ಸೋಮವಾರ, ಮಾರ್ಚ್ 8, 2021
24 °C

ಮನಸೆಳೆದ ಕೃಷ್ಣ ಸಂಧಾನ ಪ್ರಸಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನಸೆಳೆದ ಕೃಷ್ಣ ಸಂಧಾನ ಪ್ರಸಂಗ

ಇಡಗುಂಜಿಯ ಮಹಾಗಣಪತಿ ಯಕ್ಷಗಾನ ಮಂಡಳಿ ಈಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಿಕೊಟ್ಟ `ಕೃಷ್ಣ ಸಂಧಾನ~ ಯಕ್ಷಗಾನ ಮೇಳದ ಹಿಂದಿನ ಪರಂಪರೆಯನ್ನು ನೆನಪಿಸುವಂಥ ಸುಂದರ ಕಾರ್ಯಕ್ರಮವಾಗಿತ್ತು.ಹೊಸ ಶೈಲಿಯ ಕುಣಿತ, ಮಾತುಗಳನ್ನು ನೋಡಿ ಕೇಳಿ ಬೇಸರಗೊಂಡವರಿಗೆ ಈ ಕಾರ್ಯಕ್ರಮ ಖುಷಿ ಕೊಟ್ಟಿತು. ಕೆರೆಮನೆ ಯಕ್ಷಗಾನ ಮಂಡಳಿ (ಮೇಳ) ಅಂದರೆ ಅದು ಯಕ್ಷಗಾನ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವಂಥದ್ದು. ಈ ಕಾರ್ಯಕ್ರಮ ಕೂಡ ಅದಕ್ಕೆ ಹೊರತಾಗಿರಲಿಲ್ಲ. ಆಖ್ಯಾನದಲ್ಲಿ ಎಲ್ಲರೂ ತಂತಮ್ಮ ಪಾತ್ರವನ್ನು ಸುಂದರವಾಗಿ ನಿರ್ವಹಿಸಿದರು.`ಪೂರ್ಣ ಪ್ರಸಂಗದಲ್ಲಿ ಕೃಷ್ಣನೇ ಪ್ರಧಾನ ಪಾತ್ರ. ಹಿಂದಿನಿಂದಲೂ ತಮ್ಮ ಮೇಳದ ಅನೇಕ ಪ್ರಧಾನ ಆಖ್ಯಾನದಲ್ಲಿ ಕೃಷ್ಣಸಂಧಾನ ವಿಶಿಷ್ಟವಾದದ್ದು. ದರ್ಶಕರೆಲ್ಲರೂ ಪರಂಪರಾಗತ ಕೃಷ್ಣನ (ಮೇರು ನಟರಾದ ಶಂಭು ಹೆಗಡೆ) ಕಲ್ಪನೆ ಮಾಡಿಕೊಳ್ಳುತ್ತ ಅದೇ ನಿರೀಕ್ಷೆಯಲ್ಲಿ ಆಟಕ್ಕೆ ಬರುತ್ತಾರೆ.ಆದರೆ ಅವರ ನಿರೀಕ್ಷೆಯನ್ನು ಪರಿಪೂರ್ಣವಾಗಿ ತುಂಬಲು ನಮ್ಮಿಂದ ಆಗಲಾರದು. ಇದು ಒಂದರ್ಥದಲ್ಲಿ ಸತ್ಯವೇ ಆದರೂ ಅಂದಿನ ಕೃಷ್ಣನನ್ನು ನೋಡಿದಾಗ ಶಂಭು ಹೆಗಡೆಯವರ ಕೆಲವು ಅಂಶ ನೆನಪಿಸುವಂತಿತ್ತು~ ಎನ್ನುತ್ತಾರೆ ಮೇಳದ ಶಿವಾನಂದ ಹೆಗಡೆ. `ಇದು ಅವರ ಮೂರನೇ ಪ್ರಯೋಗ. ಕೃಷ್ಣ ಅನೇಕ ವಿಧದಿಂದ ಅವಿಸ್ಮರಣೀಯ. ಯಾಕೆಂದರೆ, ನೃತ್ಯದಲ್ಲಿ ಲಾಲಿತ್ಯ, ಮುಖದಲ್ಲಿನ ರಸಾಭಿಜ್ಞತೆ ಮಂದಹಾಸ, ಪರಿಪಕ್ವವಾದ ಲಯ, ಬೇಕಾದಷ್ಟೇ ಮಾತು ಇದೆಲ್ಲ ಅನುಕರಣೀಯ ಗುಣಗಳಿದ್ದವು. ಪಾತ್ರನಿರ್ವಹಣೆ ಚೆನ್ನಾಗಿಯೇ ಇತ್ತು. ಎರಡು ಪದ್ಯಗಳಿಗೆ ಇನ್ನೂ ಸ್ವಲ್ಪ ಕಸರತ್ತು (ಯಕ್ಷಗಾನ ಭಾಷೆಯಲ್ಲಿ) ಇರಬಹುದಿತ್ತೇನೊ~ ಎನ್ನುತ್ತಾರೆ ಅವರು.

 

ಅರ್ಥಗಾರಿಕೆಯು ಸಮಯಮಿತಿ ಪ್ರಯೋಗಕ್ಕೆ ಅನುರೂಪವಾಗಿದ್ದುದು ಮತ್ತೊಂದು ವಿಶೇಷ. ಎಲ್ಲ ಪಾತ್ರಗಳು ಎಲ್ಲಿಯೂ ಔಚಿತ್ಯ ಮೀರಲಿಲ್ಲ. ಇದೊಂದು ಪರಂಪರೆಯ ಪ್ರಕಾಶವುಳ್ಳ ಸುಂದರ ಯಕ್ಷಗಾನ ಪ್ರಸಂಗ. ಅಂದು ತುಂಬಿದ ಕಲಾಕ್ಷೇತ್ರದ ಸಭಾಂಗಣವೇ ಇದಕ್ಕೆ ಸಾಕ್ಷಿ .ಸಪ್ತಕ ಹಾಗೂ ಬಾಲಚಂದ್ರ ನಾಯಕನಕಟ್ಟೆ ಸಂಸ್ಥೆಗಳ ಸಂಚಾಲಕದ್ವಯರಾದ ಜಿ.ಎಸ್.ಹೆಗಡೆ ಹಾಗೂ ಉದಯ ಉಲ್ಲಾಳ ಈ ಕಾರ್ಯಕ್ರಮ ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಯೋಗಕ್ಷೇಮ ಅಭಿಯಾನದ ಸಂಚಾಲಕ ವಿ.ಆರ್.ಹೆಗಡೆ ಹೆಗಡೆಮನೆ ಅವರನ್ನು ಸನ್ಮಾನಿಸಲಾಯಿತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.