ಬುಧವಾರ, ಏಪ್ರಿಲ್ 21, 2021
32 °C

ಮದುವೆ ಸಂಬಂಧವಲ್ಲ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಗಂಡು-ಹೆಣ್ಣು ಒಂದಾಗಿ ಬಾಳುವ ಸಂಬಂಧಕ್ಕೆ ಮದುವೆ ಎಂಬ ಹೆಸರಿಟ್ಟವರು ಭಾರತೀಯರು. ಈಗ ಅದೇ ಸಂಬಂಧ ಬಂಧನವಾಗಿ ಮಹಿಳೆಯ ಕೊರಳಿಗೆ ಉರುಳಾಗುತ್ತಿದೆಯೇ ಎಂಬ ಸಂಶಯ ವಿಚಾರವಾದಿಗಳನ್ನು ಕಾಡುತ್ತಿದೆ ಎಂದು ಬೆಂಗಳೂರು ವಿಮೋಚನಾ ಸಂಸ್ಥೆಯ ಮಧು ಭೂಷಣ್ ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯ ಮಹಿಳಾ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗುರುವಾರ ಪುರಭವನದಲ್ಲಿ ನಡೆದ ‘ಜಾಥಾ ಹಾಗೂ ಮಹಿಳಾ ಸಮಾವೇಶ’ದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.ಪರಂಪರೆ ಹೆಸರಿನಲ್ಲಿ ಸಂಬಂಧಗಳ ವ್ಯಾಪಾರೀಕರಣವಾಗುತ್ತಿದೆ. ಪುರುಷ ಪ್ರಧಾನ ಸಮಾಜದಲ್ಲಿ ವರದಕ್ಷಿಣೆ ಹೆಸರಿನಲ್ಲಿ ಹಿಂಸೆ-ದೌರ್ಜನ್ಯ ಸಾಮಾನ್ಯ ಎನಿಸಿಬಿಟ್ಟಿದೆ. ಬೆಂಗಳೂರು ನಗರದಲ್ಲಿಯೇ ಪ್ರತಿನಿತ್ಯ ಮೂವರು ಮಹಿಳೆಯರು ಮದುವೆ ಬಂಧನದಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪತ್ರಿಕೆಗಳ ಪುಟ ತೆರೆದರೆ ಸಾಕು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಸಾಲಾಗಿ ಅನಾವರಣಗೊಳ್ಳುತ್ತವೆ ಎಂದು ವಾಸ್ತವ ಸ್ಥಿತಿಯ ಚಿತ್ರಣ ನೀಡಲು ಯತ್ನಿಸಿದರು.ಸಂಪ್ರದಾಯದ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಯನ್ನು ಮೆಟ್ಟಿ ನಿಲ್ಲುವ ಧೈರ್ಯ ಮಹಿಳೆ ತಂದುಕೊಳ್ಳಬೇಕು. ಕೊಳ್ಳುಬಾಕ ಸಂಸ್ಕೃತಿಯ ಸಮಾಜದಲ್ಲಿ ಕುಸಿಯುತ್ತಿರುವ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಜವಾಬ್ದಾರಿಯಲ್ಲಿ ಆಕೆಯೂ ಪಾಲುದಾರಳಾಗಬೇಕು ಎಂದು ಅವರು ಕಿವಿಮಾತು ಹೇಳಿದರು. ಕಾರ್ಯಕ್ರಮ ಸಂಚಾಲಕಿ ರೀಟಾ ನೊರೊನ್ಹಾ ಮಾತನಾಡಿ, ಮಹಿಳೆಯ ನೋವು ಸಮಾಜದ ಎಲ್ಲಾ ಜಾತಿ ಮತ ಧರ್ಮಗಳನ್ನು ಮೀರಿ ನಿಂತಿದೆ. ಸಮಾನತೆ- ಸ್ವಾತಂತ್ರ್ಯ-ಹಕ್ಕುಗಳಲ್ಲಿ ಮಹಿಳೆಯೂ ಸಮಭಾಗಿ ಎಂಬುದನ್ನು ಮರೆಯದೆ ಅಸಂಘಟಿತ ಮಹಿಳಾ ವಲಯದಲ್ಲೂ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಭಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ಯಾಮಲಾ, ರೋಶನಿ ನಿಲಯ ಪ್ರಾಂಶುಪಾಲರಾದ ಜೆಸಿಂತಾ ಡಿಸೋಜ, ಡೀಡ್ಸ್ ನಿರ್ದೇಶಕಿ ಮೆರ್ಲಿನ್ ಮಾರ್ಟಿಸ್ ಇದ್ದರು. ಸ್ಥಳೀಯ ಮಹಿಳಾ ಸಂಘಟನೆಗಳ ಪ್ರತಿನಿಧಿಗಳಿಂದ ಪ್ರಸ್ತುತ ಮಹಿಳೆ ಸ್ಥಿತಿ-ಗತಿ ವಿಚಾರ ಮಂಡಿಸಿದರು. ಕಾರ್ಯಕ್ರಮವನ್ನು ಎಲ್ಲಾ ವಯೋಮಾನದ ಮಹಿಳೆಯರು ಉದ್ಘಾಟಿಸಿದ್ದು ವಿಶೇಷವಾಗಿತ್ತು. ಇದಕ್ಕೂ ಮುನ್ನ ಮಹಿಳಾ ದಿನಾಚರಣೆ ಅಂಗವಾಗಿ ಜ್ಯೋತಿ ಸರ್ಕಲ್‌ನಿಂದ ಜಾಥಾ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.