ಸೋಮವಾರ, ಜೂನ್ 21, 2021
28 °C

ಮಂಗಳೂರು: ವಿರೋಧಿ ಅಲೆಯ ನಡುವೆಯೂ ಗೆದ್ದ ಕಾಂಗ್ರೆಸ್‌

ಪ್ರವೀಣ್‌ಕುಮಾರ್‌ ಪಿ.ವಿ./ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕರಾವಳಿಯಲ್ಲಿ ಕಾಂಗ್ರೆಸ್ ಪಾಲಿಗೆ 1967ರ ಚುನಾವಣೆ ತುಂಬಾ ಸವಾಲಿನಿಂದ ಕೂಡಿದ್ದಾಗಿತ್ತು.  ಶ್ರೀನಿವಾಸ ಮಲ್ಯ ಅವರಂಥ ಧೀಮಂತ ನಾಯಕರು ಕಟ್ಟಿ ಬೆಳೆಸಿದ್ದ ಕಾಂಗ್ರೆಸ್‌ನ ಅಭ್ಯರ್ಥಿ ಮುಗ್ಗರಿಸಿದ್ದು ಈ ಚುನಾವಣೆಯ ವಿಶೇಷ.1967ರ ಫೆ.15ರಂದು ನಡೆದ ಮಹಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದು ಬಂದರು. ಆದರೆ, ಅವಿಭಜಿತ ದ.ಕ. ಜಿಲ್ಲೆಯ ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸೋಲಾಯಿತು. ‘ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಸೋಲಿಲ್ಲ’ ಎಂಬ ನಂಬಿಕೆಯನ್ನು ಈ ಚುನಾವಣೆ ಹುಸಿಮಾಡಿತು. ಈ ಚುನಾವಣೆಯಲ್ಲಿ ಮಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ಕೊಡಗಿನ ಸಿ.ಎಂ.ಪೂಣಚ್ಚ ಅವರು ಕಣಕ್ಕಿಳಿದಿದ್ದರು. ಮೊದಲ ಮಹಾಚುನಾವಣೆಯಲ್ಲಿ ಕೆಎಂಪಿಪಿಯಿಂದ ಸ್ಪರ್ಧಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಕೆ.ಆರ್‌.ಕಾರಂತ ಅವರು ಈ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕರಾವಳಿಯಲ್ಲಿ ಬಲವಾದ ನೆಲೆ ಹೊಂದಿದ್ದ ಸಿಪಿಎಂನಿಂದ ಕೊಡಗಿನ ಬಿ.ಎನ್‌.ಕುಟ್ಟಪ್ಪ ಅವರು ನಾಮಪತ್ರ ಸಲ್ಲಿಸಿದ್ದರು. ಅಲ್ಲದೇ ಟಿ.ಟಿ. ಮಲ್ಲಿ ಹಾಗೂ ವಕೀಲ ಯು.ಎಲ್‌.ಕಿಣಿ ಅವರೂ ಕಣದಲ್ಲಿದ್ದರು. ‘ಕೊಡಗು ೧೯೫೬ರವರೆಗೆ ಸ್ವತಂತ್ರ ರಾಜ್ಯವಾಗಿದ್ದಾಗ ಸಿ.ಎಂ.ಪೂಣಚ್ಚ ಅವರು ಅಲ್ಲಿನ ಮುಖ್ಯಮಂತ್ರಿಯಾಗಿದ್ದವರು. ಹಾಗಾಗಿ ಅವರ ಹೆಸರು ಕರಾವಳಿಯವರಿಗೆ ತೀರಾ ಅಪರಿಚಿತವೇನೂ ಆಗಿರಲಿಲ್ಲ. ಅವರ ಎದುರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಆರ್‌.ಕಾರಂತರು ವಕೀಲರಾಗಿ ಹೆಸರು ಗಳಿಸಿದವರು. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯೂ ಅವರಿಗಿತ್ತು. ಸಿಪಿಎಂನಿಂದ ಕಣಕ್ಕಿಳಿದಿದ್ದ ಕುಟ್ಟಪ್ಪ ಅವರು ಕಾರ್ಮಿಕ ಮುಖಂಡರಾಗಿ ಹೆಸರು ಮಾಡಿದವರು. ನೆಹರೂ ಕಾಲವಾದ ನಂತರ ಕಾಂಗ್ರೆಸ್‌ನಲ್ಲಿ ಹಿಂದಿನ ಒಗ್ಗಟ್ಟು ಇರಲಿಲ್ಲವಾದ್ದರಿಂದ  ಈ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಸಿಪಿಎಂನ ಹಿರಿಯ ಮುಖಂಡ ಕೆ.ಆರ್‌.ಶ್ರಿಯಾನ್.ಮಲ್ಯ ಮರೆಯಾದ ಬಳಿಕ:

ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸದರಲ್ಲಿ ಜವಹರಲಾಲ್‌ ನೆಹರು ಅವರ ನಾಯಕತ್ವದಲ್ಲಿ ದೇಶದ ಮೊದಲ ಮೂರು ಮಹಾಚುನಾವಣೆಗಳಲ್ಲಿ ದೇಶದಾದ್ಯಂತ ಕಾಂಗ್ರೆಸ್‌ ಜಯಭೇರಿ ಬಾರಿಸಿತ್ತು. 1964ರಲ್ಲಿ ಜವಹರಲಾಲ್‌ ನೆಹರೂ ಅವರ ನಿಧನ ನಂತರ ಕಾಂಗ್ರೆಸ್‌ನಲ್ಲೂ ಬಣ ರಾಜಕೀಯ ಗರಿಗೆದರಿತ್ತು. ಅದರ ಪರಿಣಾಮ ಕರಾವಳಿ ಕಾಂಗ್ರೆಸ್‌ ಮೇಲೂ ಉಂಟಾಗಿತ್ತು.ಇನ್ನೊಂದೆಡೆ ಕರಾವಳಿಯಲ್ಲಿ ಪ್ರಶ್ನಾತೀತ ನಾಯಕರೆನಿಸಿದ್ದ ಉಳ್ಳಾಲ ಶ್ರೀನಿವಾಸ ಮಲ್ಯ ಅವರು ಇದೇ ಅವಧಿಯಲ್ಲಿ (1965 ಜ.19) ನಿಧನರಾದದ್ದು ಕಾಂಗ್ರೆಸ್‌ಗೆ ಇನ್ನಿಲ್ಲದ ಹೊಡೆತ ನೀಡಿತು. ಮಲ್ಯ ಅವರಿಗೆ 1945ರಿಂದಲೇ ಸಂಸತ್ತಿನ ನಂಟು ಇತ್ತು. ಸ್ವಾತಂತ್ರ್ಯ ಬಂದ ಬಳಿಕ ಸತತ ಮೂರು ಬಾರಿ ಸಂಸದರಾಗಿದ್ದ ಮಲ್ಯ ಅವರೇ ಕರಾವಳಿ ಭಾಗದ ಚುನಾವಣೆಯ ಕಾರ್ಯತಂತ್ರಗಳನ್ನೆಲ್ಲ ನೊಡಿಕೊಳ್ಳುತ್ತಿದ್ದುದು. ಮಲ್ಯ ಅವರಿಲ್ಲದ ಕರಾವಳಿಯ ಕಾಂಗ್ರೆಸ್‌ ನಾವಿಕನಿಲ್ಲದ ನಾವೆಯಂತಾಗಿತ್ತು’  ಎಂದು ಮೆಲುಕು ಹಾಕುತ್ತಾರೆ ಬಸ್ತಿ ವಾಮನ ಶೆಣೈ.‘ಮಲ್ಯ ಅವರಿಗೆ ನಿಕಟವರ್ತಿಯಾಗಿದ್ದ ಟಿ.ಎ.ಪೈ ಅವರಿಗೆ ಉಡುಪಿ ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡಬೇಕೆಂಬುದು ಕಾರ್ಯಕರ್ತರ ಒತ್ತಾಸೆಯಾಗಿತ್ತು. ಆದರೆ, ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಕೆ.ನಾಗಪ್ಪ ಆಳ್ವ ಅವರು ಟಿ.ಎ.ಪೈ ಬದಲಿಗೆ ಎಸ್‌.ಎಸ್‌.ಕೊಳ್ಕೆಬೈಲ್‌ ಅವರಿಗೆ ಟಿಕೆಟ್‌ ನೀಡಿದರು. ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಉಲ್ಬಣಗೊಂಡಿದ್ದರಿಂದ ಕರಾವಳಿಯಲ್ಲಿ ಚುನಾವಣಾ ಕಣ  ಕುತೂಹಲ ಮೂಡಿಸಿತ್ತು. ಇನ್ನೊಂದೆಡೆ ಸ್ವತಂತ್ರ ಪಾರ್ಟಿ ಕರಾವಳಿಯಲ್ಲೂ ನೆಲೆ ಕಂಡುಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಆ ವರ್ಷ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಒಟ್ಟೊಟ್ಟಿಗೆ ನಡೆದವು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋತಿತು. ಉಡುಪಿ ಲೋಕಸಭಾ ಕ್ಷೇತ್ರವನ್ನೂ ಕಳೆದುಕೊಂಡಿತು’ ಎಂದು ಸ್ಮರಿಸುತ್ತಾರೆ ಶೆಣೈ.ಮಂಗಳೂರಿನಲ್ಲಿ ಕಾಂಗ್ರೆಸ್‌ಗೆ  ಗೆಲುವು:

ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌.ಕೊಳ್ಕೆಬೈಲ್‌ ಅವರ ವಿರುದ್ಧ ಸ್ವತಂತ್ರ ಪಾರ್ಟಿಯ ಜೆ.ಎಂ.ಎಲ್‌. ಪ್ರಭು 31,310 ಮತಗಳಿಂದ ಗೆದ್ದರು. ಆದರೆ, ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿನ ಅಭಿಯಾನ ಮುಂದುವರಿಯಿತು. ಸಿ.ಎಂ. ಪೂಣಚ್ಚ ಅವರು ಸಮೀಪದ ಪ್ರತಿಸ್ಪರ್ಧಿ ಕೆ.ಆರ್‌.ಕಾರಂತ ಅವರ ವಿರುದ್ಧ 38,522 ಮತಗಳ ಅಂತರದಿಂದ ಗೆದ್ದುಬಂದರು.ಕಮ್ಯುನಿಸ್ಟ್‌ ಅವನತಿ:

ಕಮ್ಯುನಿಸ್ಟ್‌ ಪಕ್ಷ 1964ರಲ್ಲಿ ವಿಭಜನೆ ಆಗಿ ಸಿಪಿಐ ಹಾಗೂ ಸಿಪಿಎಂ ರಚನೆಯಾಗಿದ್ದರಿಂದ ಈ ಚುನಾವಣೆಯಲ್ಲಿ ಆ ಪಕ್ಷದ ಕಾರ್ಯಕರ್ತರ ಉತ್ಸಾಹ ಕುಗ್ಗಿತ್ತು. ಕರಾವಳಿಯಲ್ಲಿ ಸಿಪಿಐಗಿಂತ ಸಿಪಿಎಂ ಪ್ರಾಬಲ್ಯ ಹೆಚ್ಚಿತ್ತು. ಭಟ್ಕಳದಿಂದ ಮಂಗಳೂರಿನವರೆಗೆ ಹರಡಿದ್ದ 40ಕ್ಕೂ ಅಧಿಕ ಹೆಂಚಿನ ಕಾರ್ಖಾನೆಗಳ ಕಾರ್ಮಿಕರು ಸಿಪಿಎಂನತ್ತ ಮುಖ ಮಾಡಿದ್ದರು. ಬಿ. ನಾರಾಯಣ, ರಾಮಚಂದ್ರ ರಾವ್‌, ಎಂ.ಎಚ್‌.ಕೃಷ್ಣಪ್ಪ, ಕೆ.ಆರ್‌.ಶ್ರಿಯಾನ್‌ ಅವರಂತಹ ನಾಯಕರು ಸಿಪಿಎಂ ಸೇರಿದ್ದರು. 1962ರ ಮಹಾಚುನಾವಣೆಯಲ್ಲಿ ಕಮ್ಯುನಿಸ್ಟ್‌ ಪಕ್ಷದ ಅಭ್ಯರ್ಥಿಯಾಗಿದ್ದ ಬಿ.ವಿ.ಕಕ್ಕಿಲ್ಲಾಯ, ಮೋನಪ್ಪ ಶೆಟ್ಟಿ ಹಾಗೂ ಲಿಂಗಪ್ಪ ಸುವರ್ಣ ಅವರಂತಹ ನಾಯಕರು ಸಿಪಿಐ ಸೇರಿದ್ದರು. ಈ ಬಾರಿ ಸಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.‘ಕರಾವಳಿಯ ಹೆಂಚಿನ ಕಾರ್ಖಾನೆಗಳು ಹಾಗೂ ಮಡಿಕೇರಿ ಪ್ರದೇಶದ ಕಾಫಿ ಎಸ್ಟೇಟ್‌ಗಳಲ್ಲೂ ಕಮ್ಯುನಿಸ್ಟರಿಗೆ ಮತ ಬ್ಯಾಂಕ್‌ ಇತ್ತು. ಕಾಂಗ್ರೆಸ್‌ ವಿರೋಧಿ ಅಲೆ ಈ ಬಾರಿ ಕರಾವಳಿಯಲ್ಲಿ ಬಲವಾಗಿಯೇ ಇತ್ತು. ಆದರೂ ಸಿಪಿಎಂ ಅದನ್ನು ಮತವಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ಈ ಚುನಾವಣೆಯಲ್ಲಿ ಸಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೂ ಸಿಪಿಎಂಗೆ ಹೆಚ್ಚೇನೂ ಲಾಭವಾಗಲಿಲ್ಲ. ಈ ಬಾರಿ ಸ್ವತಂತ್ರ ಅಭ್ಯರ್ಥಿ ಕೆ.ಆರ್‌.ಕಾರಂತ ನಮ್ಮ ಅಭ್ಯರ್ಥಿ ಕುಟ್ಟಪ್ಪ ಅವರಿಗಿಂತ ಹೆಚ್ಚು ಮತ ಗಳಿಸಿದರು’ ಎನ್ನುತ್ತಾರೆ ಕೆ.ಆರ್‌.ಶ್ರಿಯಾನ್‌.‘ಆಗಿನ್ನೂ ಜನಸಂಘ ಜಿಲ್ಲೆಯಲ್ಲಿ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಸಿಪಿಐ ಇಬ್ಭಾಗವಾದ  ಬಳಿಕ ಕರಾವಳಿಯಲ್ಲೂ ಕಮ್ಯುನಿಸ್ಟ್‌ ಚಳವಳಿ ಜನರ ವಿಶ್ವಾಸ ಕಳೆದುಕೊಂಡು ಅವಸಾನದ ಹಾದಿ ಹಿಡಿಯಿತು’ ಎನ್ನುತ್ತಾರೆ 1952ರಿಂದಲೇ ಸಿಪಿಐ ಜತೆ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಿ.ಕೆ.ಕೃಷ್ಣಪ್ಪ.ಆಗಿನ್ನೂ ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಅಭಿವೃದ್ಧಿಯಾಗಿರಲಿಲ್ಲ. ಆದರೂ ಈ ಚುನಾವಣೆಯಲ್ಲಿ ದಾಖಲೆ ಪ್ರಮಾಣದ (ಶೇ 70.71) ಮತದಾನವಾಗಿತ್ತು.

***

60ರ ದಶಕದಲ್ಲೂ ಆಮಿಷ!

‘1960ರ ದಶಕದಲ್ಲೂ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಆಮಿಷ ಒಡ್ಡಲಾಗುತ್ತಿತ್ತು. ಪ್ರಮುಖ ಅಭ್ಯರ್ಥಿಗಳು ಜನರಿಗೆ ಹಣ ಹಂಚುತ್ತಿದ್ದರು. ಗುಡಿಸಲು ಮನೆಯವರಿಗೆ, ಹೆಂಚಿನ ಕಾರ್ಖಾನೆ ಮಾಲೀಕರು ಹೆಂಚು ಹಂಚುತ್ತಿದ್ದರು. ಆದರೆ, ಈಗಿನಂತೆ ಜನ ಆಮಿಷಕ್ಕೆ ಬಲಿಯಾಗುತ್ತಿರಲಿಲ್ಲ. ಒಂದು ಪಕ್ಷಕ್ಕೆ ನಿಷ್ಠರಾದ ಜನ ಇನ್ನೊಂದು ಪಕ್ಷದ ಅಭ್ಯರ್ಥಿಯಿಂದ ಯಾವುದೇ ಪ್ರಯೊಜನ ಪಡೆಯುತ್ತಿರಲಿಲ್ಲ. ಈಗ ಎಲ್ಲ ಪಕ್ಷದವರಿಂದಲೂ ಲಾಭ ಪಡೆದರೂ, ಜನ ಮತ ಹಾಕಲು ಬರುವುದಿಲ್ಲ. ಆಗ ಜನರಿಗೆ ಮತ ಚಲಾಯಿಸುವ ಉತ್ಸಾಹ ಇತ್ತು. ಸೌಕರ್ಯಗಳಿಲ್ಲದ ಕಾಲದಲ್ಲೂ ಜನರು ಸ್ವಯಂಪ್ರೇರಿತರಾಗಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುತ್ತಿದ್ದರು’ ಎಂದು ಸ್ಮರಿಸುತ್ತಾರೆ ಮಂಗಳೂರಿನ ಬಿ.ಕೆ.ಕೃಷ್ಣಪ್ಪ.

***

ಮತದಾರರು 4,48,646; ಚಲಾಯಿತ ಮತ: 3,17,224 (70.71) ಸಿಂಧು ಮತ: 3,04,756

1) ಸಿ.ಎಂ.ಪೂಣಚ್ಚ (ಕಾಂಗ್ರೆಸ್‌) 1,25,162 (ಶೇ. 41.07)

2) ಕೆ.ಆರ್‌.ಕಾರಂತ (ಪಕ್ಷೇತರ)  96,640 (ಶೇ. 31.71)

3) ಬಿ.ಎನ್‌.ಕುಟ್ಟಪ್ಪ (ಸಿಪಿಎಂ)  57,776 (ಶೇ. 18.96)

4) ಟಿ.ಟಿ.ಮಲ್ಲಿ  (ಪಕ್ಷೇತರ)  15,076 (ಶೇ.4.95)

5) ಯು.ಎಲ್‌.ಕಿಣಿ (ಪಕ್ಷೇತರ)  10,102 (ಶೇ. 3.31)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.