ಮಂಗಳವಾರ, ಮೇ 11, 2021
19 °C

ಭೂತನಾಳ ಉದ್ಯಾನಕ್ಕೆರೂ2 ಪ್ರವೇಶ ಶುಲ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಭೂತನಾಳ ಕೆರೆ ಪ್ರದೇಶದಲ್ಲಿ ಟ್ರೀ ಪಾರ್ಕ್ ನಿರ್ಮಿಸಲು ಹಾಗೂ ಅಲ್ಲಿ ಈಗಾಗಲೇ ಅಭಿವೃದ್ಧಿ ಪಡಿಸಿರುವ ಉದ್ಯಾನವನವನ್ನು ಸಾರ್ವಜನಿಕರಿಗೆ ಶೀಘ್ರವೇ ಮುಕ್ತಗೊಳಿಸಿ, ರೂ.2 ಪ್ರವೇಶ ಶುಲ್ಕ ವಿಧಿಸಲು ಜಿಲ್ಲಾ ಆಡಳಿತ ನಿರ್ಧರಿಸಿದೆ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

`ಭೂತನಾಳ ಕೆರೆ ಉದ್ಯಾನವನ್ನು ಸಾರ್ವಜನಿಕರ ವೀಕ್ಷಣೆಗೆ ತ್ವರಿತವಾಗಿ ಮುಕ್ತಗೊಳಿಸಬೇಕು.

ವಾಯು ವಿಹಾರ, ರಜೆ ದಿನಗಳಲ್ಲಿ ಸಾರ್ವಜನಿಕರು ಉದ್ಯಾನವನಕ್ಕೆ ಹೋಗಲು ನಗರ ಸಾರಿಗೆ ಬಸ್ ಸೌಕರ್ಯ ಕಲ್ಪಿಸಬೇಕು' ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಅರಣ್ಯ ಇಲಾಖೆಯಿಂದ ಭೂತನಾಳ ಕೆರೆ ಪ್ರದೇಶದಲ್ಲಿ 11.56 ಎಕರೆಯಲ್ಲಿ ಟ್ರೀ ಪಾರ್ಕ್ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಲಾಯಿತು.  ಅರಣ್ಯ ಇಲಾಖೆ ತಯಾರಿಸಿದ ರೂ 50ಲಕ್ಷಗಳ ಕ್ರಿಯಾ ಯೋಜನೆಗೆ ಸಮ್ಮತಿಸ ಲಾಯಿತು.ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿರುವ ಐತಿಹಾಸಿಕ ಬೇಗಂ ತಲಾಬ ಉದ್ಯಾನವನವನ್ನು ಆಗಸ್ಟ್ 15ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟಿಸಲು ನಿರ್ಧರಿಸಲಾಯಿತು.ಪ್ರಾಚ್ಯವಸ್ತು ಸರ್ವೇಕ್ಷಣ ಇಲಾಖೆಯ ಸಂರಕ್ಷಿತ 80 ಸ್ಮಾರಕಗಳು ವಿಜಾಪುರದಲ್ಲಿದ್ದು, ಎಲ್ಲ ಸ್ಮಾರಕಗಳ ರಕ್ಷಣೆಗೆ ಆವರಣ ಬೇಲಿಗಳ ನಿರ್ಮಾಣ, ಶೌಚಾಲಯ ವ್ಯವಸ್ಥೆ, ಸೌಂದರ್ಯೀಕರಣ, ಸ್ಮಾರಕಗಳಿಗೆ ಫಲಕಗಳ ಅಳವಡಿಕೆ, ಸಂಪರ್ಕ ರಸ್ತೆಗಳನ್ನು ನಿರ್ಮಿಸಲು ಸೂಚಿಸಲಾಯಿತು.ಹೊಸ ಕೋರ್ಸ್: ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಇಲ್ಲಿಯ ತಾಣಗಳ ಬಗ್ಗೆ ಮಾಹಿತಿ ಒದಗಿಸಲು ಗೈಡ್‌ಗಳನ್ನು ಗುರುತಿಸಿ, ಇಂಗ್ಲೀಷ್, ಫ್ರೆಂಚ್, ಹಿಂದಿ ಸೇರಿದಂತೆ ಬಹುಭಾಷೆಯಲ್ಲಿ ಪ್ರಾವಿಣ್ಯತೆಗಳಿಸಲು ತರಬೇತಿ ನೀಡುವುದು. ಪ್ರವಾಸಿ ಟ್ಯಾಕ್ಸಿ ಪಡೆದವರಿಗೆ ಪ್ರವಾಸಿಗರೊಂದಿಗೆ ಸೌಜನ್ಯದ ನಡತೆ ಕುರಿತಂತೆ ಕೌಶಲ್ಯ ತರಬೇತಿ ಆಯೋಜಿಸಲು ನಿರ್ಧರಿಸಲಾಯಿತು.ಟೂರಿಸಂ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸುವ ಕುರಿತಂತೆ ಮಹಿಳಾ ವಿಶ್ವ ವಿದ್ಯಾಲಯಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಯಿತು. ಇಲ್ಲಿಯ ಸ್ಮಾರಕಗಳ ಕುರಿತಂತೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಮಾಹಿತಿ ಪತ್ರವನ್ನು ಮುದ್ರಿಸು ವುದು. ಗೊಳಗುಮ್ಮಟ, ಇಬ್ರಾಹಿಂರೋಜಾ, ಬಾರಾಕಮಾನ, ಆವರಣದಲ್ಲಿ ಕರಕುಶಲ ಹಾಗೂ ಪಾರಂಪರಿಕ ವಸ್ತುಗಳ ಮಾರಾಟ ಮಳಿಗೆ ಸ್ಥಾಪನೆಗೆ  ಕ್ರಮ ವಹಿಸಲು ಸೂಚಿಸಲಾಯಿತು.ಪಾರಂಪರಿಕ ಪಟ್ಟಿ: ಗೋಲಗುಮ್ಮಟವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಕೈಗೊಳ್ಳ ಬೇಕಾದ ಕ್ರಮಗಳ ಕುರಿತಂತೆ ವಿವರವಾದ ಪ್ರಸ್ತಾವ ಸಲ್ಲಿಸಲು. ಗೋಲಗುಮ್ಮಟದ ಆವರಣದ ಅತಿಕ್ರಮಣ ತೆರವುಗೊಳಿಸುವುದು, ರೈಲ್ವೆ ನಿಲ್ದಾಣದ ರಾಜಮಾರ್ಗವನ್ನು ಅಭಿವೃದ್ಧಿ ಪಡಿಸಲು ಅಲ್ಲಿಯ ನಿವಾಸಿಗಳನ್ನು ಆಶ್ರಯ ಯೋಜನೆಯಡಿ ಸ್ಥಳಾಂತರಿಸಲು ನಿರ್ಧರಿಸಲಾಯಿತು.

ವಿವಿಧ ಪ್ರವಾಸಿ ತಾಣಗಳಲ್ಲಿ 15 ಯಾತ್ರಿ ನಿವಾಸಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಈಗಾಗಲೇ ಕಾಮಗಾರಿ ಆರಂಭಿಸ ಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಹೆಲ್ಪ್‌ಲೈನ್: ತಾಜ್‌ಬಾವಡಿಗೆ ಅನಧಿಕೃತ ಪ್ರವೇಶ ನಿರ್ಬಂಧಿಸಲು ನಿರ್ಧರಿಸಲಾಯಿತು. ಗೋಲಗುಮ್ಮಟ, ಬಾರಾಕಮಾನ, ಇಬ್ರಾಹಿಂರೋಜಾ ಸೇರಿದಂತೆ ಐತಿಹಾಸಿಕ ಸ್ಮಾರಕಗಳಿಗೆ ಪೊಲೀಸ್ ಭದ್ರತೆ, ಇ-ಬೀಟ್, ವಿದೇಶಿ ಪ್ರವಾಸಿಗರಿಗೆ ವಿಶೇಷ ರಕ್ಷಣೆ ಒದಗಿಸುವ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಯಿತು.

  ಸ್ಮಾರಕಗಳ ಮುಂದೆ ಪೊಲೀಸ್ ಹೆಲ್ಪ್‌ಲೈನ್ ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳ ದೂರವಾಣಿ ಸಂಖ್ಯೆ ಇರುವ ಫಲಕ ಹಾಕಲು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.ಜಿ.ಪಂ. ಸಿಇಒ ಗುತ್ತಿ ಜಂಬುನಾಥ್, ಡಿಸಿಎಫ್ ರುದ್ರಮುನಿಗೌಡ, ಕೆಬಿಜೆಎನ್‌ಎಲ್ ಅರಣ್ಯಾಧಿಕಾರಿ ಕುಮಾರಸ್ವಾಮಿ, ಪರಿಸರ ಅಧಿಕಾರಿ ರಾಜೇಶ್, ಪ್ರವಾಸೋದ್ಯಮ ಇಲಾಖೆ  ಅಧಿಕಾರಿ ಬಿ.ಎಂ. ಕೋನರೆಡ್ಡಿ, ಪ್ರೊ.ಗೀತಾ ಪಾಟೀಲ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸುಜೀತ್ ನಯನ ಹಾಜರಿದ್ದರು.

ಕೆರೆ ಶತಮಾನೋತ್ಸವ

ವಿಜಾಪುರ:
ಸರ್ ಎಂ.ವಿಶ್ವೇಶ್ವರಯ್ಯ ನಿರ್ಮಿಸಿರುವ ಭೂತನಾಳ ಕೆರೆಯ ಶತಮಾನೋತ್ಸವವನ್ನು ಎಂಜಿನಿಯರರ ದಿನಾಚರಣೆಯ ದಿನವಾದ ಸೆಪ್ಟೆಂಬರ್ 19ರಂದು ಆಚರಿಸಲು ಜಿಲ್ಲಾ ಪ್ರವಾಸೋದ್ಯಮ ಸಮಿತಿ ನಿರ್ಧರಿಸಿದೆ.ಭೂತನಾಳ ಕೆರೆ ಶತಮಾನೋತ್ಸವದ ಅಂಗವಾಗಿ  ನೀರಾವರಿ, ಪ್ರವಾಸೋದ್ಯಮ, ಪರಿಸರ ಇತರ ವಿಷಯ ಕುರಿತಂತೆ ಅಂತರರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿ ಆಯೋಜಿಸಲು ನಿರ್ಧರಿಸಲಾಯಿತು. ಈ ಕೆರೆಯ ಕುರಿತು ಪ್ರಜಾವಾಣಿ ಇತ್ತೀಚೆಗೆ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.ಆಲಮಟ್ಟಿ ಡ್ಯಾಂಸೈಟ್‌ನಲ್ಲಿ ಕ್ರಾಫ್ಟ್ ಮೇಳ ನಡೆಸಲು ಸರ್ಕಾರಕ್ಕೆರೂ 2 ಕೋಟಿ ಹಾಗೂ ಜಲಾಶಯದಲ್ಲಿ ಡೋಣಿ ವಿಹಾರಕ್ಕೆರೂ 1 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ಈ ಕುರಿತಂತೆ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.