1970ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಪ್ರೊ.ದೇ.ಜವರೇ ಗೌಡರು ಸಮ್ಮೇಳನಾಧ್ಯಕ್ಷರಾಗಿದ್ದರು. ಆಗಿನ್ನೂ ಅವರಿಗೆ 51 ವರ್ಷ. ಈಗ ಮತ್ತೆ ಬೆಂಗಳೂರಿನಲ್ಲಿ ಸಮ್ಮೇಳನ ನಡೆಯುತ್ತಿದೆ. ಈಗ ದೇಜಗೌ ಅವರಿಗೆ 92 ವರ್ಷ. 41 ವರ್ಷ ಹಿಂದಿನ ಸನ್ನಿವೇಶವನ್ನು ನೆನೆಯುವಾಗ ಅವರಿಗೆ ಮತ್ತೆ ಅಂದಿನ ಪುಳಕವಾಗುತ್ತದೆ. ಮತ್ತೆ ಅದೇ ಹುಮ್ಮಸ್ಸಿನಲ್ಲಿ ಎದ್ದು ಕುಳಿತುಕೊಳ್ಳುತ್ತಾರೆ. ವಿಪರೀತ ಚಳಿಯಿಂದ ಜ್ವರ ಬಂದಿದ್ದರೂ ತಲೆಗೆ ಕಟ್ಟಿದ ಮಫ್ಲರ್ ಬಿಚ್ಚಿ ಮಾತಿಗೆ ಅಣಿಯಾಗುತ್ತಾರೆ.

‘ಆಗ ನನಗೆ ಇನ್ನೂ 51 ವರ್ಷ. ನನಗಿಂತ ಹಿರಿಯರಾದವರು ಇದ್ದರು. ಸಮರ್ಥರೂ ಇದ್ದರು. ನಾನು ಅಧ್ಯಕ್ಷನಾಗುತ್ತೇನೆ ಎಂದು ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ. ಆದರೂ ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರು. ನಾನು ಸಾರೋಟಿನಲ್ಲಿ ಮೆರವಣಿಗೆ ಬಂದಾಗ ಆಗಿನ ಪತ್ರಿಕೆಗಳು ‘ಮದುವೆ ಗಂಡಿಗೆ ಕೊಂಚ ವಯಸ್ಸಾದಂತೆ ಕಾಣಿಸುತ್ತದೆ’ ಎಂದು ಬರೆದಿದ್ದವು’ ಎಂದು ಅಂದಿನ ನೆನಪುಗಳನ್ನು ಬಿಚ್ಚಿಡಲು ಆರಂಭಿಸಿದರು.

“ಆಗ ಬೇಂದ್ರೆ, ಡಿವಿಜಿ, ಮಾಸ್ತಿ, ಎಸ್.ವಿ.ರಂಗಣ್ಣ ಎಲ್ಲಾ ಬದುಕಿದ್ದರು. ಸಮ್ಮೇಳನ ಶುರುವಾಗುವುದಕ್ಕೆ ಮೊದಲು ನಾನು ಎಸ್.ವಿ.ರಂಗಣ್ಣ ಅವರಿಗೆ ನಮಸ್ಕರಿಸಿ ‘ನೀವು ಅಧ್ಯಕ್ಷರಾಗಬೇಕಿತ್ತು ಸರ್’ ಎಂದೆ. ಅದಕ್ಕೆ ರಂಗಣ್ಣನವರು ‘ನೀನು ಆದರೆ ಏನೋ? ನೀನು ನನ್ನ ಶಿಷ್ಯ’ ಎಂದು ಬಾಯಿ ತುಂಬಾ ಹರಸಿದ್ದರು. ಬೇಂದ್ರೆ ಅವರು ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಒಂದು ಬದಿಯಲ್ಲಿ ನಿಂತು ನೋಡುತ್ತಿದ್ದರು. ಅದನ್ನು ನೋಡಿ ನನಗೆ ರೋಮಾಂಚನ. ಮೈ ಪುಳಕ. ಈಗಲೂ ಥಟ್ಟನೆ ನನಗೆ ಅದೇ ದೃಶ್ಯ ನೆನಪಿಗೆ ಬರುತ್ತದೆ”.

“ಮೆರವಣಿಗೆ ಮುಗಿದ ನಂತರ ನಾನು ಬೇಂದ್ರೆ ಅವರ ಬಳಿಗೆ ಬಂದು ‘ನೀವೇನು ಹಾದಿ ಬದಿಯಲ್ಲಿ ನಿಂತು ಮೆರವಣಿಗೆ ನೋಡುತ್ತಿದ್ದಿರಿ’ ಎಂದರೆ ‘ನಾನು ನೋಡದೆ ಇನ್ಯಾರು ನೋಡಬೇಕೋ? ಈ ವೈಭವ ಎಲ್ಲಾ ನಾನು ನೋಡಬಾರದಾ’ ಎಂದು ಬೇಂದ್ರೆ ಕೇಳಿದ್ದರು. ಅವರೆಲ್ಲಾ ನನಗೆ ದೇವರೇ ಆಗಿದ್ದರು”.

“ಮಾಸ್ತಿಯವರೂ ಆ ಸಮ್ಮೇಳನಕ್ಕೆ ಬಂದಿದ್ದರು. ನಾನು ಅವರ ಕಾಲಿಗೆ ನಮಸ್ಕರಿಸಿದಾಗ ‘ನಿನಗೆ ಒಳ್ಳೆಯದಾಗಲಿ’ ಎಂದು ಹರಸಿದ್ದರು. ಅ.ನ.ಕೃ ಅವರು ಆಗ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು. ಅವರು ನನಗಿಂತ ಹಿರಿಯರು. ಅಲ್ಲದೆ ಒಳ್ಳೆಯ ವಿದ್ವಾಂಸರು. ಒಳ್ಳೆಯ ಸಾಹಿತಿ. ಅವರು ತಮ್ಮ ಮನೆಯ ಹುಡುಗ ಸಮ್ಮೇಳಾಧ್ಯಕ್ಷರೇನೋ ಎನ್ನುವಂತೆ ಓಡಾಡುತ್ತಿದ್ದರು. ಅಲ್ಲದೆ ವೇದಿಕೆಯ ಮೇಲೆ ಬಹಿರಂಗವಾಗಿಯೇ ‘ಇನ್ನು ಮುಂದೆ ನೀವು ನಮ್ಮ ನಾಯಕರು. ನೀವು ಬಾವುಟ ಹಿಡಿದು ಮುನ್ನಡೆಯಿರಿ. ನಾವೆಲ್ಲಾ ಹಿಂದೆ ಇರುತ್ತೇವೆ’ ಎಂದು ಹೇಳಿದ್ದರು ಎಂದು ಕೊಂಚ ಹೊತ್ತು ದೇಜಗೌ ಭಾವುಕರಾದರು.

ಸುಧಾರಿಸಿಕೊಂಡು ಮತ್ತೆ ಮೆಲುಕು ಹಾಕತೊಡಗಿದರು. “ಆಗ ವೀರೇಂದ್ರ ಪಾಟೀಲರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರು ನನ್ನ ಬಗ್ಗೆ ಕೊಂಚ ಅಸಮಾಧಾನಗೊಂಡಿದ್ದರು. ಅದಕ್ಕೆ ಕಾರಣವೂ ಇತ್ತು. ಆಗ ಬೆಂಗಳೂರು ಮಹಾನಗರ ಪಾಲಿಕೆಗೆ ಸಾಕಷ್ಟು ಮಂದಿ ತಮಿಳರು ಆಯ್ಕೆಯಾಗಿದ್ದರು. ನಾನು ಇದನ್ನು ಕಟುವಾಗಿ ಟೀಕಿಸಿದ್ದೆ. ಇದರಿಂದ ಅವರಿಗೆ ನನ್ನ ಬಗ್ಗೆ ಸಿಟ್ಟು ಬಂದಿತ್ತು. ಶಿಕ್ಷಣ ಸಚಿವರಾಗಿದ್ದ ಶಂಕರೇಗೌಡರಲ್ಲಿ ‘ನೀವೆಲ್ಲಾ ಹೇಳಿದಿರಿ ಎಂದು ಅವರನ್ನು ಕುಲಪತಿ ಮಾಡಿದೆ. ಆದರೆ ಈಗ ನಾವು ಅವರಿಂದ ಬುದ್ಧಿ ಕಲಿಯಬೇಕಾಗಿದೆ’ ಎಂದು ಹೇಳಿದ್ದರಂತೆ. ಆದರೆ ಸಾಹಿತ್ಯ ಸಮ್ಮೇಳನಕ್ಕೆ ಬಂದ ವೀರೇಂದ್ರ ಪಾಟೀಲರು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದರು. ‘ನಾನು ತಪ್ಪು ತಿಳಿದುಕೊಂಡಿದ್ದೆ. ದೇಜಗೌ ಅವರು ಹೇಳಿದ ಮಾತು ನಿಜ. ಇಷ್ಟೊಂದು ಮಂದಿ ತಮಿಳರು ಮಹಾನಗರ ಪಾಲಿಕೆಗೆ ಆಯ್ಕೆಯಾಗಲು ನಾವು ಬಿಡಬಾರದಿತ್ತು’ ಎಂದು ಹೇಳಿದರು. ನಿಜವಾಗಿಯೂ ಅವರು ದೊಡ್ಡ ಮನುಷ್ಯ” ಎಂದು ಶಬ್ಬಾಸ್ಗಿರಿ ನೀಡಿದರು.

“ಆಗ ನಾನು ನನ್ನ ಅಧ್ಯಕ್ಷೀಯ ಭಾಷಣದಲ್ಲಿ ಮುಖ್ಯಮಂತ್ರಿ ಎದುರು ಮೂರು ಕೋರಿಕೆಯನ್ನು ಮುಂದಿಟ್ಟೆ. ಕನ್ನಡವನ್ನು ಸರ್ವ ಮಾಧ್ಯಮ ಮಾಡಿ. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಕೆಲಸ ಕೊಡಿ ಹಾಗೂ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತನ್ನಿ ಎಂದು ಒತ್ತಾಯಿಸಿದೆ. ಆದರೆ ಈಗಲೂ ಈ ಮೂರು ಬೇಡಿಕೆಗಳು ಈಡೇರಿಲ್ಲ. ಕನ್ನಡ ಸರ್ವ ಮಾಧ್ಯಮವಾಗದ ಹೊರತೂ ಅದರ ಉದ್ಧಾರ ಸಾಧ್ಯವಿಲ್ಲ. ಬಿಎಂಶ್ರೀ, ಕುವೆಂಪು ಅವರಂತಹ ಹೋರಾಟಗಾರರು ಹೋದರು. ಈಗ ಕನ್ನಡದ ಬಗ್ಗೆ ಮಾತನಾಡುವವರೇ ಇಲ್ಲವಾಗಿದ್ದಾರೆ” ಎಂಬ ವಿಷಾದದ ಛಾಯೆಯಲ್ಲಿಯೇ ಅವರು ಬಿಎಂಶ್ರೀ ಅವರು ಕನ್ನಡದ ಹೋರಾಟಗಾರರಾದ ಕತೆಯನ್ನೂ ಬಿಚ್ಚಿಡತೊಡಗಿದರು.

“ಬಿಎಂಶ್ರೀ ಅವರಿಗೆ ಎಲ್ಲಿಲ್ಲದ ಇಂಗ್ಲಿಷ್ ವ್ಯಾಮೋಹ. ಅವರು ಯಾವಾಗಲೂ ಇಂಗ್ಲಿಷ್ನಲ್ಲಿಯೇ ಮಾತನಾಡುತ್ತಿದ್ದರು. 1911ರಲ್ಲಿ ಎಸ್.ವಿ.ರಂಗಣ್ಣ ಅವರು ಬಿಎಂಶ್ರೀ ಅವರ ಬಳಿಗೆ ಹೋಗಿ, ಬೆಂಗಳೂರು ಸೆಂಟ್ರಲ್ ಕಾಲೇಜು ಕನ್ನಡ ಸಂಘದಲ್ಲಿ ಭಾಷಣ ಮಾಡಲು ಕರೆದರು. ಬಿಎಂಶ್ರೀ ಅವರು ಒಪ್ಪಿಕೊಂಡರು. ಆಗ ರಂಗಣ್ಣ ಅವರು ‘ನೀವು ಯಾವ ಭಾಷೆಯಲ್ಲಿ ಮಾತನಾಡುತ್ತೀರಿ? ಎಂದು ಬಿಎಂಶ್ರೀ ಅವರನ್ನು ಕೇಳಿದರು. ‘ಸರ್ಟನ್ಲಿ ಇನ್ ಇಂಗ್ಲಿಷ್’ ಎಂದು ಉತ್ತರಿಸಿದರು ಬಿಎಂಶ್ರೀ. ತಕ್ಷಣವೇ ರಂಗಣ್ಣ ಹಾಗಾದರೆ ನೀವು ಬರುವುದು ಬೇಡ ಎಂದು ಹೇಳಿ ಹೊರಟರು. ಅವರು ಕೊಂಚ ದೂರದವರೆಗೆ ಹೋಗುವ ತನಕ ಸುಮ್ಮನಿದ್ದ ಬಿಎಂಶ್ರೀ ಅವರು ರಂಗಣ್ಣ ಅವರನ್ನು ಕರೆದು ಕನ್ನಡದಲ್ಲಿಯೇ ಭಾಷಣ ಮಾಡುವುದಾಗಿ ಒಪ್ಪಿಕೊಂಡರು. ಅಲ್ಲಿಂದ ಮತ್ತೆ ಅವರು ಇಂಗ್ಲಿಷ್ನಲ್ಲಿ ಮಾತನಾಡಲಿಲ್ಲ. ಬಿಎಂಶ್ರೀ ಮತ್ತು ಕುವೆಂಪು ಎಲ್ಲಿಯೇ ಹೋದರೂ ಕನ್ನಡದ ಬಗ್ಗೆಯೇ ಮಾತನಾಡುತ್ತಿದ್ದರು. ಬಿಎಂಶ್ರೀ ಕನ್ನಡದ ಹೋರಾಟ ಆರಂಭಿಸಿ ಈಗ ಒಂದು ಶತಮಾನ ಕಳೆದಿದೆ. ಇಂತಹ ಸನ್ನಿವೇಶದಲ್ಲಿ ಮತ್ತೆ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಎಂತಹ ಕಾಕತಾಳೀಯ ನೋಡಿ” ಎಂದು ಮುಗುಳ್ನಕ್ಕರು.

“ಆಗ ಬೆಂಗಳೂರಿನಲ್ಲಿ ಸಮ್ಮೇಳನ ನಡೆದಾಗ ಜಿ.ನಾರಾಯಣ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಚೆನ್ನಾಗಿಯೇ ಸಮ್ಮೇಳನ ಮಾಡಿದರು. ಸಮ್ಮೇಳನದ ಒಟ್ಟು ಸ್ವರೂಪದಲ್ಲಿ ಈಗಿನ ಸಮ್ಮೇಳನಕ್ಕಿಂತ ಆಗಿನ ಸಮ್ಮೇಳನ ಭಿನ್ನವಾಗಿಯೇನೂ ಇರಲಿಲ್ಲ. ಆಗ ಯಾವ ಗೋಷ್ಠಿ ನಡೆಯಿತು. ಏನೇನು ಚರ್ಚೆಗೆ ಒಳಗಾದವು ಎನ್ನುವುದು ನೆನಪಿನಲ್ಲಿ ಇಲ್ಲ. ಆದರೆ ಬೇಂದ್ರೆ, ಮಾಸ್ತಿ, ಡಿವಿಜಿ, ಅನಕೃ ಮುಂತಾದವರೆಲ್ಲಾ ಬಂದಿದ್ದರು. ಕನ್ನಡಕ್ಕೆ ಅದೊಂದು ಸುವರ್ಣ ಯುಗ. ಮತ್ತೆ ಅಂತಹ ಸುವರ್ಣ ಯುಗ ಎಂದು ಬಪ್ಪುದೋ ಎಂದು ಬಪ್ಪುದೋ’’ ಎಂದು ದೇಜಗೌ ಸ್ವಗತ ಎನ್ನುವಂತೆ ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.