ಶನಿವಾರ, ಫೆಬ್ರವರಿ 27, 2021
31 °C

ಮನಸ್ಸಿಗೆ ಕನ್ನಡಿ ಹಿಡಿವ ‘ಫೇಸೆಟ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನಸ್ಸಿಗೆ ಕನ್ನಡಿ ಹಿಡಿವ ‘ಫೇಸೆಟ್’

ಸುಖ, ದುಃಖ, ಸಿಟ್ಟು, ಹತಾಶೆ ಹೀಗೆ ಯಾವುದೇ ಭಾವನೆಗಳಿದ್ದರೂ ಅದು ಮೊದಲು ವ್ಯಕ್ತವಾಗುವುದು ಮುಖದಲ್ಲಿ. ಹಾಗಾಗಿಯೇ ಮುಖವನ್ನು ಮನಸ್ಸಿನ ಕನ್ನಡಿ ಎನ್ನುವುದು.ಇಂತಹ ಭಾವನೆಗಳ ಅಭಿವ್ಯಕ್ತಿಯನ್ನು ಸಹಜ, ಕೃತಕ, ಸುಪ್ತ ಎಂದು ಪ್ರತ್ಯೇಕಿಸಿ ಗುರುತಿಸುವುದಾದರೆ, ಒಬ್ಬರ ನಗು ಸಹಜವಾದುದೇ ಅಥವಾ ಕೃತಕವೇ ಎಂದು ನಿಖರವಾಗಿ ಗುರುತಿಸುವುದು ಕಷ್ಟ. ಏಕೆಂದರೆ ಕೆಲವೊಮ್ಮೆ ನಾವು ತೋರಿಕೆಗಷ್ಟೇ ನಗುತ್ತಿರುತ್ತೇವೆ. ಹೀಗಿರುವಾಗ ಸುಪ್ತ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದಂತೂ ಬಹಳ ಕಷ್ಟ.ಆದರೆ ಇದೀಗ ಈ ತಂತ್ರಜ್ಞಾನ ಕ್ಷೇತ್ರ ಮನುಷ್ಯನ ಮನಸ್ಸಿಗೂ ಲಗ್ಗೆ ಇಟ್ಟಿದ್ದು,  ಮುಖದ ಭಾವೆನಗಳನ್ನು(ಫೇಸ್ ರೀಡಿಂಗ್) ಗ್ರಹಿಸಿ, ವ್ಯಕ್ತಿಯ ನಗು ಕೃತಕವೇ ಅಥವಾ ಸಹಜವಾದದ್ದೇ ಎಂದು ತಿಳಿಸಬಲ್ಲ ತಂತ್ರಾಂಶವೊಂದು ತಯಾರಾಗಿದೆ.ಕ್ಯಾಲಿಫೋರ್ನಿಯಾ ಮೂಲದ ಎಮೊಟೆಂಟ್ ಕಂಪೆನಿ ‘ಫೇಸೆಟ್’ (Facet) ಎಂಬ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಮನುಷ್ಯನ ಎಲ್ಲಾ ಭಾವನೆಗಳನ್ನು ಮುಖದ ಹಾವ–ಭಾವದ ಬದಲಾವಣೆಯಿಂದ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಈ ತಂತ್ರಾಂಶಕ್ಕೆ ಇದೆ ಎನ್ನುವುದು ತಂತ್ರಜ್ಞರ ಅಭಿಮತ.‘ಯಾರದ್ದೋ ಒತ್ತಡಕ್ಕೆ ಅಥವಾ ಅನಿವಾರ್ಯಕ್ಕೆಂದು ಇಷ್ಟವಿಲ್ಲದ ಕೆಲಸ ಮಾಡುವುದು, ಮಾತನಾಡುವುದು ಮಾಡುತ್ತೇವೆ. ಆಗ ನಮ್ಮ ಯೋಚನೆ, ಮಾತು ಮತ್ತು ನಡವಳಿಕೆ ಯಾವುದಕ್ಕೂ ಸಂಬಂಧ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ವ್ಯಕ್ತಿಯ ಯೋಚನೆ, ನಡವಳಿಕೆ ಅರಿಯಲು ಈ ತಂತ್ರಾಂಶ ಹೆಚ್ಚು ಉಪಯುಕ್ತವಾಗಿದೆ ಎನ್ನುತ್ತಾರೆ’ ಕಂಪೆನಿಯ ಸಹ ಸಂಸ್ಥಾಪಕ ಮರಿಯನ್ ಬಾರ್ಟ್ಲೆಟ್.ಒಂದು ಸಾಮಾನ್ಯ ಡಿಜಿಟಲ್ ಕ್ಯಾಮೆರಾ ಸಹಾಯದಿಂದ ಈ ತಂತ್ರಾಂಶ ಕೆಲಸ ಮಾಡಬಲ್ಲದು. ವ್ಯಕ್ತಿಯ ಭಾವಚಿತ್ರ ಅಥವಾ ವೀಡಿಯೊ ಚಿತ್ರ ತೆಗೆಯುವ ಮೂಲಕ ಮುಖದ ಭಾವನೆಗಳನ್ನು ಅರಿಯುವಂತೆ ತಂತ್ರಾಂಶವನ್ನು ಪ್ರೋಗ್ರಾಂ ಮಾಡಲಾಗಿದೆ.ಮನುಷ್ಯನ ಮುಖದ ಭಾವನೆಗಳಲ್ಲಿನ ವ್ಯತ್ಯಾಸ ಮತ್ತು ಸಾಮರ್ಥ್ಯ ಅಷ್ಟೇ ಅಲ್ಲದೆ ಅತ್ಯಂತ ಸೂಕ್ಷ್ಮ ಭಾವನೆಗಳನ್ನೂ ಗ್ರಹಿಸಬಲ್ಲದು.  ಇದರಿಂದ ವ್ಯಕ್ತಿಯೊಬ್ಬ ನಿರ್ಲಿಪ್ತನಂತೆ ನಟಿಸುವುದು, ಭಾವನೆಗಳನ್ನು ತೋರ್ಪಡಿಸದೇ ಇರುವುದನ್ನು ಈ ತಂತ್ರಾಂಶದಿಂದ ಸುಲಭವಾಗಿ ಕಂಡುಹಿಡಿಯಬಹುದು ಎನ್ನುತ್ತಾರೆ ಅವರು.ವ್ಯಕ್ತಿಯ ಮುಖದ ಸ್ನಾಯುಗಳ ಉದ್ದೇಶಿತ ಮತ್ತು ಉದ್ದೇಶ ರಹಿತ ಚಲನೆ ಹೊಂದಿರುತ್ತವೆ. ಉದ್ದೇಶಿತ ಚಲನೆ ಎಂದರೆ ತನ್ನ ಮುಖದಲ್ಲಿ ಆಗುತ್ತಿರುವ ಬದಲಾವಣೆ ವ್ಯಕ್ತಿಗೆ ಅರಿವಾಗುತ್ತಿರುತ್ತದೆ. ಉದ್ದೇಶ ರಹಿತ ಚಲನೆ ಎಂದರೆ ಆತನ ಅರಿವಿಗೆ ಬಾರದಂತೆ ಕೆಲವೊಮ್ಮೆ ಮುಖದ ಸ್ನಾಯುಗಳಲ್ಲಿ ಬದಲಾವಣೆ ಆಗುವುದು. ಇಂತಹ ಚಲನೆಯು ಉದ್ದೇಶಿತ ಚಲನೆಗಿಂತಲೂ ಹೆಚ್ಚು ವೇಗವಾಗಿದ್ದು, ಅದನ್ನೂ ಸಹ ಈ ತಂತ್ರಾಂಶ ಗುರುತಿಸಬಲ್ಲದು.ಜತೆಗೆ ನಮಗೆ ಅರ್ಥವಾಗದ ಒಬ್ಬರ ಸೂಕ್ಷ್ಮವಾದ ಮುಖದ ಭಾವನೆಗಳನ್ನು ಈ ತಂತ್ರಾಂಶ ಗ್ರಹಿಸುತ್ತದೆ. ಒಬ್ಬ ವ್ಯಕ್ತಿಯ ನಗು ಸಹಜವಾಗಿದ್ದರೆ ಆತನ ಕಣ್ಣುಗಳ ಕೆಳಗೆ ಸುಕ್ಕು (ನೆರಿಗೆ) ಮೂಡುತ್ತವೆ. ಸಾಮಾನ್ಯವಾಗಿ ಈ ಅಂಶ ನಮ್ಮ ಗಮನಕ್ಕೆ ಬರುವುದಿಲ್ಲ ಅಥವಾ ಅದನ್ನು ನಾವು ಗಮನಿಸಲೂ ಹೋಗುವುದಿಲ್ಲ. ಆದರೆ ಈ ತಂತ್ರಾಂಶ ಅದನ್ನು ನಿಖರವಾಗಿ ಗ್ರಹಿಸುತ್ತದೆ.ಇದಕ್ಕೆ  ವ್ಯಕ್ತಿಯ ಚಿತ್ರದ ಗುಣಮಟ್ಟ 40 ಪಿಕ್ಸಲ್ ಇರಲೇಬೇಕು ಎನ್ನುತ್ತಾರೆ ತಂತ್ರಜ್ಞರು.ವೈದ್ಯಕೀಯ ಪ್ರಯೋಜನ

ಮಾನಸಿಕ ಕಾಯಿಲೆಗಳಿಂದ  ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ಈ ತಂತ್ರಾಂಶ ಹೆಚ್ಚು ಸಹಾಯ ಮಾಡುತ್ತದೆ ಎನ್ನುವುದು ಬೆರ್ಟ್ಲೆಟ್ ಅವರ ಅನುಭವದ ನುಡಿ.

ಮಾನಸಿಕ ಖಾಯಿಲೆಗೆ ತುತ್ತಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಈ ತಂತ್ರಾಂಶ ಅಳವಡಿಸಿದ ಒಂದು ವಿಡಿಯೊ ಗೇಮನ್ನು ತಂತ್ರಜ್ಞರು. ಸಿದ್ಧಪಡಿಸಿದರು. ಆಟದಲ್ಲಿ ವ್ಯಂಗ್ಯಚಿತ್ರ ಪಾತ್ರದ ಮುಖಭಾವಗಳನ್ನು ಅಣಕ ಮಾಡುವಂತೆ ರೋಗಿಗಳಿಗೆ ಸೂಚಿಸಲಾಯಿತು. ರೋಗಿಗಳು ಆಟವನ್ನು ಚೆನ್ನಾಗಿ ಆಡುವುದಲ್ಲದೆ ಉತ್ತಮ ಅಂಕಗಳನ್ನು ಗಳಿಸಿದರು. ಇದರಿಂದ ತಮ್ಮ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದು ಅವರಿಗೆ ಮನವರಿಕೆ ಆಯಿತು ಎನ್ನುತ್ತಾರೆ ಅವರು.ಮಾನಸಿಕ ಖಿನ್ನತೆ ಪತ್ತೆ ಹಚ್ಚುವುದು ಮತ್ತು ಚಿಕಿತ್ಸೆ ನೀಡುವುದು ಕಷ್ಟ. ಇದಕ್ಕೆ ‘ಫೇಸೆಟ್’ ತಂತ್ರಾಂಶದಿಂದ ಖಿನ್ನತೆ ನಿಖರವಾದ ಕಾರಣ ತಿಳಿಯುವುದಲ್ಲದೆ ರೋಗಿಯು ಚಿಕಿತ್ಸೆಗೆ ಯಾವ ರೀತಿ ಸ್ಪಂದಿಸುತ್ತಿದ್ದಾನೆ ಎಂಬುದೂ ಗಮನಿಸಬಹುದು ಎಂದು ಬೆರ್ಟ್ಲೆಟ್ ತಿಳಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.