ಬುಧವಾರ, ಜೂನ್ 16, 2021
21 °C

ಮನವೊಲಿಕೆ ಮಂತ್ರ; ಕೆರೆ ಉಳಿಸುವ ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರೆ ಅಂಗಳ, ಕೆರೆ ಏರಿ, ಪೂರಕ ಕಾಲುವೆ, ಅಚ್ಚುಕಟ್ಟು ಕಾಲುವೆ, ಕೋಡಿ ಹೀಗೆ ಇಡೀ ಕೆರೆಯನ್ನು ನುಂಗಿ, `ಇದೆಲ್ಲವೂ ನನ್ನದೇ~ ಎಂದು ಉಡಾಫೆಯಿಂದ ಹೇಳುವವರನ್ನು ನೋಡಿದ್ದೇವೆ. ಆದರೆ ಇದೆಲ್ಲಕ್ಕಿಂತ ಭಿನ್ನವಾಗಿ, ತಾವೇ ಮಾಡಿಕೊಂಡ ಕೆರೆಯ ಒತ್ತುವರಿಯನ್ನು ತಾವೇ ತೆರವು ಮಾಡುವ ಮೂಲಕ ಕೆರೆಯ ಬಗೆಗಿನ ಕಾಳಜಿಯನ್ನು ಮೆರೆದ ಅಪರೂಪದ ಉದಾಹರಣೆ ಶಿವಮೊಗ್ಗ ಜಿಲ್ಲೆಯಲ್ಲಿದೆ.ಉಂಬ್ಲೆಬೈಲು ಗ್ರಾಮದ ಗ್ಯಾಂಗ್ ಕೆರೆ, ದೇವಬಾಳು ಗ್ರಾಮದ ದೊಡ್ಡಕೆರೆ, ಕಣಗಲಸರ ಗ್ರಾಮದ ಕಾಡಮ್ಮಜ್ಜಿಕೆರೆ, ಮುದ್ದಿನಕೊಪ್ಪ ಗ್ರಾಮದ ಚಿಕ್ಕಕೆರೆ, ಗೆಜ್ಜೇನಹಳ್ಳಿ ಗ್ರಾಮದ ಹೊಸಕೆರೆ, ಬಿದರಳ್ಳಿ ಮಂಡ್ಲಿಯ ತಲಕಟ್ಟಿನಕೆರೆ ಸೇರಿದಂತೆ ಜಿಲ್ಲೆಯ ಮೂರು ತಾಲ್ಲೂಕುಗಳ 70 ಕೆರೆಗಳಲ್ಲಿ ಒಟ್ಟು 82.03 ಎಕರೆ (33.20ಹೆಕ್ಟೇರ್) ಒತ್ತುವರಿಯನ್ನು ರೈತರು ಸ್ವಯಂ ಪ್ರೇರಣೆಯಿಂದ ಬಿಟ್ಟುಕೊಟ್ಟಿದ್ದಾರೆ.ಅಷ್ಟೇ ಅಲ್ಲ; ಒತ್ತುವರಿಯನ್ನು ತೆರವು ಮಾಡಿದ ನಂತರ ಕೆರೆಯ ಗಡಿಯನ್ನು ಗುರುತಿಸಿ 1 ಮೀ. ಅಗಲ, 1 ಮೀ. ಆಳದ ಗಡಿ ಕಂದಕವನ್ನು ನಿರ್ಮಿಸಿದ್ದಾರೆ. ಅದರಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು, ಮುಂದಿನ ದಿನಗಳಲ್ಲಿ ಮತ್ತೆ ಕೆರೆ ಒತ್ತುವರಿಯಾಗದಂತೆ ಎಚ್ಚರ ವಹಿಸಿದ್ದಾರೆ. ವಿಸ್ತೀರ್ಣದ ದೃಷ್ಟಿಯಿಂದ ಇದು ಕಡಿಮೆ ಎನಿಸಬಹುದು. ಆದರೆ `ಕೆರೆಗಳು ನಮ್ಮ ಅಳಿವು ಉಳಿವನ್ನು ನಿರ್ಧರಿಸುತ್ತವೆ, ಅವಿಲ್ಲದಿದ್ದರೆ ಬದುಕಿಲ್ಲ~ ಎಂಬ ಪ್ರಜ್ಞೆ, ಸಾಮೂಹಿಕ ಜಾಗೃತಿಯ ದೃಷ್ಟಿಯಿಂದ ಇದು ದೊಡ್ಡ ಹೆಜ್ಜೆ.ಕೆರೆಗಳು ಜನರ ಜೀವನಾಡಿ. ನೀರಾವರಿ ಮಾತ್ರವಲ್ಲದೆ, ಪಶು ಸಂಗೋಪನೆ, ಅಂತರ್ಜಲ, ಕುಡಿಯುವ ನೀರು ಹೀಗೆ ಎಲ್ಲಾ ಮೂಲಭೂತ ಅವಶ್ಯಕತೆಗಳಿಗೂ ಕೆರೆಗಳೇ ಮೂಲ ಆಸರೆ. ರಾಜ್ಯದಲ್ಲಿ 36 ಸಾವಿರಕ್ಕಿಂತಲೂ ಹೆಚ್ಚು ಕೆರೆಗಳಿದ್ದು, 6.85 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯವನ್ನು ಹೊಂದಿವೆ.ಆದರೆ ಇಂಥ ಸಂಪದ್ಭರಿತ ಕೆರೆಗಳು ಒತ್ತುವರಿಯಿಂದಾಗಿ ತಮ್ಮ ಆಯುಷ್ಯವನ್ನು ಕಳೆದುಕೊಳ್ಳುತ್ತಿವೆ. ಇದರಿಂದ ಕೆರೆಗೆ ಫೀಡರ್ ಕಾಲುವೆಗಳಿಂದ ನೀರು ಸರಿಯಾಗಿ ಹರಿಯುತ್ತಿಲ್ಲ. ಕೆರೆ ಅಂಗಳದಲ್ಲಿ ಹೂಳು ತುಂಬಿದೆ. ತೂಬು, ಕೋಡಿ, ಏರಿ, ಅಚ್ಚುಕಟ್ಟು ಕಾಲುವೆಗಳು ಶಿಥಿಲಾವಸ್ಥೆಯಲ್ಲಿವೆ. ಕೆರೆಗಳ ರಕ್ಷಣೆಗೆ ಸರ್ಕಾರ ಸಾಕಷ್ಟು ಕಾನೂನುಗಳನ್ನು ರೂಪಿಸಿದರೂ ಒತ್ತುವರಿಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ.ಇದಕ್ಕೆಲ್ಲ ಉತ್ತರ ಕಂಡುಕೊಳ್ಳುವ ಪ್ರಯತ್ನದ ಫಲವಾಗಿಯೇ ಕರ್ನಾಟಕ ಜಲ ಸಂವರ್ಧನ ಯೋಜನಾ ಸಂಘ ಅಸ್ತಿತ್ವಕ್ಕೆ ಬಂದಿದೆ. ಇದರಡಿ ರಚನೆಗೊಂಡಿರುವ ಕೆರೆ ಬಳಕೆದಾರರ ಸಂಘಗಳು ತಮ್ಮೂರಿನಲ್ಲಾಗಿರುವ ಕೆರೆಯ ಒತ್ತುವರಿಯನ್ನು ತೆರವುಗೊಳಿಸುತ್ತಿವೆ.

 

ರೈತರೂ ಕೂಡ ಸ್ವಯಂ ಪ್ರೇರಣೆಯಿಂದ ಒತ್ತುವರಿಯನ್ನು ಬಿಟ್ಟುಕೊಟ್ಟು ಕೆರೆಯ ಅಭಿವೃದ್ಧಿಗೆ ಮುಂದಾಗುತ್ತಿದ್ದಾರೆ. ಕೆರೆ ಬಳಕೆದಾರರ ಸಂಘಗಳಲ್ಲಿ ಒತ್ತುವರಿ ಮಾಡಿಕೊಂಡಿರುವವರೂ ಸದಸ್ಯರಾಗಿರುವುದು ಕೆರೆಗಳ ಸಂರಕ್ಷಣೆ ದೃಷ್ಟಿಯಿಂದ ದೊಡ್ಡ ಅನುಕೂಲ. ಏಕೆಂದರೆ ಇವರ‌್ಯಾರೂ ತಕರಾರು ಮಾಡದೇ ಒತ್ತುವರಿಯನ್ನು ಬಿಟ್ಟುಕೊಡುತ್ತಿದ್ದಾರೆ. ಕೆರೆಯ ಮಹತ್ವವನ್ನು ಅರ್ಥ ಮಾಡಿಕೊಂಡಿದ್ದಾರೆ.ಮಹಿಳೆಯರೇ ಮುಂದು

ಶಿವಮೊಗ್ಗದಿಂದ 29 ಕಿ.ಮೀ. ದೂರದಲ್ಲಿರುವ ಉಂಬ್ಲೆಬೈಲು ಗ್ರಾಮದ ಗ್ಯಾಂಗ್ ಕೆರೆ ವಿಸ್ತೀರ್ಣ 6.25 ಎಕರೆ. ಇದು 43.74 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಎರಡು ಎಕರೆಯಷ್ಟು ಪ್ರದೇಶವನ್ನು ಮೂವರು ಒತ್ತುವರಿ ಮಾಡಿದ್ದರು.ಗ್ರಾಮದ ಪುರುಷರು ಕೆರೆಯ ಅಭಿವೃದ್ಧಿಯತ್ತ ತಲೆ ಕೆಡಿಸಿಕೊಂಡಿರಲಿಲ್ಲ. ಇದರಿಂದ ನೊಂದ ಗ್ರಾಮದ ಮಹಿಳೆಯರೆಲ್ಲಾ ಒಂದಾಗಿ ಒತ್ತುವರಿದಾರರನ್ನು ಮನವೊಲಿಸಿ ತೆರವು ಮಾಡಿಸಿದರು.

 

ಕೆರೆ ಸಂಘದ ಅಧ್ಯಕ್ಷೆ ಶಾಂತಾ ಅವರು ಹೇಳುವ ಪ್ರಕಾರ, `ನಮ್ಮೂರಿನ ಗ್ಯಾಂಗ್ ಕೆರೆಯ ಸುಧಾರಣಾ ಕಾಮಗಾರಿ ಆರಂಭಕ್ಕಿಂತ ಮೊದಲು ನಾವು ಮಾಡಿದ ಮೊದಲ ಕೆಲಸವೆಂದರೆ ಒತ್ತುವರಿಯನ್ನು ತೆರವುಗೊಳಿಸಿ ಕೆರೆಯ ಆಸ್ತಿಯನ್ನು ಭದ್ರಗೊಳಿಸಿದ್ದು. ಇದೆಲ್ಲ ಮುಗಿದ ನಂತರವೇ ಕೆರೆ ಕೆಲಸವನ್ನು ಆರಂಭಿಸಲಾಯಿತು~.ಶಿವಮೊಗ್ಗ ತಾಲ್ಲೂಕಿನ ಅಬ್ಬಲಗೆರೆ ಗ್ರಾಮದ ಮುದಿಗೌಡನ ಕೆರೆಯ 4 ಎಕರೆ ಪ್ರದೇಶ ಒತ್ತುವರಿಯಾಗಿತ್ತು. ಗ್ರಾಮಸ್ಥರೆಲ್ಲಾ ಸೇರಿ ಒತ್ತುವರಿ ಬಿಡಿಸಿ ಕೆರೆ ವ್ಯಾಪ್ತಿಗೆ ಸೇರಿಸಿಕೊಂಡರು.ಆದರೆ ಒತ್ತುವರಿ ಪ್ರದೇಶದಲ್ಲಿ ನೀರು ನಿಲ್ಲುತ್ತಿರಲಿಲ್ಲ. ಆದ್ದರಿಂದ ಆ ಪ್ರದೇಶ ಉಪಯೋಗಕ್ಕೆ ಬಾರದಾಗಿತ್ತು. ಇದನ್ನು ಕಂಡ ಗ್ರಾಮಸ್ಥರು, ಗ್ರಾಮದಲ್ಲಿನ ಬಡವರನ್ನು ಗುರುತಿಸಿ ಬೆಳೆ ಬೆಳೆದುಕೊಳ್ಳಲು ಅವಕಾಶ ಕೊಟ್ಟಿದ್ದಾರೆ. ಬಂದ ಆದಾಯದಲ್ಲಿ ಕೆರೆ ಸಂಘಕ್ಕೆ ಅರ್ಧ ಭಾಗ ಎಂದು ಒಪ್ಪಂದ ಮಾಡಿಕೊಂಡಿದ್ದಾರೆ.

 

ನಿರುಪಯುಕ್ತ ಜಾಗವನ್ನು ಹಾಗೆ ಹಾಳು ಬಿಡುವ ಬದಲು ಉಪಯೋಗಿಸಿಕೊಂಡರೆ, ಮುಂದಿನ ದಿನಗಳಲ್ಲಿ ಕೆರೆ ಸಂಘಕ್ಕೆ ಆದಾಯ ಬಂದು ಕೆರೆ ನಿರ್ವಹಣೆಗೆ ಸಹಾಯವಾಗುತ್ತದೆ; ಜೊತೆಗೆ ಬಡ ಕುಟುಂಬಕ್ಕೂ  ನೆರವಾಗುತ್ತದೆ ಎನ್ನುತ್ತಾರೆ ಸಂಘದ ಅಧ್ಯಕ್ಷರಾದ ಮೋಹನ್ ಗೌಡ್ರು.ಕೆರೆ ಒತ್ತುವರಿ, ಕೆರೆಯ ಸಮಸ್ಯೆಗಳನ್ನು ಚರ್ಚಿಸುವ ಸಲುವಾಗಿಯೇ ಗ್ರಾಮದಲ್ಲಿ ಕೆರೆ ಬಳಕೆದಾರರ ಸಂಘದ ಕಚೇರಿಯನ್ನು ಸ್ಥಾಪಿಸಲಾಗಿದೆ. ಇಲ್ಲಿ ಕೆರೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು, ಕಡತಗಳನ್ನು (ರೆವಿನ್ಯೂ ಸರ್ವೇ ಕಡತ, ಟೋಪೋ ಸರ್ವೇ, ಕೆರೆ ಕಾಮಗಾರಿಯ ವಿವರದ ಪುಸ್ತಕ, ಕೆರೆ ಛಾಯಾಚಿತ್ರಗಳು ಇತ್ಯಾದಿ) ದಾಖಲು ಮಾಡಲಾಗುತ್ತದೆ.ಶಿವಮೊಗ್ಗದ ಯಡವಾಲ ಗ್ರಾಮದಲ್ಲಿ ಕೆರೆ ಕಾಮಗಾರಿ ನಡೆದ ದಿನವೇ ಸಂಜೆ ಗ್ರಾಮ ಸಭೆ ಕರೆದು ಅಂದು ನಡೆದ ಕಾಮಗಾರಿಯ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಚರ್ಚಿಸುತ್ತಾರೆ. ನಂತರವೇ ಕಾಮಗಾರಿಯ ಹಣ ಪಾವತಿಯಾಗುವುದು. ಕೆರೆ ಅಭಿವೃದ್ಧಿಗಾಗಿ ಅನೇಕ ಗ್ರಾಮಗಳಲ್ಲಿ ಸಂಘದ ಕಚೇರಿಗಳು ಸ್ಥಾಪನೆಯಾಗುತ್ತಿವೆ.ಸರ್ಕಾರ ಸಾಕಷ್ಟು ಕಾನೂನುಗಳನ್ನು ರೂಪಿಸಿದರೂ ಒತ್ತುವರಿಯನ್ನು ತಡೆಯಲು ಆಗುತ್ತಿಲ್ಲ. ಆದರೆ ಗ್ರಾಮೀಣ ಜನರು ಒಗ್ಗಟಾಗಿದ್ದರಿಂದ ಕೆರೆ ಒತ್ತುವರಿಯನ್ನು ಬಿಡಿಸಲು ಸಾಧ್ಯವಾಗುತ್ತಿದೆ.

 

ದೇಶದ ಅಭಿವೃದ್ಧಿ ಗ್ರಾಮಗಳಿಂದಲೇ ಆಗಬೇಕು ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. `ನಿಮ್ಮೂರಿನ ಕೆರೆಯು ಒತ್ತುವರಿಯಾಗಿದ್ದರೆ ಸುಮ್ಮನಿರಬೇಡಿ; ಇಂದೇ ಎಲ್ಲರೂ ಒಗ್ಗಟ್ಟಾಗಿ ಕೆರೆಯ ಒತ್ತುವರಿ ತೆರವು ಮಾಡಿಸಲು ಮುಂದಾಗಿ. ಆಗ ನೀವೂ ಬದುಕುತ್ತೀರಿ, ಕೆರೆಯೂ ಬದುಕುತ್ತದೆ. ಕೆರೆಗೆ ಕಂಟಕ ಬಂದರೆ ಬದುಕು ಸಂಕಟಕ್ಕೆ ಸಿಲುಕುತ್ತದೆ~ ಎಂದು ಸಂಘಗಳ ಸದಸ್ಯರು ಮನವರಿಕೆ ಮಾಡಿಕೊಂಡಿದ್ದಾರೆ, ತಮ್ಮ ಪರಿಚಯದ ರೈತರಿಗೂ ಹೇಳುತ್ತಿದ್ದಾರೆ.ಗ್ರಾಮಿಣ ಪ್ರದೇಶದ ಜನರ ಬಡತನ ಹೋಗಲಾಡಿಸಿ ಜೀವನ ಶೈಲಿಯನ್ನು ಉತ್ತಮ ಪಡಿಸಲು ಸಮುದಾಯದ ಮೂಲಕವೇ ಕೆರೆಗಳನ್ನು ಪುನಃಶ್ಚೇತನಗೊಳಿಸಲು ವಿಶ್ವಬ್ಯಾಂಕಿನ ಆರ್ಥಿಕ ನೆರವಿನೊಂದಿಗೆ ಜಲಸಂವರ್ಧನೆ ಯೋಜನಾ ಸಂಘ ಕಾರ್ಯಾರಂಭ ಮಾಡಿದೆ. 17 ಜಿಲ್ಲೆಗಳಲ್ಲಿ ಕೆರೆ ಅಭಿವೃದ್ಧಿ ಸಂಘಗಳ ಮೂಲಕ ಯೋಜನೆ ಕೈಗೆತ್ತಿಕೊಂಡಿದೆ. ಇದರ ಪರಿಣಾಮವಾಗಿ ದೂರದ ಊರುಗಳಿಗೆ ವಲಸೆ ಹೋಗಿದ್ದ ಮೀನುಗಾರರು, ಕುಂಬಾರರು, ಬುಟ್ಟಿ ಮಾಡುವವರು, ರೈತರು ಗ್ರಾಮಕ್ಕೆ ಮರಳಿ ತಮ್ಮ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆರೆಗಳನ್ನು ನಿರ್ಲಕ್ಷಿಸದೆ ಜತನದಿಂದ ಕಾಪಾಡಿಕೊಳ್ಳುವ ಪಾಠ ಕಲಿತಿದ್ದಾರೆ.

 
ಎಷ್ಟೊಂದು ಬದಲಾವಣೆ!

ಇಡೀ ಊರಿಗೇ ನೀರು ಉಣಿಸುತ್ತಿದ್ದ ಆ ಕೆರೆ ಡಿಸೆಂಬರ್ ಹೊತ್ತಿಗೆ ಬತ್ತಿ ಹೋಗುತ್ತಿತ್ತು. ದನಕರು-ಪ್ರಾಣಿ ಪಕ್ಷಿಗಳಿಗೂ ಒಂದು ತೊಟ್ಟು ನೀರು ಸಿಗುತ್ತಿರಲಿಲ್ಲ.

 

ಆಗ ಆ ಗ್ರಾಮದ ಜನರಿಗೆ ವರವಾಗಿ ಬಂದಿದ್ದು ಜಲಾನಯನ ಯೋಜನೆ. ಕಳೆದ ಮೂರು ಬೇಸಿಗೆ ಕಳೆಯಿತು. ನೀರಿಗೆ ಬರವಿಲ್ಲ. ಊರಿನ ಉಪಯೋಗಕ್ಕಷ್ಟೇ ಅಲ್ಲ ಹೊಲ-ಗದ್ದೆ, ಪ್ರಾಣಿ-ಪಕ್ಷಿಗಳಿಗೂ ಈಗ ಯಥೇಚ್ಛ ನೀರು.   ಶಿವಮೊಗ್ಗ ತಾಲ್ಲೂಕಿನ ಹಾರ‌್ನಹಳ್ಳಿ ಹೋಬಳಿ ಯಡವಾಲ ಗ್ರಾಮದ ಹಾರುವಿನ ಕೆರೆಯಲ್ಲಿ ಈಗ ನೀರಿನ ಸಮಸ್ಯೆ ಇಲ್ಲ. ಶ್ರೀಮರಡಿ ಸಿದ್ದೇಶ್ವರ ಕೆರೆ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಅಭಿವೃದ್ಧಿ ಕಂಡ ಈ ಕೆರೆಯಲ್ಲಿ ಈಗ ಸಮೃದ್ಧ ಜೀವಜಲ.

 18.5 ಹೆಕ್ಟೇರ್ ವಿಸ್ತೀರ್ಣದ ಈ ಕೆರೆ 150 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಇದರಲ್ಲಿ ಬಹಳ ಹಿಂದೆಯೇ 3 ಎಕರೆ ಒತ್ತುವರಿಯಾಗಿತ್ತು.ತಲತಲಾಂತರದಿಂದ ಕೆರೆ ಅಂಗಳದಲ್ಲಿ ಉಳುಮೆ ಮಾಡಿಕೊಂಡು ಆ ಜಾಗದ ಜತೆ ಅವಿನಾಭಾವ ಸಂಬಂಧ ಹೊಂದಿದ್ದ ಜನರಿಗೆ ಒಮ್ಮೆಲೇ ಕೆರೆ ಜಾಗ ಖಾಲಿ ಮಾಡಿ ಎಂದಾಗ ಸಣ್ಣ-ಪುಟ್ಟ ಗೊಂದಲಗಳಾದವು. ಆದರೆ, ಒತ್ತುವರಿದಾರರ ಪಟ್ಟುಗಳು ಗ್ರಾಮಸ್ಥರ ಮನವೊಲಿಕೆ ಎದುರು ನಿಲ್ಲಲಿಲ್ಲ. ಮುಂದೆ ನಿಮಗೇ ಅನುಕೂಲ ಎಂದಾಗ ಅವರಿಂದ ವಿರೋಧ ಬರಲೇ ಇಲ್ಲ ಎನ್ನುತ್ತಾರೆ ಶ್ರೀಮರಡಿ ಸಿದ್ದೇಶ್ವರ ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಎಂ. ಹಾಲೇಶಪ್ಪ.`ಹಿಂದೆಲ್ಲ ಕೆರೆಯ ಒತ್ತುವರಿಯ ಬಗ್ಗೆ ನಾವು ಯಾವತ್ತೂ ಚರ್ಚಿಸಿರಲಿಲ್ಲ, ತೆರವಿಗೆ ಪ್ರಯತ್ನವನ್ನೂ ಮಾಡಿರಲ್ಲ್ಲಿಲ.ಅಧಿಕಾರಿಗಳು, ಎಂಜಿನಿಯರ್‌ಗಳು ಬಂದು ಕೆರೆ ಕಾಮಗಾರಿ ನಡೆಸಿ ಹೋಗುತ್ತಿದ್ದರು. ನಾವೂ ನೋಡಿ ಸುಮ್ಮನಾಗುತ್ತಿದ್ದೆವು. ಕೆರೆ ಸಂಘ ರಚನೆಗೊಂಡ ನಂತರ ನಮಗೆ ಸಾಕಷ್ಟು ತಿಳಿವಳಿಕೆ ಬಂತು, ಕೆರೆಯ ಲಾಭ ಏನು ಎಂಬುದು ಅರಿವಾಯಿತು~ ಎನ್ನುತ್ತಾರೆ ಅವರು. ಅವರ ಮೊಬೈಲ್ ಸಂಖ್ಯೆ 94834 93189. 

- ಪ್ರಕಾಶ್ ಕುಗ್ವೆ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.