ಸೋಮವಾರ, ಮೇ 23, 2022
21 °C

ಭಾರೀ ಆದಾಯದ ಹಂದಿ ಸಾಕಣೆ

ಚಂದ್ರಹಾಸ ಚಾರ್ಮಾಡಿ Updated:

ಅಕ್ಷರ ಗಾತ್ರ : | |

`ಕೋಳಿ ಸಾಕಾಣಿಕೆಗಿಂತಲೂ ಲಾಭದಾಯಕ ಹಂದಿ ಸಾಕಣೆ' ಎನ್ನುತ್ತಾರೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬೀಜೂವಳ್ಳಿಯ ಅಲ್ಬರ್ಟ್ ಪಿಂಟೋ. ಐದು ವರ್ಷಗಳಿಂದ ಹಂದಿ ಸಾಕಣೆಯನ್ನೇ ಬದುಕಿನ ಮೂಲವನ್ನಾಗಿಸಿಕೊಂಡಿರುವ ಇವರ ಬಳಿ ಡ್ಯೂರಾಕ್, ಯರ್ಕ್‌ಷೇರ್, ಲಾಂಡ್‌ಲೆರ್   ಮುಂತಾದ ಹತ್ತಕ್ಕೂ ಹೆಚ್ಚು ಜಾತಿಯ ಹೈಬ್ರಿಡ್ ತಳಿಗಳ 250ಕ್ಕೂ ಹೆಚ್ಚು ಹಂದಿಗಳು ಇವರ ಬಳಿಯಿವೆ. ಇವುಗಳ ಪೈಕಿ ಹಲವು ಹೊರರಾಜ್ಯಗಳದ್ದಾಗಿದ್ದರೆ, ಇನ್ನು ಹಲವು 100 ಕೆ.ಜಿ ಯಿಂದ 250 ಕೆ.ಜಿ ತೂಗುತ್ತವೆ!ಹಂದಿ ಕುರಿತು ಅಭ್ಯಸಿಸುವವರಿಗೆ ಇದೊಂದು ಉತ್ತಮ ತಾಣವೂ ಔದು.  `ಸಾಕಣೆಯ ಆರಂಭದಲ್ಲಿ ಗೂಡು ನಿರ್ಮಾಣ, ಮರಿ ಖರೀದಿ ಹೀಗೆ ಒಂದಷ್ಟು ಬಂಡವಾಳದ ಅಗತ್ಯತೆ ಇದ್ದರೂ ನಂತರ ಪ್ರತಿ ದಿನವೂ ಆದಾಯ ತಂದುಕೊಡಬಲ್ಲ ಕಾಯಕವಿದು. ಮದುವೆ ಮುಂತಾದ ಶುಭ ಸಮಾರಂಭಗಳ ಸಮಯದಲ್ಲಿ ಪ್ರತಿ ದಿನವೂ ಕೆ.ಜಿ ಗಟ್ಟಲೆ ಮಾಂಸ ಮಾರಾಟವಾಗುತ್ತವೆ. ಇನ್ನು ಕಿಲೋ ಒಂದಕ್ಕೆ ತೊಂಬತ್ತು ರೂಪಾಯಿಯಂತೆ ಜೀವಸಹಿತ ಹಂದಿಯನ್ನು ಇವರು ಮಾರಾಟ ಮಾಡುತ್ತಾರೆ.  ಹಂದಿಗಳು ತಿಂದು ಉಳಿದ ಆಹಾರ, ಅವುಗಳ ಮಲ ಕೂಡ ಉತ್ತಮ ಸಾವಯವ ಗೊಬ್ಬರ. ಇದರಿಂದ ಗೋಬರ್ ಗ್ಯಾಸ್ ತಯಾರಿಸುವ ಪ್ರಯೋಗದಲ್ಲೂ ಇವರು ಯಶ ಕಂಡಿದ್ದಾರೆ.`ಹಂದಿಗಳು ಹತ್ತು ವರ್ಷ ಬದುಕುತ್ತವೆ. ಒಂದು ಹಂದಿ ಮೂರು ತಿಂಗಳಿಗೊಮ್ಮೆ 10 ರಿಂದ 15 ಮರಿ ಹಾಕುತ್ತದೆ. 45 ದಿನಗಳ ಒಂದು ಮರಿಗೆ ಎರಡು ಸಾವಿರ ರೂಪಾಯಿ, ಎರಡು ತಿಂಗಳ ಮರಿಗೆ ಎರಡೂವರೆ ಸಾವಿರ ರೂಪಾಯಿ ದರದಂತೆ ಪ್ರತಿ ತಿಂಗಳು ಮರಿಗಳನ್ನು ಮಾರಾಟ ಮಾಡುತ್ತೇನೆ' ಎನ್ನುತ್ತಾರೆ ಪಿಂಟೋ.  ಹಂದಿ ಗಲೀಜಿಗೆ ಹೆಸರುವಾಸಿ. ಹೊರಗೆ ಬಿಟ್ಟ ಕೂಡಲೇ ಕೆಸರಿನಲ್ಲಿ ಹೊರಳಾಡುವ ಹಂದಿಗಳನ್ನು ಸ್ವಚ್ಛವಾಗಿ ಕೂಡಿ ಹಾಕುವುದಕ್ಕಾಗಿ ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕಟ್ಟವೊಂದಿದೆ. ಹಂದಿಗಳ ತಳಿ ಗಾತ್ರಗಳಿಗನುಗುಣವಾಗಿ ಅವುಗಳನ್ನು ವಿಭಾಗಿಸಲಾಗಿದೆ. ವಿಶೇಷವೆಂದರೆ ಇತರ ಪ್ರಾಣಿಗಳಂತೆ ಹಂದಿಗಳ ಬೆಳವಣಿಗೆಗೆ ವರ್ಷಗಟ್ಟಲೆ ಕಾಯಬೇಕಾಗಿಲ್ಲ. ಮೂರು ತಿಂಗಳಲ್ಲಿ 30 ಕೆ.ಜಿ ತೂಗುವ ಹಂದಿ ಆರು ತಿಂಗಳ ನಂತರ ಬಹುಬೇಗನೆ ದೊಡ್ಡದಾಗುತ್ತದೆ. ಹಂದಿ ಸಾಕಣೆಗೆ ಬಿಸಿಲು, ನೆರಳು ಅಗತ್ಯ ಎನ್ನುವ ಪಿಂಟೋ ಪ್ರತಿವರ್ಷ ಹಂದಿ ಗೊಬ್ಬರವನ್ನು ಮಾರಾಟ ಮಾಡುತ್ತಾರೆ.ಪ್ರತಿ ಹಂದಿಗಳನ್ನು ದಿನಕ್ಕೆ ಎರಡು ಬಾರಿ ಸ್ನಾನ ಮಾಡಿಸುತ್ತಾರೆ. ಅವುಗಳಿಗೆ ಬೇಕಾದ ತಿಂಡಿ ನೀಡುವುದು ಸೇರಿದಂತೆ ಎಲ್ಲ ಜವಾಬ್ದಾರಿಯನ್ನೂ ಒಬ್ಬರೇ ನಿರ್ವಹಿಸುತ್ತಾರೆ. ಹಂದಿಗಳಿದ್ದಲ್ಲಿಗೆ ಅವುಗಳಿಗೆ ನೀಡುವ ಆಹಾರವನ್ನು ತಿನ್ನಲು ಕಾಗೆಗಳು ಬರುವುದು ಸಹಜ. ಅವುಗಳಿಂದ ರಕ್ಷಣೆ ನೀಡುವುದು ಚತುರತೆಯ ಕೆಲಸ. ಶುಚಿತ್ವದ ಕಡೆ ಗಮನವಹಿಸುವ ಮನಸ್ಸು ನಿಮ್ಮಲ್ಲಿದ್ದರೆ ಹಂದಿ ಸಾಕಣೆಯನ್ನು ಕೈಗೊಂಡು ಲಾಭ ಗಳಿಸಬಹುದು ಎಂಬ ಮಾತಿಗೆ ಪಿಂಟೋರವರ ಪ್ರಯತ್ನ ಒಂದು ಉತ್ತಮ ಉದಾಹರಣೆ. ಹೆಚ್ಚಿನ ಮಾಹಿತಿಗೆ 9448744292                                                                                                 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.