“ಏ, ಇವುನೇ! ಆಗಿನಿಂದ್ಲೂ ಎಷ್ಟೇ ಕೂಗಿದ್ರೂ ಕೇರ್ಮಾಡದೆ ಕುಳ್ತಿದ್ದೀಯಲ್ಲ? ಒಳ್ಳೆ ಮಾತಿಂದ ಹೇಳಿದ್ರೆ ನಿಮ್ಮಂಥೋರಿಗೆ ಮುಟ್ಟೋದಿಲ್ವಾ? ಇಲ್ಲಿ ಲೇಡೀಸು, ಮಕ್ಕಳೆಲ್ಲ ಆಟ ಆಡ್ತಿದ್ದಾರೆ. ನೀನು ದೊಡ್ಡ ಮನಸ್ಸು ಮಾಡಿ ಮಹರಾಜನಂಗೆ ಎದ್ದೋದ್ರೆ ನಮಗೆ ಉಪಕಾರ ಮಾಡಿದಂಗಾಯ್ತದೆ ನೋಡಪ್ಪಾ...’’.

ಕುಪ್ಪುಸ್ವಾಮಿ ಆ ಧ್ವನಿ ಅನುಸರಿಸಿ, ಯಾರಿಗೆ ಹೇಳುತ್ತಿದ್ದಾರೆಂದು ತಿಳಿಯದೆ ಕುತೂಹಲದಿಂದ ಸುತ್ತಮುತ್ತ ನೋಡಿದ. ಮೂರು ಜನರು ಮರಳು ದಿಬ್ಬದ ಆಚೆ ನಿಂತು ತನ್ನ ಕಡೆಗೆ ಹೇಳುತ್ತಿದ್ದರು.

ಈಗ ರಮೇಶ್ಚಂದ್ರನ ಹೆಂಡತಿ ಸುನೇತ್ರ ಗಂಡ ಅಷ್ಟು ಹೇಳಿದರೂ ಈತ ಜಾಣಪೆದ್ದನಂತೆ ನಟಿಸುತ್ತಿದ್ದಾನೆಂದು ಸಿಟ್ಟುಗೊಂಡು ‘‘ಹತ್ತು ನಿಮಿಷದಿಂದ ನಾವೆಲ್ಲ ಹೇಳ್ತಾನೆ ಇದ್ದೀವಿ. ನೀನು ಕಿವಿ ಮೇಲೆ ಹಾಕೊಳ್ತಾಯಿಲ್ಲ. ಇಲ್ಲಿಂದ ಎದ್ದೋಗು. ಇಲ್ಲಾಂದ್ರೆ ಪೊಲೀಸ್ನೋರ ಕರೆಸ್ತೀವಿ. ಆಮೇಲೆ ನೀನೇ ತಾಪತ್ರಯಕ್ಕೆ ಸಿಕ್ಕಾಕೊಳ್ತೀಯಾ’’ ಎಂದು ಜೋರು ಮಾಡಿದಳು.

ಇವತ್ತು ಪಿಕ್ನಿಕ್ ಸ್ಪಾಟ್ ಬಿಟ್ಟು ಹೊಳೆದಂಡೆಯ ಆಕಡೆ ಸುತ್ತಾಡುತ್ತಿದ್ದ ದುರ್ಗ, ದೇವೇಂದ್ರರ ಚಲನವಲನದತ್ತ ಕುಪ್ಪುಸ್ವಾಮಿ ತನ್ನ ದೃಷ್ಟಿ ಕೇಂದ್ರೀಕರಿಸಿ ಕೂತಿದ್ದ. ಆದರೆ ಅವನಿಗೆ ಈ ಗಂಡ ಹೆಂಡತಿಯರು ಯಾಕೆ ಗದರಿಸಿ, ಓಡಿಸುತ್ತಿದ್ದಾರೆಂದು ತಕ್ಷಣಕ್ಕೆ ಹೊಳೆಯಲಿಲ್ಲ. ಗಿಡುಗನ ರೀತಿ ದಿಢೀರನೆ ಮೇಲೆರಗಿದ ಅವರನ್ನು ದುರುದುರು ನೋಡಿದ.

ಈ ಭಾನುವಾರ ಆ ಕುಟುಂಬವು ಹೊಳೆತೀರದಲ್ಲಿ ಹಾಯಾಗಿ ಟೈಂಪಾಸ್ ಮಾಡಲು ಬೆಂಗಳೂರಿನಿಂದ ಬಂದಿದ್ದರು. ಆದರೆ ಸನಿಹದಲ್ಲೇ ಒಂಟಿಕಾಗೆಯಂತೆ ಕೂತಿದ್ದ ಕುಪ್ಪುಸ್ವಾಮಿ ಕಿರಿಕಿರಿಯಾಗಿಬಿಟ್ಟಿದ್ದ. ಇಂಥವರು ಏನೇನೋ ಲೆಕ್ಕಾಚಾರ ಮಾಡಿಕೊಂಡು ಬಂದು ಹೊಂಚುತ್ತಿರುತ್ತಾರೆ. ಕೆಲವರಿಗಂತೂ ನೀರಿನಲ್ಲಿ ಆಡುವ ಹೆಣ್ಣುಮಕ್ಕಳನ್ನು ನೋಡುವುದೇ ಚಟವಾಗಿರುತ್ತದೆ ಎಂದೆಲ್ಲ ಎಣಿಸಿ ರಮೇಶ್ಚಂದ್ರ, ಸುನೇತ್ರರು ಇವನನ್ನು ಇಲ್ಲಿಂದ ಎಬ್ಬಿಸಲು ಹರಸಾಹಸಪಡುತ್ತಿದ್ದರು. ಇವರ ಜೊತೆಗೆ ರಮೇಶ್ಚಂದ್ರನ ನಾದಿನಿ ಶುಭಾ, ಅತ್ತೆ ಸರಸ್ವತಿ, ಮಗ ರೋಹಿತ್, ಮಗಳು ಭವ್ಯಾ ಇದ್ದರು.

ಕಾವೇರಿ ಹೊಳೆಯ ತೀರದ ಇಲ್ಲಿಂದ ಹಿಂದಕ್ಕೆ ಸುಮಾರು ಐವತ್ತು ಮೀಟರ್ ದೂರದಲ್ಲಿ ಪಿಕ್ನಿಕ್ ಸ್ಪಾಟ್. ಅಲ್ಲಿ ಹೊಳೆ ಆಳವಿಲ್ಲದೆ, ಮಟ್ಟಸದಲ್ಲಿ ಹರಿಯುತ್ತದೆ. ಹೊಳೆತೀರದ ಉದ್ದಕ್ಕೆ ಮರಳು ತುಂಬಿಕೊಂಡಿರುವುದರಿಂದ ಅಲ್ಲಿ ಆಟ ಆಡುವುದಕ್ಕೂ ಹೇಳಿಮಾಡಿಸಿದಂತಿದೆ. ಆದರೂ ಸುನೇತ್ರ, ಶುಭಾರು ‘‘ಇಲ್ಲಿ ಸಿಕ್ಕಾಪಟ್ಟೆ ಜನ, ಪ್ರೈವಸಿಯಿಲ್ಲ, ಇಲ್ಲಿ ಬೇಡ, ಮುಂದೆ ಹೋಗೋಣ’’ ಅಂತ ಈ ಜಾಗಕ್ಕೆ ಕರೆದುಕೊಂಡು ಬಂದಿದ್ದರು.

ಈ ಆಯ್ಕೆ ರಮೇಶ್ಚಂದ್ರನಿಗೂ ಸರಿ ಅನಿಸಿತ್ತು. ತನಗಿಂತ ಅಂದಚೆಂದವಾಗಿದ್ದ ಹೆಂಡತಿಯ ಬಗ್ಗೆ ಮೊದಲೇ ಬಲು ಅಭಿಮಾನ. ಅವಳಿಗಿಂತಲೂ ಹೆಚ್ಚು ಚೆಲುವೆಯಂತಿದ್ದ ನಾದಿನಿಯ ಮಾತೆಂದರೆ ಮತ್ತೂ ಪ್ರೀತಿ. ಅಂಥವನಿಗೆ ಮೊಸರಿನಲ್ಲಿ ಕಲ್ಲು ಎಂಬಂತೆ ಇಲ್ಲೊಬ್ಬ ಬೇಡದ ಮನುಷ್ಯ ವಕ್ಕರಿಸಿಕೊಂಡಿದ್ದು ಅಸಹನೆ ಮೂಡಿಸಿತ್ತು.

ಜನಜಂಗುಳಿಯ ಪ್ರವಾಸಿತಾಣಗಳಲ್ಲಿ ಇಂಥ ಕಳ್ಳನೋ ಸುಳ್ಳನೋ ಕಾಮುಕನೋ ಇರುತ್ತಾನೆ. ಹಂಗಾಗಿ ಇವನನ್ನು ಇಲ್ಲಿಂದ ಎಬ್ಬಿಸಿ ಕಳಿಸಿಬಿಟ್ಟರೆ ತಾವು ನಿರಾಳವಾಗಿ ಮೂಮೆಂಟ್ನ್ನು ಎಂಜಾಯ್ ಮಾಡಬಹುದೆಂಬುದು ಅವರ ಆಸೆ.

ಆ ದುರ್ಗ, ದೇವೇಂದ್ರರ ಆ ಬದಿಯ ತಿರುಗಾಟವನ್ನು ಗಮನಿಸುತ್ತಿದ್ದ ಕುಪ್ಪುಸ್ವಾಮಿಗೆ ರಮೇಶ್ಚಂದ್ರನ ಜೊತೆ ವಾದಕ್ಕಿಳಿಯುವ ಮನಸ್ಸಾಗಲಿಲ್ಲ. ರಮೇಶ್ಚಂದ್ರನ ಅತ್ತೆ ದಂಡೆಯ ಮೇಲಿರುವ ಮಾವಿನಮರದ ಕೆಳಗೆ ಜಮಾಖಾನೆ ಮೇಲೆ ಜೋಡಿಸಿದ್ದ ಊಟ, ತಿಂಡಿ, ಹಣ್ಣು, ಕೂಲ್ಡ್ರಿಂಕ್ಸ್ಗಳಿಗೆ ಕಾವಲಾಗಿ ಕೂತಿದ್ದಳು.

ಎದುರುಗಡೆ ನಡೆದಿದ್ದ ಇವರ ಗದ್ದಲವನ್ನು ಕಂಡು ‘‘ಏ! ಸುನೇತ್ರಾ, ಆ ಮನುಷ್ಯನ್ಗೆ ತಿನ್ನೋದಿಕ್ಕೆ ಏನಾದ್ರು ಕೊಟ್ಟು ಕಳಿಸು’’ ಅಂತ ಕೂಗಿ ಹೇಳಿದಳು. ಆದರೆ ಶುಭಾ ‘‘ನಾವೇ ಇನ್ನೂ ಬಾಕ್ಸ್ ಓಪನ್ ಮಾಡಿಲ್ಲ. ತಿನ್ನೋದಿಕ್ಕೆ ಮುಂಚೆ ಅವುನ್ಗೆ ಕೊಡಬೇಕಾ? ನೀನು ಸುಮ್ನೆ ಕೂತ್ಕೊಮ್ಮ’’ ಅಂತ ಗದರಿಸಿದಳು.

ಇಬ್ಬರು ಮಕ್ಕಳು ಮಾತ್ರ ಇದ್ಯಾವುದರ ತಂಟೆಯೂ ತಮಗಿಲ್ಲವೆಂಬಂತೆ ಮರಳ ಮೇಲೆ ಥ್ರೋಬಾಲ್ ಆಟ ಸುರು ಮಾಡಿದ್ದರು. ಸುನೇತ್ರ ಮತ್ತು ಶುಭಾರು ಈ ಆಗಂತುಕನನ್ನು ಆಚೆ ಕಳಿಸುವ ರಮೇಶ್ಚಂದ್ರನಿಗೆ ಬೆಂಬಲವಾಗಿ ನಿಂತಿದ್ದರು.

ಕುಪ್ಪುಸ್ವಾಮಿಗೆ ಈಗ ಅರ್ಥವಾಯಿತು. ಕಾರಿನಲ್ಲಿ ಬರುವ ದೊಡ್ಡವರ ವರ್ತನೆ ಅವನಿಗೇನು ಹೊಸದಲ್ಲ. ಅವನಿಗೇನಿದ್ದರು ಹೊಳೆತೀರಕ್ಕೆ ಜಾಲಿಗಾಗಿ ಬಂದು ನೀರಿನಲ್ಲಿ ಮುಳುಗುವ ಪ್ರವಾಸಿಗರ ಶವಗಳಿಗಾಗಿ ಕಾಯುವ ಆ ಎದುರಾಳಿ ದುರ್ಗ, ದೇವೇಂದ್ರರ ಮೇಲೆ ನಿಗಾ ಇಡುವುದಾಗಿತ್ತು. ಕಳೆದ ಭಾನುವಾರವೂ ಹಿಂಗೆ ಕಾಯುತ್ತ ಕೂತಿದ್ದ ಇವನ ಬಳಿಗೆ ಬಂದು ‘‘ಎಲ್ಲಿಂದಲೋ ಬಂದು ನಮ್ಮೇಲೇ ಸವಾರಿ ಮಾಡ್ತೀಯಾ? ನೀನೇನಾದ್ರು ನಮಗಿಂತ ಮೊದ್ಲೇ ಹಣ ಡಿಸೈಡ್ ಮಾಡ್ದೆ ನೀರಿಗಿಳಿದ್ರೆ ಇಲ್ಲಾ ಅನ್ನಿಸಿಬುಡ್ತೀವಿ’’ ಅಂತ ಜಗಳ ಮಾಡಿ ಹೋಗಿದ್ದರು.

ಕುಪ್ಪುಸ್ವಾಮಿ ತನ್ನದು ಅಂದಕೊಂಡಿದ್ದ ಎಲ್ಲವನ್ನೂ ಬಿಟ್ಟುಬಂದು ಈ ಊರಿನಲ್ಲಿ ಒಂದು ಒಕ್ಕಲಾಗಿ ಉಳಿದುಬಿಡಬೇಕೆಂದು ಏನೆಲ್ಲ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದರೂ ‘ನೀನು ಪರಕೀಯ’ ಎಂಬುದನ್ನು ಇಲ್ಲಿನವರು ನೆನಪಿಸುತ್ತಲೇ ಇದ್ದರು. ಈಗಲೂ ಅದೇ ಕೊರಗಿನಲ್ಲಿ ಕುಪ್ಪುಸ್ವಾಮಿ ಮರುಮಾತಾಡದೆ ಎದ್ದು ಹೊಳೆಕಡೆಗೆ ಹೊರಟ.

ಇವತ್ತು ಕುಪ್ಪುಸ್ವಾಮಿ ಮುಂಜಾನೆಯೇ ಎದ್ದು ಹೊಳೆದಂಡೆಗೆ ಬಂದಿದ್ದ. ಆಗ ಹೊಳೆ ಸದ್ದಿಲ್ಲದೆ ಸರಾಗವಾಗಿ ಹರಿಯುತ್ತಿತ್ತು. ಈಗ ನೋಡಿದರೆ, ಹರಿಯುವ ನೀರಿನ ಮೇಲೆ ಹಬೆ ಹರಡಿ ಹಾವಿನ ಹೆಡೆಯಾಟದಂತೆ ಕಾಣುತ್ತಿತ್ತು. ಹಿಂದಿನ ದಿನ ಇಲ್ಲಿಗೆ ಬಂದಿದ್ದ ಮಂದಿಯು ರಾಡಿಗೊಳಿಸಿ ಹೋಗಿದ್ದ ಗದ್ದಲಗೋಜನ್ನೆಲ್ಲ ಅವಳು ತನ್ನೊಳಗೆ ಹುದುಗಿಸಿಕೊಂಡು ಮುಂಜಾನೆ ಹಬೆಯ ರೂಪದಲ್ಲಿ ಹೊರ ಹಾಕಿ ತಣ್ಣಗಾಗುವಂತಿತ್ತು.

ಸ್ವಲ್ಪಹೊತ್ತಿನಲ್ಲಿ ಜನರ ಗದ್ದಲದಿಂದ ನಿದ್ರಾಭಂಗಗೊಂಡು ಎದ್ದ ವ್ಯಾಘ್ರಳಂತೆ ಕಾಣುತ್ತಿದ್ದಳು. ಗದ್ದಲದ ಜಾಗಬಿಟ್ಟು ದೂರ ಬಂದಿದ್ದ ರಮೇಶ್ಚಂದ್ರನ ಪರಿವಾರವೂ ಇಲ್ಲಿ ಗದ್ದಲದಲ್ಲೇ ಮುಳುಗಿ ಹೋಗಿತ್ತು. ಹೀಗೆ ಕುಣಿದು ಕುಪ್ಪಳಿಸಿ ಗದ್ದಲ ಮಾಡಿಯೇ ಉಲ್ಲಾಸ ಪಡೆಯಲೆಂದು ಬಂದವರು.

ಆದರೆ ಕುಪ್ಪುಸ್ವಾಮಿಗೆ ಮಾತ್ರ ಈ ಬಗೆಯ ಗದ್ದಲ ಒಲ್ಲದು. ಅವನಿಗೇನಿದ್ದರು ನೀರಿನಲ್ಲಿ ಮುಳುಗಿಹೋದರೆಂದು ಬೊಬ್ಬಿಡುವ ಗದ್ದಲ ಕೇಳಿ ಉತ್ಸಾಹ ಮೂಡುತ್ತಿತ್ತು. ಮುಳುಗಿದ ತಾಣಕ್ಕೆ ಧುಮುಕಿ ಮೇಲೇಳುವ ಹೆಣದ ಜೊತೆಗಿನ ಸದ್ದಿನೊಂದಿಗೆ ಉಲ್ಲಾಸ ಚಿಮ್ಮುತ್ತಿತ್ತು.

ಈಗ ಕುಪ್ಪುಸ್ವಾಮಿ ಇವರ ಸಹವಾಸವೇ ಬೇಡವೆಂಬಂತೆ ಹೊಳೆ ನಡುವೆಯಿದ್ದ ಬಂಡೆಯತ್ತ ನೀರು ಹಾದು ಬಂದ. ಮನಸ್ಸು ಕುಸಿದಾಗೆಲ್ಲ ಹೊಳೆಯ ಸೆರಗಿನಲ್ಲಿ ಹೆಜ್ಜೆ ಹಾಕುವುದು ಅವನ ರೂಢಿ. ಹಾಸುಂಡ ಎಲೆಯ ಬೀಸಿ ಎಸೆದಂತೆ ಆದ ತನ್ನ ಬದುಕು ನೆನೆಸಿಕೊಂಡರೆ, ಸಂಕಟವಾಗುತ್ತಿತ್ತು. ಅಂತಸ್ತು ಸದಾ ಅಸಹಾಯಕತೆಯ ಹೆಗಲೇರಿಯೇ ಸವಾರಿ ಮಾಡುವುದು. ಇದೆಲ್ಲ ಅವನ ಅರಿವಿಗೆ ಬರುತ್ತಿತ್ತು.

ಆಗ ಮಾತ್ರ ಅಲ್ಲಿ ಸಿಟ್ಟು ಬರುವುದರ ಬದಲು ಹತಾಶೆ ಮುಸುಕುತ್ತಿತ್ತು. ತನ್ನ ಸರ್ವಸ್ವವೆಂದು ಭಾವಿಸಿದ್ದ ಹೆಂಡತಿ ಒಂದು ಮಾತು ಹೇಳದೆ, ಕೊನೆಪಕ್ಷ ಒಮ್ಮೆಯಾದರೂ ಜಗಳವಾಡದೆ ಬಿಟ್ಟುಹೋದದ್ದು ದೊಡ್ಡ ಆಘಾತವಾಗಿತ್ತು. ಆ ಆಘಾತ ತನ್ನ ನವಿರು ಭಾವನೆಗಳನ್ನೇ ಹೊಸಕಿಹಾಕಿಬಿಟ್ಟಿತು. ಅನುಮಾನ, ಅಸಹ್ಯ, ಅಸಹಾಯಕತೆಗಳು ಮನೆ ಮಾಡಿಬಿಟ್ಟವು. ಹಿಂಗಾಗಿ ಅವನು ನೆರೆ ಬಂದ ನೀರಿಗೆ ನಡುಬಾಗಿ ನಿಲ್ಲುವ ಹೊಳೆಯ ನಡುವಿನ ಪೊದೆ ಹುಲ್ಲಿನಂತೆ ಇದ್ದುಬಿಡುತ್ತಿದ್ದ.

ಕುಪ್ಪುಸ್ವಾಮಿ ಹೊಳೆಯೊಳಗಿನ ದೊಡ್ಡ ಬಂಡೆ ಮೇಲೆ ಹೋಗಿ ಕೂತುಕೊಂಡ. ಅಲ್ಲಿ ಕೂತರೆ ರಮೇಶ್ಚಂದ್ರನದಾಗಲೀ, ಆ ದುರ್ಗ, ದೇವೇಂದ್ರರದಾಗಲೀ ತಕರಾರು ಇಲ್ಲವೆಂಬುದು ಅವನ ನಂಬುಗೆ. ಒಂದು ನಿಟ್ಟಿಸಿರುಬಿಟ್ಟು ಎದುರು ದಂಡೆಯಾಚೆಗೆ ನೋಡಿದ. ಆಗ ಅಲ್ಲಿ ತಿರುಗಾಡುತ್ತಿದ್ದ ದುರ್ಗ, ದೇವೇಂದ್ರರು ಈಗ ಕಾಣಲಿಲ್ಲ. ಆದರೆ ಹೆಣ ಎತ್ತಲು ಬಳಸುತ್ತಿದ್ದ ಬಲೆ ಹಗ್ಗಗಳು ದಂಡೆಯ ಬೇಲದಮರದ ಕೊಂಬೆಯಲ್ಲಿ ನೇತಾಡುತ್ತಿದ್ದವು.

ಅವು ಅಲ್ಲೇ ಇರುವುದರಿಂದ ಇವರು ಹೊಳೆ ಹಾದು ಪಿಕ್ನಿಕ್ಸ್ಪಾಟಿನ ಕಡೆಗೆ ಬಂದಿಲ್ಲವೆಂಬುದು ಖಾತ್ರಿಯಾಗಿ ಲವಲವಿಕೆ ಮೂಡಿತು. ಒಂದು ವೇಳೆ ಯಾರಾದರೂ ಮುಳುಗಿದರೆ ಅವರ ಹೆಣ ಎತ್ತುವ ಅವಕಾಶ ತನಗೇ ಒದಗುತ್ತದಲ್ಲ ಎಂಬ ಆಸೆ ಚಿಗುರಿತು.

ಕುಪ್ಪುಸ್ವಾಮಿಯು ಚುರುಕುಗೊಂಡು, ಜನರಿಂದ ತುಂಬಿ ಹೋಗಿದ್ದ ಪಿಕ್ನಿಕ್ಸ್ಟಾಟು, ಆಮೇಲೆ ರಮೇಶ್ಚಂದ್ರನ ಪರಿವಾರ ಆಡುತ್ತಿದ್ದ ಮರಳು ದಿಣ್ಣೆ ಕಡೆಗೆಲ್ಲ ಕಣ್ಣು ಹಾಯಿಸಿದ. ನೋಡುತ್ತಾ ನೋಡುತ್ತಾ ಆ ಪರಿವಾರದ ಪೈಕಿ ರೋಹಿತನ ಕಡೆಗೆ ಇವನ ನೋಟ ನೆಟ್ಟಿತು.

ಆ ಮಗು ಜಿಗಿಯುತ್ತಾ ಜಾರುತ್ತಾ ಇನ್ನೊಬ್ಬರ ಕೈಗೆ ಚೆಂಡು ಸೇರಿದರೆ ಹುಸಿಮುನಿಸು ತೋರುತ್ತಾ, ಮತ್ತೆ ಮತ್ತೆ ಚೆಂಡು ತನ್ನ ಕೈವಶವಾದರೆ ಕೇಕೆ ಹಾಕಿ ನಗುತ್ತಾ ಹಗ್ಗಕಿತ್ತ ಎಳೆಗರುವಿನಂತೆ ಆಡುತ್ತಿತ್ತು. ಅವನಿಗೆ ತನ್ನ ಮಗನ ನೆನಪು ಬಂತು. ಐದು ವರ್ಷಗಳ ಹಿಂದೆ ಬಿಟ್ಟುಬಂದಿದ್ದ ಮಗ! ಆಕಾರ, ಚಲನವಲನ, ಎತ್ತರ, ಬಣ್ಣರೂಪ ಎಲ್ಲವೂ ಒಂದೇ ಥರ! ಕುಪ್ಪುಸ್ವಾಮಿಗೆ ರೋಮಾಂಚನವಾಯಿತು.

ಈವರೆಗೆ ಒಂದು ದಿನವೂ ಮನಸ್ಸಿಗೆ ಬಾರದಿದ್ದ ಮಗ ಈಗ ನೆನಪಾಗತೊಡಗಿದ. ತಾನು ಕೊನೆಯ ಬಾರಿಗೆ ಅವನನ್ನು ನೋಡಿದಾಗ ಇನ್ನೂ ಐದು ವರ್ಷ ವಯಸ್ಸು. ಆಗ ಬಿಟ್ಟು ಬಂದ ಮಗ ಈಗ ಹಿಂಗೇ ಬೆಳೆದಿರಬೇಕು!

ಕುಪ್ಪುಸ್ವಾಮಿಗೆ ಮಗನ ನೆನಪಿನೊಂದಿಗೆ ಎದೆ ಭಾರವಾಯಿತು. ತನ್ನ ಮನಸ್ಸಿನಿಂದ ಕಿತ್ತುಹಾಕಿದೆ ಅಂದುಕೊಂಡಿದ್ದ ಕಳ್ಳುಬಳ್ಳಿ ಬೇಸಿಗೆ ನೆಲದೊಳಗಿನ ಗರಿಕೆಯಂತೆ ಹುದುಗಿಕೊಂಡಿದೆ!

ಈ ಮಗುವಿನ ತಾಯಿ ತನ್ನ ಆಟ ನಿಲ್ಲಿಸಿ ತನ್ನ ಕಡೆಗೆ ಕೈ ಮಾಡಿ ಗದರಿಸುತ್ತಿದ್ದುದು ಗಮನಕ್ಕೆ ಬಂತು. ಅವಳ ಗಂಡನೂ ತಿರುಗಿ, ಸುಟ್ಟುಬಿಡುವವನಂತೆ ಕಣ್ಣುಬಿಟ್ಟು ಕೈಕುಣಿಸುತ್ತಿದ್ದುದು ಕಂಡಿತು. ಇದುವರೆಗೆ ಉತ್ಸಾಹ, ವಿಷಾದಗಳಿಂದ ತಲ್ಲಣಿಸುತ್ತಿದ್ದ ಮನಸ್ಸೀಗ ಮತ್ತೆ ಮುದುರಿಕೊಂಡಿತು. ಬಹು ಖಿನ್ನವಾಗಿ ಈಗವನು ಆಕಡೆ ಈಕಡೆ ದಂಡೆಗಳ ಕಡಗೆ ಕಣ್ಣು ಹಾಯಿಸುವುದನ್ನು ಬಿಟ್ಟು ಕೆಳಮುಖವಾಗಿ ಹರಿಯುತ್ತಿದ್ದ ಹೊಳೆಯ ನೀರಿನ ಹರಿವಿನತ್ತ ಮುಖ ಮಾಡಿ ಕೂತ.

ಕುಪ್ಪುಸ್ವಾಮಿ ನೀರು ಹರಿವಿನ ನಾದಕ್ಕೆ ಮನಸ್ಸು ನೆಡಲು ಪ್ರಯತ್ನಿಸಿದ. ಹೀಗೆ, ಆಗಾಗ ನೀರು ಹರಿವಿನ ಮೇಲೆ ತನ್ನ ಎದೆಯಾಳದ ದುಗುಡವನ್ನೆಲ್ಲ ಹರಿಯಬಿಟ್ಟು ಕೂತುಬಿಡುತ್ತಿದ್ದ. ಒಮ್ಮೊಮ್ಮೆ ಸಾಕಿನ್ನು ಬದುಕೆಂದು ನೀರಿನ ಆಳಕ್ಕೂ ಬಿದ್ದಿದ್ದ. ಆದರೆ ಬದುಕು ಸವಿಯಲೆಂದು ಬಂದವರನ್ನು ಒಳಗೆಳೆದುಕೊಳ್ಳುವವಳು ತನ್ನ ಮಾತ್ರ ಮೇಲೆತ್ತಿ ಹೊರಹಾಕಿಬಿಟ್ಟಿದ್ದಳು.

ಕುಪ್ಪುಸ್ವಾಮಿ ನೀರ ಹರಿವಿನ ಕಡೆಗೇ ನೋಡುತ್ತಿದ್ದ. ಮಗ ಅದರ ಮೇಲೆ ತೇಲಿ ತೇಲಿ ಬರತೊಡಗಿದ. ಸುರುಳಿ ಬಿಚ್ಚಿಕೊಂಡ ಮಗನ ನೆನಪು ಹಿತವನ್ನೂ ನೀಡದೆ ಬೆಂಕಿಕೊಳ್ಳಿಯೂ ಆಗದೆ ಒಂದು ಬಗೆಯ ನರಳಾಟದ ಮುಳ್ಳಾಡಿಸತೊಡಗಿತು.

ಹೌದು, ಅವತ್ತು–
ಆಳು ಗಾತ್ರದ ದೇಹವನ್ನು ಹಿಡಿಗಾತ್ರ ಮಾಡಿಕೊಂಡು ‘‘ಯಾಕಿಂಗೆ ಮಾಡ್ದೆ? ನಾನೇನು ನಿನ್ಗೆ ಕೊರತೆ ಮಾಡಿದ್ದೆ ಹೇಳು?’’ ಅಂತ ಕೇಳಿದ್ದ. ಅವಳು ಒಂದು ಮಾತು ಆಡಲಿಲ್ಲ. ಕಣ್ಣೀರು ಕರೆಯುತ್ತ ನಿಂತುಬಿಟ್ಟಳು. ‘‘ಹೋಗ್ಲಿ ನಡೆದದ್ದು ಕೆಟ್ಟ ಕನ್ಸು ಅಂತ ಮರೆತುಬಿಟ್ಟು ನನ್ನ ಜೊತೆ ಬಂದುಬಿಡು’’ ಅಂತ ಹೇಳಿದ. ಅಳುತ್ತ ಬಿಕ್ಕುವುದು ಬಿಟ್ಟರೆ ಕತ್ತೆತ್ತಿ ಮುಖ ನೋಡಲಿಲ್ಲ. ಕಣ್ಣೀರೆಂದರೆ ಸಾಕು ಕರಗಿಬಿಡುವ ಅವನಿಗೆ ಈಗ ಆ ಕಣ್ಣೀರೇ ಹೇಸಿಗೆ ಅನಿಸಿತು.

ಆ ಮಗನೂ ಅಪ್ಪಾ ಅಂತ ಓಡಿ ಬಂದು ತಬ್ಬಿಕೊಳ್ಳಲಿಲ್ಲ. ಕೊನೆಗೆ ‘‘ತನ್ನ ದಾರಿ ಯಾವುದೆಂದು ನಿರ್ಧಾರ ಮಾಡು’’ ಅಂದಾಗ ಅವಳು ಮಗನ ಕೈ ಹಿಡಿದುಕೊಂಡು ಆ ಸಾವುಕಾರನನ್ನೇ ಆಯ್ಕೆ ಮಾಡಿಕೊಂಡಳು. ಎಂಥ ಸೋಲು? ಸಂಬಂಧ ವಾಕರಿಕೆ ಅನಿಸಿತು. ಹುರಿಗೊಳ್ಳುತ್ತಿದ್ದ ರೋಷ, ದ್ವೇಷಗಳೆಲ್ಲ ಕುಸಿದುಬಿದ್ದವು. ಬಾಳೇ ಭ್ರಮೆಯೆನಿಸಿ ಅಸಹ್ಯವಾಗಿ ಬಿಟ್ಟಿತು. ಇನ್ನು ತಾನು ಇಲ್ಲಿರುವುದಕ್ಕೆ ಅರ್ಥವಿಲ್ಲವೆಂದು ಉಟ್ಟ ಬಟ್ಟೆಯಲ್ಲಿ ಹೊರಟು ಬಂದುಬಿಟ್ಟಿದ್ದ.

ಕುಪ್ಪುಸ್ವಾಮಿ ನಾಗಪಟ್ಟಣಂ ಸೀಮೆಯ ಪೂಂಬುಗಾರ್ ಊರಿನವನು. ಅಪ್ಪ ಅವ್ವ ತೀರಿದ ಬಳಿಕ ಅಕ್ಕನ ಮನೆಯಲ್ಲಿ ಬೆಳೆದ. ಅಕ್ಕನ ಮಗಳನ್ನೇ ಪರಸ್ಪರ ಒಪ್ಪಿ ಮದುವೆಯಾದ. ಆಮೇಲೆ ಸಮುದ್ರದ ಸಮೀಪವೇ ಇದ್ದ ಮೀನುಗಾರರ ವಠಾರದಲ್ಲಿ ಸಂಸಾರ ಹೂಡಿದ. ಸಮುದ್ರಕ್ಕಿಳಿದು ಮೀನು ಹಿಡಿಯುವುದರಲ್ಲಿ ಬಲು ನಿಸ್ಸೀಮನಾಗಿದ್ದ. ಆದರೆ ಮದುವೆಯಾದ ಮೇಲೆ ರಾತ್ರಿ ಕೆಲಸ ಕಮ್ಮಿ ಮಾಡಿದ.

ಜೊತೆಗಾರರು ಎಷ್ಟೇ ತಂಟೆ ತಕರಾರು ಮಾಡಿದರೂ ‘‘ಹಗಲೊತ್ತು ನಿಮಗಿಂತಲೂ ಎರಡುಪಟ್ಟು ದುಡಿದುಕೊಡ್ತೀನಿ. ಆದ್ರೆ ರಾತ್ರಿ ಹೊತ್ತು ನನ್ನ ಬಿಟ್ಟುಕೊಡಿ’’ ಎಂದು ಹೇಳಿ ಹೆಂಡತಿಗಾಗಿ ಮನೆಗೆ ಬಂದುಬಿಡುತ್ತಿದ್ದ. ಸೆಲ್ವಿಯೂ ರಾತ್ರಿ ಎಷ್ಟೊತ್ತಾದರೂ ಉಣ್ಣದೆ ಗಂಡನಿಗಾಗಿ ಕಾಯುತ್ತ ಕೂರುತ್ತಿದ್ದಳು. ದಾಂಪತ್ಯವನ್ನು ಹೆಂಗೆ ನೀಸಬೇಕು ಅಂತ ಇವರನ್ನು ನೋಡಿ ಕಲೀರಿ ಅಂತ ಹಿರೀಕರು ಇವರ ಜೋಡಿಯನ್ನು ತೋರಿ ತಮ್ಮ ಮಕ್ಕಳಿಗೆ ಹೇಳುತ್ತಿದ್ದರು. ಅಂಥ ಒಲುಮೆಯ ಜೋಡಿ...

ಕುಪ್ಪುಸ್ವಾಮಿಯ ಮನಸ್ಸಿನ ತೊಯ್ದಾಟ ನೀರ ಹರಿವಿನಂತೆ ಸಾಗೇ ಇತ್ತು. ಈ ಐದು ವರ್ಷಗಳಿಂದ ಬಂದ ಲಕ್ಷಾಂತರ ಕುಟುಂಬಗಳ ಜೊತೆ ಬರುತ್ತಿದ್ದ ಮಕ್ಕಳನ್ನು ನೋಡಿದ್ದಾಗಿದೆ; ಆದರೆ ಯಾವ ಮಗುವೂ ತನ್ನ ಮಗನನ್ನು ನೆನಪಿಸಿರಲಿಲ್ಲ. ಅವನಿಗದು ಮರೆತು ಹೋದ ಕನಸಿನ ಕಾಲಘಟ್ಟವಾಗಿತ್ತು. ಆದರೆ ಇಂದು...?

ಮಗ ಶರವಣನನ್ನು ‘ಸರಣು’ ಅಂತ ಮುದ್ದಿನಿಂದ ಕರೆಯುತ್ತಿದ್ದ. ಮಗನೂ ತಾನು ದೋಣಿ ಕೆಲಸ ಮುಗಿಸಿ ಸಮುದ್ರದಿಂದ ಬರುವುದನ್ನೇ ಕಾಯುತ್ತಿತ್ತು. ಬೀದಿಯಂಚಿನಲ್ಲಿ ತನ್ನ ಸುಳಿವು ಸಿಕ್ಕರೆ ಸಾಕು ಓಡಿ ಬಂದು ತಬ್ಬಿಕೊಂಡು ಕುಣಿಯುತ್ತ ಮನೆವರೆಗೂ ಬಂದು ಆಮೇಲೆ ತನ್ನ ಆಟಕ್ಕೆ ಹಿಂಮರಳುತ್ತಿತ್ತು. ಅವತ್ತು ಮಧ್ಯಾಹ್ನಕ್ಕೇ ಎರಡು ಬೂತಾಯಿ ಹಿಡಿದು ಮನೆಯ ಊಟಕ್ಕೆಂದು ಬರುತ್ತಿದ್ದಾಗ ಎಂದಿನಂತೆ ಬಹು ಖುಷಿಯಲ್ಲಿ ಓಡಿ ಬಂದು ತಬ್ಬಿಕೊಂಡಿತ್ತು.

ಇಬ್ಬರೂ ಮಾತನಾಡುತ್ತ ಬರುತ್ತಿರಬೇಕಾದರೆ ತಾನು ಬಿಸ್ಕತ್ತು ತಿಂದು ಉಳಿದ ಹಣವನ್ನು ತೋರಿಸಿ ‘ಇದನ್ನ ಅಂಕಲ್ ಕೊಟ್ರು’ ಅಂತ ಹೇಳಿತು. ಈ ಅಪರೂಪದ ಅಂಕಲ್ ಯಾರು ಅಂತ ತಿಳಿಯಲಿಲ್ಲ. ಮಗುವಿಗೂ ಅದಕ್ಕಿಂದ ಹೆಚ್ಚು ಹೇಳಲು ಆಗಲಿಲ್ಲ.

ಮಾಮೂಲಿಯಂತೆ ಬಾಗಿಲು ಸರಿಸಿ ಒಳಬಂದರೆ ಮೂಲೆಯಲ್ಲಿ ನಂಬಲಾಗದ ದೃಶ್ಯ! ಆ ಅಂಕಲ್ ಬೇರೆ ಯಾರೂ ಅಲ್ಲ. ತನ್ನ ದೋಣಿ ಮಾಲೀಕ. ನೀನು ಇಷ್ಟೆಲ್ಲ ಚಕ್ಕರ್ ಹಾಕಿದ್ರೂ ಮಾಲೀಕ ಯಾಕೆ ನಿನ್ನ ಮೇಲೆ ಕರುಣೆ ತೋರುತ್ತಾನೆ ಅಂತ ಸಂಗಡಿಗರು ಕೇಳುತ್ತಿದ್ದ ಪ್ರಶ್ನೆಗೆ ಇದು ಉತ್ತರವಾ? ಕುಪ್ಪುಸ್ವಾಮಿಗೆ ಕೈ ಬಾಯಿ ಕಟ್ಟಿ ಕತ್ತಲೆಯ ಕೂಪಕ್ಕೆ ತಳ್ಳಿದಂತಾಯಿತು.

‘‘ಅಯ್ಯಯ್ಯೋ ಕಾಪಾಡಿ, ಕಾಪಾಡಿ. ಮುಳುಗಿಬಿಟ್ರು ಮುಳುಗಿಹೋದ್ರು. ನಿಮ್ಮ ದಮಯ್ಯ ಬನ್ನಿ ಯಾರಾದ್ರು ಕಾಪಾಡಿ’’ – ಒಂದೇ ಸಮನೆ ಕಿರಿಚಿಕೊಂಡ ಸದ್ದು. ಹೆಂಗಸರು ನೀರಂಚಿನಲ್ಲಿ ನಿಂತು ಬಾಯಿ ಬಡಿದುಕೊಳ್ಳುತ್ತಿದ್ದರು. ದಸಿ ಹೊಡೆದಂತೆ ಕುಸಿದು ಹೋಗಿದ್ದ ಇವನ ಮನಸ್ಸು ಜಾಗೃತವಾಯಿತು. ಅಪ್ಪ ಮಕ್ಕಳು ಕಾಣಲಿಲ್ಲ. ಅವರು ಮುಳುಗಿದ ಗುರುತು, ಗುಳ್ಳೆಗಳ ಸುಳಿವೂ ಇರಲಿಲ್ಲ. ಮಾಯಕಾತಿ ಕಾವೇರಿ ನುಂಗಿ, ತನಗೆ ಗೊತ್ತಿಲ್ಲದವಳಂತೆ ಇದ್ದುಬಿಟ್ಟಿದ್ದಾಳೆ!

ಕುಪ್ಪುಸ್ವಾಮಿ ನಿಖರವಾಗಿಯೇ ಊಹಿಸಿದ. ವಾರದಲ್ಲಿ ಆರು ದಿನ ಕನಕಪುರದ ಟೌನಿನಲ್ಲಿ ಕರಿಯಪ್ಪಗೌಡರು ಕಟ್ಟಿಸುತ್ತಿದ್ದ ಬೃಹತ್ ಕಲ್ಯಾಣ ಮಂಟಪದ ಕಾಮಗಾರಿ, ಭಾನುವಾರ ಹಾಗು ರಜಾದಿನಗಳಲ್ಲಿ ಹೊಳೆ ತೀರಕ್ಕೆ ಬಂದು ಹೀಗೆ ಅವಘಡ ಸಂಭವಿಸುವ ಸಮಯಕ್ಕಾಗಿ ಕಾದು, ಮುಳುಗಿದ ಒಡನೆಯೇ ಗೊತ್ತಾದರೆ ಜೀವಸಹಿತ, ಹೆಚ್ಚಿನ ಸಮಯ ಮಾತ್ರ ಶವ ಹುಡುಕಿ ತರುವ ಕಾಯಕವನ್ನು ಮಾಡುತ್ತ ಬಂದ ಅನುಭವ ಅವನದು! ಜನರ ಸಹವಾಸದ ಗದ್ದಲ, ಜೋರುಗಳಿಗೆ ಅಧೀರನಾದರೆ ನೀರೊಳಗಿನ ಆಟದಲ್ಲಿ ಮಾತ್ರ ಅವನೊಬ್ಬ ಕ್ರೀಡಾಪಟುವಾಗಿದ್ದ.

ಈ ಕ್ರೀಡೆಯಿಂದ ಆ ಕರಿಯಪ್ಪಗೌಡರು ಮೂವತ್ತು ದಿನಗಳಿಗೆ ಕೊಡುತ್ತಿದ್ದ ಹಣವನ್ನು ಅದರ ಮೂರುಪಟ್ಟು ಒಂದೇ ದಿನಕ್ಕೆ ಸಂಪಾದಿಸಿಬಿಡುತ್ತಿದ್ದ. ಹೆಣದ ವಾರಸುದಾರರಿಗೆ ಮಾತ್ರ ತನ್ನ ಸಂಭಾವನೆಯ ಮೊತ್ತವನ್ನು ಸ್ಪಷ್ಟ ಮಾತುಗಳಲ್ಲಿ ನಿಗದಿಪಡಿಸಿ ನೀರಿಗಿಳಿಯುತ್ತಿದ್ದ. ಸಾಮಾನ್ಯವಾಗಿ ಪ್ರವಾಸಿಗರು ಮುಳುಗುವ ಜಾಗ, ಶವಗಳು ಹರಿದು ಹೋಗಿ ಸಿಕ್ಕಿಕೊಂಡಿರುತ್ತಿದ್ದ ಭಾಗಗಳಾವುವೆಂದು ಇವನಿಗೆ ತಿಳಿದಿರುತ್ತಿತ್ತು.

ಆದ್ದರಿಂದ ಪೊಲೀಸಿನವರು ದುರ್ಗ, ದೇವೇಂದ್ರರಿಗಿಂತ ಇವನನ್ನೇ ಕರೆಯುತ್ತಿದ್ದರು. ಆ ದುರ್ಗ, ದೇವೇಂದ್ರರು ಹೆಣ ಕಂಡರೂ ಕಂಡಿಲ್ಲವೆಂದು ಹೇಳಿ ಸತಾಯಿಸಿ ಸಮಯ ಕಳೆದಂತೆ ತಮ್ಮ ಸಂಭಾವನೆಯನ್ನು ಎರಡೆರಡು ಪಟ್ಟು ಹೆಚ್ಚಿಸಿಕೊಳ್ಳುತ್ತಿದ್ದರು. ಈ ವ್ಯಾಪಾರ ಕುಪ್ಪುಸ್ವಾಮಿಗೆ ಗೊತ್ತಾಗುತ್ತಿದ್ದರೂ ಅವನು ಬಾಯಿ ಬಿಡುವಂತಿಲ್ಲ.

ಕುಪ್ಪುಸ್ವಾಮಿ ಪ್ರತಿ ಭಾನುವಾರವೂ ಹೊಳೆತೀರಕ್ಕೆ ಬರುತ್ತಿದ್ದ. ಆದರೆ ಎಲ್ಲ ವಾರವೂ ಹಣ ಸಂಪಾದನೆಯಾಗುತ್ತಿರಲಿಲ್ಲ. ಆದಾಗ್ಯೂ ಇವತ್ತೇನಾದರು ಯಾರಾದರು ಮುಳುಗಬಹುದೇ ಎಂಬ ನಿರೀಕ್ಷೆಯಲ್ಲಿ ಬಂದು ಕಾಯುವುದನ್ನು ತಪ್ಪಿಸುತ್ತಿರಲಿಲ್ಲ. ಅವನಿಗೆ ಜನರ ಸಾವನ್ನು ಕಾಯುವುದು ಪಾಪ ಅಂತೇನು ಅನಿಸಿರಲಿಲ್ಲ.

ಆ ಕಡೆ ಮೂರು ಜನ ಹೆಂಗಸರ ಆಕ್ರಂದನ ಮುಗಿಲು ಮುಟ್ಟಿತ್ತು. ಹೊಳೆತೀರದಲ್ಲಿ ಚೆದುರಿಹೋಗಿದ್ದ ಪ್ರವಾಸಿಗರಿಗೆ ಸದ್ದು ಸಿಡಿಲಿನಂತೆ ಎರುಗಿ ಈ ಕಡೆಗೆ ಮೊಗಚಿಕೊಂಡು ದುಗುಡ, ಭಯ ಭೀತಿಯನ್ನು ಹೊರಹಾಕುತ್ತಿದ್ದರು. ಕುಪ್ಪುಸ್ವಾಮಿ ನಿರುತ್ಸಾಹದಲ್ಲೇ ಕೂತಿದ್ದ. ಸುನೇತ್ರ ತನ್ನ ಗಂಡಮಕ್ಕಳು ಇರುವಲ್ಲಿಗೆ ತಾನೂ ಹೋಗುವುದಾಗಿ ಗೋಳಾಡುತ್ತ ಅತ್ತ ನುಗ್ಗುತ್ತಿದ್ದಳು. ಇತರೆ ಪ್ರವಾಸಿಗರು ಅವಳನ್ನು ತಡೆದು ಸಮಾಧಾನಿಸುತ್ತಿದ್ದರು. ಶುಭಾ ಮುಖ ಮುಚ್ಚಿಕೊಂಡು ರೋದಿಸುತ್ತಿದ್ದಳು. ಅತ್ತೆ ಸರಸ್ವತಿ ಬಿಕ್ಕುತ್ತಾ ಕೂತುಬಿಟ್ಟಿದ್ದಳು.

ಅಪ್ಪ ಮಕ್ಕಳು ಆಡುತ್ತಿದ್ದ ಚೆಂಡು ಅವರು ಮುಳುಗಿದ ಜಾಗದ ನೀರಿನ ಮೇಲೆ ತೇಲಾಡುತ್ತಿತ್ತು. ಕೈಜಾರಿ ಹೋದ ಚೆಂಡನ್ನು ಹಿಡಿಯಲೆಂದು ಒಳಮುಖಕ್ಕೆ ಸರಿದ ಮಗ, ತಾನು ಹಿಡಿಯುತ್ತೇನೆಂದು ಮುನ್ನುಗ್ಗಿದ ಮಗಳು ಮುಳುಗಿದರು. ಅವರನ್ನು ಎಳೆದುಕೊಳ್ಳುವ ಭರದಲ್ಲಿ ನುಗ್ಗಿದ ಅಪ್ಪ ಸೆಳೆತಕ್ಕೆ ಸಿಕ್ಕಿಹೋದ. ಕ್ಷಣಾರ್ಧದಲ್ಲಿ ಮೂವರೂ ಮುಳುಗಿದರು.

ಹೀಗೆ ಮುಳುಗಿ ಸಂಭವಿಸುವ ಸಾವಿನ ಬಗ್ಗೆ ನಿರ್ಭಾವದಿಂದಿರುತ್ತಿದ್ದ ಕುಪ್ಪುಸ್ವಾಮಿ ಇವತ್ತು ಮತ್ತೆ ಮತ್ತೆ ಮುಳುಗಿದ ಜಾಗ, ರೋದನದ ತೀರ, ಅಪಾಯ ಸೂಚಕ ಫಲಕವಿಲ್ಲದ ಸ್ಥಳದ ಕಡೆಗೆ ನೋಡಿದ. ಆ ಫಲಕವನ್ನಾಗಲೀ, ಫಲಕವಿಲ್ಲದ್ದನ್ನು ಗಮನಿಸಿ ಸೂಚನೆ ಕೊಡುವುದನ್ನಾಗಲೀ ಮಾಡುವ ಅವಕಾಶವೇ ಸಿಕ್ಕಿರಲಿಲ್ಲ. ಆಗವರ ಉದ್ವೇಗದ ಅಹಂ ಮತ್ತು ಅಂತಸ್ತು ಇವನೊಬ್ಬ ಮನುಷ್ಯ ಅಂತ ತಿಳಿಸಿಕೊಡಲಿಲ್ಲ ಅನಿಸಿ, ಮತ್ತೆ ಕುಪ್ಪುಸ್ವಾಮಿ ಬಂಡೆ ಮೇಲೆ ಅಲುಗಾಡದೆ ಕೂತ.

ಜನರು ಭಯಮಿಶ್ರಿತ ಕಾತರದಲ್ಲಿ ಅರಣ್ಯ ಇಲಾಖೆಯವರನ್ನು, ಪೊಲೀಸರನ್ನು, ರಮೇಶ್ಚಂದ್ರನನ್ನು, ಈ ಅನಾಹುತದ ಜಾಗವನ್ನು, ಕಾವೇರಿಯ ನಿಗೂಢ ಕ್ರೌರ್ಯವನ್ನು ನೆನೆನೆದು ಜರಿಯುತ್ತಿದ್ದರು. ಒಬ್ಬನಂತೂ ಕುಪ್ಪುಸ್ವಾಮಿ ಕಡೆಗೆ ಕೈ ತೋರಿಸುತ್ತಾ ‘‘ಇಂಥ ಬಡ್ಡೀಮಕ್ಳನ್ನು ನಂಬಂಗಿಲ್ಲ. ತಾನೇ ಏನಾದ್ರು ನೂಕಿ, ಆಮೇಲೆ ಹೆಣ ಎತ್ತಿಕೊಡ್ತೀನಿ ಅಂತ ಬಂದು ಹಣ ಕಿತ್ಕೊಳ್ಳೊ ಉಪಾಯವೊ ಏನೋ, ಅಂಥ ಕೆಲ್ಸ ಇಲ್ಲಿ ನಡೀತದಂತೆ’’ ಅಂತ ರೇಗುತ್ತಿದ್ದ.

ಇನ್ನೊಬ್ಬ ‘‘ದಿಟ, ಇಲ್ಲಿ ಇನ್ನೂ ಎರಡ್ಮೂರು ಜನ ಅವರೆ. ಇವತ್ತೆಲ್ಲೊ ಅವ್ರು ಕಾಣ್ತಿಲ್ಲ. ಇವರ ಕೆಲ್ಸವೆಲ್ಲ ಹೆಣ ಬೀಳೋದನ್ನ ನೋಡಿ ಹಣ ಸಂಪಾದ್ನೆ ಮಾಡೋದು. ಇವುರಿಗೆಲ್ಲ ಜನ ಮುಳುಗಿ ಸಾಯೋದು ಬೇಕು. ಏನು ಕಾಲ ಬಂತು ನೋಡಿ’’ ಎಂದು ಶಪಿಸುತ್ತಿದ್ದ.

ಮತ್ತೊಬ್ಬ ‘‘ನೀವು ಹೇಳ್ತೀರೋದು ನಿಜವಿದ್ರು ಇರಬೌದು. ಅನಾಹುತ ನಡೆದ ಹತ್ರವೇ ಅವುನು ಕೂತವನೆ, ಅವನಲ್ಲಿ ಮನುಷ್ಯತ್ವ ಇದ್ದಿದ್ರೆ ಮುಳುಗೋದನ್ನ ನೋಡಿ ಎತ್ತಿ ಜೀವ ಉಳಿಸುತ್ತಿದ್ದ. ಹಣಕ್ಕಾಗಿ ಏನ್ಬೇಕಾದ್ರು ಮಾಡೊ ಕಟುಕ’’ ಎಂದು ಚಟಪಟಗುಟ್ಟಿದ.

ಈಗ ಶುಭಾ ತನ್ನ ರೋದನ ನಿಲ್ಲಿಸಿ ‘‘ಅಲ್ಲಿ ಕುತಿರೋನು ನಾವು ಬಂದಾಗಿನಿಂದ್ಲೂ ನಮ್ಮ ಹತ್ರನೇ ಸುಳಿದಾಡ್ತ ಇದ್ದ. ನಾವು ಬೈದರೂ ಕೇರ್ ಮಾಡ್ತಿರಲಿಲ್ಲ. ಪೊಲೀಸ್ನೋರ್ಗೆ ಹಿಡಿದುಕೊಡ್ತೀವಿ ಅಂತ ಹೆದರಿಸಿದ ಮೇಲೆಯೇ ಆ ಕಡೆಗೆ ಹೋಗಿದ್ದು. ಲೇಟಾಯ್ತು ಊಟಕ್ಕೆ ರೆಡಿ ಮಾಡಲು ಅಂತ ನಾವು ಈಕಡೆಗೆ ಬಂದದ್ದೇ ತಡ, ಹೆಂಗೆ ನಮ್ಮ ಭಾವಮಕ್ಕಳನ್ನ ಯಾಮಾರಿಸಿದ್ನೋ ಕಾಣೆ, ಮುಳುಗಿಸಿಬಿಟ್ಟ. ಅವನು ಹೆಣಗಳ್ಳನೇ ಇರಬೇಕು’’ ಅಂತ ಮತ್ತೆ ಅಳತೊಡಗಿದಳು.

ಇತ್ತ, ಇವತ್ತು ನೀರಿಗಿಳಿಯಬಾರದೆಂದು ಕೂತಿದ್ದ ಕುಪ್ಪುಸ್ವಾಮಿಗೆ ಹಂಗೆ ಕೂರಲಾಗಲಿಲ್ಲ. ಚಡಪಡಿಕೆ ಶುರುವಾಯಿತು. ಇಲ್ಲಿ ಕಾವೇರಿ ಮಾತ್ರ ಏನೂ ನಡೆದೇ ಇಲ್ಲ ಎಂಬಂತೆ ಶಾಂತವಾಗಿದ್ದಳು. ಸಾಮಾನ್ಯವಾಗಿ ಸುಳಿಯಿರುವ ಜಾಗದಲ್ಲಿ ಸುರುಳಿ ಸುರುಳಿಯಾಗಿ ನೀರು ಸುತ್ತುತ್ತಿರುತ್ತದೆ. ಆದರೆ ಇಲ್ಲಿ ತನ್ನ ಒಡಲಾಳದಲ್ಲಿ ಒಳಪ್ರವಾಹವನ್ನು ಬಚ್ಚಿಕೊಂಡು, ಮೇಲ್ಭಾಗದಲ್ಲಿ ತಣ್ಣಗೆ, ಮುಗ್ಧ ಮುಖವಾಡ ತೊಟ್ಟು ಬೇಟೆಗಾಗಿ ಕೂತ ಬೇಟೆಗಾರನಂತೆ, ಮೃತ್ಯುವನ್ನು ಪೋಷಿಸಿಕೊಂಡಿದ್ದಾಳೆ.

ಕುಪ್ಪುಸ್ವಾಮಿಯ ಮನಸ್ಸು ತುದಿಎಲೆಯ ರಭಸದಂತೆ ಪಟಗುಟ್ಟಿತು. ಮಗು! ಕೊನೆಯದಾಗಿ ಕೂಗಿಕೊಳ್ಳಲೂ ಆಸ್ಪದ ಸಿಗದೆ ಸರಕ್ಕನೆ ಕೆಳಗಿಳಿದು ಹೋದ ಮಗು! ಆಟದಲ್ಲಿ ತನ್ನದೇ ಮೇಲುಗೈಯಾಗಬೇಕೆಂದು ಉತ್ಸಾಹದ ಚಿಲುಮೆಯಾಗಿ ಹೋರಾಡುತ್ತಿದ್ದ ಅದು ತಾನು ಮುಳುಗುವಾಗ ಒಂದು ಮಾತೂ ಹೇಳಿಕೊಳ್ಳಲಾಗದೆ ನಿಶ್ಯಬ್ದವಾದ ಚಿತ್ರ. ತನ್ನ ಮಗನೇ ಮುಳುಗಿಹೋದಂತೆ ಭಾಸವಾಯಿತು.

ಈಗ ಮಗು ಮುಳುಗಿಹೋದ ಜಾಗದತ್ತ ಮತ್ತೆ ಮತ್ತೆ ನೋಡಿದ. ದಡದಲ್ಲಿ ಜನ ಬೊಬ್ಬಿರಿಯುತ್ತಿದ್ದರು. ಕಾವೇರಿ ಸೆಳೆದುಕೊಂಡ ಆ ಜೀವಗಳು ನೀರಾಳದಲ್ಲಿ ಮೊರೆಯಿಡುತ್ತಿರುವಂತೆ ಅನಿಸತೊಡಗಿತು. ‘ಇದೇಯೇನಪ್ಪ ನೀನು ಕಲಿತ ವಿದ್ಯೆ! ನಿನ್ನ ಕೆಲಸ?’ ಎಂದು ಆಳದಿಂದ ದನಿ ಏರಿ ಬಂದಂತಾಯಿತು.

ಕುಪ್ಪುಸ್ವಾಮಿ ಕೂತಲ್ಲೇ ಅತ್ತಿತ್ತ ನೋಡುತ್ತ ಹೊಸಕಾಡಿದ. ಅವನ ಎದೆಯಾಳದಿಂದ ಮೂಡಿಬಂದ ಸುಳಿಯೊಂದರ ಆ ತುಡಿತ ಅಸಾಧ್ಯವಾಗಿ ಕಂಡಿತು.
ಹೌದು, ಅಪಮಾನವನ್ನು ಒಪ್ಪಿಕೊಳ್ಳುವುದಾಗಿದ್ದರೆ, ಸಂಪಾದನೆಯೇ ಮುಖ್ಯವಾಗಿದ್ದರೆ ಹೊಸ ಬದುಕನ್ನು ಅರಸಿ ಯಾಕೆ ಬರಬೇಕಿತ್ತು? ತನ್ನನ್ನು ಹೀನಾಯಗೊಳಿಸಿ ಲೇವಡಿ ಮಾಡಿದರೂ ದೂರ ಕೂತೇ ಆ ಮಗುವನ್ನು ನೋಡಬೇಕೆನಿಸುತ್ತಿದ್ದುದು ಯಾಕೆ? ಭಾವವೇ ಬತ್ತಿಹೋಗಿದ್ದ ಕಡೆ ಮತ್ತೆ ವಾತ್ಸಲ್ಯದ ಒರತೆ ಜಿನುಗತೊಡಗಿದ್ದು ಯಾಕೆ?

ಮತ್ತೆ ಅದೇ ದನಿ – ‘‘ಇದೇಯೇನಪ್ಪ ನಿನ್ನ ವಿದ್ಯೆ, ನಿನ್ನ ಕೆಲಸ?’’.
ಕುಪ್ಪುಸ್ವಾಮಿಗೆ ಒಳಗಿನ ತುಡಿತ ಹೊರ ಉಕ್ಕಿದಂತಾಯಿತು. ಎದ್ದವನೇ ಬಂಡೆ ಮೇಲಿನಿಂದ ನೀರಿಗೆ ಧುಮುಕಿದ. ಜನ ಆ ಬಂಡೆ ಮೇಲೆ, ‘‘ಕೂತಿದ್ದೋನು ನೀರಿಗೆ ಬಿದ್ದ ನೋಡಿ, ನೋಡಿ...?’’ ಎಂದು ಕೂಗತೊಡಗಿದರು.

ಗುಂಪಿನಿಂದ ಒಬ್ಬ ‘‘ಹೆಣ ಎತ್ತೋದಿಕ್ಕಿರಬೇಕು. ಈ ಕೆಲ್ಸ ಮೊದಲೇ ಮಾಡಿದ್ರೆ ಜೀವ ಉಳಿಸಿದ ಪುಣ್ಯ ಬರ್ತಿತ್ತು ಅವುನ್ಗೆ’’ ಅಂದ.
ಇನ್ನೊಬ್ಬ ‘‘ನಾವು ಈ ಕಡೆ ಇರೋದ್ರಿಂದ ಆ ಕಡೆಗೆ ತಪ್ಪಿಸ್ಕೊಂಡು ಹೋಗ್ತಾ ಅವನೆ. ಅವುನು ಕೊಲೆಗಾರನೇ ಇರಬೇಕು’’ ಅಂತ ರೇಗಿದ.

ಅತ್ತು ಅತ್ತು ಸುಸ್ತಾಗಿದ್ದ ಸುನೇತ್ರ ಎದ್ದು ನಿಲ್ಲುತ್ತಾ ‘‘ಆ ಕೆಕ್ಕರಗಣ್ಣಿನ ತಿರುಕನೇ ನನ್ನ ಸಂಸಾರವ ನೀರಿಗೆ ನೂಕಿರೋದು. ಈಗ ತಪ್ಪಿಸ್ಕೊಂಡು ಬಿಟ್ಟ. ಹಿಡೀರಿ ಹಿಡೀರಿ’’ ಅಂತ ಸೋತ ಸ್ವರದಲ್ಲಿ ಕೂಗತೊಡಗಿದಳು.

‘‘ನಾನು ಪೊಲೀಸ್ಗೆ ಫೋನ್ ಮಾಡಿದ್ದೀನಿ. ಅವುರು ಇನ್ನೇನು ಬರಬೌದು. ಆ ಸುವ್ವರ್ ಹುಚ್ಚನೋ ಕೊಲೆಗಡುಕನೋ ಇರಬೇಕು’’ ಅಂತ ಕಂಪನಿ ಉದ್ಯೋಗಿಯೊಬ್ಬ ಹೇಳುತ್ತಿದ್ದ.

‘‘ಈ ದೇಶದಲ್ಲಿ ಹೊರಗೆ ಹೋದೋರು ತಿರುಗಿ ಮನೆಗೆ ವಾಪಸ್ಸು ಬರ್ತಾರೆ ಅನ್ನೋ ಗ್ಯಾರಂಟಿನೇ ಇಲ್ಲ. ಮನುಷ್ಯನ್ಗೆ ಮನುಷ್ಯನೇ ಮೃಗವಾಗಿಬಿಟ್ಟ’’ ಅಂತ ಹಿರಿಯನೊಬ್ಬ ಗೊಣಗಾಡುತ್ತಿದ್ದ.

ಭಾನುವಾರದ ಹೊತ್ತು ಇಳಿಯತೊಡಗಿತು. ಅಬ್ಬರ ಕಡಿಮೆಯಾಗಿ ದುಗುಡ, ದುಮ್ಮಾನ ಮಡುಗಟ್ಟತೊಡಗಿತ್ತು. ಮುಳುಗಿ ಹೋದವರ ಜೀವ ಉಳಿಸಲಾಗುವುದಿಲ್ಲ ಎಂಬುದು ಆಗಲೇ ನಿಶ್ಚಯವಾಗಿ ಹೋಗಿತ್ತು. ಈಗ ಶವ ತೆಗೆದು ವಾರಸುದಾರರಿಗೆ ಒಪ್ಪಿಸಬೇಕು.

ಅದೇನಿದ್ದರೂ ಪೊಲೀಸರ ಕೆಲಸ. ಅದು ಎಷ್ಟೊತ್ತಾಗುವುದೊ ಗೊತ್ತಿಲ್ಲ. ಹೇಗಿದ್ದರೂ ಶವಗಳ ಬಂದು ಬಳಗ ಹೆಣ ನೀಡುವವರೆಗೂ ಕಾಯಬೇಕು; ಕಾಯುತ್ತಾರೆ. ತಾವು ದೂರದಿಂದ ಬಂದವರು, ತಮ್ಮ ಊರು ಸೇರಬೇಕಲ್ಲ ಅಂದುಕೊಂಡ ಪ್ರವಾಸಿಗರು ತಮ್ಮ ಯಾನ ಮುಂದುವರಿಸಲು ಒಬ್ಬೊಬ್ಬರಾಗಿ ತಂತಮ್ಮ ಕಾರು, ಮಿನಿಬಸ್ಸು, ಮೋಟಾರು ಬೈಕುಗಳತ್ತ ಮುಖವಾದರು.

ಆ ಹೊತ್ತಿಗೆ ದೂರದ ಹೊಳೆಯಂಚಿನಲ್ಲಿ ವ್ಯಕ್ತಿಯೊಬ್ಬ ಏನನ್ನೋ ಹೊತ್ತುಕೊಂಡು ಬರುತ್ತಿರುವುದು ಕಂಡು ಗುಂಪಿನಲ್ಲಿದ್ದ ಒಬ್ಬ ಆಕಡೆಗೆ ಉಳಿದವರ ಗಮನ ಸೆಳೆದ. ಹತ್ತಿರವಾದಂತೆ ಈ ಕಲ್ಲುಬಂಡೆಯ ಮೇಲೆ ಕೂತಿದ್ದ ಆಸಾಮಿಯೇ ಮಗುವಿನ ಹೆಣವನ್ನು ಹೊತ್ತು ತರುವುದೆಂದು ತಿಳಿಯಿತು.

ಹೌದು, ಕುಪ್ಪುಸ್ವಾಮಿ ಮಗುವನ್ನು ಹೆಗಲ ಮೇಲೆ ಹೊತ್ತು ತಂದು, ಅದರ ತಾಯಿಯ ಮುಂದೆ ಹೂವಿನಂತೆ ಮಲಗಿಸಿದ. ಅವನಿಗೆ ಸಿಕ್ಕಿದ್ದು ಈ ಮಗು ಮಾತ್ರ. ಹೆಣವಾಗಿ ಬಂದ ಮಗನ ಕಂಡ ತಾಯಿ ಸಂಕಟ ಕಟ್ಟೆ ಒಡೆಯಿತು. ಕುಪ್ಪುಸ್ವಾಮಿಗೆ ಬಲು ಕೆಡುಕೆನಿಸಿತು.

ಮನುಷ್ಯನ ದರ್ಪ, ದೌಲತ್ತು, ಅಂತಸ್ತನ್ನೆಲ್ಲ ಕ್ಷಣಮಾತ್ರದಲ್ಲಿ ನಾಶ ಮಾಡಿಬಿಡುವ ಬೆನ್ನು ಹಿಂದಿನ ಸಾವು ಎಷ್ಟು ಕಠೋರ, ಎಂಥ ನಿಷ್ಕರುಣಿ! ಸಾವಿನ ಮುಂದೆ ಎಲ್ಲವೂ ಸೋಲೇ ಎಂಬುದನ್ನು ನೆನೆದು ಕರುಳು ಹಿಂಡಿಬಂತು. ‘‘ಮುಖ ಹಿಂಡಿಕೊಂಡು ನೋವಿನಿಂದ ಮರೆತುಬಿಟ್ಟಿದ್ದ ನನ್ನ ಸಂಕಟವನ್ನು ನೀವು ಇವತ್ತು ಕೆದ್ಕಿ ಕೆದ್ಕಿ ಅದರಲ್ಲಿ ಮುಳುಗಿಸಿಬಿಟ್ರಿ.

ನಾನು ಅದರಲ್ಲಿ ಮುಳುಗಿಬಿಟ್ಟೆ. ಇದು ಅಪಾಯದ ಜಾಗ ಅಂತ ಹೇಳೋದನ್ನೂ ಮರೆತುಬಿಟ್ಟೆ. ಇಲ್ಲಿದ್ದ ಬೋರ್ಡ್ನೋ ನಮ್ಮೋರು ಕಿತ್ತು ಹಾಕಿಬಿಟ್ಟಿದ್ರು. ನೀವಾದ್ರು ಒಂದು ಮಾತು ಕೇಳಿದ್ರೆ ಅಥವಾ ಮುಳುಗೋದನ್ನ ಕಂಡ ಕೂಡಲೇ ಯಾರಾದ್ರು ಕೂಗಿಕೊಂಡಿದ್ರೆ ಕೊನೆಪಕ್ಷ ಒಂದು ಜೀವನಾದ್ರು ಉಳಿಸ್ತಿದ್ದೆ’’ ಅನ್ನುತ್ತ ತೊದಲಿದ.

ಜನ ಮೂಕರಾಗಿ ನಿಂತಿದ್ದರು. ಮೂರುಜನ ಹೆಂಗಸರ ರೋದನವನ್ನು ಬಿಟ್ಟರೆ ಹೊಳೆಯ ತೀರವು ಕಡುಮೌನದ ಸೆರಗಿಗೆ ಸರಿಯುತ್ತಿತ್ತು. ಈಗೇನಿದ್ದರೂ ಮಗುವಿನ ಅಪ್ಪ ಮತ್ತು ಮಗಳ ಹೆಣಗಳಿಗಾಗಿ ನೀರೊಳಗಿನ ಕಲ್ಲುಬಂಡೆಗಳಿರುವ ಕಡೆ ಮುಳುಮುಳುಗಿ ಹುಡುಕುತ್ತಾ ಎಲ್ಲಿಯವರೆಗೆ ಸಾಗಬೇಕೆಂಬ ಅಂದಾಜನ್ನು ಕುಪ್ಪುಸ್ವಾಮಿಯೇ ಹೇಳಬೇಕು.

ಕುಪ್ಪುಸ್ವಾಮಿ ಎಂದಿನಂತೆ ಈಗ ಹೆಣ ಹುಡುಕಿಕೊಡಲು ತನ್ನ ಬೆಲೆ ಎಷ್ಟೊಂದು ಕೇಳಲಿಲ್ಲ. ಮರಳ ಮೇಲೆ ಮಲಗಿಸಿದ್ದ ಮಗುವನ್ನೊಮ್ಮೆ ತಿರುಗಿ ನೋಡಿ, ಮೈ ಒದರುತ್ತಾ ಮತ್ತೆ ಹೊಳೆಯಕಡೆಗೆ ನಡೆಯತೊಡಗಿದ. ಭಾನುವಾರ ತನ್ನ ಹಗಲು ಹಾಳೆಯನ್ನು ಮೊಗಚುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.