ಮಂಗಳವಾರ, ಏಪ್ರಿಲ್ 20, 2021
27 °C

ಭೂಪತಿ-ಬೋಪಣ್ಣಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿನ್ಸಿನಾಟಿ, ಅಮೆರಿಕ (ಪಿಟಿಐ/ಐಎಎನ್‌ಎಸ್): ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಭಾನುವಾರ ಇಲ್ಲಿ ಕೊನೆಗೊಂಡ ಸಿನ್ಸಿನಾಟಿ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಡಬಲ್ಸ್ ಫೈನಲ್‌ನಲ್ಲಿ ಸೋಲು ಕಂಡರು. ಹಾಗಾಗಿ ರನ್ನರ್ ಅಪ್ ಪ್ರಶಸ್ತಿಗೆ ಸಮಾಧಾನಪಡಬೇಕಾಯಿತು.ಫೈನಲ್‌ನಲ್ಲಿ ಭೂಪತಿ ಹಾಗೂ ರೋಹನ್ 4-6, 4-6ರಲ್ಲಿ ಸ್ವೀಡನ್‌ನ  ರಾಬರ್ಟ್ ಲಿಂಡ್‌ಸ್ಟೆಡ್ ಹಾಗೂ ರುಮೇನಿಯಾದ ಹೊರಿಯಾ ಟೇಕು ಎದುರು ಪರಾಭವಗೊಂಡರು.67 ನಿಮಿಷಗಳ ಈ ಪೈಪೋಟಿಯಲ್ಲಿ ಲಿಂಡ್‌ಸ್ಟೆಡ್ ಹಾಗೂ ಟೇಕು ಆರಂಭದಿಂದಲೇ ಭಾರತದ ಜೋಡಿ ವಿರುದ್ಧ ಮೇಲುಗೈ ಸಾಧಿಸಿದರು. ತಮಗೆ ಲಭಿಸಿದ 9 ಬ್ರೇಕ್ ಪಾಯಿಂಟ್‌ಗಳಲ್ಲಿ ಮೂರನ್ನು ಸದುಪಯೋಗಪಡಿಸಿಕೊಂಡರು. ಈ ಮೂಲಕ ಅವರು ಎಟಿಪಿ ವರ್ಲ್ಡ್ ಟೂರ್ ಫೈನಲ್ಸ್‌ನಲ್ಲಿ ಆಡಲು ಅರ್ಹತೆ ಪಡೆದುಕೊಂಡರು. ಕಳೆದ ಬಾರಿ ಈ ಟೂರ್ನಿಯಲ್ಲಿ ಲಿಯಾಂಡರ್ ಪೇಸ್ ಜೊತೆಗೂಡಿ ಆಡಿದ್ದ ಮಹೇಶ್ ಚಾಂಪಿಯನ್ ಆಗಿದ್ದರು. ಆದರೆ ಈ ಬಾರಿ ರೋಹನ್ ಜೊತೆಗೂಡಿ ಆಡಿದ ಅವರಿಗೆ ಆ ಸಾಧನೆಯನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ.ಫೆಡರರ್‌ಗೆ ಪ್ರಶಸ್ತಿ: ಇದೇ ಟೂರ್ನಿಯ ಸಿಂಗಲ್ಸ್‌ನಲ್ಲಿ ಸ್ವಿಟ್ಜರ್ಲೆಂಡನ್ ರೋಜರ್ ಫೆಡರರ್ ಚಾಂಪಿಯನ್ ಆದರು. ಅವರು ಫೈನಲ್‌ನಲ್ಲಿ 6-0, 7-6ರಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿದರು.

ಅಗ್ರ ರ‌್ಯಾಂಕ್‌ನ ಆಟಗಾರ ರೋಜರ್ ಮೊದಲ ಸೆಟ್‌ನಲ್ಲಿ ಎದುರಾಳಿಗೆ ಒಂದೇಒಂದು ಗೇಮ್ ಬಿಟ್ಟುಕೊಡಲಿಲ್ಲ.

 

ಅದು ಕೇವಲ 20 ನಿಮಿಷಗಳಲ್ಲಿ ಕೊನೆಗೊಂಡಿತು. ನಂತರದ ಸೆಟ್‌ನಲ್ಲಿ ಸಾಕಷ್ಟು ಪೈಪೋಟಿ ಎದುರಾಯಿತು. ಈ ಸೆಟ್ ಟೈಬ್ರೇಕರ್ ಹಂತ ತಲುಪಿತ್ತು. ಇದರಲ್ಲಿಯೂ ಸ್ವಿಸ್ ಆಟಗಾರ ಯಶಸ್ಸು ಪಡೆದರು.

ಇದು ಫೆಡರರ್‌ಗೆ ಲಭಿಸಿದ 21ನೇ ಮಾಸ್ಟರ್ಸ್ ಪ್ರಶಸ್ತಿಯಾಗಿದೆ. ಈ ಮೂಲಕ ಅವರು ಸ್ಪೇನ್‌ನ ರಫೆಲ್ ನಡಾಲ್ ದಾಖಲೆ ಸರಿಗಟ್ಟಿದರು.ಲಿ ನಾ ಚಾಂಪಿಯನ್: ಮಹಿಳೆಯರ ಸಿಂಗಲ್ಸ್‌ನಲ್ಲಿ ಚೀನಾದ ಲಿ ನಾ ಚಾಂಪಿಯನ್ ಆದರು. ಅವರು ಫೈನಲ್‌ನಲ್ಲಿ 1-6, 6-3, 6-1ರಲ್ಲಿ ಜರ್ಮನಿಯ ಆ್ಯಂಜೆಲಿಕ್ ಕರ್ಬರ್ ಅವರನ್ನು ಸೋಲಿಸಿದರು. ಈ ವರ್ಷ ಸತತ ಮೂರು ಫೈನಲ್‌ನಲ್ಲಿ ಸೋಲು ಕಂಡಿದ್ದ ಲಿ ನಾಗೆ ಈ ಗೆಲುವು ಸಮಾಧಾನ ತಂದಿದೆ. ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ ಅಮೆರಿಕ ಓಪನ್ ಟೆನಿಸ್ ಚಾಂಪಿಯನ್‌ಷಿಪ್ ಹಿನ್ನೆಲೆಯಲ್ಲಿ ಈ ಟೂರ್ನಿ ಮಹತ್ವ ಪಡೆದುಕೊಂಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.