ಕಥೆ

ನಲವತ್ತು ವರ್ಷಗಳ ಹಿಂದಿನ ಮಾತು. ನಟರಾಜ ಇಂಟರ್ನಲ್ಲಿ ನನ್ನ ಸಹಪಾಠಿ. ವಿಜ್ಞಾನದ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರಿಂದ. ಅವನು ನಂತರ ಮಂಡ್ಯದಿಂದ ಮೈಸೂರಿಗೆ ಹೋಗಿ ಎಂ.ಬಿ.ಬಿ.ಎಸ್. ಮಾಡಿಕೊಂಡು ಡಾಕ್ಟರಾದ. ಇಷ್ಟೇ ಆಗಿದ್ದರೆ ನಾನು ಮಾತ್ರವಲ್ಲ ಯಾರೂ ಕೂಡ ನಟರಾಜನನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿರಲಿಲ್ಲ.

ಸರಕಾರಿ ನೌಕರಿ ಹಿಡಿದು ದೇಶದ ಉದ್ದಗಲಕ್ಕೂ ತಿರುಗಿ ನಿವೃತ್ತಿಯ ನಂತರ ಬೆಂಗಳೂರಿಗೆ ಬಂದ ನಾನು ಹಿಂದಿನ ಸ್ನೇಹಿತರು, ಸಹಪಾಠಿಗಳನ್ನೆಲ್ಲ ಹುಡುಕುತ್ತಾ ಯಾವುದಾದರೂ ಆತ್ಮೀಯರ ವಲಯಕ್ಕೆ ಸೇರಿಕೊಳ್ಳಲು ಹಾತೊರೆಯುತ್ತಿದ್ದಾಗ ನಟರಾಜ ಸಿಕ್ಕಿದ್ದು, ಹತ್ತಿರವಾದದ್ದು.

ತುಂಬಾ ಜನ ಸ್ನೇಹಿತರ ಬದುಕಿನ ಶೈಲಿಗೆ, ಆಸೆ ಆಕಾಂಕ್ಷೆಗಳಿಗೆ ನಾನು ಹೊರಗಿನ ವನಾಗಿಬಿಟ್ಟಿದ್ದರಿಂದ ನಟರಾಜನನ್ನ ತುಂಬಾ ಹಚ್ಚಿಕೊಂಡೆ. ಸಿಟಿ ಮಾರ್ಕೆಟ್ ಫ್ಲೈ ಓವರ್ ಕೆಳಗೆ ಸಿಕ್ಕ ನಟರಾಜನಿಗೆ ನನ್ನಷ್ಟೇ ವಯಸ್ಸಾಗಿದ್ದರೂ ತುಂಬಾ ತೆಗೆದುಹೋಗಿದ್ದ.

ಬಹುಪಾಲು ಕೂದಲು ಉದುರಿಹೋಗಿತ್ತು, ಉಳಿದಿದ್ದ ಅಲ್ಪಸ್ವಲ್ಪ ಕೂದಲಿಗೇ ಎಣ್ಣೆಯನ್ನು ವಿಪರೀತ ಸವರಿ ಬೋಳುತಲೆಯ ತುಂಬಾ ಎಣ್ಣೆ ಹೊಳೆಯುತ್ತಿತ್ತು. ಕಂದುಬಣ್ಣದ ಫ್ರೇಮಿನ ಕನ್ನಡಕ. ತುಂಬುತೋಳಿನ ಷರಟಿನಿಂದ ಈಚೆಗೆ ಬಂದು ಇಣುಕುತ್ತಿರುವ ಬೆಳ್ಳಿ ಕಟ್ಟಿನ ವಾಚು. ಬಲಗೈಯಲ್ಲಿ ಕಪ್ಪು ಬಣ್ಣದ ಚರ್ಮದ ಬ್ಯಾಗ್, ಕ್ಯಾನ್ವಾಸ್ ಶೂಸ್, ಷರಟು, ಪ್ಯಾಂಟು ಎಲ್ಲವೂ ಬಿಳಿಬಣ್ಣದ್ದು. ಗುರುತು ಹಿಡಿಯಲಾಗಲೀ,

ಪರಸ್ಪರ ಜೀವನ ಸಾರಾಂಶ-ಸಮೀಕ್ಷೆ ಒಪ್ಪಿಸಲಾಗಲೀ ತುಂಬಾ ದಿನ ಬೇಕಾಗಲಿಲ್ಲ. ಮತ್ತೆ ಮತ್ತೆ ಭೇಟಿಯಾಗುತ್ತ ಹೋದೆವು.

ನಟರಾಜನ ಕ್ಲಿನಿಕ್ ನಮ್ಮ ಫ್ಲಾಟಿನಿಂದ ಎರಡು ಮೈಲಿ ದೂರದಲ್ಲಿರುವ ಸರ್ವೆಯರ್ ಬೀದಿಯ ಕೊನೆಯ ಕಾಂಪೌಂಡಿನ ಔಟ್ಹೌಸ್ನಲ್ಲಿತ್ತು. ಕಾಂಪೌಂಡಿನ ತುಂಬಾ ತೆಂಗು, ಮಾವು, ಹಲಸಿನಮರ. ನಿಶ್ಚಲವಾಗಿ ನಿಂತ ಚಾಕ್ಲೇಟ್ ಬಣ್ಣದ ಸ್ಟ್ಯಾಂಡರ್ಡ್ ಕಾರು. ರಾಜಬೀದಿಯ ರೀತಿಯಲ್ಲಿ ವಿಶಾಲವಾದ ರಸ್ತೆ, ಬಹು ಮೆಲ್ಲಗೆ...

ಪಿಸುಮಾತಿನಲ್ಲೆಂಬಂತೆ ಮಾತ್ರ... ಸರಸರ ಶಬ್ದ ಮಾಡುವ ಎಲೆಗಳು ತುಂಬಿದ ಎತ್ತರದ ಮರಗಳು, ಜನರ, ವಾಹನಗಳ ಓಡಾಟವೇ ಇಲ್ಲದ ನಿರ್ಜನ ರಸ್ತೆ- ಎಲ್ಲವೂ ನನಗೆ ಬೇಗ ಇಷ್ಟವಾಗಿಬಿಟ್ಟಿತು. ಮೂವತ್ತು ವರ್ಷಗಳಿಂದಲೂ ಕ್ಲಿನಿಕ್ ಇಲ್ಲೇ ಅಂತೆ. ಕಾಂಪೊಂಡರ್ ರಾಮಚಂದ್ರ, ಜವಾನ ಕಮ್ ನರ್ಸ್ ನಾರಾಯಣಸ್ವಾಮಿ ಕೂಡ ಕ್ಲಿನಿಕ್ನಲ್ಲಿ ಮೊದಲಿನಿಂದಲೂ ಜೊತೆಯಲ್ಲೇ ಇದ್ದಾರಂತೆ.

ಸರ್ವೆಯರ್ ಬೀದಿ, ಬಾಂದಿನವರ ಬೀದಿಯ, ಆಸುಪಾಸಿನ ಬೀದಿಗಳ ಎಲ್ಲ ಮನೆಯವರು, ಮನೆಯ ಎಲ್ಲರ ಕಾಯಿಲೆ ಕಸಾಲೆಗಳು ತನಗೆ ಗೊತ್ತೆಂದು ನಟರಾಜ ಹೆಮ್ಮೆಯಿಂದ ಹೇಳಿಕೊಂಡ.

ಈವತ್ತಿನ ದಿನಗಳಲ್ಲೂ ಕೂಡ ತಪಾಸಣೆಗೆ ಬಂದವರಿಂದ ಹತ್ತು ರೂಪಾಯಿ, ಚುಚ್ಚುಮದ್ದು ಹಾಕುವುದಕ್ಕೆ ನಾಲ್ಕು ರೂಪಾಯಿ ಮಾತ್ರವೇ ತೆಗೆದುಕೊಳ್ಳುವುದೆಂದು ಹೇಳುವಾಗ ಧ್ವನಿಯಲ್ಲಿ ಸಿನಿಕತನವಾಗಲೀ, ಅಸಹಾಯಕತೆಯಾಗಲೀ ಇರಲಿಲ್ಲ. ಇದು, ಇಷ್ಟೇ ನನ್ನ ಜೀವನವೆನ್ನುವಂತಹ ಧಾಟಿಯ ಮಾತು.

ಬೆಂಗಳೂರಿನ ತುಂಬಾ ನರ್ಸಿಂಗ್ ಹೋಂ, ಕಾರ್ಪೊರೇಟ್ ಆಸ್ಪತ್ರೆಗಳೇ ತುಂಬಿ ಕೊಂಡಿರುವಾಗ ಹೀಗೆ ಪುಟ್ಟ ಕ್ಲಿನಿಕ್ನ್ನು ನಡೆಸಿಕೊಂಡು ಹೋಗುತ್ತಿರುವ ನಟರಾಜನನ್ನ ನಾನು ಎಂದೂ ಬಿಟ್ಟೇ ಇರಲಿಲ್ಲವೆಂಬ ಭಾವನೆ ಬಹು ಬೇಗ ಬಂದುಬಿಟ್ಟಿತು. ಸ್ನೇಹಿತರಿಗೆ, ಆತ್ಮೀಯತೆಗೆ ಹುಡುಕಾಡುವ ಕರಕರೆ ಮರೆತೇಹೋಯಿತು.

ಒಂದೆರಡು ಕುರ್ಚಿ, ನಾಲ್ಕು ಬೆಂಚು, ರೋಗಿಗಳ ತಪಾಸಣೆಗೆಂದು ಒಂದು ಎತ್ತರದ ಟೇಬಲ್, ಒಂದು ಪುಸ್ತಕದ ಸ್ಟ್ಯಾಂಡ್, ಇನ್ನೊಂದು ಔಷಧಿಗಳ ಶೆಲ್ಫ್, ಒಂದು ಉದ್ದನೆಯ ಕ್ಯಾಲೆಂಡರ್- ಇಷ್ಟೆಲ್ಲ ಸೇರಿ ನಿರ್ಮಾಣವಾಗಿದ್ದ ನಟರಾಜನ ಕ್ಲಿನಿಕ್ನಲ್ಲಿ ಬೆಳಿಗ್ಗೆ ಸುಮಾರು ಹತ್ತು-ಹತ್ತೂವರೆಗೆ ಜನಸಂದಣಿ ಕಡಮೆಯಾಗೋದು, ಮತ್ತೆ ನಾಲ್ಕು-ನಾಲ್ಕೂವರೆಯ ನಂತರವೇ ಜನ.

ಮಧ್ಯೆ ಕೂಡ ಆಗಾಗ್ಗೆ ಒಂದಿಬ್ಬರು. ಬಂದವರೆಲ್ಲ ತಮ್ಮ ಕಾಯಿಲೆ ಕಸಾಲೆ ಜೊತೆಗೆ ಮನೆಯ ಕಷ್ಟ, ಸುಖ, ಕೋಟಲೆಗಳನ್ನು ಕೂಡ ಹೇಳಿಕೊಳ್ಳುತ್ತಾ ಕುಳಿತುಬಿಡೋರು. ಭೈರಸಂದ್ರದಿಂದ ಬಸ್ಸು ಹಿಡಿದು ನಾನು ಕ್ಲಿನಿಕ್ ತಲುಪುವ ಹೊತ್ತಿಗೆ ಪ್ರತಿದಿನವೂ ಹನ್ನೊಂದರ ಸುಮಾರು.

ನಂತರ ದಿನದುದ್ದಕ್ಕೂ ನಟರಾಜನ ಜೊತೆ ಆತ್ಮೀಯವಾಗಿ ಹರಟುತ್ತಾ ಕ್ಲಿನಿಕ್ನಲ್ಲಿ ಹಾಜರಿರುತ್ತಿದ್ದ ನನ್ನನ್ನು ಕಂಡರೆ ಕೆಲವರಿಗೆ ಕುತೂಹಲ, ಮತ್ತೂ ಕೆಲವರಿಗೆ ಕಸಿವಿಸಿ. ಇನ್ನೂ ಕೆಲವರು ನನ್ನನ್ನು ದುರುಗುಟ್ಟುಕೊಂಡೇ ನೋಡೋರು.

ಮೊನ್ನೆ ಬುಧವಾರ ನೀರಿನ ಬಿಲ್ ಕಟ್ಟುವುದಕ್ಕೆಂದು ಜಲಮಂಡಳಿ ಆಫೀಸಿಗೆ ಹೋಗಿ ನಂತರ ಕ್ಲಿನಿಕ್ಗೆ ಬಂದದ್ದರಿಂದ ಹನ್ನೆರಡೂವರೆ ದಾಟಿತ್ತು. ನಮ್ಮಿಬ್ಬರಿಗಿಂತಲೂ ಎರಡು-ಮೂರು ವರ್ಷ ದೊಡ್ಡವರಂತೆ ಕಾಣುತ್ತಿದ್ದ ಮುದುಕರೊಬ್ಬರು ನಟರಾಜನ ಎದುರು ಕುಳಿತು ಆತ್ಮೀಯ ಭಂಗಿಯಲ್ಲಿ ಮಾತನಾಡುತ್ತಿದ್ದಾರೆ.

ಪರಿಚಿತ ಮುಖದಂತೆ ಕಂಡಿತು. ನಮ್ಮ ವರ್ಗದ ಜನರನ್ನೇ ಸದಾ ನೋಡುತ್ತಿದ್ದರೆ ಕಂಡವರೆಲ್ಲರೂ ಪರಿಚಿತರೇ ಎನ್ನುವ ಭಾವವೇ ಇದು ಎಂದು ಪ್ರಶ್ನಿಸಿಕೊಂಡಾಗಲೂ ಪರಿಚಿತರಂತೆಯೇ ಕಂಡರು.

ಬಾದಾಮಿ ಬಣ್ಣದ ಸಿಲ್ಕ್ ಜುಬ್ಬ, ಹಣೆ ತುಂಬಾ ವಿಭೂತಿ, ಕುಂಕುಮ, ಜುಬ್ಬದ ಮುಂಭಾಗದ ಜೋಬಿನಲ್ಲಿ ತುಂಬಿಕೊಂಡಿರುವ ಕಾಗದ ಪತ್ರಗಳಿಂದಾಗಿ ಜೇಬು ಉಬ್ಬಿದೆ. ಜೊತೆಗೆ ದಪ್ಪ ಫೌಂಟನ್ ಪೆನ್ ಬೇರೆ. ಮಾತು ನಿಲ್ಲಿಸಿ ಇಬ್ಬರೂ ಗಾಢ ಮೌನದಲ್ಲಿ ಕೂತರು.

ಮುದುಕಪ್ಪ ಎದುರಿಗಿರುವ ಮ್ಯಾಗಜಿನ್ ಪುಟಗಳನ್ನು ನಿಧಾನವಾಗಿ ತಿರುವಿ ಹಾಕುತ್ತಿದ್ದರೆ, ನಟರಾಜ ಕೂಡ ಎದುರಿಗಿದ್ದ ಸ್ಟೆತಾಸ್ಕೋಪಿನ ಜೊತೆ ಅನ್ಯಮನಸ್ಕನಾಗಿ ಆಡುತ್ತಿದ್ದ. ಮುದುಕಪ್ಪ ನಿಧಾನವಾಗಿ ಎದ್ದು, ನಾನು ಕೇಳಿದ ಪ್ರಶ್ನೆಗಳೆಲ್ಲ ನಿಮ್ಮ ಹತ್ತಿರವೇ ಇರಲಿ ಎನ್ನುತ್ತಾ ಹೊರಟೇಬಿಟ್ಟಿತು. ಮುದುಕಪ್ಪನ್ನ ಬಿಡೋಕೆ ನಟರಾಜ್ ಗೇಟ್ ತನಕ ಹೋದ.

ಗೇಟ್ ದಾಟಿ ಹೊರಟ ಮುದುಕನ ನೇರ ನಡಿಗೆ, ದೊಡ್ಡ ದೊಡ್ಡ ಹೆಜ್ಜೆ, ಉದ್ದವಾಗಿ ಕೈ ಬೀಸುವ ರೀತಿಗಳಲ್ಲೇ ಎಷ್ಟೊಂದು ಆತ್ಮಪ್ರತ್ಯಯ. ಮುದುಕಪ್ಪ ಮರೆಯಾದ ನಂತರವೂ ನಟರಾಜ್ ಗೇಟ್ ಹತ್ತಿರವೇ ನಿಂತಿದ್ದ.

ಮತ್ತೆ ಕ್ಲಿನಿಕ್ ಒಳಗಡೆ ಬಂದು ನಿಟ್ಟುಸಿರು ಬಿಡುತ್ತಾ ಕುರ್ಚಿಯಲ್ಲಿ ಕುಳಿತು ಡ್ರಾಯರ್ನಿಂದ ನೋಟ್ಪುಸ್ತಕ ತೆಗೆದು ಬರವಣಿಗೆಗೆ ಶುರು ಮಾಡಿದ. ಬರವಣಿಗೆ ಮುಗಿಸಿ ಪುಸ್ತಕವನ್ನು ನನ್ನ ಕಡೆಗೆ ತಳ್ಳುತ್ತಾ, `ಈ ಮುದುಕ ರೋಗಿಯೋ, ನಕಲಿಯೋ, ಜಿಜ್ಞಾಸುವೋ ಒಂದೂ ತಿಳಿಯುವುದಿಲ್ಲ.

ಈತ ಕೇಳಿದ ಪ್ರಶ್ನೆಗಳನ್ನು, ಇದಕ್ಕೆ ಕೆಲವೊಮ್ಮೆ ನನಗೆ ತಿಳಿದ ಉತ್ತರಗಳನ್ನು, ನಾವಾಡುತ್ತಿದ್ದ ಇತರ ಮಾತುಗಳನ್ನು ಇಲ್ಲಿ ನಮೂದಿಸಿದ್ದೇನೆ. ನಾನು ಔಷಧಿ ಕೊಟ್ಟೋ, ಚಿಕಿತ್ಸೆ ನೀಡಿಯೋ ಸರಿಪಡಿಸುವಂತಹ ರೋಗ ಈ ಮುದುಕನಿಗಿಲ್ಲ.

ಆದರೂ ಈ ಮುದುಕ ಬರುವ ಲೆಕ್ಕಾಚಾರ ಚೂರು ತಪ್ಪಿದರೂ ಕಣ್ಣೆಲ್ಲ ಮಂಜಾಗುತ್ತೆ. ದೇಹವೆಲ್ಲ ಮರಗಟ್ಟಿಹೋಗುತ್ತೆ. ನಾಲಿಗೆಯ ಮೇಲಿನ ದ್ರವವೆಲ್ಲ ಒಣಗಿ ಒಂದು ರೀತಿಯ ಸಂಕಟ ಶುರುವಾಗಿಬಿಡುತ್ತೆ~.

ಪುಸ್ತಕದ ಪುಟಗಳನ್ನು ತಿರುವು ಹಾಕಲು ಶುರು ಮಾಡಿದ ನನ್ನನ್ನು ಕುರಿತು ನಟರಾಜ ಹೇಳಿದ:

`ಮನೆಗೆ ತಗೊಂಡು ಹೋಗಿ ನಿಧಾನವಾಗಿ ಓದು. ಮತ್ತೆ ಮುದುಕ ಬಂದ ದಿನ ಮಾತ್ರ ನನಗೆ ಈ ಪುಸ್ತಕ ಬೇಕು. ಯಾರ ಕಣ್ಣಿಗೂ ಬೀಳಬಾರದು, ಗೊತ್ತಾಗಬಾರದು ಮಾತ್ರ~.
ಟಿಪ್ಪಣಿ, ಸಾರಾಂಶ, ಸಂಭಾಷಣೆ ಎಲ್ಲವೂ ಬೆರೆತಿದ್ದ ಪುಸ್ತಕ ಹೀಗಿತ್ತು.

ಸೆಪ್ಟೆಂಬರ್ ಎರಡನೆಯ ಮಂಗಳವಾರ:
ಪದಬಂಧ ಬಿಡಿಸೋದು ಮುಕ್ತಾಯದ ಹಂತದಲ್ಲಿದ್ದಾಗ ಎದುರಿಗೆ ಬಂದು ನಿಂತು ಕೆಮ್ಮಿ ಗಮನ ಸೆಳೆದದ್ದು. ಕೆಮ್ಮು ಬಲವಂತದ್ದು ಎನಿಸಿತು. ನಗುತ್ತಿದ್ದರೂ ಮುಖವೆಲ್ಲಾ ಸಪ್ಪಗಿತ್ತು. ಒಳಗೆ ಹೋಗಿದ್ದ ಕಣ್ಣುಗಳಲ್ಲೂ ಒಂದು ರೀತಿಯ ಮಿಂಚು.

ಕುಳಿತುಕೊಳ್ಳುವುದಕ್ಕೆ ಮುಂಚೆಯೇ ಸ್ಪಷ್ಟ ಮಾತಿನಲ್ಲಿ ಹೇಳಿದ್ದು: `ಬೆಳಿಗ್ಗೆಯಿಂದ ಮೂರು ನಾಲ್ಕು ಸಲ ಭೇದಿ. ತುಂಬಾ ನೀರು ನೀರಾಗಿ ಹೋಗುತ್ತೆ. ತುಂಬಾ ಸುಸ್ತಾಗ್ತಾಯಿದೆ~.

ಟೇಬಲ್ ಮೇಲೆ ಇಟ್ಟುಕೊಂಡಿದ್ದ ಎಡಗೈನ ನಾಡಿ ಹಿಡಿದು ಪರೀಕ್ಷಿಸಲು ಹೊರಟು ನಾಲಿಗೆಯನ್ನು ಕೂಡ ಬಾಯಿ ತೆರೆದು ಮುಂದೆ ನೀಡಬೇಕೆಂದು ಸೂಚಿಸಿದೆ.

`ಒಂದೊಂದು ಸಲ ಭೇದಿ, ವಾಂತಿ ಎರಡೂ ಒಟ್ಟಿಗೇ ಶುರುವಾಗುತ್ತೆ. ಬೆಳಿಗ್ಗೆ ಬೆಳಿಗ್ಗೆ ಎರಡೂ ಮೂರು ನಾಲ್ಕು ಸಲ. ಹೀಗೆ ನಿತ್ರಾಣವಾಗಿಬಿಡುತ್ತೆ~. ಮಾತು ನಿಲ್ಲಿಸುತ್ತಾ ನಾಲಿಗೆಯನ್ನು ಮುಂದೆ ಚಾಚಿತು.

ಕ್ಲೋರೋಸ್ಟೆಪ್ ಮಾತ್ರೆ ಬರೆಯುತ್ತಾ `ಆಯ್ತು, ಎಲೆಕ್ಟ್ರಾಲ್ ತಗೋಳಿ, ಸಕ್ಕರೆ ತೊಂದರೆ ಇಲ್ಲದಿದ್ದರೆ ಗ್ಲುಕೋಸ್ ಕೂಡ ತಗೋಳಿ, ಎಳನೀರು ಕುಡೀರಿ. ಸ್ವಲ್ಪ ದಿವಸ ಕುದಿಸಿ ಆರಿಸಿದ ನೀರು ಕುಡೀರಿ... ಆತಂಕವೇನೂ ಇಲ್ಲ~. ನಾನು ಹೇಳುತ್ತಿದ್ದುದನ್ನು ಕೇಳಿಸಿಕೊಳ್ಳುವ ಬದಲು ಮುದುಕನ ದೃಷ್ಟಿ ನನ್ನನ್ನೇ ಪರೀಕ್ಷಿಸುವಂತಿತ್ತು.

ನಾನು ನನ್ನ ಹೆಂಡತಿ ಲಕ್ಷ್ಮಿ ಯಾವತ್ತು ರಾತ್ರಿ ಕೂಡಿ ತುಂಬಾ ಸಂತೋಷಪಟ್ಟು ಚೆನ್ನಾಗಿ ನಿದ್ದೆ ಮಾಡತೀವೊ ಮಾರನೆ ಬೆಳಿಗ್ಗೇನೆ ಹೀಗಾಗಿಬಿಡುತ್ತೆ.

ಮುದುಕಪ್ಪ ಏನು ಹೇಳತಿರೋದು, ಯಾಕೆ ಹೇಳತಿರೋದು ಅಂತ ಗೊತ್ತಾಗದೇ ಹೋದರೂ ಸಂಬಂಧವಿಲ್ಲದ ಕಸಿವಿಸಿಯ ಮಾತು ಎಂದುಕೊಂಡು ಮಾತಿಗೆ ಗಮನ ಕೊಡದೆ, ಮಾತ್ರೆ ಮತ್ತಿತರ ಸೂಚನೆಗಳನ್ನು, ಚೀಟಿಯನ್ನು ಆತನ ಕಡೆಗೆ ತಳ್ಳಿದೆ.
`ಮಾತ್ರೆಗಾಗಲೀ, ಔಷಧಿಗಾಗಲೀ, ವಾಂತಿ ಭೇದಿಗಾಗಲಿ ಸಂಬಂಧವಿಲ್ಲವೆನಿಸುತ್ತೆ.

ನಾವು ಹೀಗೆ ಕೂಡಿ ಸಂತೋಷ ಪಡತಾಯಿರೋದ್ರಿಂದ ಹೀಗಾಗ್ತಾಯಿರಬಹುದಲ್ಲವೆ? ನಾನು ಬಂದದ್ದು ಇದೆಲ್ಲ ಏಕೆಂದು ವಿಚಾರಿಸೋಕೆ ವಿನಹ ನಿಮ್ಮ ಮಾತ್ರೆ ಔಷಧಿಗಲ್ಲ~.
ತುಂಬಾ ಸಾವಧಾನವಾಗಿ ಮಾತಾಡುತ್ತಿದ್ದ ಮುದುಕನ ಮಾತಿನಲ್ಲಿ ಕುಹಕ, ಕಿಚಾಯಿಸುವಿಕೆ ಕಾಣಲಿಲ್ಲ.

ಇದುವರೆಗೆ ನಮ್ಮ ಕ್ಲಿನಿಕ್ಗೆ ಬಂದ ಯಾವ ರೋಗಿಯೂ ಹೀಗೆ, ಮಾತಾಡಿರಲಿಲ್ಲ, ಇಂತಹ ಪ್ರಶ್ನೆ ಕೇಳಿರಲಿಲ್ಲವಾಗಿ ನನಗೂ ಕಸಿವಿಸಿಯಾಗಿ ಏನು ಹೇಳಬೇಕೆಂದು, ಹೇಗೆ ಮಾತು ಮುಗಿಸಬೇಕೆಂದು ಗೊತ್ತಾಗದೇ ಚಡಪಡಿಸುತ್ತಿದ್ದಾಗ,`ಮತ್ತೆ ಬಂದು ಕಾಣ್ತೀನಿ~- ಎಂದು ಮುದುಕ ಹೊರಟೇಬಿಟ್ಟಿತು. ಔಷಧಿ ಮಾತ್ರೆ ಬೇಡವೆಂದಿದ್ದರೂ ನಾನು ಮಾತ್ರೆ ಹೆಸರು ಬರೆದಿದ್ದ ಚೀಟಿಯನ್ನು ಎಡಗೈ ಅಂಗೈಯಲ್ಲಿ ಭದ್ರವಾಗಿ ಅದುಮಿ ಹಿಡಕೊಂಡು ಹೊರಟಿತು.

ಸೆಪ್ಟೆಂಬರ್ ಕೊನೆಯ ಶನಿವಾರ:
ಮುದುಕಪ್ಪ ಈವತ್ತು ಮಟಮಟ ಮಧ್ಯಾಹ್ನ ಮೀರಿದ ಮೇಲೆ ಬಂತು. ಕುಳಿತುಕೊಳ್ಳುವ ಮೊದಲೇ ಕಡತವೊಂದನ್ನು ಮುಂದಿಟ್ಟು ಬಿಡಿಸಲು ಪ್ರಾರಂಭಿಸಿತು.

`ನೋಡಿ ಡಾಕ್ಟರೆ, ಈ ಫೈಲಿನಲ್ಲಿ ನಮ್ಮ ಮನೆತನದ ನಾಲ್ಕು ತಲೆಮಾರುಗಳ ಲಗ್ನಪತ್ರಿಕೆಯಿದೆ. ಪ್ರಿಂಟಾದದ್ದಲ್ಲ, ಕೈನಲ್ಲೇ ಬರೆದದ್ದು. ಕಾಗದವೆಲ್ಲ ಮೆತ್ತಗಾಗಿಹೋಗಿದೆ, ಸವೆದುಹೋಗಿದೆ. ಮುಟ್ಟಬೇಡಿ, ಹಾಗೇ ನೋಡಿ~.

ಪುರಾತನ ಕಾಲದ ಕಾಗದಗಳಂತೆ ಕಾಣುತ್ತಿದ್ದ ಆ ಲಗ್ನಪತ್ರಿಕೆಗಳಲ್ಲೂ ಕೆಲವು ಪತ್ರಗಳ ಅಂಚಿನಲ್ಲಿ ಅರಿಶಿನದ ಬಣ್ಣ ಕಾಣುತ್ತಿತ್ತು. ಇನ್ನು ಕೆಲವು ಪತ್ರಿಕೆಗಳಲ್ಲಿ ಅಕ್ಷರಗಳು ಮಸುಕಾಗಿದ್ದವು. ಮತ್ತೂ ಕೆಲವು ಪತ್ರಿಕೆಗಳು ಮಧ್ಯೆ ಮಧ್ಯೆ ಬಿರುಕುಬಿಟ್ಟಿದ್ದವು. ಇದನ್ನೇ ಗಮನಿಸುತ್ತಿದ್ದ ನನಗೆ ಮುದುಕಪ್ಪನೇ ಮತ್ತೆ ಮಾತಿಗೆಳೆಯಿತು.

ಮುದುಕ: ಏನು ಡಾಕ್ಟ್ರೇ, ನಾನು ಹೇಳಿದ್ದು ಏನಾದರೂ ಯೋಚಿಸಿದಿರಾ?
ಮಾತಿಗೆ ತಕ್ಷಣವೇ ಹೊರಳಲು ನನಗೆ ಕಷ್ಟವಾಗಿ ಪೆಚ್ಚುಪೆಚ್ಚಾಗಿ ಮುದುಕಪ್ಪನ ಮುಖವನ್ನೇ ನೋಡಿದೆ.

ಮುದುಕ: ನಿಮ್ಮನ್ನು ನೋಡಿದರೆ ನನಗಿಂತ ನಾಲ್ಕೈದು ವರ್ಷ ಚಿಕ್ಕವರ ತರ ಕಾಣ್ತೀರಿ. ನಿಮಗೂ ನನ್ನ ರೀತಿಯ ಅನುಭವ ಆಗಿದೆಯೇ?

ಉತ್ತರ ಕೊಡಲೇಬೇಕಾದಂತಹ ಒತ್ತಾಯ ಹೇರುವ ಮಾತುಗಳು. ಮುದುಕಪ್ಪನ ಪ್ರಶ್ನೆಗೆ ಉತ್ತರವಾಗಿ ಒಳಗಡೆಯೆಲ್ಲ ಕಲಸಿದ, ಪೆಚ್ಚುಪೆಚ್ಚಾದ ಅನುಭವ. ಒಂದು ಕ್ಷಣದಲ್ಲೇ ರೋಷ ಮೂಡಿತು. ಮುದುಕಪ್ಪನ ಮಾತಿನಲ್ಲಿದ್ದ ಗಾಂಭೀರ್ಯ, ಕಳಕಳಿಯೇ ಕಾರಣವಾಗಿ ಮುಂದಿನ ಕ್ಷಣದಲ್ಲೇ ನಾನೇ ಸಾವರಿಸಿಕೊಂಡು ನಗುತ್ತಾ, `ನಾನು ಇದರ ಬಗ್ಗೆಯೆಲ್ಲ ಅಷ್ಟೊಂದು ಯೋಚಿಸಿಲ್ಲ, ಯೋಚಿಸೋಲ್ಲ.

ನಮಗೂ ಕೂಡ ವಯಸ್ಸಾಯಿತು ನೋಡಿ. ಯಾವುದರಲ್ಲೂ ಈಗ ಮೊದಲಿನ ಧಾವಂತವಿಲ್ಲ. ಆತುರವಿಲ್ಲ. ಮನಸ್ಸು ದೇಹ ಕೂಡ ಸರ್ವೇಸಾಧಾರಣವಾಗಿ ಒಂದೇ ರೀತಿ ಇರಲು ಇಷ್ಟಪಡುತ್ತೆ. ಯಾವುದನ್ನೂ ಲೆಕ್ಕ ಹಾಕಿ ಬಯಸೋಲ್ಲ. ನಮಗೇ ಗೊತ್ತಿಲ್ಲದ ಹಾಗೆ ಯಾವಾಗಲಾದರೂ ಒಂದೊಂದು ಸಲ ಅಚಾನಕ್ ಆಗಿ ಕೂಡಿಬಿಟ್ಟಿರತೀವಿ. ಎಲ್ಲ ಮುಗಿದಮೇಲೆ ನಮಗೇ ಆಶ್ಚರ್ಯವಾಗುತ್ತೆ~.

ಯಾವತ್ತೂ ಯಾರ ಹತ್ತಿರವೂ ಇಂತಹ ಖಾಸಗಿ ವಿಷಯವನ್ನು ಹೇಳಿಕೊಂಡಿರಲಿಲ್ಲ. ಇಂತಹ ವಿಷಯವನ್ನೆಲ್ಲ ಹೇಳಿಕೊಳ್ಳುವಂತಹ ಮಿತ್ರರಾಗಲೀ, ಮಿತ್ರರ ನಡುವೆ ಇದೆಲ್ಲ ಪ್ರಸ್ತಾಪಿಸಬೇಕಾದಂತಹ ಸಂಗತಿಯೆಂದಾಗಲೀ ನಮ್ಮ ವಲಯದಲ್ಲಿ ಭಾವಿಸಿರಲಿಲ್ಲ.

ನಮ್ಮ ವಲಯದಲ್ಲಿ ಖಾಸಗಿ ವಿಷಯವೆಂದರೆ ನಮಗೆ ಮಾತ್ರವೇ ಗುಟ್ಟಾಗಿ ಸಿಗುವಂತಹ ಶೇರು, ಸೈಟುಗಳ ಪ್ರಸ್ತಾಪ. ವೃತ್ತಿಯಲ್ಲಿ ಬಡ್ತಿಗಾಗಿ ಮಾಡುವಂತಹ ಉಪಾಯಗಳು ಮಾತ್ರ. ಪರಿಚಯವೇ ಇಲ್ಲದ ಈ ಮುದುಕಪ್ಪನ ಮುಂದೆ ಮಾತ್ರ ಹೀಗೆ ಇದ್ದಕ್ಕಿದ್ದಂತೆ ಮಾತಾಡೋಕೆ ಸಾಧ್ಯವೇನೋ.

ಮುದುಕ: ಎಷ್ಟೊಂದು ಮುಖ್ಯವಾದ, ಆತ್ಮೀಯವಾದ ಸಂಗತಿ ಬಗ್ಗೆ ಯೋಚನೆ ಮಾಡದೆ ಕೂಡ ನಡೆದುಹೋಗುತ್ತೆ ನೋಡಿ. ದುರಂತವಲ್ಲವೇನು ಇದು!

ಮುದುಕಪ್ಪ ನನ್ನನ್ನೇ ಕೇಳುತ್ತಿದ್ದರೂ ತನಗೆ ತಾನೇ ಹೇಳಿಕೊಳ್ಳುವಂತಿತ್ತು. ತಕ್ಷಣ ಉತ್ತರಿಸದೆ, ಕಡತದಲ್ಲಿದ್ದ ಲಗ್ನಪತ್ರಿಕೆಗಳನ್ನೇ ತೀವ್ರವಾಗಿ ದೃಷ್ಟಿಸುತ್ತಾ, ಪತ್ರಗಳ ಮೇಲೆ ಮಮಕಾರದಿಂದ ನೇವರಿಸುತ್ತಾ,

`ಈ ವಾಂತಿ ಭೇದಿ ಇದೆಲ್ಲ ನಾವು ಕೂಡಿದ ಮಾರನೇ ಬೆಳಿಗ್ಗೇನೆ ಆಗೋದು. ಈಚೀಚೆಗೆ ಕೂಡಿದಾಗಲೆಲ್ಲ ಕೋಣೆಯೊಳಗೆ ಯಾರ್ಯಾರೋ ಬಂದು ಹೋಗೋದು, ಬಳೆ ಗಂಟೆಗಳ ಶಬ್ದ, ಪಿಟೀಲು ನಾದ, ರೇಶ್ಮೆ ಸೀರೆಯ ಜರಿಯ ಶಬ್ದ, ಚಪ್ಪಾಳೆ, ಕೇಕೆ ಎಲ್ಲವೂ ಕೇಳಿಸುತ್ತೆ; ನನ್ನ ಹೆಂಡತಿಗೆ ನಾನು ಇದನ್ನೆಲ್ಲ ಹೇಳೋಕೆ ಹೋಗಿಲ್ಲ.

ಮೊನ್ನೆ ನಮ್ಮ ತಾಯಿ-ತಂದೆ ಇಬ್ಬರೂ ಬಂದು ಮಂಚದ ಹಿಂದುಗಡೆ ಎಷ್ಟು ಹೊತ್ತು ನಿಂತಿದ್ದರು ಗೊತ್ತಾ. ಹೋಗುವಾಗ ಮುಖದ ತುಂಬಾ ನಗುತ್ತಾ ಹರಸುವ ಧಾಟಿಯಲ್ಲಿ ಕೈ ಎತ್ತಿದರು. ನಮ್ಮ ತಾಯಿಯಂತೂ ಹಾಸಿಗೆಯನ್ನು ಮೃದುವಾಗಿ ಸವರಿ ಹಾಯ್ ಎಂದು ಮೆಲ್ಲಗೆ ಹೇಳಿಕೊಳ್ಳುತ್ತಾ ಹೋದರು.

ಪಾಪ, ನೋಡಿ, ನಮ್ಮ ತಂದೆ-ತಾಯಿಗೆ ಹನ್ನೊಂದು ಮಕ್ಕಳು. ಈಗಿನ ಕಾಲದ ಹಾಗೆ... ಬಾಣಂತನಕ್ಕಾಗಲೀ, ಮಕ್ಕಳ ಬಗ್ಗೆ ಕನಸು ಕಾಣೋದಕ್ಕಾಗಲೀ ಸಮಯವಾಗಲೀ, ಅನುಕೂಲವಾಗಲೀ ಎಲ್ಲಿತ್ತು ಹೇಳಿ.

ನಾವು ಮಾತ್ರ ದಂಪತಿಗಳಾಗಿ ಈಗಲೂ ಇನ್ನೂ ಎಷ್ಟು ಸುಖವಾಗಿದೀವಿ. ನಮ್ಮ ತಂದೆ-ತಾಯಿ ಕೂಡ ನಮ್ಮಷ್ಟೇ ಸುಖವಾಗಿ, ಸಂಪನ್ನವಾಗಿ ಬದುಕಿದ್ದರೆ ಎಷ್ಟು ಚೆನ್ನಾಗಿತ್ತು. ನಾವು ಯಾವತ್ತೂ ನಮ್ಮ ತಂದೆ-ತಾಯಿಗಳು ಸುಖವಾಗಿದ್ದರ ಬಗ್ಗೆ ಯೋಚಿಸೋಕೆ ಹೋಗೋಲ್ಲ. ನಮ್ಮ ಹುಟ್ಟಿಗೆ ಕಾರಣವಾದದ್ದರ ಬಗ್ಗೆ ಇರುವ ಕೃತಜ್ಞತೆಯ ಭಾವವನ್ನೇ ಪ್ರೀತಿಯೆಂದು ತಿಳಕೊತೀವಿ.

ಆದರೆ ನಮ್ಮ ತಂದೆ-ತಾಯಿಗಳನ್ನು ನೋಡಿ, ಪ್ರತಿ ಸಲ ಕೂಡುವಾಗಲೂ ಬಂದು ಆಶೀರ್ವದಿಸುತ್ತಾರೆ. ನನಗೇನೋ ನಮ್ಮ ತಂದೆ-ತಾಯಿ ಈ ಬಾಬ್ತಿನಲ್ಲಿ ನಮಗಿಂತಲೂ ಹೆಚ್ಚು ಸುಖವಾಗಿದ್ದರೆಂದೇ ನಂಬಿಕೆ. ಹೇಗೆ ಬಂದು ಖುದ್ದಾಗಿ ನಿಂತು ಹರಸತಾರೆ, ನೋಡಿ. ನಿಮ್ಮ-ತಂದೆ-ತಾಯಿ~.

ಮುದುಕಪ್ಪನ ಮಾತುಗಳನ್ನೆಲ್ಲ ಮಂತ್ರಮುಗ್ಧನಾಗಿ ಕೇಳಿಸಿಕೊಳ್ಳುತ್ತಿದ್ದ ನನಗೆ, `ನಿಮ್ಮ ತಂದೆ-ತಾಯಿ~ ಎಂದಾಕ್ಷಣ ಮೈಗೆಲ್ಲಾ ಒಂದು ರೀತಿಯ ಚಳಕು ಹೊಡೆದಂತಾಯಿತು. ಮುದುಕಪ್ಪನ ಆ ದಿನದ ಮಾತು ಮುಗಿದಿತ್ತೇನೋ, ಮತ್ತೆ ಸಿಗತೀನಿ ಎನ್ನುತ್ತಾ ಲಗ್ನಪತ್ರಿಕೆಗಳನ್ನೆಲ್ಲ ಬಹು ಎಚ್ಚರಿಕೆಯಿಂದ ಜೋಡಿಸಿಕೊಳ್ಳುತ್ತಾ ಹೊರಟೇಹೋಯಿತು.

ನನಗೆ ಕುರ್ಚಿ ಬಿಟ್ಟು ಏಳಲು ಆಗಲೇ ಇಲ್ಲ. ಮನಸ್ಸಿನ ಭಾವ ತಿಳಿದವರಂತೆ ಯಾವ ರೋಗಿಗಳೂ ಬರಲೂ ಇಲ್ಲ. ನಮ್ಮ ತಂದೆ-ತಾಯಿ ಬಗ್ಗೆ ನೆನಪುಗಳನ್ನು ಜೋಡಿಸಿಕೊಳ್ಳಲು ಪ್ರಯತ್ನಿಸಿದೆ. ನೆನಪಿಗೆ ಸಿಕ್ಕುವಾಗಿನಿಂದಲೂ ಇಬ್ಬರೂ ಬೇರೆ ಬೇರೆ ಕೋಣೆಯಲ್ಲೇ ಮಲಗುತ್ತಿದ್ದರಲ್ಲವೇ.

ಅಪ್ಪ-ಅಮ್ಮನನ್ನು ಮನೆ ಒಳಗಾಗಲೀ, ಬಂಧು ಬಳಗದ ಎದುರಾಗಲೀ ನೋಡುತ್ತಿದ್ದುದು, ಮಾತನಾಡಿಸುತ್ತಿದ್ದುದು ಹಳ್ಳಿಯ ಸಾಹುಕಾರರ ತರಹವೇ. ಈ ಮುದುಕಪ್ಪ ಹೇಳಿದ ಸುಖ-ಸಂಪನ್ನತೆಯನ್ನೆಲ್ಲ ಎಲ್ಲಿ ಕಂಡಿರಬೇಕು?

ಮುಂದಿನ ಪುಟಗಳಲ್ಲಿ ಕೆಲವು ಹಳದಿ ಬಣ್ಣದ ಕಾಗದದಲ್ಲಿ ಬರೆದಿದ್ದು ಪಿನ್ ಸಮೇತ ಲಗತ್ತಿಸಲಾಗಿತ್ತು. ಮುದುಕಪ್ಪನ ಹಸ್ತಾಕ್ಷರವಿರಬೇಕು. ತಿಂಗಳು ಮತ್ತು ದಿನವನ್ನು ಮಾತ್ರ ಸೂಚಿಸಲಾಗಿತ್ತು. ವರ್ಷವನ್ನು ನಮೂದಿಸಿರಲಿಲ್ಲ. ಮುದುಕಪ್ಪನೇ ನಟರಾಜನ ಬಳಿ ಈ ರೀತಿಯ ಟಿಪ್ಪಣಿಗಳನ್ನು ಬಿಟ್ಟು ಹೋಗಿ ನಂತರ ಇದೆಲ್ಲ ಈ ಪುಸ್ತಕದಲ್ಲಿ ಸೇರಿರಬೇಕು.
5. 7...

ಕೂಡುವುದು ಒಂದು ರೂಢಿಯಾಗಿಬಿಟ್ಟಾಗ, ಚಪಲವಾಗಿಬಿಟ್ಟಾಗ ಕೂಡುವುದರ ಬಗ್ಗೆ ನಮ್ಮ ಬಗ್ಗೆ ಜಗತ್ತಿನ ಬಗ್ಗೆ- ಎಲ್ಲ ರೀತಿಯಿಂದಲೂ ಗೌರವ ಹೊರಟುಹೋಗುತ್ತೆ.
28. 6...

ಸುಷುಪ್ತಿಯೆಂಬುದು ನಿಜವೇ? ನಿಜವಾಗಿದ್ದರೂ ಪ್ರಜ್ಞೆಯ ತಿಳಿವಳಿಕೆಯ ಭಾಗವಲ್ಲವದು. ಇದೊಂದು ರೀತಿಯ ತಮಾಷೆ. ಹಂಬಲಿಸುವುದು ಸುಷುಪ್ತಿಗೆ, ಸ್ವಪ್ನಾವಸ್ಥೆಗೆ.

ಪ್ರಜ್ಞೆಗಾಗಲೀ, ನಮಗಾಗಲೀ, ಜಗತ್ತಿಗಾಗಲೀ ಸುಷುಪ್ತಿಯ ಕಾಣಿಕೆಯೂ ಬೇಡ, ಸ್ವಪ್ನದ ತಿಳಿವಳಿಕೆಯೂ ಬೇಡ. ಹೀಗಿರುವ ತನಕ ನಾವೂ ಬರಡು. ಕೂಡುವಿಕೆಯೂ ಬರಡು.
19. 10...

ಮೊನ್ನೆ ಚಿಕ್ಕಪ್ಪ ಬಂದಿದ್ದ. ಮೂರು ಮದುವೆಯಾದವ. ಕಾಮವೆಂದರೆ, ದೇಹವೆಂದರೆ ಯಾರಪ್ಪನ ಮನೆ ಗಂಟು ಎಂಬ ಧೋರಣೆ. ಎಲ್ಲವೂ ತನ್ನ ಸುಪರ್ದಿನಲ್ಲೇ ಬಿದ್ದಿದೆಯೆನ್ನುವ ಅಹಂಭಾವ.
20. 11..

ಚಿಕ್ಕಪ್ಪ ದಿಢೀರನೇ ಸತ್ತೇಹೋದ. ಹೆಣ ನೋಡೋಕೆ ಹೋಗಿದ್ದೆ. ಓ, ದೇವರೇ ಸತ್ತು ಮಲಗಿದ ದೇಹ ನೋಡಿದಾಗಲೂ ಈ ದೇಹದಲ್ಲಿ ಇನ್ನೂ ಎಷ್ಟೊಂದು ಬಯಕೆ, ಕಾಮ, ಕೂಡುವ ತಹತಹ ಹಾಗೇ ಇದೆಯಲ್ಲ ಎನಿಸಿತು. ಇವೆಲ್ಲ ಇನ್ನೂ ಉಳಿದಿರುವಾಗಲೂ ಮನುಷ್ಯ ಸತ್ತುಹೋಗಬಹುದೆ, ಇಲ್ಲ ಆತ್ಮಕ್ಕೆ ಪಯಣದ ಆತುರವೇ? ಎಲ್ಲೋ ಬಿರುಕಿದೆ. ದೇಹ ಭಸ್ಮವಾಗೋಕೆ ತುಂಬಾ ಸಮಯ ಹಿಡಿಯಿತಂತೆ.

ನಟರಾಜ ಕೊಟ್ಟ ಪುಸ್ತಕ ಓದಿದ ಮೇಲೆ ನನ್ನ ತಳಮಳ ಹೆಚ್ಚಾಯಿತು. ಮತ್ತೆ ಮತ್ತೆ ಪುಸ್ತಕದ ಪುಟಗಳನ್ನೇ ನೋಡಬೇಕೆನ್ನಿಸುತ್ತಿತ್ತು. ಓದುತ್ತಾ ಹೋದಂತೆ ಭಯವಾಗುತ್ತಿತ್ತು. ಮೇಲಾಗಿ ಸಿಕ್ಕಾಗಲೆಲ್ಲ ನಟರಾಜ, ಪುಸ್ತಕ ಓದಿದಿಯಾ, ಏನನ್ನಿಸಿತು ಎಂದು ನನ್ನನ್ನೇ ದೃಷ್ಟಿಸಿ ನೋಡಿ ಕೇಳುತ್ತಿದ್ದ. ಒಂದು ನಾಲ್ಕು ಸಲ ಹೀಗೆ ಕೇಳಿದ ನಂತರ ಇನ್ನೊಂದು ಸಂಜೆ ಹೀಗೆ ಹೇಳಿದ.

`ನಿನ್ನ ಮನಸ್ಸಿನಲ್ಲಿ ನಡೀತಿರೋದನ್ನೆಲ್ಲ ತಿಳಕೋಬೇಕೆನ್ನುವ ಕುತೂಹಲಕ್ಕೆ ನಾನು ಕೇಳತಾಯಿಲ್ಲ. ನಿನ್ನ ಮನಸ್ಸನ್ನು ನೀನು ತಿಳಕೊಂಡರೆ ಸಾಕು. ನಿನ್ನ ಹೆಂಡತಿ ಹತ್ತಿರ ಬೇಕಾದರೆ ಮಾತಾಡಿದರೂ ಸರಿಯೇ~.

ನನಗೂ ಸರಿಯೆನಿಸಿದರೂ ಹೆಂಡತಿ ಹತ್ತಿರ ಪ್ರಸ್ತಾಪಿಸೋಕೆ ಹೋದಾಗಲೆಲ್ಲ ಒಂದು ರೀತಿಯ ಹಿಂಜರಿಕೆ. ಮಾತುಗಳೇ ಕೂಡಿ ಬರುತ್ತಿರಲಿಲ್ಲ. ಹೇಗೆ ಪ್ರಸ್ತಾಪಿಸುವುದೆಂದು ಯೋಚಿಸಿದಷ್ಟು ಹೆಂಡತಿ ಇನ್ನೂ ದೂರ ದೂರ ಹೋಗುತ್ತಿದ್ದಾಳೆನ್ನುವ ಭಾವ.

ಒಂದು ಸಂಜೆ ಆರತಕ್ಷತೆಗೆ ಹೋಗಬೇಕಿತ್ತು. ನಾನು ಸೂಟುಧಾರಿಯಾಗಿ ವರಾಂಡದಲ್ಲಿ ಮಂದ ಬೆಳಕಿನಲ್ಲಿ ಕುಳಿತಿದ್ದೆ. ಹೆಂಡತಿ ಇನ್ನಿಲ್ಲದಂತೆ ನಾಜೂಕಾಗಿ ಅಲಂಕಾರ ಮಾಡಿಕೊಂಡು ಬಂದು ನಸುನಕ್ಕು ಎದುರಿಗೆ ನಿಂತಾಗ ಅದೊಂದು ಕ್ಷಣ ಯಾವುದೋ ದೆವ್ವ ಪ್ರತ್ಯಕ್ಷವಾದಂತಾಗಿ ಬೆದರಿ ಮತ್ತೆ ಗಮನಿಸಿದರೆ ಎದುರು ನಿಂತವಳು ನನ್ನ ಹೆಂಡತಿಯೇ ಆಗಿದ್ದಳು.

ಮನೆಯಲ್ಲಿದ್ದ ಹಳೆಯ ಫೋಟೋಗಳ ಆಲ್ಬಂನಿಂದ ನಮ್ಮ ತಂದೆ-ತಾಯಿ, ನನ್ನ ಹೆಂಡತಿಯ ತಂದೆ-ತಾಯಿಗಳ ಜೀವನದ ಬೇರೆ ಬೇರೆ ಘಟ್ಟಗಳ ಫೋಟೋಗಳನ್ನು... ಹೊರತೆಗೆದು ನಮ್ಮ ಶಯ್ಯಾಗೃಹದ ಹಾಸಿಗೆಯ ಮೇಲೆ ಹರಡಿಕೊಂಡು ನಾನಾ ಕೋನಗಳಿಂದ ಮುದುಕಪ್ಪನ ವಿಚಾರಗಳ ಹಿನ್ನೆಲೆಯಲ್ಲಿ ಪರೀಕ್ಷಿಸುತ್ತಾ ಎಷ್ಟು ದಿನ, ಎಷ್ಟು ಹೊತ್ತು ಕುಳಿತರೂ ಫೋಟೋಗಳು, ಫೋಟೋಗಳಿಂದ ಹೊರಡುವ ಕಂಪನ, ಕಿರಣಗಳೆಲ್ಲ ಹಿಂದಿನಂತೆಯೇ ಇದ್ದವು.

ಮತ್ತೆ ಮತ್ತೆ ಅವನ್ನೇ ನೋಡಲಾಗಿ ಒಂದು ಹಂತದ ನಂತರ ಉಸಿರಾಡುವುದನ್ನು ಕೂಡ ನಿಲ್ಲಿಸಿ ನಿರ್ಜೀವವಾಗಿಬಿಟ್ಟವು. ಏನೂ ಮಾಡಲೂ ತೋಚದೆ ಕೂತಿದ್ದಾಗ ಇದ್ದಕ್ಕಿದ್ದಂತೆ ಇವಳು ಬಿರುಸಾಗಿ ಬಳಿಗೆ ಬಂದು, `ಇಲ್ಲ, ಇಲ್ಲ ನಮ್ಮಪ್ಪ ಅಮ್ಮನ ಫೋಟೋ ನೀವು ನೋಡಕೂಡದು.

ವಿಚಾರ ಮಾಡಕೂಡದು, ನಿಮ್ಮಪ್ಪ ಅಮ್ಮನ ಜೊತೆ ಹೋಲಿಸಕೂಡದು, ನಿಮಗೂ ನಮ್ಮ ತಾಯಿ-ತಂದೆಗೂ ಯಾವ ರೀತಿಯ ರಕ್ತ ಸಂಬಂಧವೂ ಇಲ್ಲ~ ಎಂದೆಲ್ಲ ರೇಗಾಡಿ ಫೋಟೋಗಳನ್ನು ಕಿತ್ತುಕೊಂಡು ಹೋಗಿ ಮಾರನೆ ದಿನ ಬೆಳಗಿನ ಪೂಜೆ ಸಮಯದಲ್ಲಿ ದೇವರ ಕೋಣೆಯಲ್ಲಿ ಪ್ರತಿಷ್ಠಾಪಿಸಿಬಿಟ್ಟಳು.

ಪೈಪೋಟಿಗೆಂಬಂತೆ ನಾನೂ ಕೂಡ ಹಾಗೇ ಮಾಡಿದರೂ ಸಿಟ್ಟು, ಅಸಹಾಯಕತೆ ಇನ್ನೂ ಹೆಚ್ಚಾಗುತ್ತಲೇ ಹೋಯಿತು. ನಮ್ಮಪ್ಪ ಅಮ್ಮ ಸತ್ತ ಎಷ್ಟೋ ವರ್ಷಗಳ ನಂತರ ಈಗ ಮತ್ತೊಮ್ಮೆ ಸ್ಪಷ್ಟವಾಗಿ ಯೋಚಿಸಿಬಿಡಬೇಕೆಂದರೆ, ಅವರುಗಳ ಬಗ್ಗೆ ಏನೂ ಹೊಳೆಯುತ್ತಿರಲಿಲ್ಲ. ಇಲ್ಲ, ಇಲ್ಲ ಮುದುಕಪ್ಪ ಹೇಳುವಂತೆ ಏನೂ ಗೊತ್ತೇ ಇಲ್ಲವಲ್ಲ.

ನಮ್ಮಪ್ಪ-ಅಮ್ಮನ ಜಗಳ, ಕದನ, ಮುನಿಸು, ಬೈದಾಟ- ಇವುಗಳನ್ನೇ ಪ್ರೀತಿಯ ಇನ್ನೊಂದು ರೀತಿಯ ನುಡಿಗಟ್ಟೆಂದು ಸ್ನೇಹಿತರ ಹತ್ತಿರವೆಲ್ಲ ವಿವರಿಸುತ್ತಿದ್ದುದು, ಸ್ನೇಹಿತರು ಕೂಡ ಅವರವರ ಅಪ್ಪ ಅಮ್ಮಂದಿರ ಬಗ್ಗೆ ಮತ್ತದೇ ಮಾತುಗಳನ್ನು ಹೇಳುತ್ತಿದ್ದುದು ಕೇವಲ ರೂಢಿಯ ಮಾತುಗಳೆಂದು ಹೊಳೆಯಿತು.

ನಾನೇ ಮದುವೆಯಾಗಿ ಕೌಟುಂಬಿಕ ಜೀವನ ಶುರುವಾದ ಮೇಲೂ ಒಂದೇ ಒಂದು ಸಲ ಕೂಡ ನಮ್ಮಪ್ಪ ಅಮ್ಮನ ಸುಖದ ಇತಿಹಾಸ, ಸಾಧ್ಯತೆಗಳ ಬಗ್ಗೆ ಯೋಚಿಸದೇ ಕಾಲ ಕಳೆದುಹೋಯಿತಲ್ಲ, ಅಂದರೆ ಮುದುಕಪ್ಪ ಹೇಳಿದ್ದೆಲ್ಲ ಯಾರ ಬಗ್ಗೆ? ಯಾರ್ಯಾರ ಬಗ್ಗೆ?
ಹಿರಿಯ ಮಗನಾದ್ದರಿಂದ ಇಬ್ಬರ ದೇಹಗಳನ್ನು ಸುಡಲೂ ನನ್ನದೇ ನಾಯಕತ್ವವಲ್ಲವೇ.

ಎರಡೂ ದೇಹಗಳೂ ನನ್ನೆದುರಿಗೆ ಬಂದು ನಿಂತವು. ಈಗೇನು ಮಾಡಬಲ್ಲೆ, ಈಗೇನು ನೋಡಬಲ್ಲೆ ಎಂಬಂತೆ. ಕಣ್ಣು ಮುಚ್ಚಿಕೊಂಡು ನೋಡಲು ನಿರಾಕರಿಸಿದರೂ ಕಣ್ಣೊಳಗೂ ಬಂದವು. ಅಪ್ಪನ ದೇಹದುದ್ದಕ್ಕೂ ನಾನಾ ಭಾಗಗಳಿಂದಲೂ ನಾಲಿಗೆ ಹೊರಬರೋದು, ಒಳಕ್ಕೆ ಹೋಗೋದು. ಬೆಳ್ಳ ಬೆಳ್ಳಗಿರುವ ನಾಲಿಗೆ. ಅಮ್ಮ ಎಡಗೈನಲ್ಲಿದ್ದ ಹಚ್ಚೆಯನ್ನು ನೋಡುವರು. ನಂತರ ನನ್ನನ್ನು ನೋಡುವರು.

ಅದೇಕೋ ಒಂದು ಸಲ ಹಚ್ಚೆಯಿದ್ದ ಕೈಯಿಂದಲೇ ಕಣ್ಣೀರು ಒರೆಸಿಕೊಂಡು ನನ್ನನ್ನೇ ನೋಡುತ್ತಾ ಹೊರಟೇಬಿಟ್ಟರು. ಅಮ್ಮ, ಅಮ್ಮ ಎಂದು ಕೂಗುತ್ತಾ ನಾನೂ ಕೂಡ ಹಿಂಬಾಲಿಸಿ ಹಿಡಿದುಕೊಳ್ಳಲು ಪ್ರಯತ್ನಿಸಿದೆ.

ಅಪ್ಪನ ದೇಹದುದ್ದಗಲಕ್ಕೂ ಈಚೆಗೆ ಬರುತ್ತಿದ್ದ ನಾಲಿಗೆಗಳು ಇನ್ನೂ ಉದ್ದವಾದವು. ನನ್ನನ್ನೇ ಹಿಂಬಾಲಿಸಿ ನಾನು ಅಮ್ಮನನ್ನು ಹಿಡಿದುಕೊಳ್ಳದಂತೆ ಸುತ್ತುವರಿದವು. ಇಬ್ಬರೂ ಕೈಗೆ ಸಿಗದೇ ಓಡೇಬಿಟ್ಟರು.

ಸಿಗಬಹುದೆಂದು ಕಣ್ಣುಮುಚ್ಚಿ ಧ್ಯಾನಿಸಿದರೂ ಮತ್ತೆ ಕಣ್ಣೊಳಗೂ ಮೂಡಲಿಲ್ಲ, ಕಣ್ಣಿನ ಹೊರಗೂ ಕಾಣಲಿಲ್ಲ. ಪೂಜೆಯ ಮನೆಯಲ್ಲಿದ್ದ ಫೋಟೋಗಳ ಹತ್ತಿರ ಹೋದರೆ ಇಬ್ಬರ ಫೋಟೋದಲ್ಲೂ ಮುಖಗಳು ಮರೆಯಾಗಿ ಹೋಗಿತ್ತು. ನಾನು ಹುಟ್ಟಿದ ದಿನ, ತಿಂಗಳ ಲೆಕ್ಕ ಹಿಡಿದು, ಆವಾಗ ನಮ್ಮ ಅಪ್ಪ ಅಮ್ಮ ಹೇಗಿರಬಹುದು, ನಾನು ಒಂದು ನಿರ್ದಿಷ್ಟ ದಿನ, ಸಮಯದಲ್ಲಿ ಹುಟ್ಟಬೇಕಾದರೆ ಅದಕ್ಕಾಗಿ ಅವರಿಬ್ಬರೂ ಕೂಡಿದ ಆ ದಿನವೂ ಹೇಗಿರಬಹುದು ಎಂದು ಎಷ್ಟೇ ಯೋಚಿಸಿದರೂ ಹೊಳೆಯಲಿಲ್ಲ.

ದಿನದ ಸ್ವಭಾವ, ಅವರಿಬ್ಬರ ಸ್ವಭಾವ ಯಾವುದೂ ತಿಳಿಯಲಿಲ್ಲ. ಕ್ಯಾಲೆಂಡರ್ ಲೆಕ್ಕ ಮಾತ್ರ ತಿಳಿದು ಅದೊಂದು ಬುಧವಾರ ಬೆಳಿಗ್ಗೆ, ಬೆಳಿಗ್ಗೆ ನಾನು ಹುಟ್ಟಿದ್ದು ಎಂಬುದು ಮಾತ್ರ ಗೊತ್ತಾಯಿತು.

ಮನೆಯಲ್ಲಿ ಎಲ್ಲೇ ಓಡಾಡಿದರೂ, ಹಾಸಿಗೆಯ ಮೇಲೆ ಹೊರಳಾಡಿದರೂ, ಮರಳ ರಾಶಿಯ ಮೇಲೆ ನಡೆದಾಡಿದ, ಹೊರಳಾಡಿದ ಅನುಭವ.

ಮೈಗೆ, ಮನಸ್ಸಿಗೆ ಹತ್ತಿದ ಮರಳಿನ ಕಣಗಳನ್ನೆಲ್ಲ ಚೆನ್ನಾಗಿ ಒದರಿಕೊಂಡು ನಟರಾಜನ ಹತ್ತಿರ ಮತ್ತೆ ಮತ್ತೆ ಹೋದರೂ ಏನನ್ನೂ ಪ್ರಸ್ತಾಪಿಸಬೇಕೆನ್ನುವ ಮನಸ್ಸು ಬರಲಿಲ್ಲ. ಹಾಗೆ ಪ್ರಸ್ತಾಪಿಸದೆ ಹೋದರೂ ಮನಸ್ಸಿನಲ್ಲೊಂದು ಬಗೆಯ ನಿರಾಳತೆ, ಸಮಾಧಾನ. ಮಾತನಾಡದೆ ಕೂಡ ಒಬ್ಬರೆದುರಿಗೊಬ್ಬರು ಸುಮ್ಮನೆ ಗಂಟೆಗಟ್ಟಲೆ ಕೂತಿರತಿದ್ದವಿ. ನನ್ನೆದುರಿಗೆ ಕುಳಿತೇ ನಟರಾಜ ಎಷ್ಟೇ ಹೊತ್ತಾದರೂ ಸರಿಯೇ ಕಣ್ಣು ಮುಚ್ಚಿ ಪ್ರಾಣಾಯಾಮ ಮಾಡುತ್ತಲೇ ಇರೋನು.

`ಎಲ್ಲಿ ಈಚೆಗೆ ಮುದುಕಪ್ಪ ಬರೋದೆ ಇಲ್ಲವಲ್ಲ~ - ನಾನೇ ಒಂದು ದಿನ ನಟರಾಜನನ್ನು ಕೇಳಬೇಕಾಯಿತು.

`ಹಾಗೇನಿಲ್ಲ. ನೀನು ಬಂದಾಗ ಕಾಣದೆ ಹೋಗಿರಬಹುದು. ಹೆಚ್ಚು ಬರುವುದಿಲ್ಲವೆನ್ನುವುದು ನಿಜ. ಇಬ್ಬರೂ ಈಗ ಅವರವರ ಕಡೆಯ ಮೂರು-ನಾಲ್ಕು ತಲೆಮಾರುಗಳ ದಾಂಪತ್ಯದ ಚರಿತ್ರೇನ ಬರೀತಿದಾರಂತೆ. ಮುದುಕಪ್ಪನ ಹೆಂಡತಿ ಕಡೆಯ ಹಳೆಯ ಲಗ್ನಪತ್ರಿಕೆಗಳು ಸಿಗುತ್ತಿವೆಯಂತೆ.

ಈ ಕೆಲಸಕ್ಕಾಗಿಯೇ ಈಗ ಓಡಾಟ, ಹಳೆ ಬಂಧುಗಳ ಭೇಟಿ. ಬರೆದದ್ದನ್ನೆಲ್ಲ ಒಬ್ಬರಿಗೊಬ್ಬರು ತೋರಿಸುತ್ತಿದ್ದಾರಂತೆ. ಎಲ್ಲವೂ ಸ್ಫುಟವಾಗಿ ಮೂಡಿಬರುತ್ತಿದೆಯಂತೆ. ಮುದುಕಪ್ಪನೇ ಸಂತೋಷದಿಂದ ಹೆಮ್ಮೆಯಿಂದ ಹೇಳಿಕೊಂಡಿತು ಮೊನ್ನೆ ಬಂದಿದ್ದಾಗ. ಮೇಲಾಗಿ ಮುದುಕಪ್ಪ ಸಂಗೀತದ ಕ್ಲಾಸಿಗೂ, ಮುದುಕಿ ತೋಟಗಾರಿಕೆಯ ಕ್ಲಾಸಿಗೂ ಸೇರಿಕೊಂಡು ಓಡಾಟ ಹೆಚ್ಚಾಗಿದೆ.

ಸಂಗೀತ ಕೇಳಿಸಿಕೊಂಡರೆ ಸಾಲದು, ಸ್ವರಗಳನ್ನು, ಸಾಹಿತ್ಯವನ್ನು, ಶಬ್ದವನ್ನು ಕೂಡ ಹಾಡುವಾಗಲೇ ಕಣ್ಣಲ್ಲೂ ನೋಡುತ್ತಿರಬೇಕು. ಅದೇ ಸಾಧ್ಯವಾಗುತ್ತಿಲ್ಲ ಎಂದು ಮುದುಕಪ್ಪ ತುಂಬಾ ಒದ್ದಾಡಿಕೊಂಡಿತು. ಬಾ ನೋಡಕೊಂಡೇ ಬರೋಣ~ ಎಂದು ಒಂದು ಇಳಿಸಂಜೆ ಕರಕೊಂಡು ಹೊರಟೇಬಿಟ್ಟ.

ವಿಶಾಲವಾದ ಕಾಂಪೌಂಡ್, ಗೇಟಿನ ಹತ್ತಿರವೇ ಇಬ್ಬರೂ ಸಿಕ್ಕರು. ಮುದುಕ ಟೀಷರ್ಟ್-ಬರ್ಮುಡಾ ಚಡ್ಡಿಯಲ್ಲಿದ್ದ. ಮುದುಕಿ ಎಡಕ್ಕೆ ಬೈತಲೆ ತೆಗೆದು ಸಡಿಲವಾಗಿ ಜಡೆ ಹಾಕಿಕೊಂಡು, ಮುಡಿಗೆ ಮಾತ್ರವಲ್ಲ ಬೆನ್ನು ಕೂಡ ತುಂಬುವಷ್ಟು ಕನಕಾಂಬರದ ರಾಶಿಯನ್ನೇ ಮುಡಿದಿದ್ದಳು.

ಗೇಟ್ ಮುಂಭಾಗದಲ್ಲಿ ಮಾತ್ರವಲ್ಲ, ರಸ್ತೆಗೂ ಕೂಡ ಹರಡಿಕೊಳ್ಳುವಂತೆ ರಂಗೋಲಿ ಚಿತ್ರ ಬಿಡಿಸುತ್ತಿದ್ದಳು. ಮುದುಕಪ್ಪ ರಂಗೋಲಿ ಹಿಟ್ಟಿನ ಡಬ್ಬವನ್ನು ಕೈಯಲ್ಲಿ ಹಿಡಿದುಕೊಂಡು ಹೆಂಡತಿ ಬಿಡಿಸುತ್ತಿದ್ದ ಚಿತ್ರವನ್ನೇ ಕಣ್ಣುತುಂಬಾ ನೋಡುತ್ತಾ ಮುಗುಳ್ನಗುತ್ತಿದ್ದ.

ಆಗೊಮ್ಮೆ, ಈಗೊಮ್ಮೆ ದೃಷ್ಟಿಯನ್ನು ದೂರದಲ್ಲಿ ಮುಳುಗುತ್ತಿರುವ ಸೂರ್ಯನ ಕಡೆ ಬೀರುತ್ತಾ, ಬಾ ಬಾ, ರಂಗೋಲಿ ನೋಡು ಎಂದು ಆಹ್ವಾನಿಸುತ್ತಿರುವಂತೆ ಕಾಣುತ್ತಿತ್ತು. ಕಾಂಪೌಂಡಿನ ಮುಂಭಾಗದಲ್ಲಿ ಕುಂಡದಿಂದ ಪ್ರತ್ಯೇಕಿಸಿದ ಗಿಡಗಳನ್ನು ಬೇರುಗಳು ಚೆನ್ನಾಗಿ ಕಾಣುವಂತೆ ಬಿಡಿಸಿ, ಬಿಡಿಸಿ ಹರಡಲಾಗಿತ್ತು.

ಬೆಳಗಿನ ಸೂರ್ಯನ ಕಿರಣಗಳನ್ನು ಗಮನಿಸುವಷ್ಟು ವ್ಯವಧಾನವಾಗಿ ನಾವು ಸಂಜೆಯ ಹೊಂಗಿರಣಗಳನ್ನು ಗಮನಿಸುವುದಿಲ್ಲ ನೋಡಿ. ಈ ಕಿರಣಗಳು ಕೂಡ ರಂಗೋಲಿ ಗೆರೆಗಳನ್ನು ಮುದ್ದಿಸುತ್ತಿರಬಹುದಲ್ಲವೇ- ನಮಗೆ ಕಾಣದಂತೆ.

ಇದನ್ನೇ ಗಮನಿಸದೇ ಹೋದವರು ಸಂಜೆಯಾದ ಮೇಲೆ ರಾತ್ರಿಯೆಲ್ಲಾ ಪಸರಿಸುವ ಚಂದ್ರನ ಶೀತ ಕಿರಣಗಳಿಂದ ರಂಗೋಲಿ ಗೆರೆಗಳನ್ನು ಮೀಯುವುದನ್ನು ಕಾಣುತ್ತೇವೇನು? ಈಚೀಚೆಗಂತೂ ನಾವಿಬ್ಬರೂ ಊಟ ಮುಗಿಸಿ, ಬೀದಿಯಲ್ಲಿ ಜನರ ಓಡಾಟವೆಲ್ಲ ಮುಗಿದ ಮೇಲೆ ಗೇಟ್ ಹತ್ತಿರವೇ ಕುರ್ಚಿ ಹಾಕಿಕೊಂಡು ಚಂದ್ರನ ಶೀತ ಕಿರಣಗಳು ನಮ್ಮ ಮನೆಯ ಮುಂದಿನ ರಂಗೋಲಿ ಗೆರೆಗಳನ್ನು ಮೀಯುವುದನ್ನು ನೋಡುತ್ತಾ ಕೂತುಬಿಡುತ್ತೇವೆ. ಚಂದ್ರನ ಕಿರಣಗಳು, ಇಲ್ಲಿ ನೋಡಿ, ಹೀಗೆ ನಾವು ಹರಡಿ ಇಟ್ಟಿರುವ ಗಿಡಗಳ ಬೇರುಗಳ ವಿನ್ಯಾಸವನ್ನು ಕೂಡ ಮೀಯಬೇಕೆಂಬುದು ನಮ್ಮ ಆಸೆ.

ನಾನು, ನಟರಾಜ ಇಬ್ಬರೂ ಮಾತೇ ಹೊರಡದೆ ಸುಮ್ಮನೆ ನಿಂತಿದ್ದೀವಿ. ಗಿಡಗಳ ಬೇರಿನ ವಿನ್ಯಾಸ, ರಂಗೋಲಿ ಚಿತ್ರಗಳು, ಮುದುಕ-ಮುದುಕಿ ಶೀತ ಕಿರಣಗಳೊಡನೆ ಇಣುಕಲು ಸಜ್ಜಾಗುತ್ತಿರುವ ಚಂದಮಾಮ. ಎಷ್ಟೋ ಹೊತ್ತಿನ ನಂತರ ಮುದುಕಪ್ಪನೇ ಹೇಳಿತು,
`ನೋಡಿ, ಇದು ತುಂಬಾ ಪುರಾತನವಾದ ಮನೆ.

ನಮ್ಮವರು ಇಲ್ಲಿ ಟಿಪ್ಪು ಸುಲ್ತಾನ್ ಕಾಲದಿಂದಲೂ ವಾಸವಾಗಿದ್ದಾರೆ. ಮನೆಯ ಆಯಸ್ಸು ಮುಗಿದಂತೆಲ್ಲಾ ಮತ್ತೆ ಮತ್ತೆ ಗೃಹಪ್ರವೇಶ ಮಾಡತಲೇ ಇರತೀವಿ. ಕಟ್ಟಡದ ಸುತ್ತ ಕಟ್ಟಿರುವ ಹಸಿ ದಾರ, ಮೊನ್ನೆ ಮಾಡಿದ ಗಹಪ್ರವೇಶದ್ದು. ಮನಸ್ಸಿಗೆ ಯಾವ ರೀತಿಯ ವಿಕಾರವೂ ಇಲ್ಲದಿರುವಾಗ, ದುರಾಸೆ ಕಡಿಮೆಯಾಗಿರುವಾಗ, ಯಾರೊಡನೆಯೂ ಸ್ಪರ್ಧೆ ಹೋಲಿಕೆ ಇಲ್ಲದಿರುವಾಗ ಮನೆಯ ತುಂಬಾ ಉಸಿರಾಟದ ಬಡಿತ ಕೇಳಿಸುತ್ತದೆ~.

ಮುದುಕಪ್ಪ ಮಾತು ನಿಲ್ಲಿಸಿ ಉಸಿರಾಟದ ಬಡಿತವನ್ನು ಕೇಳಲನುವಾಗುತ್ತಿರುವಂತೆ ಮುಖಭಾವವನ್ನು ಏಕಾಗ್ರತೆಗೆ ತಂದುಕೊಳ್ಳಲು ಪ್ರಯತ್ನಿಸುತ್ತಿತ್ತು. ಕಣ್ಣು ಮುಚ್ಚಿ ಏನನ್ನೋ ಧ್ಯಾನಿಸುತ್ತಿತ್ತು.

ನಿಧಾನವಾಗಿ ಕಣ್ಣು ತೆರೆದು-
`ನಾಳೆ-ನಾಳಿದ್ದರಲ್ಲಿ ಆಕಡೆ ಬರತೀನಿ. ನಾನು ಹೇಳಿದ್ದನ್ನೆಲ್ಲ ನೋಟ್ ಬುಕ್ಲಿ ಬರಕೋತಿದ್ದಿರಲ್ಲ. ಅದನ್ನ ವಾಪಸ್ ಕೊಟ್ಟಿಬಿಡಿ. ಅದೂ ಅಲ್ಲದೆ ಈಗ ನಮಗೆ ಮೊದಲಿನ ತರ ವಾಂತಿ ಭೇದಿ, ಯಾವುದೂ ಆಗೋಲ್ಲ~.

ಈ ಮಾತುಗಳು ನಾವಿಬ್ಬರೂ ಹೊರಡಬೇಕೆಂಬುದಕ್ಕೆ ಸೂಚನೆಯಿರಬಹುದೇ ಎನ್ನುವಂತೆ ನಾನು ನಟರಾಜನ ಮುಖ ನೋಡಿದೆ. ಹೊರಡಲು ಅನುವಾಗುತ್ತಿರುವಂತೆ ಮುದುಕಿ ಬಲಮುಂಗೈಯಿಂದ ಬಲಮೂಗಿನ ಮೇಲಿದ್ದ ಮೂಗುತಿಯನ್ನು ಒರೆಸಿಕೊಂಡಂತೆ ಮಾಡುತ್ತಾ ಹೇಳಿತು,

`ಈ ನಿಮ್ಮ ಇಬ್ಬರೂ ಸ್ನೇಹಿತರಿಗೂ ಹೇಳಬಹುದಲ್ಲ? ಸಂಜೆ ಹೊತ್ತು ಹೆಂಡತಿಯರಿಗೆ ರಂಗೋಲಿ ಬಿಡಿಸಲು ನೆರವಾಗಲು. ಚಂದ್ರನ ಶೀತಕಿರಣಗಳಿಗೆ ಕಾಯಲು~.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.