ಶನಿವಾರ, ಏಪ್ರಿಲ್ 10, 2021
29 °C

ಮಂಜಿನ ದೇವರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಜಿನ ದೇವರು!

ಸಡಗರದ ನವರಾತ್ರಿ ಆಚರಣೆ ಮುಗಿದಿದೆ. ದೀಪಾವಳಿ ಸಂಭ್ರಮಕ್ಕೆ ದಿನಗಣನೆಯೂ ಆರಂಭವಾಗಿದೆ. ಎಲ್ಲಾ ಮಳಿಗೆಗಳಲ್ಲಿ ದೀಪಗಳು, ಲಕ್ಷ್ಮಿಯ ಪ್ರತಿರೂಪದ ಮೂರ್ತಿಗಳು ಗ್ರಾಹಕರ ಬರುವಿಕೆಗೆ ಕಾಯುತ್ತಿವೆ. ಇವೆಲ್ಲದಕ್ಕಿಂತ ವಿಭಿನ್ನವಾಗಿ ದೀಪಾವಳಿ ಆಚರಿಸುವ ಯೋಚನೆ ಸ್ನೋ ಸಿಟಿಯದು.ನಗರಕ್ಕೆ ಮಂಜಿನ ಮನೆಯ ಅನುಭವವನ್ನು ಪರಿಚಯಿಸಿದ ಹೆಗ್ಗಳಿಕೆ ಇರುವ ಸ್ನೋಸಿಟಿ ನವರಾತ್ರಿ-ದೀಪಾವಳಿ ಸಡಗರಕ್ಕಾಗಿ ಮಂಜಿನ ದೇವರನ್ನು ಸೃಷ್ಟಿಸಿದೆ. ಪ್ರಸ್ತುತ ದುರ್ಗಾಮಾತೆಯ ಮೂರ್ತಿ ಸ್ನೋ ಸಿಟಿಯ ಒಳಾಂಗಣದಲ್ಲಿ ಸ್ಥಾನ ಪಡೆದ್ದ್ದಿದಾಳೆ.ವಾರದೊಳಗೆ ಲಕ್ಷ್ಮೀಮಾತೆ, ಪಟಾಕಿ, ಬಣ್ಣದ ಕಡ್ಡಿಗಳು ಅದೇ ಆವರಣದಲ್ಲಿ ಜಾಗ ಪಡೆಯಲಿವೆ. ಶ್ರೇಣಿಕ್ ಜೋಶಿ ನೇತೃತ್ವದ 12 ಕಲಾವಿದರ ತಂಡ ಕಳೆದ ಹತ್ತು ದಿನಗಳಿಂದ ಇದಕ್ಕಾಗಿ ಹಗಲಿರುಳು ಶ್ರಮಿಸಿದೆ.`ಐದು ಡಿಗ್ರಿ ಸೆಲ್ಸಿಯಸ್‌ನಲ್ಲಿ ದಿನಪೂರ್ತಿ ಕೆಲಸ ಮಾಡುವುದು ಸುಲಭವಾಗಿರಲಿಲ್ಲ. ಸತತ ಒಂದು ಗಂಟೆ ಇದೇ ವಾತಾವರಣದಲ್ಲಿದ್ದರೆ ಕಾಲು ಮರಗಟ್ಟುತ್ತದೆ. ರಬ್ಬರ್ ಶೂ, ಕೈಗೆ ಗ್ಲೌಸ್, ಜರ್ಕಿನ್ ತೊಟ್ಟರೂ ಚಳಿಯಲ್ಲಿ ಮೈ ಕೊರೆಯುತ್ತದೆ.

 

ಪ್ರತಿ ಗಂಟೆಗೆ ಹದಿನೈದು ನಿಮಿಷ ವಿರಾಮ ನೀಡಲೇಬೇಕು~ ಎಂದರು ಕಲಾವಿದ ಶ್ರೇಣಿಕ್ ಜೋಷಿ. ಅವರು ಸ್ನೋ ಸಿಟಿಯ ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.

ಹುಲಿಯ ಮೇಲೆ ಕುಳಿತ ದುರ್ಗಾಮಾತೆಯ ಹಿಮಮೂರ್ತಿ ಇದೀಗ ಸ್ನೋ ಸಿಟಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಎಂಟು ಅಡಿ ಎತ್ತರ, ಐದು ಅಡಿ ಅಗಲದ ಈ ಮೂರ್ತಿ ತಯಾರಿಕೆಗೆ 25 ಐಸ್ ತುಂಡುಗಳನ್ನು ಬಳಸಿಕೊಳ್ಳಲಾಗಿದೆ. ಒಟ್ಟು 500 ಕೆಜಿ ತೂಕವಿರುವ ಈ ಮೂರ್ತಿಯ ಒಂದು ಬ್ಲಾಕ್‌ನಲ್ಲಿ 150 ಲೀಟರ್ ನೀರಿದೆ.`ಅಮರನಾಥ ದೇವಾಲಯ ಮಾದರಿಯ ಮೂರ್ತಿಯಿದು. ಪ್ರತಿ ಬಾರಿ ಹಬ್ಬಗಳಿಗೆ ಪರಿಸರಸ್ನೇಹಿ ಮೂರ್ತಿ ತಯಾರಿಸುತ್ತಿದ್ದೆವು. ಈ ಬಾರಿ ವಿಭಿನ್ನವಾದುದನ್ನು ನೀಡಬೇಕು ಎಂಬ ಕಾರಣಕ್ಕೆ ಮಂಜಿನ ಮೂರ್ತಿ ತಯಾರಿಸಿದೆವು.ಇದು ನೀರಿನಿಂದಲೇ ತಯಾರಿಸಿದ್ದು ಹಾಗೂ ನೀರಿನಲ್ಲೇ ಕರಗಿ ಹೋಗುವಂತದ್ದು. ಬೇಕಾದ ಭಾಗಗಳನ್ನು ಬಣ್ಣದಲ್ಲೇ ತಯಾರಿಸಿದೆವು. ಇತರೆ ಕಲಾಕೃತಿಗಳಿಗೆ ಹೋಲಿಸಿದರೆ ಮಂಜಿನ ಮೂರ್ತಿ ತಯಾರಿಸುವುದು ಕಷ್ಟ. ಅದಕ್ಕೆ ಬೇಕಾದ ರೂಪ ನೀಡುವುದು ಅತಿ ಸೂಕ್ಷ್ಮದ ಕೆಲಸ.

 

ಕೆತ್ತನೆಯಲ್ಲಿ ತುಸು ಲೋಪವಾದರೂ ರೂಪ ಕಳೆದುಕೊಳ್ಳುತ್ತದೆ, ಕಡಿಮೆಯಾದರೂ ಸುಂದರವಾಗಿ ಕಾಣುವುದಿಲ್ಲ. ಇಲ್ಲಿ ಹೆಚ್ಚು ತಾಳ್ಮೆ ಬೇಕಾಗುತ್ತದೆ. ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆಗೆ ಮಹಾತ್ಮ ಗಾಂಧಿಯ ಮೂರ್ತಿ, ಗಣಪತಿ ಹಬ್ಬಕ್ಕೆ ಗಣೇಶನ ಮೂರ್ತಿ ತಯಾರಿಸಿದ್ದೆವು~ ಎಂದು ವಿವರಿಸಿದರು.ನೀರು ಹಾಗೂ ಬಣ್ಣದ ಹೊರತಾಗಿ ಇದಕ್ಕೆ ಬೇರೆ ಖರ್ಚು ತಗುಲುವುದಿಲ್ಲ ಎನ್ನುವ ಶ್ರೇಣಿಕ್‌ಗೆ ಮುಂದೆಯೂ ಇಂತಹುದೇ ಹಲವು ಮೂರ್ತಿಗಳನ್ನು ತಯಾರಿಸುವ ಹಂಬಲವಿದೆಯಂತೆ. `ನನಗೆ ದುರ್ಗಾಮಾತೆಯರೆಂದರೆ ಬಲು ಇಷ್ಟ.ಎಲ್ಲಾ ದೇವರನ್ನೂ ಮಂಜಿನಲ್ಲಿ ತಯಾರಿಸುವ ಆಸೆಯಿದೆ. ಈ ಹಿಂದೆ ಮಾರ್ಬಲ್‌ನಿಂದ ಕಲಾಕೃತಿಗಳನ್ನು ತಯಾರಿಸುತ್ತಿದ್ದರಿಂದ ಸೂಕ್ಷ್ಮ ಕೆಲಸಗಳೇ ಇರುತ್ತಿದ್ದವು. ಈಗ ಮಂಜಿನಲ್ಲೂ ಅಷ್ಟೇ.ಎಷ್ಟು ನಿಧಾನವಾಗಿ, ಸರಳವಾಗಿ, ಸಹನೆಯಿಂದ ಕೆಲಸ ಮಾಡಬೇಕು. ಭಾರತದಲ್ಲಿ ಈ ಹಿಂದೆ ಮಂಜಿನ ಮೂರ್ತಿಗಳನ್ನು ತಯಾರಿಸಿಲ್ಲ. ಆದ್ದರಿಂದ ಹೀಗೆಯೇ ತಯಾರಿಸಬೇಕು ಎಂಬುದಕ್ಕೆ ಮಾದರಿಗಳಿರಲಿಲ್ಲ. ನಮ್ಮ ಮಟ್ಟಿಗಿದು ಹೊಸ ಪ್ರಯತ್ನ~ ಎಂಬ ಖುಷಿ ಅವರದ್ದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.