ಸೋಮವಾರ, ಮೇ 23, 2022
24 °C

ಮರೆಯಾದ ಕಲ್ಲು ಬಾವಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೀಸಾವೆ: ‘’ಊರಿಗೆ ಬಂದವಳು ನೀರಿಗೆ ಬಾರಲೇ?’ ಎಂಬ ಗಾದೆ ಒಂದು ಕಾಲದಲ್ಲಿ ಹಳ್ಳಿಗಳಲ್ಲಿ ಇತ್ತು. ಆದರೆ ಆಧುನಿಕ ತಂತ್ರಜ್ಞಾನದಿಂದ ಗ್ರಾಮೀಣ ಪ್ರದೇಶದ ಜನರಿಗೆ ನೀರು ಒದಗಿಸುತ್ತಿದ್ದ ಕಲ್ಲು ಬಾವಿಗಳು ಇತ್ತೀಚಿನ ದಿನಗಳಲ್ಲಿ ಮರೆಯಾಗಿವೆ.

ಪ್ರತಿ ಹಳ್ಳಿಯಲ್ಲಿ 4 ಕ್ಕೂ ಹೆಚ್ಚು ಬಾವಿಗಳು ಇರುತ್ತಿದ್ದವು. ಆದರೆ ಇಂದು ಮನೆಗೊಂದು ಬೋರ್‌ವೆಲ್‌ಗಳು ಇವೆ. 20 ಅಥವಾ 30 ಅಡಿಗಳ ಅಳದಲ್ಲಿ ನೀರು ಜನರಿಗೆ ಸಿಗುತ್ತಿತ್ತು. ಬೆಳಿಗ್ಗೆ ಮತ್ತು ಸಂಜೆ ನೀರು ಸೇದುವ ಮೂಲಕ ಜನರಿಗೆ ಒಂದು ರೀತಿಯ ವ್ಯಾಯಾಮವೂ ಆಗುತ್ತಿತ್ತು.   ಗ್ರಾಮದ ಹಿರಿಯರು ಅಥವಾ ಪಾಳೆಗಾರರು ತಮ್ಮ ಹೆಸರು ನೆನಪಿನಲ್ಲಿಡಲು ಮತ್ತು ಜನರಿಗೆ ಸಹಾಯವಾಗಲೆಂದು ಕುಡಿಯುವ ನೀರಿನ ಬಾವಿಗಳನ್ನು ತಗ್ಗು ಪ್ರದೇಶ ಅಥವಾ ಕೆರೆಯ ಪಕ್ಕದಲ್ಲಿ ತೊಡಿಸುತ್ತಿದ್ದರು. ಹಳ್ಳಿಯ ಜನರೆಲ್ಲ ಈ ಬಾವಿ ನೀರನ್ನು ದಿನ ನಿತ್ಯದ ಬಳಕೆಗೆ ಬಳಸುತ್ತಿದ್ದರು. ವರ್ಷಕೊಮ್ಮೆ ಬಾವಿಯ ಸ್ವಚ್ಚತೆಯನ್ನು ಗ್ರಾಮಸ್ಥರೆಲ್ಲ ಸೇರಿ ಮಾಡುತ್ತಿದ್ದರು.  ಬಾವಿ ಮಣ್ಣು ಕುಸಿಯದ ಹಾಗೆ ಕಲ್ಲನ್ನು ಕಟ್ಟಿಸಿ, ಅಪಾಯವಾಗದಂತೆ ಭೂಮಿಯ ಮೆಲೆ 3ರಿಂದ 4 ಅಡಿಯಷ್ಟು ಎತ್ತರಕ್ಕೆ ಕಟ್ಟಡ ನಿರ್ಮಿಸಿ, ಕಂಬ ನೆಟ್ಟು, ಸರಾಗವಾಗಿ ಮಹಿಳೆಯರಿಗೆ ನೀರು ಸೇದಲು ರಾಟೆ ಹಾಕಿಸುತ್ತಿದ್ದರು.   ಕಡಿಮೆ ಅಂತರದಲ್ಲಿ ಸಿಗುತ್ತಿದ್ದ ನೀರು ಇಂದು ನೂರಾರು ಅಡಿಗಳ ಆಳದಲ್ಲಿ ಸಿಗುತ್ತಿದೆ. ಆ ನೀರು ಸಹ ಕುಡಿಯಲು ಯೊಗ್ಯವಾಗಿಲ್ಲ, ಫ್ಲೊರೈಡ್ ಅಂಶ ಹೆಚ್ಚಾಗಿ ಮೂಳೆ ಸವೆತ, ಹಲ್ಲು ನೋವು ಮುಂತಾದ ರೋಗಗಳು ಜನರಲ್ಲಿ ಹೆಚ್ಚಾಗುತ್ತಿವೆ.  ಮಳೆ ಬಿಳುವುದು ಕಡಿಮೆ ಆಗಿರುವುದರಿಂದ ಅಂತರ್ಜಲದ ಮಟ್ಟ ಕುಸಿದು, ಬಾವಿಗಳಲ್ಲಿ ನೀರು ಇಲ್ಲದಾಗಿದೆ. ನೀರು ಸೇದುವ ಜನರು ಇಲ್ಲ. ನೂರಾರು ವರ್ಷದಿಂದ ಜನರಿಗೆ ನೀರು ಒದಗಿಸಿದ ಬಾವಿಗಳು ಇಂದು ಕಸ ತುಂಬುವ ತೊಟ್ಟಿಗಳಾಗಿ ಮಾರ್ಪಟ್ಟಿವೆ. ಮುಂದಿನ ಪೀಳಿಗೆಗೆ ನಮ್ಮ ಪೂರ್ವಿಕರ ಜೀವನದಲ್ಲಿ ನೀರು ಬಳಕೆ ಬಗ್ಗೆ ತಿಳಿಸುವಾಗ ಕಲ್ಲು ಬಾವಿಗಳನ್ನು ಚಿತ್ರಗಳ ಮೂಲಕ ತೋರಿಸ ಬೇಕಿದೆ.   

         

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.