ಭಾನುವಾರ, ಜೂನ್ 20, 2021
25 °C

ಮರೀಚಿಕೆಯೂ ಮಳೆ ಸಿದ್ಧಾಂತವೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಿನಿಮಾದಲ್ಲಿ ಮಳೆ ಇದ್ದ ಮಾತ್ರಕ್ಕೆ ಎಲ್ಲಾ ಸಿನಿಮಾಗಳೂ ಮುಂಗಾರು ಮಳೆ ಆಗುವುದಿಲ್ಲ’ 

ನಿಮ್ಮ ಚಿತ್ರದ ಎಳೆ ‘ನವಗ್ರಹ’ ಚಿತ್ರದಂತೆಯೇ ಇದೆಯಲ್ಲ ಎಂಬ ಪ್ರಶ್ನೆ ಎದುರಾದಾಗ ನಿರ್ದೇಶಕ ರಾಜ್‌ಮಯೂರ್ ಹಿರೇಮಠ್‌ ನೀಡಿದ ಉತ್ತರವಿದು. ಆರಂಭದಲ್ಲೇನೂ ಅವರು ಕಥೆಯ ಗುಟ್ಟುಬಿಟ್ಟುಕೊಡಲು ಸಿದ್ಧರಿರಲಿಲ್ಲ. ಕೆದಕತೊಡಗಿದಂತೆ ಕೆಲವೊಂದು ಎಳೆಗಳನ್ನು ತೆರೆದಿಟ್ಟರು.ಸಂಪತ್ತು ಎದುರಾದಾಗ ಆತ್ಮೀಯ ಸ್ನೇಹಿತರು ಹೇಗೆ ಬದಲಾಗುತ್ತಾರೆ ಎನ್ನುವುದು ಅವರ ಸಿನಿಮಾ ಕಥೆಯ ಮೂಲವಸ್ತು. ಆ ಸಂಪತ್ತು ಅವರಿಗೆ ಕೇರಳದಲ್ಲಿ ಕಂಡಿದೆ. ಅಂದರೆ, ಅನಂತಪದ್ಮನಾಭ ದೇವಾಲಯದ ಸಂಪತ್ತಿನ ಸುದ್ದಿ ಅವರ ಸಿನಿಮಾಕ್ಕೆ ಪ್ರೇರಣೆ. ‘ಪ್ರತಿಷ್ಠಿತ ದೇವಸ್ಥಾನ’ದಲ್ಲಿನ ಸಂಪತ್ತಿನ ಸುತ್ತ ಸಾಗುವ ಕಥೆ ಎಂದ ರಾಜ್‌ಮಯೂರ್‌, ಅನಂತ ಪದ್ಮನಾಭ ದೇವಸ್ಥಾನವೇ ಅಲ್ಲವೇ ಎನ್ನುವುದು ನಿಮ್ಮ ಊಹೆಗೆ ಬಿಟ್ಟಿದ್ದು ಎಂದರು.ಹೀಗೆ ಸಂಪತ್ತಿನ ಬೆನ್ನತ್ತುವ ಸ್ನೇಹಿತರ ಬಳಗಕ್ಕೆ ಅದು ದಕ್ಕುತ್ತದೆಯಾ? ಮುಂದೆ ಏನೇನಾಗುತ್ತದೆ? ಸದ್ಯಕ್ಕೆ ಅವರ ಉತ್ತರ ‘ಮರೀಚಿಕೆ’. ಎಲ್ಲವೂ ಸಸ್ಪೆನ್ಸ್‌ ಎನ್ನುತ್ತಲೇ ಚಿತ್ರದ ಕೊನೆಯಲ್ಲಿ ಒಬ್ಬರು ಮಾತ್ರವೇ ಉಳಿಯುತ್ತಾರೆ ಎಂದು ಕ್ಲೈಮ್ಯಾಕ್ಸಿನ ರಹಸ್ಯ ಬಹಿರಂಗಪಡಿಸಿದರು.ಇನ್ನೇನು ಉಳಿದಿಲ್ಲವಲ್ಲ ಎನ್ನುವಾಗಲೇ, ಇಷ್ಟೇ ಅಲ್ಲ. ಇನ್ನೂ ಸಸ್ಪೆನ್ಸ್‌ ಇದೆ. ಸತ್ತವರು ಮತ್ತೆ ಬದುಕಿ ಬಂದರೂ ಬರಬಹುದಲ್ಲವೇ? ಎಂದು ನಕ್ಕರು. ಚಿತ್ರದ ಸ್ವರೂಪ, ಕಥೆ, ಅಂತ್ಯ ಎಲ್ಲವೂ ‘ನವಗ್ರಹ’ ಚಿತ್ರದಂತೆಯೇ ಇದೆಯಲ್ಲ ಎಂಬ ಅನುಮಾನವನ್ನು, ಆ ಚಿತ್ರಕ್ಕೂ ಇದಕ್ಕೂ ಒಂದಿಷ್ಟೂ ಸಂಬಂಧವಿಲ್ಲ ಎಂದು ಬಗೆಹರಿಸಿದರು.ಬಿಜಾಪುರ ಮೂಲದವರಾದ ರಾಜ್‌ಮಯೂರ್‌ ಹಿರೇಮಠ್‌ ಬಿ.ಎಸ್‌.ಸಿ ಪದವೀಧರ. ಹನ್ನೆರಡು ವರ್ಷಗಳಿಂದ ಚಿತ್ರರಂಗದಲ್ಲಿ ವಿವಿಧ ನಿರ್ದೇಶಕರ ಬಳಿ ದುಡಿದು ಅನುಭವ ಗಿಟ್ಟಿಸಿಕೊಂಡವರು. ಸ್ವತಂತ್ರ ನಿರ್ದೇಶಕನಾಗಿ ಅವರಿಗೆ ‘ಮರೀಚಿಕೆ’ ಮೊದಲ ಚಿತ್ರ. ಬಂಡವಾಳ ಹೂಡಲು ಅವರೊಂದಿಗೆ ನಾಲ್ವರು ಗೆಳೆಯರು ಕೈಜೋಡಿಸಿದ್ದಾರೆ. ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ಹೀಗೆ ದಕ್ಷಿಣ ಭಾರತದ ರಾಜ್ಯಗಳನ್ನು ಚಿತ್ರತಂಡ ಸುತ್ತಾಡಲಿದೆ.ಕಾರಣ ಇದು ಪ್ರವಾಸ ಕಥನ! ಪ್ರಯಾಣದ ವೇಳೆ ನಡೆಯುವ ಘಟನಾವಳಿಗಳು ಇಲ್ಲಿ ಹೆಣೆದುಕೊಂಡಿವೆ. ಚಿತ್ರದ ನಾಯಕ ಸಂಜಯ್‌ ಬೆಳಗಾವಿಯಲ್ಲಿ ಎಂಜಿನಿಯರಿಂಗ್‌ ಓದುತ್ತಿರುವವರು. ನಟನಾಗುವ ಆಸೆಯಿಂದ ಹಲವು ವರ್ಷಗಳಿಂದ ಅಭಿನಯ ಮತ್ತು ದೇಹವನ್ನು ಅವರು ಸಾಮುಗೊಳಿಸಿಕೊಳ್ಳುತ್ತಿದ್ದರು. ಅದಕ್ಕೆ ಈಗ ಮುಹೂರ್ತ ಕೂಡಿಬಂದಿದೆ.ಶ್ರೀಲಂಕಾ ಮೂಲದವರಾದ ಮನೋಜ್‌ ನಾಲ್ಕು ಹಾಡುಗಳಿಗೆ ಸಂಗೀತ ಹೊಸೆಯುತ್ತಿದ್ದಾರೆ. ಸೌಂಡ್‌ ಎಂಜಿನಿಯರ್‌ ಆಗಿರುವ ಮನೋಜ್‌ ಸಂಗೀತದಲ್ಲಿ ಹೊಸ ಪ್ರಯೋಗ ನಡೆಸುವ ಬಯಕೆ ವ್ಯಕ್ತಪಡಿಸಿದರು. ಸಂದೀಪ್‌ ಹಂಚನ್‌ ಸಹ ಸ್ವತಂತ್ರ ಛಾಯಾಗ್ರಾಹಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ‘ಮೊಗ್ಗಿನ ಮನಸ್ಸು’, ‘ಬ್ಲ್ಯಾಕ್‌’ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಮಾನಸಿ ಚಿತ್ರದ ನಾಯಕಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.