ಗುರುವಾರ , ಮೇ 26, 2022
29 °C

ಮನಮೋಹನ್ ರಾಷ್ಟ್ರಾಧ್ಯಕ್ಷ ಸ್ಥಾನದ ಸ್ಪರ್ಧಿ ಅಲ್ಲ: ಕಾಂಗ್ರೆಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವ ದೆಹಲಿ (ಪಿಟಿಐ): ~ಡಾ. ಮನಮೋಹನ್ ಸಿಂಗ್ ಅವರನ್ನು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಕಳುಹಿಸಿದರೆ  ಆ ಸ್ಥಾನವನ್ನು ತುಂಬಬಲ್ಲ ಸಮರ್ಥ ನಾಯಕರು ಇಲ್ಲ. ಜತೆಗೆ ಎಪಿಜೆ ಅಬ್ದುಲ್ ಕಲಾಂ ಹಾಗೂ ಸೋಮನಾಥ ಚಟರ್ಜಿ ಅವರ ಹೆಸರುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ~ ಎಂದು ಕಾಂಗ್ರೆಸ್ ಮುಖ್ಯ ಕಾರ್ಯದರ್ಶಿ ಜನಾರ್ದನ ದ್ವಿವೇದಿ ತಿಳಿಸಿದ್ದಾರೆ.

~2014ರವರೆಗೂ ಡಾ. ಮನಮೋಹನ್ ಸಿಂಗ್ ಅವರೇ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಯುಪಿಎ-2 ಆರಂಭವಾದಾಗಲೇ ಹೇಳಿತ್ತು. ಹೀಗಾಗಿ ಮಧ್ಯದಲ್ಲಿ ಪ್ರಧಾನಿ ಅವರನ್ನು ಬದಲಿಸುವ ಇಚ್ಛೆಯನ್ನು ಕಾಂಗ್ರೆಸ್ ಹೊಂದಿಲ್ಲ~ ಎಂದು ಅವರು ತಿಳಿಸಿದರು.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಷ್ಟ್ರಪತಿ ಸ್ಥಾನಕ್ಕೆ ಪ್ರಣವ್ ಮುಖರ್ಜಿ ಅವರ ಹೆಸರನ್ನು ಅಂತಿಮಗೊಳಿಸುವ ಹಂತದಲ್ಲಿರುವಾಗ ತೃಣಮೂಲ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಸೂಚಿಸಿದ ಹೆಸರುಗಳಿಂದ ಎಚ್ಚೆತ್ತುಕೊಂಡ  ಸೋನಿಯಾ ಗಾಂಧಿ ಹಿರಿಯ ನಾಯಕರಾದ ಪ್ರಣವ್ ಮುಖರ್ಜಿ, ಎ.ಕೆ.ಆಂಟನಿ ಹಾಗೂ ಪಿ.ಚಿದಂಬರಂ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತನಾಡಿದರು.

ರಾಷ್ಟ್ರಪತಿ ಸ್ಥಾನಕ್ಕೆ ಪ್ರಣವ್ ಮುಖರ್ಜಿ ಹಾಗೂ ಉಪರಾಷ್ಟ್ರಪತಿಯಾಗಿ ಹಮೀದ್ ಅನ್ಸಾರಿ ಅವರ ಹೆಸರುಗಳನ್ನು ನಿರಾಕರಿಸಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ನಿಲುವಿಗೆ ಪ್ರತಿಕ್ರಿಯಿಸಿ ~ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಸೋನಿಯಾ ಗಾಂಧಿ ಈವರೆಗೂ ಯಾವುದೇ ಹೆಸರನ್ನು ಅಂತಿಮಗೊಳಿಸಿಲ್ಲ~ ಎಂದು ತಿಳಿಸಿದ್ದಾರೆ.

ಈ ನಡುವೆ ಸೋನಿಯಾ ಗಾಂಧಿ ಪಕ್ಷದ ಪ್ರತಿಯೊಬ್ಬ ಸದಸ್ಯನನ್ನೂ ಕರೆದು ಅಭಿಪ್ರಾಯ ಸ್ವೀಕರಿಸುತ್ತಿದ್ದಾರೆ. ಇದರಲ್ಲಿ ಎರಡು ಹೆಸರುಗಳು ಬಲವಾಗಿ ಕೇಳಿ ಬಂದಿವೆ. ~ಒಂದೊಮ್ಮೆ ಕಾಂಗ್ರೆಸ್ ನಿರ್ಧರಿಸುವುದಾದರೆ ಎರಡು ಹೆಸರುಗಳು ಅಂತಿಮಗೊಳ್ಳಲು ಸಾಧ್ಯವೇ ಇಲ್ಲ~ ಎಂದು ಜನಾರ್ಧನ ದ್ವಿವೇದಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.