ಶುಕ್ರವಾರ, ಏಪ್ರಿಲ್ 16, 2021
31 °C

ಮಧ್ಯ ಕರ್ನಾಟಕದಲ್ಲಿ ಏರಿದ ತಾಪಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದಲ್ಲಿ ತಾಪಮಾನ ಪ್ರಸಕ್ತ ವರ್ಷದಲ್ಲಿ ಸುಮಾರು 10 ಡಿಗ್ರಿ ಸೆಲ್ಷಿಯಸ್‌ನಷ್ಟು ಏರಿಕೆ ಕಂಡುಬಂದಿದ್ದು, ವಿಪರೀತ ಧಗೆ, ಬಿಸಿ ಹವೆ ಅನುಭವಿಸುವಂತಾಗಿದೆ.

ಕಳೆದ ವರ್ಷ ಇದೇ ತಿಂಗಳಲ್ಲಿ 25.6 ಡಿಗ್ರಿಯಷ್ಟಿದ್ದ ತಾಪಮಾನ ಈ ಬಾರಿ 35 ಡಿಗ್ರಿ ಆಸುಪಾಸಿನಲ್ಲಿದೆ. ಸೋಮವಾರ ಗರಿಷ್ಠ 39 ಡಿಗ್ರಿ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆಯ ಹವಾಮಾನ ದಾಖಲೆಗಳ ಪ್ರಕಾರ 2000 ಇಸವಿಯ ಮಾರ್ಚ್‌ನಲ್ಲಿ ನಗರದ ಹವಾಮಾನ ಗರಿಷ್ಠ 32.5, ಕನಿಷ್ಠ 27.7 ಡಿಗ್ರಿ ದಾಖಲಾಗಿತ್ತು. 2005ರಲ್ಲಿ ಗರಿಷ್ಠ 27.7, ಕನಿಷ್ಠ 24.2 ಡಿಗ್ರಿ ದಾಖಲಾಗಿತ್ತು. 2008ರಲ್ಲಿ ಗರಿಷ್ಠ 35 ಡಿಗ್ರಿ, ಕನಿಷ್ಠ 21.2 ಡಿಗ್ರಿ ಕಂಡು ಬಂದಿದೆ. 2010ರಲ್ಲಿ ಮತ್ತೆ ಕುಸಿದ ತಾಪಮಾನ ಈ ಬಾರಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.ಮಾನವ ಚಟುವಟಿಕೆಗಳೇ ಕಾರಣ: ನಗರದಲ್ಲಿ ಮಾನವ ಚಟುವಟಿಕೆಗಳು ಹೆಚ್ಚಳವಾಗಿದೆ. ಕಟ್ಟಡ ನಿರ್ಮಾಣ, ಅವುಗಳಿಂದ ಹೊರಸೂಸುವ ವಿಕಿರಣ, ಕೈಗಾರಿಕೆಗಳ ಹೆಚ್ಚಳ, ವಾಹನಗಳ ಹೊಗೆ, ಗಾಳಿಯಲ್ಲಿ ತೇವಾಂಶ ಇಲ್ಲದಿರುವುದು, ಬಯಲುಸೀಮೆಯಲ್ಲಿ ಗಣನೀಯ ಪ್ರಮಾಣದಲ್ಲಿ ಮರಗಿಡಗಳು ಇಲ್ಲದಿರುವುದು. ಕೆರೆ ಕಟ್ಟೆಗಳೂ ಅಭಿವೃದ್ಧಿ ಕಾಣದೇ ಬತ್ತಿಹೋಗುತ್ತಿರುವುದು ಉಷ್ಣಾಂಶ ಏರಿಕೆಗೆ ಕಾರಣವಾಗಿದೆ ಎಂದು ಬಿಐಇಟಿಯ ಪರಿಸರ ವಿಜ್ಞಾನಿ ಡಾ.ಎಸ್. ಮಂಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.ಅವರ ಹೇಳಿಕೆಗೆ ಪೂರಕವಾಗುವಂತೆ ಜಿಲ್ಲೆಯಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚಿದೆ. 2004ರ ಡಿಸೆಂಬರ್ ವೇಳೆಗೆ ಜಿಲ್ಲೆಯಲ್ಲಿ 1,48,132 ಇದ್ದ ವಾಹನಗಳ ಸಂಖ್ಯೆ 2010ರ ಡಿಸೆಂಬರ್ ವೇಳೆಗೆ 2,77,774ಕ್ಕೆ ಏರಿದೆ. 2011ರ ಫೆಬ್ರುವರಿ ವೇಳೆಗೆ 2,83,186 ವಾಹನಗಳು ನೋಂದಣಿಯಾಗಿವೆ. ಅದಕ್ಕನುಗುಣವಾಗಿ ಜನಸಂಖ್ಯೆಯೂ ಹೆಚ್ಚಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಮಾಹಿತಿ ಪ್ರಕಾರ ಸುಮಾರು 7,908 ಸಣ್ಣ ಹಾಗೂ ದೊಡ್ಡ ಕೈಗಾರಿಕಾ ಘಟಕಗಳಿವೆ. ಈ ಎಲ್ಲ ಚಟುವಟಿಕೆಗಳ ಒಟ್ಟಾರೆ ಪರಿಣಾಮ ತಾಪಮಾನದಲ್ಲಿ ಏರಿಕೆ ಕಂಡುಬಂದಿದೆ ಎಂದು ಮಂಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.ಬೆಂಗಳೂರಿನಂಥ ಪ್ರದೇಶದಲ್ಲಿಯೂ ಹಿಂದಿನದಕ್ಕಿಂತ ಈಗ ತಾಪಮಾನ ಹೆಚ್ಚು ಇದೆ. ಆದರೆ, ಅಲ್ಲಿ ಒಂದೆಡೆ ಪರಿಸರ ಪೂರಕ ಚಟುವಟಿಕೆಗಳಿಗೆ ಒತ್ತು ನೀಡಲಾಗುತ್ತಿದೆ. ಸಾಕಷ್ಟು ಕೆರೆಗಳೂ ಇವೆ. ಹಾಗಾಗಿ, ತಾಪಮಾನ ನಿಯಂತ್ರಣದಲ್ಲಿ ಇದೆಯಾದರೂ ಕಡಿಮೆಯೇನಲ್ಲ. ಪ್ರಾದೇಶಿಕ ಭಿನ್ನತೆಯೂ ಹವಾಮಾನದ ಮೇಲೆ ಪರಿಣಾಮ ಬೀರುತ್ತದೆ ಎಂದರು.

ದಾವಣಗೆರೆಯ ಈ ಲೆಕ್ಕಾಚಾರವನ್ನೇ ಸಮೀಪದ ಜಿಲ್ಲೆಗಳಿಗೂ (ಹಾವೇರಿ, ಚಿತ್ರದುರ್ಗ) ಸ್ವಲ್ಪಮಟ್ಟಿಗೆ ಅನ್ವಯಿಸಬಹುದು. ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳದೇ ಹೋದರೆ ತೊಂದರೆಯಾಗುವುದು ಖಚಿತ ಎನ್ನುತ್ತಾರೆ ಅವರು.ತಾಪಮಾನ ಏರಿಕೆಯಾದಂತೆ ಕೆಲವೆಡೆ ಚರ್ಮ ಸುಡುವಿಕೆ(ಸನ್‌ಬರ್ನ್), ಅಲರ್ಜಿಯಂಥ ರೋಗಗಳು ಅಲ್ಲಲ್ಲಿ ಕಾಣಿಸಿಕೊಂಡಿವೆ. ವಿದ್ಯುತ್ ಕಡಿತವೂ ಇದೆ. ಒಟ್ಟಾರೆ ತಾಪಮಾನ ಮಧ್ಯ ಕರ್ನಾಟಕದ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ನಾಗರಿಕರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.