ಮನ ಸೆಳೆಯುವ ವಿವಿಧ ಬಣ್ಣದ ಹೂಗಳು

ಕೆಜಿಎಫ್: ಬೆಮಲ್ನಲ್ಲಿ ಮತ್ತೆ ಹೂವಿನ ಹಬ್ಬ ಶುರುವಾಗಿದೆ. ವಿವಿಧ ಬಗೆಯ ಸಸ್ಯರಾಶಿಗಳ ನಡುವೆ ವೈಯಾರ ಬೀರುತ್ತ ಎಲ್ಲರ ಚಿತ್ತವನ್ನು ತನ್ನೆಡೆ ಸೆಳೆಯಲು 48 ಬಗೆಯ ಹೂಗಳು ಸಿದ್ಧವಾಗಿವೆ.
ಗಣರಾಜ್ಯೋತ್ಸವದ ಅಂಗವಾಗಿ ಜ. 31ರವರೆಗೂ ನಡೆಯಲಿರುವ ಫಲಪುಷ್ಪ ಪ್ರದರ್ಶನ ಮೊದಲಿನಿಂದಲೂ ಜನಪ್ರಿಯ. ಬೆಂಗಳೂರಿನ ಲಾಲ್ಬಾಗ್ ಪ್ರದರ್ಶನಕ್ಕೆ ಸಾಟಿಯಾಗಿ ನಿಲ್ಲಬಲ್ಲ, ಲಾಲ್ಬಾಗ್ ಸ್ಪರ್ಧೆಯಲ್ಲಿಯೂ ಉತ್ತಮ ವಿನ್ಯಾಸಕ್ಕೆ ಪ್ರತಿಬಾರಿ ಪ್ರಶಸ್ತಿ ಪಡೆಯುವ ಬೆಮಲ್ ಪ್ರದರ್ಶನ ಹಸಿರು ಪ್ರಿಯರಿಗೆ ರಸದೌತಣ.
ಫಲಪುಷ್ಪಗಳನ್ನು ಬೆಳೆಸಲು ವಿಸ್ತಾರವಾದ ಜಾಗವೇ ಬೇಕು ಎನ್ನುವ ಮಂದಿ ಇಲ್ಲಿನ ಕುಂಡಗಳಲ್ಲಿ ಬೆಳೆಸಿರುವ ಪರಿ ನೋಡಿದರೆ ಅವಕ್ಕಾಗಬೇಕು.
ಸಣ್ಣ ಕುಂಡದಲ್ಲಿ ಬೆಳೆದ ಸಪೋಟ ಗಿಡದಲ್ಲಿ ಬರೋಬ್ಬರಿ 80 ಹಣ್ಣುಗಳು. ನಿಂಬೆ ಗಿಡದಲ್ಲಿ 50 ಕಾಯಿಗಳು. ಇಷ್ಟೇ ಅಲ್ಲ. ಕುಂಡದಲ್ಲಿಯೇ ಮುಸುಕಿನ ಜೋಳ, ಬಿಳಿಜೋಳ, ಎರಡು ವಿಧದ ಸೋರೇಕಾಯಿ, ಮೂರು ವಿಧದ ಕುಂಬಳಕಾಯಿ, ಮೂಲಂಗಿ, ಬೀನ್ಸ್, ಏಳು ವರ್ಷದ ಮಸಾಲೆ ಬದನೆ, ಗಡ್ಡೆ ಕೋಸು, ಗೋಧಿ, ಬಟಾಣಿ, ಆರು ವಿಧದ ಮೆಣಸಿನಕಾಯಿ, ಎರಡು ವಿಧದ ದಂಟಿನ ಸೊಪ್ಪು ಸೇರಿದಂತೆ ತರಕಾರಿ ಜಾತ್ರೆಯೇ ಇದೆ.
‘ಜಾಗ ಇಲ್ಲ ಎಂದು ನೆಪ ಹೇಳಬೇಡಿ. ಕುಂಡದಲ್ಲಿಯೇ ತರಕಾರಿ ಬೆಳೆದು ಪೌಷ್ಟಿಕ ಆಹಾರ ಸೇವಿಸಿ’ ಎಂದು ತೋಟಗಾರಿಕೆ ಇಲಾಖೆ ಸಿಬ್ಬಂದಿ ಪರೋಕ್ಷವಾಗಿ ಸಾರಿ ಹೇಳುತ್ತಿದ್ದಾರೆ.
ಈ ಬಾರಿ ಉತ್ತಮ ಮಳೆ ಸುರಿದ ಕಾರಣ ಗುಲಾಬಿ ಆಕರ್ಷಕವಾಗಿದೆ. 9 ಬಗೆಯ ಗುಲಾಬಿ ಹೂಗಳು ರಂಗು ಚೆಲ್ಲುತ್ತಿವೆ. 17 ವಿಧದ ಚೆಂಡು ಹೂ, ಮಲ್ಲಿಗೆ, 8 ವಿಧದ ಜಿನಿಯ, ಬಿಳಿ, ಕೆಂಪು, ಕೇಸರಿ ಬಣ್ಣದ ಗುಂಡುರಂಗ, ಆರು ವಿಧದ ಕಾಸ್ಮಸ್ ರಾಶಿ, ಮೂರು ವಿಧದ ರೆಡ್ಸಾಲ್ವಿಯ, ಎಂಟು ಬಗೆಯ ಬೋಗನ್ ವಿಲ್ಲಾ ಮತ್ತು ಸಿಲೋಶಿಯ, ಕಾಕ್ಸ್ಕೂಂ, ಮಿಲಿ, ಬಾಲ್ಸಂ, ಆಸ್ಟರ್, ಡೇಲಿಯ, ಪಿಂಕ್ಸ್, ಆಸ್ಟೇಶಿಯಂ, ಸ್ಪೀಡಾ, ಇಕ್ನೋರಾ ಮೊದಲಾದ ಜಾತಿಯ ಹೂಗಳು ವೀಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿವೆ.
ಪ್ರದರ್ಶನ ಇಂದಿನಿಂದ ಆರಂಭ
ಬೆಮಲ್ ಆಲದ ಮರದ ಬಳಿ ಇರುವ ಉದ್ಯಾನವನದಲ್ಲಿ ಈ ಪ್ರದರ್ಶನ ನಡೆಯಲಿದೆ. ಮಂಗಳವಾರದಿಂದ ಭಾನುವಾರದವರೆಗೆ ಮಧ್ಯಾಹ್ನ 3.30 ರಿಂದ ರಾತ್ರಿ 8ರವರೆಗೆ ಉಚಿತ ಪ್ರವೇಶವಿದೆ. ಶಾಲಾ ಮಕ್ಕಳು ಪೂರ್ವಾನುಮತಿ ಪಡೆದು ಹಗಲಿನ ಎಲ್ಲಾ ವೇಳೆಯಲ್ಲಿಯೂ ಪ್ರವೇಶ ಪಡೆಯಬಹುದಾಗಿದೆ ಎಂದು ತೋಟಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.