ಶುಕ್ರವಾರ, ಮೇ 14, 2021
21 °C
ಪಾಲಿಕೆಯಿಂದ `ಭಿಕ್ಷುಕರ ಕರ' ರೂ 1.71 ಕೋಟಿ ಪಾವತಿ

ಭಿಕ್ಷುಕರ ಪುನರ್ವಸತಿಗೆ ಸೌಲಭ್ಯ ಕೊರತೆ

ರಾಜೇಶ್ ರೈ ಚಟ್ಲ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಿಕ್ಷುಕರ ಪುನರ್ವಸತಿಗೆ ಸೌಲಭ್ಯ ಕೊರತೆ

ಹುಬ್ಬಳ್ಳಿ: ಭಿಕ್ಷಾಟನೆಯನ್ನೇ `ವೃತ್ತಿ'ಯಾಗಿಸಿಕೊಂಡವರ `ಕಿರಿಕಿರಿ'ಯಿಂದಾಗಿ ಅವಳಿ ನಗರ ನಲುಗಿದೆ. ರೈಲು ನಿಲ್ದಾಣ, ಬಸ್ ನಿಲ್ದಾಣ, ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಿಕ್ಷುಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಭಿಕ್ಷುಕರಿಗೆ ಪುನರ್ವತಿ ಕಲ್ಪಿಸುವ ಉದ್ದೇಶದಿಂದ ಸರ್ಕಾರ ವಿವಿಧ ಕ್ರಮ ಕೈಗೊಂಡರೂ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿ ಆಗಿಲ್ಲ.ವಿಶೇಷವೆಂದರೆ, `ಭಿಕ್ಷುಕರ ಕೇಂದ್ರ ಪರಿಹಾರ ನಿಧಿ'ಗೆ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ `ಭಿಕ್ಷುಕರ ಕರ' ಎಂದು ಪ್ರತಿವರ್ಷ ರೂ 1.70 ಕೋಟಿ ಹಣ ನೀಡುತ್ತಿದೆ.ಆದರೆ ಅವಳಿನಗರದ ವ್ಯಾಪ್ತಿಯಲ್ಲಿರುವ ಭಿಕ್ಷುಕರ ಸಂಖ್ಯೆ ಮಾತ್ರ ದಿನೇದಿನೇ ಹೆಚ್ಚುತ್ತಲೇ ಇದೆ. ಈ ಭಿಕ್ಷುಕರಿಗೆ ಪುನವರ್ಸತಿ ಕಲ್ಪಿಸಲು ರಾಯಾಪುರದಲ್ಲಿರುವ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ಸೌಲಭ್ಯವಿಲ್ಲ!ಇತ್ತೀಚೆಗೆ ನಡೆದ ಸಮೀಕ್ಷೆಯೊಂದರ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ ಸುಮಾರು 650 ಮಂದಿ ಭಿಕ್ಷುಕರಿದ್ದಾರೆ. ಈ ಪೈಕಿ ಶೇಕಡಾ 90ಕ್ಕೂ ಹೆಚ್ಚು ಮಂದಿ ನಗರದ ಜನದಟ್ಟಣೆ ಪ್ರದೇಶಗಳಲ್ಲಿ ಭಿಕ್ಷಾಟನೆ ನಡೆಸುತ್ತಿದ್ದು, ರಾತ್ರಿಯಾಗುತ್ತಲೇ ಆಯಕಟ್ಟಿನ ಜಾಗಗಳಲ್ಲಿ `ಆಶ್ರಯ' ಪಡೆಯುತ್ತಾರೆ.ರಾಯಾಪುರದಲ್ಲಿರುವ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ 150 ಮಂದಿಗೆ ಮಾತ್ರ ಆಶ್ರಯ ನೀಡಲು ಸೌಲಭ್ಯವಿದೆ. ವಿಪರ್ಯಾಸವೆಂದರೆ ಈ `ಪುಟ್ಟ ಕೇಂದ್ರ' ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲಾ ವ್ಯಾಪ್ತಿಯನ್ನು ಹೊಂದಿದೆ!ರಾಯಾಪುರ ಕೇಂದ್ರದಲ್ಲಿ ಸದ್ಯ 27 ಮಂದಿ ಮಹಿಳೆಯರು ಮತ್ತು 100 ಮಂದಿ ಪುರುಷರು ಸೇರಿ ಒಟ್ಟು 127 ಮಂದಿ ಆಶ್ರಯ ಪಡೆದಿದ್ದಾರೆ. ಇನ್ನೂ 500ಕ್ಕೂ ಹೆಚ್ಚು ಭಿಕ್ಷುಕರು ಈ ಕೇಂದ್ರದಿಂದ ದೂರ ಉಳಿದಿದ್ದು, ಭಿಕ್ಷಾಟನೆಯಲ್ಲಿ ನಿರತರಾಗಿದ್ದಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.ಎಲ್ಲ ಭಿಕ್ಷುಕರಿಗೆ ವ್ಯವಸ್ಥೆ ಕಲ್ಪಿಸಲು ರಾಯಾಪುರ ಕೇಂದ್ರದಲ್ಲಿ ಸೌಲಭ್ಯ ಇಲ್ಲ ಎನ್ನುವ ಜೊತೆಗೇ ಭಿಕ್ಷುಕರನ್ನು ಈ ಕೇಂದ್ರಗಳಲ್ಲಿ ದಾಖಲಿಸಿಕೊಳ್ಳಲು ಜಿಲ್ಲಾಡಳಿತ ಕೈಗೊಳ್ಳುವ ಕಾರ್ಯಾಚರಣೆಯೂ ಯಶಸ್ವಿ ಆಗುತ್ತಿಲ್ಲ. ಭಿಕ್ಷುಕರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಗೊತ್ತಾಗುತ್ತಲೇ ಅನೇಕ ಭಿಕ್ಷುಕರು ಜಾಗ ಖಾಲಿ ಮಾಡುತ್ತಾರೆ.`ರಾಯಾಪುರದಲ್ಲಿರುವ ಭಿಕ್ಷುಕರ ಪುನರ್ವಸತಿ ಕೇಂದ್ರ ಸುಮಾರು 5 ಎಕರೆ ಪ್ರದೇಶದಲ್ಲಿದ್ದು, ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿದೆ. ಇಲ್ಲಿ ಆಶ್ರಯ ನೀಡಲು ಸೌಲಭ್ಯದ ಕೊರತೆ ಇದೆ. ಭಿಕ್ಷುಕರಿಗೆ ಆಶ್ರಯ ಒದಗಿಸುವ ಉದ್ದೇಶದಿಂದ ಅಲ್ಲೇ ಪಾಲಿಕೆ ವತಿಯಿಂದ ಇನ್ನೊಂದು ಕಟ್ಟಡ ನಿರ್ಮಿಸುವ ಪ್ರಸ್ತಾವಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕಿಲ್ಲ.ಭಿಕ್ಷುಕರನ್ನು ಪತ್ತೆ ಹಚ್ಚಿದರೂ ಪುನರ್ವಸತಿ ಕಲ್ಪಿಸುವುದು ಸಮಸ್ಯೆ ಆಗಿದೆ. ಭಿಕ್ಷುಕರ ಸಂಖ್ಯೆ ಹೆಚ್ಚಲು ಇದೂ ಕಾರಣವಾಗಿದೆ' ಎಂದು ಪಾಲಿಕೆಯ ವಿಶೇಷ ಅಧಿಕಾರಿ ಎಸ್.ಎಚ್. ನರೇಗಲ್ ತಿಳಿಸಿದರು.`ಪುನರ್ವಸತಿ ಕೇಂದ್ರದಲ್ಲಿ ಭಿಕ್ಷುಕರಿಗೆ ಆಶ್ರಯ ಒದಗಿಸುವ ಜೊತೆಗೆ ಅವರಿಗೆ ಸ್ವ ಉದ್ಯೋಗ ತರಬೇತಿ ನೀಡುವ ಯೋಜನೆಯೂ ಜಾರಿಯಲ್ಲಿದೆ. ಆದರೆ ಶೇಕಡಾ 60ರಷ್ಟು ಭಿಕ್ಷುಕರು ಮಾನಸಿಕ ಅಸ್ವಸ್ಥರಾಗಿರುವುದರಿಂದ ಅವರಿಗೆ ತರಬೇತಿ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವುದು ಸುಲಭದ ಕೆಲಸವಲ್ಲ' ಎಂದರು.`ಭಿಕ್ಷುಕರನ್ನು ಗುರುತಿಸುವ ಉ್ದ್ದದೇಶದಿಂದ ಕಳೆದ ವರ್ಷ ಮೇ ತಿಂಗಳಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಸಮೀಕ್ಷೆ ನಡೆಸಲಾಗಿತ್ತು. ಆ ವೇಳೆ ಕಲಘಟಗಿ, ಅಳ್ನಾವರ, ಕುಂದಗೋಳ, ನವಲಗುಂದ ಸಹಿತ ತಾಲ್ಲೂಕು ಕೇಂದ್ರಗಳಲ್ಲಿ ಮತ್ತು ಮಹಾನಗರದಲ್ಲಿ 500ಕ್ಕೂ ಹೆಚ್ಚು ಭಿಕ್ಷುಕರನ್ನು ಪತ್ತೆ ಮಾಡಲಾಗಿದೆ.ಆದರೆ ಎಲ್ಲರನ್ನೂ ಕರೆತಂದು ಪುನರ್ವಸತಿ ಒದಗಿಸಲು ಕೇಂದ್ರದಲ್ಲಿ ಸೌಲಭ್ಯ ಇಲ್ಲ' ಎಂದು ರಾಯಾಪುರದಲ್ಲಿರುವ ಭಿಕ್ಷುಕರ ಪುನರ್ವಸತಿ ಕೇಂದ್ರದ ಅಧೀಕ್ಷಕ ದಿವಾಕರ ಶಂಕಿನದಾಸರ ತಿಳಿಸಿದರು.`ಕೇಂದ್ರದಲ್ಲಿ ದಾಖಲಾದ ಭಿಕ್ಷುಕರ ಪೈಕಿ ಕೆಲವರು ನೀಡಿದ ವಿಳಾಸವನ್ನು ಸಂಪರ್ಕಿಸಿ ಕುಟುಂಬದ ಜೊತೆ ಕಳುಹಿಸಿಕೊಡಲಾಗಿದೆ. ಉಳಿದವರಲ್ಲಿ ಶೇಕಡಾ 40ರಷ್ಟು ಮಂದಿ ಮಾನಸಿಕ ಅಸ್ವಸ್ಥರು. ಅವರೆಲ್ಲರಿಗೂ ಮನೋರೋಗ ತಜ್ಞರಿಂದ ಚಿಕಿತ್ಸೆ ನೀಡಲಾಗುತ್ತಿದೆ.ಕೆಲವರು ವೃದ್ಧರು. ಕೇಂದ್ರದ ನಿರ್ವಹಣೆಗೆ ಅಗತ್ಯವಾದ ಖರ್ಚು ವೆಚ್ಚದ ಬಗ್ಗೆ ಕ್ರಿಯಾಯೋಜನೆ ಸಲ್ಲಿಸಿದ ಬಳಿಕ ಭಿಕ್ಷುಕರ ಕೇಂದ್ರ ಪರಿಹಾರ ನಿಧಿಯಿಂದ ವರ್ಷಕ್ಕೆ ಎರಡು ಕಂತುಗಳಲ್ಲಿ ಹಣ ಬಿಡುಗಡೆಯಾಗುತ್ತದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಯಾಪುರ ಕೇಂದ್ರದ ಭಿಕ್ಷುಕರ ಸ್ಥಿತಿ ಬಗ್ಗೆ ಚರ್ಚಿಸಲಾಗಿದೆ' ಎಂದರು.`ಭಿಕ್ಷುಕರ ಕಾಯ್ದೆ ಮತ್ತು ಭಿಕ್ಷಾಟನೆ ನಿರ್ಮೂಲನೆ ಬಗ್ಗೆ ತಿಳಿವಳಿಕೆ ಮೂಡಿಸುವ ಉ್ದ್ದದೇಶದಿಂದ ಆಗಸ್ಟ್ ತಿಂಗಳಿನಿಂದ ರಾಜ್ಯಮಟ್ಟದಲ್ಲಿ ವಿಚಾರಸಂಕಿರಣ, ಬೀದಿನಾಟಕ ಸಹಿತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ' ಎಂದರು.`ಪುನರ್ವಸತಿ ಕಲ್ಪಿಸುವುದು ಸಮಸ್ಯೆ'

`ಮಹಾನಗರದಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಿರುವುದು ವಾಸ್ತವ. ಈ ಪೈಕಿ ಅನೇಕರು ಮಾನಸಿಕ ಅಸ್ವಸ್ಥರು. ಆದರೆ ರಾಯಾಪುರದಲ್ಲಿರುವ ಪುನರ್ವಸತಿ ಕೇಂದ್ರದಲ್ಲಿರುವ ಸೌಲಭ್ಯ ಸೀಮಿತ.ಪಾಲಿಕೆಯಿಂದ ಭಿಕ್ಷುಕರ ಕರ ಆಗಿ ಪ್ರತಿ ತಿಂಗಳು ರೂ 21ಲಕ್ಷದಂತೆ ಭಿಕ್ಷುಕರ ಕೇಂದ್ರ ಪರಿಹಾರ ನಿಧಿಗೆ ಹಣ ಪಾವತಿಸಲಾಗುತ್ತಿದೆ. 2012 ಏಪ್ರಿಲ್ 1ರಿಂದ ಕಳೆದ ಮಾರ್ಚ್ 31ರ ಅವಧಿಯಲ್ಲಿ ರೂ 1.71 ಕೋಟಿ ಹಣ ನೀಡಲಾಗಿದೆ. ಆದರೆ ಮಹಾನಗರ ವ್ಯಾಪ್ತಿಯಲ್ಲಿರುವ ಭಿಕ್ಷುಕರನ್ನು ತೆರವುಗೊಳಿಸಿ, ಪುನರ್ವತಿ ಕಲ್ಪಿಸಲು ಸಾಧ್ಯವಾಗಿಲ್ಲ' ಎಂದು ಎಸ್.ಎಚ್. ನರೇಗಲ್ ತಿಳಿಸಿದರು.`ಸದ್ಯದಲ್ಲೇ ಮೇಲ್ದರ್ಜೆಗೆ ಏರಿಕೆ'

`ಧಾರವಾಡ, ಮೈಸೂರು ಮತ್ತು ಮಂಗಳೂರಿನಲ್ಲಿರುವ ಭಿಕ್ಷುಕರ ಪುನರ್ವಸತಿ ಕೇಂದ್ರಗಳನ್ನು ಮೇಲ್ದರ್ಜೆಗೆ (ಗ್ರೇಡ್- 1) ಏರಿಸುವ ಪ್ರಸ್ತಾವ ಸರ್ಕಾರದ ಮುಂದಿದೆ. ಈ ಬಗ್ಗೆ ಉನ್ನತಮಟ್ಟದಲ್ಲಿ ಈಗಾಗಲೇ ಚರ್ಚೆ ನಡೆದಿದೆ.ಇದೇ ತಿಂಗಳ ಅಂತ್ಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ. ಧಾರವಾಡ ಕೇಂದ್ರ ಮೇಲ್ದರ್ಜೆಗೆ ಏರಿದರೆ 500 ಮಂದಿ ಭಿಕ್ಷುಕರಿಗೆ ಪುನರ್ವಸತಿ ಒದಗಿಸಲು ಸಾಧ್ಯವಾಗಲಿದೆ' ಎಂದು ದಿವಾಕರ ಶಂಕಿನದಾಸರ `ಪ್ರಜಾವಾಣಿ'ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.