ಮಂಗಳವಾರ, ಮೇ 24, 2022
25 °C

`ಭರ'ದ ಅಬ್ಬರ ಮೌನಕ್ಕೆ ಸರಿದ `ಗಗನ'

-ಪ್ರೊ. ಸಿ.ಸಿದ್ದರಾಜು ಆಲಕೆರೆ . Updated:

ಅಕ್ಷರ ಗಾತ್ರ : | |

ನೋಡಲು ಇವು ಅಕ್ಕ-ತಂಗಿಯರಂತೆ. ಆದರೆ ಒಂದು ಕಣ್ಣಿಗೆ ಬೆಣ್ಣೆ- ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ಸ್ಥಿತಿ. ಮೂಲೆಗುಂಪಾಗಿದ್ದಾಕೆ ನವವಧುವಿನಂತೆ ಕಂಗೊಳಿಸತೊಡಗಿದರೆ, ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾಕೆ ಕಳೆಗುಂದುತ್ತಿದ್ದಾಳೆ...!ಇದು ಮಂಡ್ಯ-ಚಾಮರಾಜನಗರ ಜಿಲ್ಲೆಗಳ ಗಡಿಭಾಗದಲ್ಲಿರುವ ಶಿವನಸಮುದ್ರದಲ್ಲಿನ ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತದ ಕಥೆ. ಇಲ್ಲಿ ಕಾವೇರಿ ಕವಲೊಡೆದು ಎಡಗಡೆಯ ನದಿ ಸುಮಾರು 300 ಅಡಿ ಎತ್ತರದಿಂದ ಗಗನಚುಕ್ಕಿಯಲ್ಲಿ ಧುಮುಕಿದರೆ, ಬಲಗಡೆಯ ನದಿ ಸುಮಾರು 100 ಅಡಿ ಎತ್ತರದಿಂದ ರಭಸವಾಗಿ ಭರಚುಕ್ಕಿಯಲ್ಲಿ ಜಲಪಾತವನ್ನು ರೂಪಿಸಿದೆ.

ಗಗನಚುಕ್ಕಿ ಜಲಪಾತ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ವ್ಯಾಪ್ತಿಯ ಪ್ರವಾಸಿಕೇಂದ್ರವಾದರೆ, ಭರಚುಕ್ಕಿ ಜಲಪಾತ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯ ಪ್ರವಾಸಿ ಕೇಂದ್ರವಾಗಿದೆ. ಜೋಗದ ಜಲಪಾತದಷ್ಟೇ ಪ್ರಸಿದ್ಧವಾಗಿದೆ ಶಿವನಸಮುದ್ರದಲ್ಲಿನ ಈ ಎರಡು ಜಲಪಾತ. ಆದರೆ ಈಗಿನ ಇಲ್ಲಿಯ ಚಿತ್ರಣವೇ ಬದಲಾಗಿದೆ. ಭರಚುಕ್ಕಿ ಅಭಿವೃದ್ಧಿ ಪಥದತ್ತ ಸಾಗಿದ್ದು, ಗಗನಚುಕ್ಕಿ ಯಾರ ಗಮನಕ್ಕೂ ಬಾರದೇ ಹೋಗಿದೆ.ಅಂದು- ಇಂದು

ಮಂಡ್ಯ ಜಿಲ್ಲೆಯ ಗಡಿಭಾಗದಲ್ಲಿನ ಶಿವಸಮುದ್ರ (ಬ್ಲಫ್)ದಲ್ಲಿರುವ ಗಗನಚುಕ್ಕಿ ಜಲಪಾತ ಈ ಹಿಂದೆ ಹೆಚ್ಚು ಪ್ರವಾಸಿಗರ ಆಕರ್ಷಿತ ತಾಣವಾಗಿತ್ತು. ಇದರ ಸನಿಹದಲ್ಲೇ ಇರುವ 1902ರಲ್ಲಿ ಸ್ಥಾಪಿತವಾದ ದಿವಾನ್ ಕೆ.ಶೇಷಾದ್ರಿ ಐಯ್ಯರ್ ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು ನೋಡಲು ಪ್ರವಾಸಿಗರಿಗೆ ಅವಕಾಶವಿತ್ತು. ರಜಾ ದಿನಗಳಲ್ಲಂತೂ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿಗೆ ಪ್ರವಾಸಕ್ಕೆಂದೇ ಬರುತ್ತಿದ್ದರು.

ದೇಶ-ವಿದೇಶಿಯ ಪ್ರವಾಸಿಗರು ಅಲ್ಲಿನ ಉದ್ಯಾನವನದಲ್ಲಿ ಕುಳಿತು ಆನಂದ ಪಡುತ್ತಿದ್ದರು. ಟ್ರ್ಯಾಲಿ ಮೂಲಕ ಕೆಳಗಿಳಿದು ಜಲವಿದ್ಯುತ್ ಕಾರ್ಯಾಗಾರ ನೋಡಿ ಪುಳಕಿತರಾಗುತ್ತಿದ್ದರು. ನಂತರ ಸಮೀಪದಲ್ಲೆ ಇರುವ ಗಗನಚುಕ್ಕಿ ಜಲಪಾತ ತಾಣದ ಕಡೆ ಹೋಗಿ ಅಲ್ಲಿಯ ಪ್ರಕೃತಿ ಸೌಂದರ್ಯದ ಜೊತೆಗೆ ಸುಮಾರು 300 ಅಡಿ ಎತ್ತರದಿಂದ ಹಾಲ್ನೊರೆಯಂತೆ ಧುಮುಕುತ್ತಿದ್ದ ಜಲಧಾರೆ ನೋಡಿ ಕಣ್ತುಂಬಿಕೊಳ್ಳುತ್ತಿದ್ದರು.ಕೆಲವರ್ಷಗಳಿಂದ ಎಲ್‌ಟಿಟಿಇ ಭಯೋತ್ಪಾದಕರ ಭಯದಿಂದಾಗಿ ಜಲವಿದ್ಯುತ್ ಕೇಂದ್ರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಹಾಗಾಗಿ, ಪ್ರವಾಸಿಗರು ಅತ್ತ ಮುಖ ಮಾಡದೆ ಇರುವುದರಿಂದ ಅಲ್ಲಿನ ಉದ್ಯಾನವನಗಳು ಸಹ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಗಗನಚುಕ್ಕಿ ಜಲಪಾತ ತಾಣಕ್ಕೆ ಹೋಗುವ ಎಲ್ಲಾ ರೀತಿಯ ವಾಹನಗಳಿಂದ ಮಳವಳ್ಳಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮಪಂಚಾಯ್ತಿಯವರು ವಾಹನ ಪ್ರವೇಶ ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆಯೇ ವಿನಃ ವಾಹನ ನಿಲುಗಡೆಯ ವ್ಯವಸ್ಥೆ ಸಮರ್ಪಕವಾಗಿಲ್ಲ. ಆ ಹಣವು ಅಲ್ಲಿನ ಅಭಿವೃದ್ಧಿಗೂ ವಿನಿಯೋಗವಾಗುತ್ತಿಲ್ಲ.ಮಂಡ್ಯ ಜಿಲ್ಲೆಯ ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯು ಸಹ ಅಲ್ಲಿನ ಅಭಿವೃದ್ಧಿಯ ಕಡೆ ಗಮನಹರಿಸಿಲ್ಲ. ಆ ತಾಣದಲ್ಲಿನ ಪ್ರದೇಶದ ಸ್ವಚ್ಛತೆಗೂ ಮಹತ್ವ ನೀಡಿಲ್ಲ. ಪ್ರವಾಸಿಗರು ಕೂರುವ ಆಸನಗಳ ಅಕ್ಕಪಕ್ಕದಲ್ಲಿಯೂ ಗಿಡ-ಗಂಟೆಗಳು ಬೆಳದುನಿಂತಿವೆ. ಇಲ್ಲಿಯ ಅವ್ಯವಸ್ಥೆಯಿಂದಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ. ಮಂಡ್ಯ ಜಿಲ್ಲಾಡಳಿತ 2009 ಮತ್ತು 2011ರಲ್ಲಿ ಗಗನಚುಕ್ಕಿ ಜಲಪಾತೋತ್ಸವವನ್ನು ಲಕ್ಷಾಂತರ ರೂಪಾಯಿ ಖರ್ಚುಮಾಡಿ ಆಚರಿಸಿದರೆ ವಿನಃ ಅಲ್ಲಿಯ ಅಭಿವೃದ್ಧಿ ಕಾರ್ಯಕ್ಕೆ ಗಮನಹರಿಸಿಲ್ಲ.ಅಬ್ಬರದ ಭರಚುಕ್ಕಿ

ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಚಾಮರಾಜನಗರ ಜಿಲ್ಲೆ ಉದಯವಾದಂತೆ ಶಿವನಸಮುದ್ರದಲ್ಲಿ ಪಾಳುಪಾಳಾಗಿದ್ದ ಭರಚುಕ್ಕಿ ಜಲಪಾತದ ತಾಣಕ್ಕೆ ಶುಕ್ರ ದೆಸೆ. 2007ರಲ್ಲಿ ಭರಚುಕ್ಕಿ ಜಲೋತ್ಸವ ಇಲ್ಲಿ ನಡೆದ ಮೇಲೆ ಜಿಲ್ಲಾಡಳಿತದ ಗಮನ ಇತ್ತ ಕಡೆಯೇ. ಚಾಮರಾಜನಗರ ಜಿಲ್ಲೆಯ ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳೂ ಅಭಿವೃದ್ಧಿಗೆ ಕೈಜೋಡಿಸಿವೆ. ಹೀಗಾಗಿ, ಭರಚುಕ್ಕಿ ಜಲಪಾತ ತಾಣ ಮೂಲಸ್ವರೂಪವನ್ನೇ ಬದಲಿಸಿಕೊಂಡು ಅಲ್ಲಿನ ಪ್ರಕೃತಿ ಸೌಂದರ‌್ಯದ ಜೊತೆಗೆ ಅಭಿವೃದ್ಧಿ ನಾಗಾಲೋಟದಿಂದಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಭರಚುಕ್ಕಿ ಜಲಪಾತ ತಾಣವನ್ನು ರಕ್ಷಿತ ಪ್ರದೇಶವನ್ನಾಗಿ ಮಾಡಿ ಪ್ರವೇಶದ ಗೇಟನ್ನು ಅಳವಡಿಸಲಾಗಿದೆ. ಈ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಘೋಷಿಸಲಾಗಿದೆ. ಇಲ್ಲಿಗೆ ಬರುವ ಬಸ್, ಟೆಂಪೊ, ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಅರಣ್ಯ ಇಲಾಖೆ ಪ್ರವೇಶ ಶುಲ್ಕವನ್ನು ವಸೂಲಿ ಮಾಡುತ್ತಿದೆ. ಜಲಪಾತ ತಾಣಕ್ಕೆ ಹೋಗುವ ಮಾರ್ಗದ ಇಕ್ಕಡೆಗಳಲ್ಲಿ ಅಲಂಕಾರಿಕ ಗಿಡಗಳನ್ನು ನೆಡಲಾಗಿದೆ. ಪ್ರವಾಸಿಗರು ಜಲಪಾತ ವೀಕ್ಷಿಸಲು ಅನುವಾಗುವಂತೆ ಆ ಪ್ರದೇಶದಲ್ಲಿ ಸಿಮೆಂಟ್ ಆಸುನೆಲವನ್ನು ನಿರ್ಮಿಸಿ ಅಲ್ಲಲ್ಲಿ ಆಸನಗಳನ್ನು ಅಳವಡಿಸಲಾಗಿದೆ. ಸಿಮೆಂಟ್ ಕುಂಡಗಳಲ್ಲಿ ಅಲಂಕಾರಿಕ ಗಿಡ ಬೆಳಸಲಾಗಿದೆ.ಒಂದು ಕೋಟಿ ಹಣ ಖರ್ಚು ಮಾಡಿ ಉತ್ತಮ ಗುಣಮಟ್ಟದ ಮೆಟ್ಟಿಲುಗಳನ್ನು ಹಾಗೂ ಪ್ರವಾಸಿಗರ ರಕ್ಷಣೆಗಾಗಿ ಆಧುನಿಕ ರೀತಿಯ ಸ್ಟೀಲ್ ಕಂಬಿಗಳನ್ನು ಅಳವಡಿಸಲಾಗಿದೆ. ಜಲಪಾತದ ಸೌಂದರ್ಯವನ್ನು ಸವಿಯಲು ಅನುಕೂಲಕರವಾದ ಸ್ಥಳದಲ್ಲಿ ವೀಕ್ಷಣಾ ಸ್ಥಳಗಳನ್ನು ನಿರ್ಮಿಸಲಾಗಿದೆ.ಮಂಡ್ಯ ಜಿಲ್ಲಾಡಳಿತವು ಒಂದೆರಡು ದಿನ ಆಡಂಬರದಲ್ಲಿ ಲಕ್ಷಾಂತರ ಹಣ ವ್ಯಯ ಮಾಡಿ ಜಲಪಾತೋತ್ಸವ ಆಚರಿಸುವ ಬದಲು ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಯ ಪಥದಲ್ಲಿರುವ ಭರಚುಕ್ಕಿ ಜಲಪಾತ ತಾಣವನ್ನು ವೀಕ್ಷಿಸಿ ಗಗನಚುಕ್ಕಿ ಜಲಪಾತ ತಾಣವನ್ನು ಅಭಿವೃದ್ಧಿಪಡಿಸುವ ತುರ್ತು ಕಾರ್ಯ ಆಗಬೇಕಾಗಿದೆ.

-ಪ್ರೊ. ಸಿ.ಸಿದ್ದರಾಜು ಆಲಕೆರೆ .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.