ಭಾನುವಾರ, ಮೇ 16, 2021
22 °C
ಅಕ್ರಮ ಮರಳು ಗಣಿಗಾರಿಕೆ 8

ಮರಳು ದಂಧೆಗೆ ನಲುಗಿದ ರೈತ ಸಮುದಾಯ

ಪ್ರಜಾವಾಣಿ ವಾರ್ತೆ/ಸಚ್ಚಿದಾನಂದ ಕುರಗುಂದ Updated:

ಅಕ್ಷರ ಗಾತ್ರ : | |

ಮರಳು ದಂಧೆಗೆ ನಲುಗಿದ ರೈತ ಸಮುದಾಯ

ಚಿತ್ರದುರ್ಗ: ಗಗನಚುಂಬಿ ಕಟ್ಟಡವೇ ಇರಲಿ, ಸಾಮಾನ್ಯ ಮನೆಯೇ ಇರಲಿ, ಬೆಂಗಳೂರಿನ ಕಟ್ಟಡ ನಿರ್ಮಾಣಗಾರರಿಗೆ ಬಯಲುಸೀಮೆ ಜಿಲ್ಲೆಯ ಮರಳಿನ ಮೇಲೆಯೇ ಹೆಚ್ಚು ಪ್ರೀತಿ.ಅಕ್ರಮ ಅದಿರು ಗಣಿಗಾರಿಕೆಗೆ ಪೈಪೋಟಿ ನೀಡುವಂತೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯು ಜಿಲ್ಲೆಯ ನಾಗರಿಕರನ್ನು ತಲ್ಲಣಗೊಳಿಸಿದೆ. ಬೆಂಗಳೂರಿಗೆ ಸಮೀಪದಲ್ಲಿ ಇರುವುದರಿಂದ ಸಾರಿಗೆ ವೆಚ್ಚ ಕಡಿಮೆ ಎನ್ನುವ ಲಾಭದ ದೃಷ್ಟಿಕೋನಕ್ಕೆ ಮರಳು ಮಾಫಿಯಾ ಕಪಿಮುಷ್ಟಿಯಲ್ಲಿ ಜಿಲ್ಲೆ ನಲುಗಿ ಹೋಗಿದೆ. ಬೆಂಗಳೂರಿನ ಗುತ್ತಿಗೆದಾರರು ಸಣ್ಣ ಪುಟ್ಟ ಹಳ್ಳಿಗಳಿಗೂ ಭೇಟಿ ನೀಡಿ ಅಕ್ರಮ ಮರಳು ಸಾಗಾಣಿಕೆಯ ಜಾಲ ಸೃಷ್ಟಿಸಿಕೊಂಡಿದ್ದಾರೆ. ಹಲವರು ದಿಢೀರ್ ಶ್ರೀಮಂತರಾಗಿದ್ದಾರೆ. ಅಂತರ್ಜಲ ಮಟ್ಟ ಕುಸಿದು ತೋಟಗಳು ಒಣಗಿವೆ. ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಲಾರಿಗಳ ಓವರ್‌ಲೋಡ್‌ನಿಂದ ರಸ್ತೆಗಳು ಹದಗೆಟ್ಟಿವೆ.ಜಿಲ್ಲೆಯಲ್ಲಿ ವೇದಾವತಿ ನದಿ ಹರಿಯುವ ಹೊಸದುರ್ಗ, ಹಿರಿಯೂರು, ಚಳ್ಳಕೆರೆ ತಾಲ್ಲೂಕುಗಳಲ್ಲಿ ಹಾಗೂ ಚಿನ್ನಹಗರಿ ಹಳ್ಳ ಹರಿಯುವ ಹೊಳಲ್ಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಒಟ್ಟು 82 ಮರಳು ಬ್ಲಾಕ್‌ಗಳನ್ನು ಜಂಟಿಯಾಗಿ ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಗುರುತಿಸಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 15, ಹಿರಿಯೂರಿನಲ್ಲಿ 30, ಚಳ್ಳಕೆರೆಯಲ್ಲಿ 34, ಮೊಳಕಾಲ್ಮುರಿನಲ್ಲಿ 3 ಬ್ಲಾಕ್‌ಗಳನ್ನು ಮರಳು ಲಭ್ಯತೆಯ ಅನುಗುಣವಾಗಿ ಗುರುತಿಸಲಾಗಿದೆ.ಇಲ್ಲಿನ ಶೇ 80ರಷ್ಟು ಮರಳು ಬೆಂಗಳೂರಿಗೆ ಸಾಗಾಣಿಕೆಯಾಗುತ್ತಿದೆ. ಖಾಸಗಿ ಜಮೀನುಗಳಲ್ಲಿ ಮರಳು ಸಂಗ್ರಹಿಸಿ ರಾತ್ರೋರಾತ್ರಿ ಸಾಗಿಸುವುದೇ ಹೆಚ್ಚು. ಬೆಂಗಳೂರಿನಲ್ಲಿ ಒಂದು ಲಾರಿ ಮರಳು ಲೋಡ್‌ಗೆ ರೂ30ರಿಂದ ರೂ40 ಸಾವಿರ ಗಳಿಗೆ ಮಾರಾಟವಾಗುತ್ತದೆ. ನೆಲಮಂಗಲದ ಕೆಲವು ಪ್ರಭಾವಿ ವ್ಯಕ್ತಿಗಳು ವೇದಾವತಿ ನದಿ ಪಾತ್ರದ ಗ್ರಾಮಸ್ಥರು, ಕೆಲವು ನಿರುದ್ಯೋಗಿ ಯುವಕರ ಬೆಂಬಲ ಪಡೆದು ಮರಳು ದಂಧೆ ನಡೆಸುತ್ತಾರೆ. ಕಳ್ಳದಾರಿಗಳನ್ನು ಕಂಡುಕೊಂಡಿರುವ ಮರಳು ಸಾಗಾಣಿಕೆದಾರರು ರಾಷ್ಟ್ರೀಯ ಹೆದ್ದಾರಿಯತ್ತ ಸಾಗುವುದು ಅಪರೂಪ. ಒಳಮಾರ್ಗಗಳೇ ಅವರಿಗೆ ಅಚ್ಚುಮೆಚ್ಚು.ಹಿರಿಯೂರು ಮತ್ತು ಚಳ್ಳಕರೆ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಅಕ್ರಮ ಮರಳು ದಂಧೆ, ಹಲವರ ಬದುಕಿನ ರೀತಿಯನ್ನೇ ಬದಲಾಯಿಸಿದೆ. ಮರಳು ದಂಧೆ ಆರಂಭಿಸಿದ ಮೇಲೆ ಕೈಯಲ್ಲಿ ಹರಿದಾಡಿದ ಹಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಶ್ರೀಮಂತಿಕೆಯ ಬದುಕು ಸಾಗಿಸುತ್ತಿದ್ದಾರೆ. ದೇವರಕೊಟ್ಟ, ಬುಡುರಕುಂಟೆ, ಕುಂದಲಗುರ ಮುಂತಾದ ಗ್ರಾಮಗಳಲ್ಲಿ ಮರಳು ಬಗೆಯಲು ಸ್ವಂತ ಜೆಸಿಬಿ ಖರೀದಿಸಿದವರೂ ಇದ್ದಾರೆ! ಮರಳು ಗಣಿಗಾರಿಕೆಯಿಂದ ನದಿಪಾತ್ರದ ಸಮೀಪದ ಜಮೀನುಗಳಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಸತತ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. 800 ಅಡಿ ಕೊರೆದರೂ ಹನಿ ನೀರು ಸಿಗುವುದು ಕಷ್ಟಕರವಾಗಿದ್ದು, ಕುಡಿಯುವ ನೀರಿನ  ಸಮಸ್ಯೆಯೂ    ಬಿಗಡಾಯಿಸಿದೆ.ನಿಯಂತ್ರಣ ಸಾಧ್ಯವಾಗಿಲ್ಲ: ರೈತರು, ಸಾರ್ವಜನಿಕರ ನಿರಂತರ ಪ್ರತಿಭಟನೆಗಳ ನಂತರ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸಲು ಜಿಲ್ಲಾಡಳಿತ ನಡೆಸಿದ ಪ್ರಯತ್ನಗಳು ಸದ್ಯಕ್ಕೆ ಯಶಸ್ವಿಯಾಗಿದ್ದರೂ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ.`10 ಟನ್ ಸಾಮರ್ಥ್ಯ ಹೊಂದಿರುವ 6 ಚಕ್ರಗಳ ಲಾರಿಗಳಲ್ಲಿ 20 ಟನ್ ಮರಳು ಸಾಗಿಸುತ್ತಾರೆ. 16 ಟನ್ ಸಾಮರ್ಥ್ಯವಿರುವ ಲಾರಿಗಳಲ್ಲಿ 40 ಟನ್‌ವರೆಗೂ ಮರಳು ಸಾಗಿಸುತ್ತಾರೆ. ಆದರೂ ಸಾರಿಗೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವುದಿಲ್ಲ.ಇದರಿಂದ ರಸ್ತೆಗಳು ಸಂಪೂರ್ಣ ಹದಗೆಡುತ್ತಿವೆ. ಇಲ್ಲಿಂದ ಬೆಂಗಳೂರಿನವರೆಗೂ ಲಾರಿಗಳು ಸಾಗುತ್ತಿದ್ದರೂ ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳು ಕ್ರಮಕೈಗೊಳ್ಳದೆ ಮೌನ ವಹಿಸಿರುತ್ತಾರೆ' ಎಂದು ಹೆಸರು ಹೇಳಲು ಇಚ್ಛಿಸದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೇ ಹೇಳುತ್ತಾರೆ.ಜಿಲ್ಲೆಯಲ್ಲಿ 2012-13ನೇ ಸಾಲಿನಲ್ಲಿ ಅನಧಿಕೃತ ಮರಳು ಸಾಗಿಸುತ್ತಿದ್ದ 502 ವಾಹನಗಳನ್ನು ವಶಪಡಿಸಿಕೊಂಡು ರೂ82.04 ಲಕ್ಷ ದಂಡ ವಿಧಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಒಟ್ಟು ಗುರುತಿಸಿರುವ 82 ಬ್ಲಾಕ್‌ಗಳಲ್ಲಿ 2.10 ಲಕ್ಷ ಘನ ಮೀಟರ್ ಮರಳು ಮಾರಾಟ ಮಾಡಿ ರೂ10.02 ಕೋಟಿ ವರಮಾನ ಸಂಗ್ರಹಿಸಲಾಗಿದೆ.

ನ್ಯಾಯಾಲಯಕ್ಕೆ ಮೊರೆ

ಅಕ್ರಮ ಮರಳು ಸಾಗಾಣಿಕೆಯನ್ನು ನಿಯಂತ್ರಿಸಲು ಪೊಲೀಸ್ ಮತ್ತು ಕಂದಾಯ ಇಲಾಖೆ ಜತೆಯಲ್ಲಿ ಲೋಕೋಪಯೋಗಿ ಇಲಾಖೆ ನೌಕರರನ್ನು ಸಹ ಗಸ್ತು ತಿರುಗಲು ಹಾಕಿದಾಗ ಕೆಲವರು ಹೈಕೋರ್ಟ್ ಮೊರೆ ಹೋದ ಪ್ರಸಂಗವೂ ನಡೆದಿದೆ. ಹೈಕೋರ್ಟ್ ಈ ಪ್ರಕರಣವನ್ನು ಹಸಿರು ಪೀಠಕ್ಕೆ ವರ್ಗಾಯಿಸಿದೆ. `ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸಲು ನಮಗೆ ಯಾವುದೇ ರೀತಿಯ ಅಧಿಕಾರ ಇಲ್ಲ. ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಮಾತ್ರ ಎಫ್‌ಐಆರ್ ಹಾಕಬಹುದು. ನಮಗೆ ಪೊಲೀಸರ ಬೆಂಬಲವೂ ದೊರೆಯುವುದಿಲ್ಲ ಮತ್ತು ಶಸ್ತ್ರಾಸ್ತ್ರಗಳು ಇಲ್ಲ. ಜತೆಗೆ ಈಗಾಗಲೇ ಲೋಕೋಪಯೋಗಿ ಇಲಾಖೆಯ ನೂರಾರು ಕೋಟಿ ರೂಪಾಯಿ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳಬೇಕು. ಆದ್ದರಿಂದ ನಮ್ಮನ್ನು ಮರಳು ಕಾಯಲು ಹಾಕಬೇಡಿ.ಅಗತ್ಯವಿದ್ದರೆ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗ ಸೃಷ್ಟಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು' ಎಂದು ಕೋರಿ ಹಲವರು ನ್ಯಾಯಾಲಯದ ಮೊರೆ ಹೋಗಿದ್ದರು.ಆದರೆ, ನ್ಯಾಯಾಲಯವು ಆಡಳಿತದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಎಂದು ಅರ್ಜಿಯನ್ನು ತಳ್ಳಿ ಹಾಕಿತು.

ಕಾರ್ಯಪಡೆ ನಿರ್ಧಾರ

ಸದ್ಯಕ್ಕೆ ಜಿಲ್ಲೆಯ 82 ಬ್ಲಾಕ್‌ನಲ್ಲಿ ಮರಳು ಮಾರಾಟ ಸ್ಥಗಿತಗೊಳಿಸಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಕಾರ್ಯಪಡೆ ಮರಳು ಮಾರಾಟದ ಬಗ್ಗೆ ಹೊಸದಾಗಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ

- ಧರಣೇಶ್    

ಗಣಿ, ಭೂವಿಜ್ಞಾನ ಇಲಾಖೆ ಅಧಿಕಾರಿ 

ಅಕ್ರಮ ಮರಳು ಗಣಿಗಾರಿಕೆ ಬಗೆಗೆ ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಈ ಹಿಂದಿನ ವಿಶೇಷ ವರದಿಗಳು:ಮಂಡ್ಯ: ಮರಳು ಗಣಿಗಾರಿಕೆ ನಿಷೇಧ ಲೆಕ್ಕಕ್ಕಿಲ್ಲ

ಎಗ್ಗಿಲ್ಲದೇ ಸಾಗಿದೆ ಅಕ್ರಮ ಮರಳು ದಂಧೆ

ಸಿ.ಎಂ ತವರು ಜಿಲ್ಲೆಯಲ್ಲೂ ಮರಳು ದಂಧೆ

ಅಳಿವೆ ಮರಳು ಗಣಿಗಾರಿಕೆಗೆ ಕಡಲ್ಕೊರೆತ ತೀವ್ರ

 

 

  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.