ಶುಕ್ರವಾರ, ಮಾರ್ಚ್ 5, 2021
30 °C

ಭಾವೈಕ್ಯ ಸಾರಿದ ಶರೀಫರು: ತೋಂಟದ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾವೈಕ್ಯ ಸಾರಿದ ಶರೀಫರು: ತೋಂಟದ ಶ್ರೀ

ಗದಗ: ಸಂತ ಶಿಶುನಾಳ ಶರೀಫರು ಜನತೆಗೆ ಸರಳವಾಗಿ ಅಧ್ಯಾತ್ಮ ಅರುಹಿದ ಮಹಾನ್ ತತ್ವಜ್ಞಾನಿಗಳು. ಕನ್ನಡ ನಾಡಿನ ಅಧ್ಯಾತ್ಮ, ಸಾಹಿತ್ಯ, ಶರಣ ಚಿಂತನ ಲೋಕಕ್ಕೆ ನೀಡಿದ ಕೊಡುಗೆ ಮರೆಯಲಾಗದು ಎಂದು ತೋಂಟದಾರ್ಯ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ಹೇಳಿದರು.ನಗರದ ತೋಂಟದಾರ್ಯ ಮಠದ ಶಿವಾನುಭವದಲ್ಲಿ ಏರ್ಪಡಿಸಿದ್ದ  ಸಂತ ಶಿಶುನಾಳ ಶರೀಫ ಶಿವಯೋಗಿಗಳ ಜಯಂತಿ ಮತ್ತು ಅಂಗವಿಕಲೆ ಈರಮ್ಮ ಮಾನ್ವಿ ಬರೆದ ಅಂಗದೊಳು ಲಿಂಗದ ಬೆಳಕು ವಚನ ಕಿರು ಗ್ರಂಥ ಬಿಡುಗಡೆ ನೆರವೇರಿಸಿ ಮಾತನಾಡಿದರು. ನವಲಗುಂದದ ನಾಗಲಿಂಗಜ್ಜರು, ಗರಗದ ಮಡಿವಾಳಪ್ಪ, ಶರೀಫರು, ಸಿದ್ದಾರೂಢರಾದಿಯಾಗಿ ಒಂದೇ ಕಾಲದಲ್ಲಿ ಮಹಾಮಹಿಮರು ಇದ್ದುದು ಸುವರ್ಣಯುಗ.ಜಾತಿಮ ಮತ ಪಂಥಗಳನ್ನೆಲ್ಲ ಬದಿಗೆ ಸರಿಸಿ ಶರೀಫರು ಗುರುಗೋವಿಂದಭಟ್ಟರ ಶಿಷ್ಯರಾಗಿ ಜಾತಿ ಅಳಿದು ನೀತಿ ಅರುಹಿ, ಜನಜೀವನದ ನೋವು ಕರಗಿಸಿ ನಲಿವು ತಂದರು. ಜ್ಞಾನವನ್ನು ಸರಳವಾಗಿ ಅರುಹಿ ಎಲ್ಲರಲ್ಲಿ ಪ್ರೀತಿ, ವಿಶ್ವಾಸ ಭಾವೈಕ್ಯ ಸಾರಿದ ಶರೀಫರು ಅಚ್ಚ ಕನ್ನಡದಲ್ಲಿ ಬರೆದ ತತ್ವಪದಗಳು ಇಂದಿಗೂ ತಮ್ಮ ಮಹತ್ವ ಹಾಗೂ ವೈಚಾರಿಕ ಸಂದೇಶದ ಕಾರಣ ಜನಪ್ರಿಯತೆ ಉಳಿಸಿಕೊಂಡಿವೆ ಎಂದು ನುಡಿದರು.`ಹುಟ್ಟಿದ್ದು ಹೊಲಿ ಮನಿ, ಬಿಟ್ಟು ಹೋಗುತಿ ತಾಯಿ ಮನಿ, ಎಷ್ಟಿದ್ದರೇನು ಇದು ಖಾಲಿ ಮನಿ', ಸೋರುತಿಹುದು ಮನೆಯ ಮಾಳಿಗಿ' ಮುಂತಾದ ಶರೀಫರ ಗೀತೆಗಳನ್ನು ಉಲ್ಲೆೀಖಿಸಿದರು. ಶರೀಫರು ವಿಶ್ವದ ಯಾವುದೇ ತತ್ವಜ್ಞಾನಿಗೆ  ಸಮನಾಗಿ ನಿಲ್ಲಬಲ್ಲ ಉತ್ಕೃಷ್ಟ ಚಿಂತಕ ಎಂದು ಬಣ್ಣಿಸಿದರು.ಶರೀಫರು ಗದಗ ಜಿಲ್ಲೆಯ ನಾರಾಯಣಪುರದ ಕವಿ ಚಾಮರಸ ಬರೆದ ಪ್ರಭುಲಿಂಗಲೀಲೆ ಗ್ರಂಥವನ್ನು ಅಪರಿಮಿತವಾಗಿ ಗೌರವಿಸುತ್ತಿದ್ದರು. ಎಲ್ಲ ಗ್ರಂಥಗಳು ಬಗಲಾಗ, ಆದರ ಪ್ರಭುಲಿಂಗ ಲೀಲೆ ನನ್ನ ತಲಿಮ್ಯೋಗ.. ಎಂಬ ಮಾತು ಇದಕ್ಕೆ ನಿದರ್ಶನವಾಗಿದೆ ಎಂದು ತಿಳಿಸಿದರು. ಈರಮ್ಮ ಮಾನ್ವಿ ಬರೆದ `ಅಂಗದೊಳು ಲಿಂಗದ ಬೆಳಕು' ಕಿರು ಪುಸ್ತಕದ ಬಗ್ಗೆ ಮಾತನಾಡಿದರು.ಶಿವಾನುಭವದ ಭಕ್ತಿಸೇವೆಯನ್ನು ಪಾರ್ವತಮ್ಮ ಗೋರವರ ಅವರು ಬಿ.ಎಸ್.ಗೊರವರ ಅವರ ಸ್ಮರಣಾರ್ಥ ವಹಿಸಿಕೊಂಡಿದ್ದರು. ಕೊತಬಾಳದ ಅರುಣೋದಯ ಕಲಾ ತಂಡದ ಶಂಕ್ರಣ್ಣ ಸಂಕಣ್ಣವರ ಸಂಗಡಿಗರಿಂದ `ನಾನು ನಾನಲ್ಲ'  ಕಾರ್ಯಕ್ರಮದಡಿ ಶರೀಫರ ತತ್ವಪದಗಳ ಹಾಡುಗಾರಿಕೆ ನಡೆಯಿತು. ಬೆಂಗಳೂರಿನ ನ್ಯಾಯವಾದಿ ಎಂ.ಜಿ.ಮೋಹನ್ ಹಾಗೂ ಶಶಿಕಲಾ ಆರಾಧ್ಯ ದಂಪತಿ ಅನ್ನು ಗೌರವಿಸಲಾಯಿತು. ಸುಪ್ರಿಯಾ ರಾಜಶೇಖರ ಗೌಡ ಪಾಟೀಲ ಧರ್ಮಗ್ರಂಥ ಪಠಣ, ಈರಮ್ಮ ಸಿದ್ದಪ್ಪ ಮಾನ್ವಿ ಧರ್ಮಚಿಂತನ ನಡೆಸಿದರು.ಶಿವಾನುಭವ ಸಮಿತಿ ಅಧ್ಯಕ್ಷ ಪ್ರೊ. ಎಸ್.ಎನ್.ಆದಿ ಸ್ವಾಗತಿಸಿದರು. ಕಣಗಿನಹಾಳದ ಸಿ.ಆರ್.ಮುಧೋಳಮಠ ನಿರೂಪಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಮ್ಮ ಕುರಡಗಿ, ಕಾರ್ಯದರ್ಶಿ ವೀರಣ್ಣ ಹೊನಗಣ್ಣವರ, ಸಹ ಕಾರ್ಯದರ್ಶಿ ಗುರುಬಸವಲಿಂಗ ತಡಸದ, ಕೋಶಾಧ್ಯಕ್ಷ ಪ್ರಭಯ್ಯ ಹಿರೇಮಠ  ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.