ ಹೆಜ್ಜೆ ಅಭ್ಯರ್ಥಿ ಆಯ್ಕೆಯಿಂದಲೇ ಸರಿದಾರಿ ಹಿಡಿದಿತ್ತು. ಜಯಪ್ರಕಾಶ್ ಹೆಗ್ಡೆ ಅವರ ಬಗೆಗಿನ ಸದ್ಭಾವನೆ  ಅವರನ್ನು ಗೆಲುವಿಗೆ ಹತ್ತಿರವಾಗಿಸುತ್ತಾ ಹೋಯಿತು. ಕಳೆದ ಬಾರಿ ಸೋತಿದ್ದರೂ ಕ್ಷೇತ್ರದ ಜನರ ಜತೆ ಅವರು ಸಂಪರ್ಕ ಬಿಟ್ಟಿರಲಿಲ್ಲ. ಪ್ರತಿಯೊಬ್ಬರಿಗೂ ಪರಿಚಿತರೇ ಆಗಿದ್ದರು. ಸಂಸತ್ತಿಗೆ ಹೋದರೆ ಕೆಲಸ ಮಾಡಬಲ್ಲರು ಎಂಬ ವಿಶ್ವಾಸ ಕುದುರಿಸಿತ್ತು. ಇದೆಲ್ಲವೂ ಗೆಲುವಿಗೆ ಪೂರಕವಾಗಿ ಒದಗಿಬಂದವು.2009ರ ಲೋಕಸಭಾ ಚುನಾವಣೆಯಲ್ಲಿ ಈಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ವಿರುದ್ಧ 27 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದ ಜಯಪ್ರಕಾಶ್ ಈಗ 45,724 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರಾಜಕೀಯ ಪಂಡಿತರ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ ದೊಡ್ಡ ಅಂತರ ಇದಾಗಿದೆ.ಎಂಟು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಿಕ್ಕಮಗಳೂರು, ಕಾರ್ಕಳದಲ್ಲಿ ಮಾತ್ರವೇ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಉಳಿದಂತೆ ಕುಂದಾಪುರ, ಉಡುಪಿ, ಕಾಪು, ಶೃಂಗೇರಿ, ಮೂಡಿಗೆರೆ ಹಾಗೂ ತರೀಕೆರೆಯಲ್ಲಿ ಹೆಗ್ಡೆ ಮುನ್ನಡೆ ಸಾಧಿಸಿರುವುದು ಬಿಜೆಪಿಗೆ ಎಚ್ಚರಿಕೆಯ ಗಂಟೆ.

ಕಳೆದ ಚುನಾವಣೆಯಲ್ಲಿ ಹೆಗ್ಡೆ ಅವರಿಗೆ ಕುಂದಾಪುರ ಕ್ಷೇತ್ರ ಕೈಕೊಟ್ಟಿತ್ತು. ಅಲ್ಲೂ ಈ ಬಾರಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬಗ್ಗೆ ಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ಅದನ್ನು ಮತವಾಗಿ ಪರಿವರ್ತಿಸುವಲ್ಲಿಯೂ ಬಿಜೆಪಿ ಸೋತಿದೆ. ಬಿ.ಎಸ್.ಯಡಿಯೂರಪ್ಪ ಪ್ರಚಾರದಿಂದ ದೂರ ಉಳಿದರು.ಲಿಂಗಾಯತ ಪ್ರಾಬಲ್ಯದ ತರೀಕೆರೆ ಭಾಗದಲ್ಲಿ ಈ ಅಂಶ ಸ್ಪಲ್ಪಮಟ್ಟಿಗೆ ಪಕ್ಷಕ್ಕೆ ಹಾನಿ ಮಾಡಿರಬಹುದಾದ ಸಾಧ್ಯತೆ ಇದೆ. ಕಾರಣಗಳು ಏನೇ ಇರಲಿ, ಈ ಫಲಿತಾಂಶ ಬಿಜೆಪಿ ಕಾರ್ಯಕರ್ತರ ಸ್ಥೈರ್ಯಗೆಡಿಸಿದೆ. ಅರಗಿಸಿಕೊಳ್ಳುವುದು ಕಷ್ಟಸಾಧ್ಯ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.