ಶುಕ್ರವಾರ, ಫೆಬ್ರವರಿ 26, 2021
30 °C

ಭೂ ಕಬಳಿಕೆಗೆ ವಿಶೇಷ ಜಿಲ್ಲಾಧಿಕಾರಿ ಬೆಂಬಲ!

ಪ್ರಜಾವಾಣಿ ವಾರ್ತೆ / ವಿ.ಎಸ್.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಭೂ ಕಬಳಿಕೆಗೆ ವಿಶೇಷ ಜಿಲ್ಲಾಧಿಕಾರಿ ಬೆಂಬಲ!

ಬೆಂಗಳೂರು: ಕಂದಾಯ ಇಲಾಖೆಯ ಅಧಿಕೃತ ಸಭೆಯಲ್ಲೇ ಭೂ ಕಬಳಿಕೆಯನ್ನು ಬೆಂಬಲಿಸಿ ಮಾತನಾಡುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎಸ್.ನಾಯಕ್ ಅವರನ್ನು ತಕ್ಷಣ ವರ್ಗಾವಣೆ ಮಾಡುವಂತೆ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಸರ್ಕಾರಿ ಭೂಮಿ ಒತ್ತುವರಿ ಮತ್ತು ಮಂಜೂರಾತಿ ವಿಷಯದಲ್ಲಿ ಹೈಕೋರ್ಟ್, ಸುಪ್ರೀಂಕೋರ್ಟ್, ಕಾನೂನು, ಸರ್ಕಾರ ಎಲ್ಲಕ್ಕಿಂತಲೂ ತಾವೇ ದೊಡ್ಡವರು ಎಂದು ಉನ್ನತಮಟ್ಟದ ಸಭೆಯಲ್ಲಿ ಪ್ರತಿಪಾದಿಸಿರುವ ಈ ಅಧಿಕಾರಿ, ಸರ್ಕಾರಕ್ಕೇ ಸೆಡ್ಡು ಹೊಡೆದಿದ್ದಾರೆ. ಇದರೊಂದಿಗೆ ಬೆಂಗಳೂರು ನಗರ ಜಿಲ್ಲೆಯ ಮತ್ತೊಬ್ಬ ವಿಶೇಷ ಜಿಲ್ಲಾಧಿಕಾರಿ ಈಗ ವಿವಾದಕ್ಕೆ ಸಿಲುಕಿದ್ದಾರೆ.

ವಿವಾದಕ್ಕೆ ಕಾರಣವಾದ ಪ್ರಕರಣ: ಜಾಯ್ ಐಸ್‌ಕ್ರೀಂ ಕಂಪೆನಿ ಬೆಂಗಳೂರು ಪೂರ್ವ ತಾಲ್ಲೂಕಿನ ಪಟ್ಟಂದೂರು ಅಗ್ರಹಾರದ ಸರ್ವೇ ನಂಬರ್ 42ರಲ್ಲಿರುವ 3.23 ಎಕರೆ ಸರ್ಕಾರಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ತನಗೆ ನೀಡುವಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಅರ್ಜಿ ಸಲ್ಲಿಸಿತ್ತು. ಕೆಐಎಡಿಬಿ ಈ ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟಿತ್ತು. 2006ರ ಮಾರ್ಚ್ 31ರಂದು ಕಂಪೆನಿಗೆ ಅಂದಿನ ಮಾರುಕಟ್ಟೆ ದರದ ಅರ್ಧ ಬೆಲೆಯಲ್ಲಿ ಸರ್ಕಾರದ 3.23 ಎಕರೆ ಭೂಮಿಯನ್ನು ನೀಡಲಾಗಿತ್ತು.

ಈ ಭೂಮಿಗೆ ಜಾಯ್ ಐಸ್‌ಕ್ರೀಂ ಕಂಪೆನಿ 4.34 ಕೋಟಿ ರೂಪಾಯಿ ಪಾವತಿಸಿತ್ತು. ಕಂಪೆನಿಯು ಕೈಗಾರಿಕಾ ಉದ್ದೇಶಕ್ಕೆ ಮಾತ್ರ ಸದರಿ ಭೂಮಿಯನ್ನು ಬಳಸಬೇಕು. ಬಳಕೆಯ ಉದ್ದೇಶದಲ್ಲಿ ಬದಲಾವಣೆ ಆದ ಸಂದರ್ಭದಲ್ಲಿ ಭೂಮಿಯನ್ನು ಸರ್ಕಾರ ಹಿಂದಕ್ಕೆ ಪಡೆಯುತ್ತದೆ ಎಂಬ ಷರತ್ತನ್ನೂ ಆಗ ವಿಧಿಸಲಾಗಿತ್ತು. ನಂತರ ಸರ್ಕಾರದ `ಏಕಗವಾಕ್ಷಿ~ ಏಜೆನ್ಸಿಗೆ ಅರ್ಜಿ ಸಲ್ಲಿಸಿದ್ದ ಕಂಪೆನಿ ಸರ್ಕಾರ ನೀಡಿದ 3.23 ಎಕರೆಯೂ ಸೇರಿದಂತೆ 8.07 ಎಕರೆ ವಿಸ್ತೀರ್ಣದಲ್ಲಿ ಸಾಫ್ಟ್‌ವೇರ್ ತಂತ್ರಜ್ಞಾನ ಪಾರ್ಕ್ ಸ್ಥಾಪನೆಗೆ ಅನುಮತಿ ಪಡೆದಿತ್ತು.

ಆದರೆ ನಂತರದ ದಿನಗಳಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಮಿ ಬಳಸುವ ಯೋಚನೆಯನ್ನೇ ಜಾಯ್ ಐಸ್‌ಕ್ರೀಂ ಕಂಪೆನಿ ಕೈಬಿಟ್ಟಿತು. `ವೈಲ್ಡ್ ಫ್ಲವರ್ ಎಸ್ಟೇಟ್ಸ್ ಅಂಡ್ ರೆಸಾರ್ಟ್ಸ್~ ಎಂಬ ಕಂಪೆನಿ ಜೊತೆಗೂಡಿ ಸರ್ಕಾರ ನೀಡಿದ್ದ 3.23 ಎಕರೆ ಭೂಮಿಯನ್ನು 2006ರ ಆಗಸ್ಟ್ 30ರಂದು 6.87 ಕೋಟಿ ರೂಪಾಯಿ ಮೊತ್ತಕ್ಕೆ `ಪ್ರೆಸ್ಟೀಜ್ ಎಸ್ಟೇಟ್ ಪ್ರಾಜೆಕ್ಟ್ಸ್~ ಕಂಪೆನಿಗೆ ಮಾರಾಟ ಮಾಡಲಾಯಿತು.

ಐದು ವರ್ಷಗಳ ಕಾಲ ಈ ಪ್ರಕರಣ ಬಯಲಿಗೆ ಬಂದಿರಲಿಲ್ಲ. 2010ರ ಡಿಸೆಂಬರ್ 31ರಂದು `ಪ್ರಜಾವಾಣಿ~ ಈ ಬಗ್ಗೆ ವಿಶೇಷ ವರದಿ ಪ್ರಕಟಿಸುವುದರೊಂದಿಗೆ ಅಕ್ರಮವನ್ನು ಬಯಲಿಗೆಳೆದಿತ್ತು. 2011ರಲ್ಲಿ ಈ ಬಗ್ಗೆ ಲೋಕಾಯುಕ್ತ ತನಿಖೆ ಆರಂಭವಾಗಿತ್ತು. ಪ್ರಕರಣದ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ವರದಿ ನೀಡುವಂತೆ ತನಿಖಾ ತಂಡ ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ಕೋರಿತ್ತು.

ಈ ಹಂತದಲ್ಲಿ ಇಕ್ಕಟ್ಟಿಗೆ ಸಿಲುಕಿದ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಪ್ರಕರಣದಲ್ಲಿ ಕಾನೂನು ರೀತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಭಿಪ್ರಾಯ ನೀಡುವಂತೆ ಕೋರಿ ಅಡ್ವೊಕೇಟ್ ಜನರಲ್ ಅಶೋಕ್ ಹಾರ‌್ನಹಳ್ಳಿ ಅವರಿಗೆ 2011,ಫೆ. 22ರಂದು ಪತ್ರ ಬರೆದಿದ್ದರು. ಮಾರ್ಚ್ 7ರಂದು ಅಭಿಪ್ರಾಯ ನೀಡಿದ ಅಡ್ವೊಕೇಟ್ ಜನರಲ್  (ಎ.ಜಿ) , `ವಿಶೇಷ ಜಿಲ್ಲಾಧಿಕಾರಿಯು ಪ್ರಕರಣಕ್ಕೆ ಸಂಬಂಧಿಸಿದಂತೆ `ಜಾಯ್ ಐಸ್‌ಕ್ರೀಂ ಕಂಪೆನಿ~ ಮತ್ತು `ವೈಲ್ಡ್‌ಫ್ಲವರ್ ಎಸ್ಟೇಟ್ ಅಂಡ್ ರೆಸಾರ್ಟ್ಸ್~ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ಬಳಿಕ ಭೂಮಿಯ ಮಂಜೂರಾತಿಯನ್ನು ರದ್ದು ಮಾಡುವ ಪ್ರಕ್ರಿಯೆ ಆರಂಭಿಸಬೇಕು~ ಎಂದು ತಿಳಿಸಿದ್ದರು.

ಕಾನೂನಿಗಿಂತ ತಾವೇ ದೊಡ್ಡವರು!: ಎಜಿ ಅಭಿಪ್ರಾಯ ನೀಡಿದ ಬಳಿಕವೂ ವಿಶೇಷ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ನಡುವೆ ಮಾರ್ಚ್ 4ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಶೋಕ್ ಸಿ.ಮನೋಳಿ ಅವರು ಸರ್ಕಾರಿ ಭೂಮಿ ಒತ್ತುವರಿ ಕುರಿತು ಸಭೆಯೊಂದನ್ನು ನಡೆಸಿದರು. ಈ ಸಭೆಯಲ್ಲಿ ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ ಜಿ.ಎಸ್.ನಾಯಕ್ ಕೂಡ ಇದ್ದರು.

ಪಟ್ಟಂದೂರು ಅಗ್ರಹಾರ ಸರ್ವೇ ನಂಬರ್ 42ರ ಭೂಮಿಗೆ ಸಂಬಂಧಿಸಿದಂತೆ ಎ.ಜಿ ಅಭಿಪ್ರಾಯ ನೀಡಿದ್ದರೂ ವಿಶೇಷ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ವಿಷಯವನ್ನು ಸಭೆಯಲ್ಲಿದ್ದ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ವಿ.ಬಾಲಸುಬ್ರಮಣಿಯನ್ ಅವರು ಮನೋಳಿ ಗಮನಕ್ಕೆ ತಂದಿದ್ದಾರೆ.

ಆಗ ಪ್ರತಿಕ್ರಿಯಿಸಿದ ನಾಯಕ್, `ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಚೇಷ್ಟೆಯಿಂದ ಕೂಡಿದ್ದು~ ಎಂದು ಅಪಹಾಸ್ಯ ಮಾಡಿದ್ದಾರೆ. `ವಿಶೇಷ ಜಿಲ್ಲಾಧಿಕಾರಿಗೆ ಕಂದಾಯ ಕಾನೂನು ಚೆನ್ನಾಗಿ ಗೊತ್ತಿರುತ್ತದೆ. ಅವರು ಯಾರಿಂದಲೂ ಕಾನೂನು ಅಭಿಪ್ರಾಯ ಪಡೆಯಬೇಕಿಲ್ಲ~ ಎಂಬ ಉದ್ಧಟತನವನ್ನೂ ಪ್ರದರ್ಶಿಸಿದ್ದಾರೆ.

`ಸಂವಿಧಾನ ಭೂ ಒತ್ತುವರಿಯನ್ನು ಮಾನ್ಯ ಮಾಡುತ್ತದೆ. ಭೂ ಒತ್ತುವರಿಯನ್ನು ಸಂವಿಧಾನದಲ್ಲಿ ನಿಷೇಧಿಸಿಲ್ಲ. ಸುಪ್ರೀಂಕೋರ್ಟ್, ಹೈಕೋರ್ಟ್ ಏನೇ ಹೇಳಿದರೂ, ಕೆರೆ ಅಂಗಳ ಮತ್ತು `ಬಿ~ ಖರಾಬ್ ಭೂಮಿಯನ್ನು ವಿಶೇಷ ಜಿಲ್ಲಾಧಿಕಾರಿ ಮಂಜೂರು ಮಾಡಬಹುದು. ಸರ್ಕಾರದ ಸುತ್ತೋಲೆಗಳು ಅವರನ್ನು ನಿರ್ಬಂಧಿಸುವುದಿಲ್ಲ~ ಎಂದು ಮನಸೋ ಇಚ್ಛೆ ಮಾತನಾಡಿದ್ದಾರೆ.

ಇಷ್ಟಕ್ಕೂ ಅವರ ವಾಗ್ಝರಿ ನಿಂತಿಲ್ಲ, `ಸರ್ಕಾರಿ ಭೂಮಿ ಒತ್ತುವರಿ ಆಗುತ್ತಿರುವ ಯಾವುದೇ ಪ್ರಕರಣವನ್ನು ಕಾರ್ಯಪಡೆಯು ವಿಶೇಷ ಜಿಲ್ಲಾಧಿಕಾರಿಯ ಗಮನಕ್ಕೆ ತಂದರೆ, ಈ ಬಗ್ಗೆ ಕಾರ್ಯಪಡೆಯೇ ಎಲ್ಲ ಮಾಹಿತಿಯನ್ನೂ ಒದಗಿಸಬೇಕು. ಕಂದಾಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಜವಾಬ್ದಾರಿ ತಮ್ಮದಲ್ಲ~ ಎಂದೂ ವಾದಿಸಿದ್ದಾರೆ.

ಬೆಂಗಳೂರು ವಿಭಾಗೀಯ ಆಯುಕ್ತರು, ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ 50 ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದ ಸಭೆಯಲ್ಲೇ ಈ ಘಟನೆ ನಡೆದಿದೆ. ಪ್ರಧಾನ ಕಾರ್ಯದರ್ಶಿಯವರ ಸೂಚನೆಯಂತೆ ಇಲಾಖೆಯ ಉಪಕಾರ್ಯದರ್ಶಿ ನಾಯಕ್ ಅವರ ಎಲ್ಲ ಹೇಳಿಕೆಗಳನ್ನೂ ಸಭೆಯ ಕಡತದಲ್ಲಿ ದಾಖಲಿಸಿದ್ದಾರೆ.

ವರ್ಗಾವಣೆಗೆ ಪತ್ರ: ಮೇ 9ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ಪತ್ರ ಬರೆದಿರುವ ಬಾಲಸುಬ್ರಮಣಿಯನ್, `ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಕಂದಾಯ ಆಡಳಿತ ವ್ಯವಸ್ಥೆ ಕುಸಿದುಬೀಳಲು ನಾಯಕ್  ಕಾರಣರಾಗಿದ್ದಾರೆ. ಇಂತಹ ಅಧಿಕಾರಿಯಿಂದಾಗಿ ನಗರದಲ್ಲಿ ಭೂ ಹಗರಣಗಳ ಸಂಖ್ಯೆ ಹೆಚ್ಚುವ ಅಪಾಯ ಸೃಷ್ಟಿಯಾಗಿದೆ. ಅವರನ್ನು ತಕ್ಷಣವೇ ವರ್ಗಾವಣೆ ಮಾಡಿ~ ಎಂದು ಕೋರಿದ್ದಾರೆ.

ಹಿಂದಿನ ವಿಶೇಷ ಜಿಲ್ಲಾಧಿಕಾರಿ ಎಚ್.ರಾಮಾಂಜನೇಯ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತು ಹೊಂದಿದ್ದರು. ತೆರವಾದ ಸ್ಥಾನಕ್ಕೆ ನಾಯಕ್ ಅವರನ್ನು ನೇಮಿಸಲಾಗಿತ್ತು. 2010ರ ಡಿಸೆಂಬರ್ ಅಂತ್ಯದಿಂದ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.