ಸೋಮವಾರ, ಮಾರ್ಚ್ 1, 2021
30 °C
ತುಮಕೂರು ಲೋಕಸಭೆ ಕ್ಷೇತ್ರದಲ್ಲಿ 14.85 ಲಕ್ಷ ಮತದಾರರು

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ

ತುಮಕೂರು: ಜಿಲ್ಲೆಯಲ್ಲಿ 20.52 ಲಕ್ಷ ಮತದಾರರಿದ್ದು, ಇದರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಮತದಾರರ ಸಂಖ್ಯೆ 14.85 ಲಕ್ಷ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಮಾ. 9ರಿಂದ 16ರ ವರೆಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಕೆ.ಎಸ್‌.ಸತ್ಯಮೂರ್ತಿ ತಿಳಿಸಿದರು.ಮಾ. 9ರಂದು ಎಲ್ಲ ಮತಗಟ್ಟೆಗಳಲ್ಲಿ ವಿಶೇಷ ಶಿಬಿರ ನಡೆಯಲಿದ್ದು, ಮತದಾರರು ಹೆಸರು ಸೇರ್ಪಡೆ ಮಾಡಬಹುದು. ತಾಲ್ಲೂಕು ಕಚೇರಿಗಳಿಗೆ ಮಾ. 16ರ ವರೆಗೆ ದಾಖಲಾತಿ ಸಲ್ಲಿಸಿ ಹೆಸರು ಸೇರಿಸ­ಬಹುದು. ಚನಾವಣೆ ದಿನ ಹೆಸರು ಬಿಟ್ಟುಹೋಗಿರುವ ಬಗ್ಗೆ ಮತದಾರರು ಆಕ್ಷೇಪ ವ್ಯಕ್ತಪಡಿಸಬಾರದು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 1826 ಮತ­ಗಟ್ಟೆ ಸ್ಥಾಪಿಸಲಾಗಿದೆ. ಜಿಲ್ಲೆಯ 11 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 2599 ಮತಗಟ್ಟೆಗಳಿವೆ. ಒಟ್ಟು 3800 ಬ್ಯಾಲೆಟ್‌ ಯುನಿಟ್‌, 2990 ಕಂಟ್ರೊಲ್‌ ಯುನಿಟ್‌ ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಜಿಲ್ಲೆಯ ಒಟ್ಟು ಮತದಾರರಲ್ಲಿ ಶೇ 99.28ರಷ್ಟು ಮಂದಿಯ ಬಳಿ ಮತದಾರರ ಗುರುತಿನ ಚೀಟಿ ಇದೆ.ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಗುರುತಿನ ಚೀಟಿ ಇದ್ದರೂ ಮತ ಚಲಾಯಿಸಲು ಅವಕಾಶವಿಲ್ಲ ಎಂದು ತಿಳಿಸಿದರು.

ಅಭ್ಯರ್ಥಿಗಳು ಚುನಾವಣೆ ವೆಚ್ಚ ನಿರ್ವಹಣೆಗೆ ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆಯಬೇಕು. ಅಭ್ಯರ್ಥಿಗಳು ಅಥವಾ ಕಾರ್ಯಕರ್ತರು ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.ಎಸ್ಪಿ ರಮಣ್‌ಗುಪ್ತಾ ಮಾತನಾಡಿ,  ಜಿಲ್ಲೆಗೆ 25 ಗಡಿ ಭಾಗಗಳನ್ನು ಗುರುತಿಸಲಾಗಿದೆ. ಸರ್ವಲೆನ್ಸ್‌ ತಂಡ ರಚನೆ ಮಾಡಲಾಗುವುದು. ಕಾನೂನು ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕ್ರಿಮಿನಲ್‌ ದೂರು ದಾಖಲು ಮಾಡಲಾಗುವುದು ಎಂದು ತಿಳಿಸಿದರು.ಈಗಾಗಲೇ ರಕ್ಷಣೆ ನೀಡಿರುವವರಿಗೆ ಚುನಾವಣೆ ಹಿನ್ನೆಲೆ­ಯಲ್ಲಿ ರಕ್ಷಣೆ ಹಿಂಪಡೆಯುವುದಿಲ್ಲ. ರಾಜ­ಕಾರಣಿ­ಗಳಿಗೆ ಪೈಲೆಟ್‌ ನೀಡುವುದಿಲ್ಲ. ಆದರೆ ಎಸ್ಕಾರ್ಟ್‌ ನೀಡಲು ಅವಕಾಶವಿದೆ ಎಂದು ಅವರು ಪ್ರಶ್ನೆ­ಯೊಂದಕ್ಕೆ ಉತ್ತರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದ­ರಾಜು, ಚುನಾವಣೆ ತಹಶೀಲ್ದಾರ್‌ ಶ್ರೀಧರಮೂರ್ತಿ ಇತರರು ಭಾಗವಹಿಸಿದ್ದರು.ಚುನಾವಣೆ ಪ್ರಕ್ರಿಯೆ ವಿಡಿಯೋ

ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡುವಂತೆ ಚುನಾವಣಾ ಆಯೋಗ ಆದೇಶಿಸಿದೆ. ನಾಮಪತ್ರ ಸಲ್ಲಿಸುವಿಕೆ, ಪರಿಶೀಲನೆ, ಚಿಹ್ನೆ ಹಂಚಿಕೆ, ಮತದಾರರ ಪೆಟ್ಟಿಗೆ ಸಂಗ್ರಹಿಸುವ ಭದ್ರತಾ ಕೊಠಡಿ, ರಾಜಕೀಯ ಪಕ್ಷಗಳ ಪ್ರಚಾರ ಸಭೆ, ಮೆರವಣಿಗೆ ಮುಂತಾದ ಎಲ್ಲ ಸಂದರ್ಭದಲ್ಲಿ ವಿಡಿಯೋ ಮಾಡಲಾಗುತ್ತದೆ.ದೂರಿಗೆ ಕಂಟ್ರೊಲ್‌ ರೂಂ

ಚುನಾವಣೆ ಸಂಬಂಧ ಸಾರ್ವಜನಿಕರು ಕಂಟ್ರೋಲ್‌ ರೂಂಗೆ ದೂರು ಸಲ್ಲಿಸಬಹದು (0816– 2277333).

ಪ್ರತಿ ತಾಲ್ಲೂಕಿಗೆ ಒಂದರಂತೆ ಸಂಚಾರಿ ಜಾಗೃತ ದಳ ರಚಿಸಲಾಗುತ್ತದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರ ಸ್ಕ್ವಾಡ್‌ಗೆ ಇರುತ್ತದೆ. ಪ್ರತಿ ತಂಡದಲ್ಲಿ ಒಬ್ಬರು ಎಎಸ್‌ಐ, ಮೂವರು ಪೊಲೀಸ್‌ ಸಿಬ್ಬಂದಿ, ಒಬ್ಬರು ಕಂದಾಯ ಇಲಾಖೆ ಅಧಿಕಾರಿ, ವಿಡಿಯೋ­ಗ್ರಾಫರ್‌ ಇರುತ್ತಾರೆ ಎಂದು ಎಸ್ಪಿ ರಮಣ್‌ಗುಪ್ತಾ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.