ಮನೆ ಅಂಗಳದಲ್ಲಿ ಹಸಿರು ರಂಗವಲ್ಲಿ

7

ಮನೆ ಅಂಗಳದಲ್ಲಿ ಹಸಿರು ರಂಗವಲ್ಲಿ

Published:
Updated:

‘ನೋಡಿ, ಇವೆಲ್ಲಾ ನನ್ ಸಂಗೀತಾ ಕೇಳ್ತಾನೆ ಬೆಳೆದಿವೆ’ ಅಂತ ಕಣಗಿಲೆ, ಮಲೆನಾಡ ಸಂಪಿಗೆ, ನಂಜಬಟ್ಟಲು ಬಳ್ಳಿ ಮರಗಳತ್ತ ಕೈ ತೋರುತ್ತಾ, ತಮ್ಮ ಸಸ್ಯ ಪ್ರೀತಿಯನ್ನು ಹೊರ ಹಾಕಿದರು ಬಸವನಗುಡಿಯ ಎಪ್ಪತ್ತರ ಪ್ರಾಯದ ವಸುಮತಿ ರಘುನಾಥ್.ವಸುಮತಿಯವರಿಗೆ ಸಂಗೀತ ಉಸಿರಾದರೆ, ಕೈತೋಟ ಮಾಡುವುದು ಒಂದು ‘ಫ್ಯಾಷನ್’. ಸಂಗೀತದ ಜೊತೆ ಜೊತೆಗೇ 1400 ಅಡಿ ವಿಸ್ತೀರ್ಣದ ಅಂದದ ಮನೆಯ ಅಂಗಳದಲ್ಲಿ ಚಂದದ ಕೈತೋಟ ನಿರ್ಮಿಸಿದ್ದಾರೆ.ಹಳೆ ಬೆಂಗಳೂರಿನ ನೆನಪು: ಬಸವನಗುಡಿ ಪೊಲೀಸ್ ಸ್ಟೇಷನ್ ರಸ್ತೆಯಲ್ಲಿರುವ ವಸುಮತಿ ಅವರ ಮನೆಯ ಗೇಟ್ ತೆರೆಯುತ್ತಿದ್ದಂತೆಯೇ ತಂಪು ವಾತಾವರಣದೊಂದಿಗೆ ಹಳೆಯ ಬೆಂಗಳೂರು ನೆನಪಾಗುತ್ತದೆ. ನಂತರ ಗಿಡ-ಮರ-ಬಳ್ಳಿ - ಹೂವಿನ ಹಸಿರು ಚಾಮರದೊಂದಿಗೆ ಪುಟ್ಟ ಹಾದಿ ಮೆತ್ತನೆಯ ಹುಲ್ಲು ಹಾಸಿಗೆಗೆ ಕರೆದೊಯ್ಯತ್ತದೆ.ಇವರದ್ದು ವರ್ಷಗಳ ಸಸ್ಯ ಸಾಂಗತ್ಯ. ಬಾಲ್ಯದಲ್ಲಿ ಅಜ್ಜನ ಮನೆಯ ಎಸ್ಟೇಟ್‌ನಲ್ಲಿ ಬೆಳೆಯುತ್ತಾ ಸಸ್ಯ, ಪ್ರಾಣಿ, ಪಕ್ಷಿಗಳ ಜೊತೆ ನಂಟು ಬೆಳೆಸಿಕೊಂಡಿದ್ದಾರೆ. ‘ಅಜ್ಜಿ ಬೆಳೆಸುತ್ತಿದ್ದ ತರಕಾರಿ, ಕಾಲೇಜಿನಲ್ಲಿ ಓದಿದ್ದ ಆತ್ಮೀಯ ವಿಷಯ ಸಸ್ಯಶಾಸ್ತ್ರ’ ಹೀಗೆ ಎಲ್ಲವೂ ಒಟ್ಟಾಗಿ ಆ ಸಸ್ಯ ಪ್ರೀತಿ ರಘುನಾಥ್ ಅವರನ್ನು ಕೈಹಿಡಿದ ಮೇಲೂ ಮುಂದುವರಿಯುವಂತೆ ಮಾಡಿತು.ವಸುಮತಿಯವರು ಕೈತೋಟ ನಿರ್ಮಾಣ ಆರಂಭಿಸಿದ್ದು 70ರ ದಶಕದಲ್ಲಿ. ಮೊದಲು ಕ್ಯಾಕ್ಟಸ್ ಸಂಗ್ರಹ. ನಂತರ ಲಾಲ್‌ಬಾಗ್ ನರ್ಸರಿ, ಗೆಳೆಯರು ನೆಂಟರಿಷ್ಟರ ಮನೆಗಳಿಂದ ಗಿಡಗಳನ್ನು ಸಂಗ್ರಹಿಸಿ ತಂದು ಕಾಂಪೌಂಡ್‌ನಲ್ಲಿ ನೆಟ್ಟಿದ್ದಾರೆ. ಮೂರು ದಶಕಗಳ ಅವರ ಪರಿಶ್ರಮ ಮನೆಯ ಅಂಗಳದಲ್ಲಿ ಅನಾವರಣಗೊಂಡಿದೆ.ದೇಶ ವಿದೇಶಿ ಸಸ್ಯ ಸಂಪತ್ತು: ಮೂರು ದಶಕಗಳಲ್ಲಿ ನಾಲ್ಕುನೂರು ಬಗೆಯ ಸಸ್ಯಗಳನ್ನು ಸಂಗ್ರಹಿಸಿದ್ದಾರೆ. ಕೆಲವು ಹೊರ ರಾಜ್ಯದ್ದು, ಕೆಲವು ಹೊರದೇಶದ್ದು. ಉಳಿದವು ಪಕ್ಕದ ಲಾಲ್‌ಬಾಗ್ ನರ್ಸರಿ, ಗೆಳೆಯರು, ಸಂಬಂಧಿಕರ ಮನೆಯಿಂದ ತಂದಿದ್ದು.‘ಸಂಪಿಗೆ ಬಳ್ಳಿ ಮತ್ತು ಮನೋರಂಜನಿ (ಮನೋರಂಜಿತ) ಸಸ್ಯಗಳು ತಮಿಳುನಾಡಿನವು. ಗಾರ್ಡೇನಿಯಾ ಎಂಬ ಪೊದೆ ಸಸ್ಯವನ್ನು ಅಮೆರಿಕದಿಂದ ತಂದಿದ್ದು. ಕೆಲವು ಗಿಡಗಳಿಗೆ ವಿದೇಶಿ ಲೇಬಲ್‌ಗಳಿವೆ ಅಷ್ಟೇ. ಅವುಗಳನ್ನು ಇಲ್ಲೇ ಖರೀದಿಸಿ ಇಲ್ಲೇ ಬೆಳೆಸಿದ್ದೇನೆ’  ಎಂದು ಮುಗುಳ್ನಗುತ್ತಾರೆ  ವಸುಮತಿ. ಕೈತೋಟವನ್ನು ಸೊಗಸಾಗಿ ವಿನ್ಯಾಸಗೊಳಿಸಿದ್ದಾರೆ. ಓಡಾಡಲು ‘ಪಾತ್ ವೇ’. ನೀರು ಹಾಯಿಸಲು ಅನುಕೂಲವಾಗುವಂತೆ ಗಿಡಗಳ ಜೋಡಣೆ, ಬಿಸಿಲು-ನೆರಳು ಆಧರಿಸಿ ಸಸ್ಯಗಳ ಜೋಡಣೆ. ಹೀಗೆ ನರ್ಸರಿಗಿಂತ ವಿಭಿನ್ನ ವಿಧಾನದಲ್ಲಿ ಜೋಡಿಸಿದ್ದಾರೆ.ಈ ಸಸ್ಯರಾಶಿಯಲ್ಲಿ ಅವರಷ್ಟೇ ಪ್ರಾಯದ (70 ವರ್ಷ) ಕಣಗಿಲೆ, ಮಕ್ಕಳ ಪ್ರಾಯದ (45 ವರ್ಷ) ಮ್ಯಾಗ್ನೋಲಿಯಾವರೆಗೂ ಗಿಡಗಳಿವೆ. ನೀವು ತೋಟದಲ್ಲಿರುವ ಯಾವುದಾದರೂ ಹೂವಿನ ಹೆಸರು ಹೇಳಿದರೆ ಸಾಕು, ಖುಷಿಯಿಂದ ಆ ಹೂವಿನ ‘ಜಾತಕ’ವನ್ನೇ ಬಿಚ್ಚಿಡುತ್ತಾರೆ ವಸುಮತಿ.ಪುಷ್ಪ ವೈವಿಧ್ಯದ ಭಂಡಾರ: ನಾಲ್ಕು ನೂರು ಗಿಡಗಳಲ್ಲಿ 50 ವೆರೈಟಿಯ ದಾಸವಾಳಗಳಿವೆ. 50ಕ್ಕೂ ಹೆಚ್ಚು ವಿಧದ ಗುಲಾಬಿ, ಬೆರಗಾಗುವಷ್ಟು ಆರ್ಕಿಡ್‌ಗಳು, ಕ್ಯಾಕ್ಟಸ್‌ಗಳು, ಅಪರೂಪದ ಬಳ್ಳಿಗಳಿವೆ. ಮಲ್ಲಿಗೆ, ಶಂಖಪುಷ್ಪ, ಕೆಂಡ ಸಂಪಿಗೆ, ನಂದಿಬಟ್ಟಲು (ನಂಜಬಟ್ಟಲು), ಹೆನ್ನಾ (ಮೆಹಂದಿ), ಪಾರಿಜಾತ, ಸೌಗಂಧಿಕಾ ಪುಷ್ಪ, ಬ್ರಹ್ಮಕಮಲ ಸೇರಿದಂತೆ ವೈವಿಧ್ಯಮಯ ಪುಷ್ಪ ಭಂಡಾರವೇ ಈ ಮನೆಯ ಅಂಗಳದಲ್ಲಿ ಮೇಳೈಸಿದೆ.ಮಾರಂತಾಸ್, ಡಾರ್ಸೀನ ಮತ್ತು ಫಿಲೊಡೆಂಡ್ರಾ ಸೇರಿದಂತೆ ನೂರಕ್ಕೂ ಹೆಚ್ಚು ಅಲಂಕಾರಿಕ ಸಸ್ಯ ಮತ್ತು ಬಳ್ಳಿಗಳಿವೆ. ಅಮೃತಬಳ್ಳಿ, ದೊಡ್ಡಪತ್ರೆಯಂತಹ ಔಷಧೀಯ ಸಸ್ಯಗಳಿವೆ. ಫ್ಯಾಷನ್ ಫ್ರೂಟ್, ಸಪೋಟ, ಸೀಬೆ ಇತ್ಯಾದಿ ಹಣ್ಣಿನ ಗಿಡಗಳೂ ಇವೆ.ಮೊದಲು ತರಕಾರಿಯನ್ನೂ ಬೆಳೆಯುತ್ತಿದ್ದರು. ಕಳ್ಳರ ಹಾವಳಿ ಹೆಚ್ಚಾಯಿತು. ನಿಲ್ಲಿಸಿಬಿಟ್ಟಿದ್ದಾರೆ. ‘ಗಿಡ ಬೆಳೆಸೋದಕ್ಕೆ ಕೈ ತೋಟ ಮಾಡೋದಕ್ಕೆ ವಯಸ್ಸು ಬೇಕಿಲ್ಲ ಮನಸ್ಸು ಬೇಕು. ಗಿಡಗಳನ್ನು ಮಕ್ಕಳಂತೆ ಪೋಷಿಸಬೇಕು’. ಇಂಥ ನಂಬಿಕೆಯಿಂದಲೇ ಕೈತೋಟದಲ್ಲಿ ಅಡ್ಡಾಡುತ್ತಾ 70ರ ಹರೆಯದಲ್ಲೂ ಚಟುವಟಿಕೆಯ ಚಿಲುಮೆಯಾಗಿದ್ದಾರೆ ವಸುಮತಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry