ಶುಕ್ರವಾರ, ಮೇ 7, 2021
26 °C

ಮಕ್ಕಳ ಆರೋಗ್ಯ ರಕ್ಷಣೆಗೆ ಬಾಲ ಸಂಜೀವಿನಿ

ವಿಶೇಷ ವರದಿ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಸುಧಾರಣೆಗೆ `ಅಪೌಷ್ಟಿಕ ಮಕ್ಕಳ ವೈದ್ಯಕೀಯ ವೆಚ್ಚ ಭರಿಸುವ ಯೋಜನೆ~ ಜಾರಿಗೆ ತಂದಿರುವ ಬೆನ್ನಲ್ಲೆ ರಾಜ್ಯ ಸರ್ಕಾರ ಬಡ ಮಕ್ಕಳ ಆರೋಗ್ಯ ರಕ್ಷಣೆಗಾಗಿ `ಬಾಲ ಸಂಜೀವಿನಿ~ ಉಪಯೋಜನೆ ಅನುಷ್ಠಾನಕ್ಕೆ ತಂದಿದೆ.ಹುಟ್ಟಿದ ಮಗುವಿನಿಂದ 6 ವರ್ಷ ವಯೋಮಿತಿಯ, ಬಿಪಿಎಲ್ ಪಟ್ಟಿಯಲ್ಲಿರುವ ತೀವ್ರತರಹದ ರೋಗದಿಂದ ನರಳುತ್ತಿರುವ ಅಂಗನವಾಡಿ ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದರೆ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳನ್ನು ಗುರುತಿಸಿ, ಆ ಮಕ್ಕಳಿಗೆ ಅವಶ್ಯ ಚಿಕಿತ್ಸೆ ಹಾಗೂ ಆರೈಕೆ ನೀಡುವುದು, ಮಕ್ಕಳನ್ನು ಆರೋಗ್ಯವಂತರನ್ನಾಗಿಸುವುದು, ಮಕ್ಕಳ ತಾಯಂದಿರಿಗೆ ಶಿಕ್ಷಣ ನೀಡಿ ಅವರನ್ನು ಸಬಲರನ್ನಾಗಿಸುವುದು, ಆರೋಗ್ಯ ಸೇವೆಗಳ ಮೂಲಕ ಹಾಗೂ ಉತ್ತಮ ಪೌಷ್ಟಿಕ ಆಹಾರ ಒದಗಿಸುವ ಮೂಲಕ ತಾಯಿ-ಮಗುವನ್ನು ಸಶಕ್ತಗೊಳಿಸುವುದು ಯೋಜನೆಯ ಧ್ಯೇಯ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು.ಯೋಜನೆಯಡಿ ಚಿಕಿತ್ಸೆಯುಳ್ಳ ಕಾಯಿಲೆಗಳು:


ನ್ಯುಮೋನಿಯಾ, ಎನ್ಸೆಫಿಲೈಟಿಸ್-ಮೆನ್ಜಿಟಿಸ್, ಕ್ಲಿಷ್ಟಕರ ಮಲೇರಿಯಾ, ರಕ್ತಹೀನತೆ, ಮಧುಮೇಹ, ಮೂತ್ರಕೋಶ ಸಮಸ್ಯೆ, ನವಜಾತ ಶಿಶುವಿನ ಲೆವೆಲ್-3 ಚಿಕಿತ್ಸೆ, ಲಿವರ್ ತೊಂದರೆ, ಪೋಷಕಾಂಶಗಳ ಕೊರತೆ, ನರಗಳ ಅವ್ಯವಸ್ಥೆ, ಕ್ಲಿಷ್ಠ ಅತಿಸಾರ, ಶಿಶುವಿನ ಶಸ್ತ್ರಚಿಕಿತ್ಸೆ, ವಿಷಜಂತು (ಹಾವು) ಕಡಿತಕ್ಕೆ ಚಿಕಿತ್ಸೆ, ವಿಷ ಸೇವನೆಗೆ ಈ ಯೋಜನೆಯಡಿ ಚಿಕಿತ್ಸೆ ಒದಗಿಸಲಾಗುತ್ತದೆ.ಸೌಲಭ್ಯ ಪಡೆಯುವ ವಿಧಾನ: ಪರಿಗಣಿಸಲ್ಪಟ್ಟ ಕಾಯಿಲೆಗಳಿಂದ ನರಳುತ್ತಿರುವ ಮಗುವನ್ನು ಗುರುತಿಸುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆ, ಮೆಲ್ವಿಚಾರಕಿ, ಸಿಡಿಪಿಒ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರದ್ದು. ಹಾಗೇ ಗುರುತಿಸಿದ ಮಗುವನ್ನು ರೆಫರಲ್ ಕಾರ್ಡಿನೊಂದಿಗೆ ಆಸ್ಪತ್ರೆಗೆ ಅಂಗನವಾಡಿ ಕಾರ್ಯಕರ್ತೆ ಅಥವಾ ಮೇಲ್ವಿಚಾರಕರು ದಾಖಲಿಸಬೇಕು.ಪ್ರಾಥಮಿಕ ಆರೋಗ್ಯ ಕೇಂದ್ರದ ಆಸ್ಪತ್ರೆಗಳ ಮೂಲಕ ನೀಡುವ ಚಿಕಿತ್ಸೆಯಲ್ಲಿ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡುಬರದೇ ಇದ್ದಲ್ಲಿ ಸಂಬಂಧಿಸಿದ ವೈದ್ಯಾಧಿಕಾರಿಗಳು ಬಾಲಸಂಜೀವಿನಿ ಯೋಜನೆಯಡಿ ಚಿಕಿತ್ಸೆಗಾಗಿ ಶಿಫಾರಸು ಮಾಡಬೇಕು. ತುರ್ತು ಸಂದರ್ಭಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರೇ ನೇರವಾಗಿ ಮಕ್ಕಳನ್ನು ಗೊತ್ತುಪಡಿಸಿದ ಆಸ್ಪತ್ರೆಗೆ ಕಳುಹಿಸಬಹುದು.

 

ಇದಲ್ಲದೆ, ಅಂಗನವಾಡಿ ಕಾರ್ಯಕರ್ತೆ ಅಥವಾ ಸಂಬಂಧಿತರ ಸಹಿ ಇಲ್ಲದೆ ಮಗುವು ಆಸ್ಪತ್ರೆಗೆ ದಾಖಲಾದಲ್ಲಿ ಆಸ್ಪತ್ರೆಯ ಆಡಳಿತ ವರ್ಗವು ಬಿಪಿಎಲ್ ಕಾರ್ಡ್, ಅಂಗನವಾಡಿ ಕೇಂದ್ರಗಳನ್ನು ದೃಢೀಕರಿಸಿ, ಸಿಡಿಪಿಒ ಅವರಿಂದ ದೃಢೀಕರಿಸಿ ಚಿಕಿತ್ಸೆ ನೀಡಬಹುದು.ಆಯ್ದ ಆಸ್ಪತ್ರೆಗಳಲ್ಲಿ ಚಿಕಿತ್ಸೆಲಭ್ಯ: ಯೋಜನೆ ವ್ಯಾಪ್ತಿಗೆ ಸೇರಿಸಿರುವ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡಲು ರಾಜ್ಯದ 5 ಆಸ್ಪತ್ರೆಗಳನ್ನು ಗುರುತಿಸಲಾಗಿದೆ.ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ, ಬೆಳಗಾವಿಯ ಡಾ.ಪ್ರಭಾಕರ ಕೋರೆ ಉಚಿತ ಆಸ್ಪತ್ರೆ,  ಗುಲ್ಬರ್ಗದ ಎಂ.ಆರ್. ಮೆಡಿಕಲ್ ಕಾಲೇಜು, ಮಣಿಪಾಲದ ಮಣಿಪಾಲ ಆಸ್ಪತ್ರೆಗಳು ವಿಶೇಷ ಸಂದರ್ಭಗಳಲ್ಲಿ ಯಾವುದೇ ಜಿಲ್ಲೆಯ ಮಗುವಿಗೆ ಚಿಕಿತ್ಸೆ ನೀಡಲಿವೆ. ಈ ಆಸ್ಪತ್ರೆಗಳಲ್ಲಿ ಮಗುವನ್ನು ಸಮಗ್ರವಾಗಿ ಪರೀಕ್ಷಿಸಿ, ತಜ್ಞ ವೈದ್ಯರ ಸಲಹೆಯಂತೆ ಚಿಕಿತ್ಸೆ ಒದಗಿಸಲಾಗುತ್ತದೆ ಎನ್ನುತ್ತವೆ ಇಲಾಖೆ ಮೂಲಗಳು.ಹಣಕಾಸು ನೆರವು:  ತೀವ್ರತರಹದ ಕಾಯಿಲೆಗಳಿಂದ ಬಳಲುತ್ತಿರುವ ಚಿಕಿತ್ಸೆ ಅವಶ್ಯವಿರುವ ಮಗುವಿಗೆ ಗರಿಷ್ಠ ರೂ. 35 ಸಾವಿರ ಹಾಗೂ ನವಜಾತ ಶಿಶು ಆರೈಕೆಗೆ ಪ್ರತಿ ಮಗುವಿಗೆ ರೂ. 50 ಸಾವಿರದವರೆಗೆ ಬಾಲಸಂಜೀವಿನಿ ಯೋಜನೆಯಡಿ ವೆಚ್ಚ ಭರಿಸಲಾಗುತ್ತದೆ.ಅಲ್ಲದೆ ಮಗು ಒಳರೋಗಿಯಾಗಿ ದಾಖಲಾದಾಗ ಆಸ್ಪತ್ರೆಯಲ್ಲಿ ತಂಗುವ ಪೋಷಕರೊಬ್ಬರಿಗೆ ಆಸ್ಪತ್ರೆಯಲ್ಲಿ ಇರುವಷ್ಟು ದಿನ ಪ್ರತಿ ದಿನಕ್ಕೆ ರೂ.100ರಂತೆ ದಿನಭತ್ಯೆ ಹಾಗೂ ಆಸ್ಪತ್ರೆಗೆ ಹೋಗಿ ಬರುವ ಬಸ್, ರೈಲು ಪ್ರಯಾಣ ದರ ನೀಡಲಾಗುತ್ತದೆ.ಚಿಕಿತ್ಸೆ ಪಡೆದ ಮಗುವಿನ ಆಸ್ಪತ್ರೆಯ ಬಿಲ್‌ಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ನೇರವಾಗಿ ಹಣ ಪಾವತಿಸಲಾಗುತ್ತದೆ. ಬಾಲ ಸಂಜೀವಿನಿ ಯೋಜನೆಯ ಸೌಲಭ್ಯ ಹಾಗೂ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕಿಯರು, ಸಿಡಿಪಿಒಗಳು ಅಥವಾ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಆರೋಗ್ಯ ಕಾರ್ಯಕರ್ತೆಯರಿಂದ ಪಡೆಯಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.